ಕರ್ನಾಟಕದ ಅಸ್ಮಿತೆ ಮತ್ತು ರಾಷ್ಟ್ರೀಯತೆ

ಬೌದ್ಧ, ಇಸ್ಲಾಂ, ಕ್ರೈಸ್ತ ಹೀಗೆ ವಿಭಿನ್ನ ಸಮುದಾಯಗಳ ಜನರು ಈ ಕರ್ನಾಟಕವನ್ನು ಕಟ್ಟಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಬಲಿದಾನ ಮಾಡಿದ ಏಕೈಕ ಹುತಾತ್ಮ ಬಳ್ಳಾರಿಯ ರಮಝಾನ್ ಸಾಬ್, ಕನ್ನಡ ಭಾಷೆಗೊಂದು ನಿಘಂಟು ನೀಡಿದವರು ರೆವರೆಂಡ್ ಕಿಟ್ಟೆಲ್. ಇದು ಕರ್ನಾಟಕದ ಪ್ರಾದೇಶಿಕ ವೈಶಿಷ್ಟ್ಯ. ಈ ಪ್ರಾದೇಶಿಕತೆಯ ಅಸ್ಮಿತೆಯ ಕೊರಳು ಹಿಸುಕುವ ದುಸ್ಸಾಹಸಕ್ಕೆ ಯಾರೇ ಕೈ ಹಾಕಿದರೂ ಅದರಿಂದ ಭಾರತದ ಏಕತೆ, ಸಮಗ್ರತೆಗೆ ಗಂಡಾಂತರ ಬರುತ್ತದೆ. ಇದು ಕನ್ನಡ ಮಾತ್ರವಲ್ಲ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಣಿಪುರ ಸೇರಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ವಾಸ್ತವ ಸತ್ಯ.

Update: 2023-10-30 06:33 GMT

Photo: PTI

ಕರ್ನಾಟಕ ರಾಜ್ಯ ನಿರ್ಮಾಣವಾಗಿ 68 ವರ್ಷಗಳಾದವು. ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಗತಿಸಿದವು. ರಾಜ್ಯೋತ್ಸವ ಆಚರಣೆಯ ಸಂಭ್ರಮದಲ್ಲಿ ಇರುವಾಗಲೇ ನಮ್ಮ ನಾಡಿನ ಅಸ್ತಿತ್ವವನ್ನೇ ಅಲುಗಾಡಿಸುವಂಥ ಹೇಳಿಕೆಗಳು ಭಾರತ ಸರಕಾರದ ಉನ್ನತ ಸ್ಥಾನದಲ್ಲಿ ಇದ್ದವರಿಂದ ಬರುತ್ತಿವೆ. ಐದು ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಹಗಲೂ ರಾತ್ರಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಜಾತೀಯತೆ ಮತ್ತು ಪ್ರಾದೇಶಿಕತೆ ಭಾರತವನ್ನು ವಿಭಜಿಸುವ ದುಷ್ಟ ಶಕ್ತಿಗಳು ಎಂದು ಹೇಳಿದ್ದಾರೆ. ಜಾತೀಯತೆ ಓಕೆ. ಆದರೆ, ಪ್ರಾದೇಶಿಕತೆ ಯಾಕೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಆದರೆ ಈ ಸಂದರ್ಭದಲ್ಲಿ ಇಂಥ ಹೇಳಿಕೆಯನ್ನು ಅವರೇಕೆ ನೀಡಿದರು ಎಂದು ಅಚ್ಚರಿ ಪಡಬೇಕಿಲ್ಲ. ಇದು ಅವರ ಮುಂದಿನ ಕಾರ್ಯಸೂಚಿಯ ಮುಖ್ಯಾಂಶ.

ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಐವತ್ತರ ದಶಕದಲ್ಲಿ ಭಾಷಾವಾರು ಪ್ರಾಂತಗಳಿಗಾಗಿ ಹೋರಾಟಗಳು ಎಲ್ಲ ರಾಜ್ಯಗಳಲ್ಲಿ ಆರಂಭವಾದವು. ಆಗ ಈ ಹೋರಾಟಗಳನ್ನು ವಿರೋಧಿಸಿದ ಪ್ರಾದೇಶಿಕ ಭಾಷಾ ಅಸ್ಮಿತೆಯನ್ನು ಆಕ್ಷೇಪಿಸಿದ ಸೈದ್ಧಾಂತಿಕ ಪರಿವಾರದಿಂದ ಬಂದಿರುವ ಯಾರೇ ಆಗಲಿ ಇಂಥ ಮಾತುಗಳನ್ನು ಆಡುವುದು ಸಹಜ.

ಪ್ರಾದೇಶಿಕತೆ ಮತ್ತು ಭಾಷಾ ಅಸ್ಮಿತೆ ಎಂಬುದು ಬಹುತ್ವ ಭಾರತದ ಜೀವಾಳ. ನಮ್ಮ ಸಂವಿಧಾನವೂ ಅದನ್ನೇ ಬಿಂಬಿಸುತ್ತದೆ. ಭಾರತ ಎಂಬುದು ಒಕ್ಕೂಟ ರಾಷ್ಟ್ರ ಎಂದು ಒಪ್ಪಿಕೊಂಡು ದಶಕಗಳೇ ಕಳೆದಿವೆ. ವಿವಿಧತೆಯಲ್ಲಿ ಏಕತೆ ನಾವು ನಡೆದು ಬಂದ ದಾರಿ. ಭಾರತ ಒಪ್ಪಿ ನಡೆದು ಬಂದ ದಾರಿಯನ್ನೇ ಪ್ರಶ್ನಿಸುವಂಥ ಮಾತು ಯಾರಿಂದ ಬರಬಾರದಿತ್ತೋ, ಅವರಿಂದ ಬಂದಿದೆ. ಪ್ರಾದೇಶಿಕತೆಯನ್ನು ನಿರಾಕರಿಸುವ ಹಾಗೂ ಪ್ರಶ್ನಿಸುವ ಮೂಲಕ ಮೋದಿಯವರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದ ಕೆಲವರಿಗಾದರೂ ಅರ್ಥವಾಗುತ್ತದೆ. ಹೇಳಿದ್ದನ್ನು ಮಾಡಿ ತೋರಿಸುವ 56 ಇಂಚಿನ ಎದೆಗಾರಿಕೆಯ ಅವರು ಆಡಿದ ಮಾತುಗಳು ಬಹುತ್ವ ಭಾರತವನ್ನು ಕಳವಳಕ್ಕೀಡು ಮಾಡಿರುವುದು ಸಹಜ.

ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಕಳೆದ ಒಂಭತ್ತು ವರ್ಷಗಳಲ್ಲಿ ಜನತೆಗೆ ನೀಡಿರುವ ಯಾವ ಭರವಸೆಯನ್ನೂ ಈಡೇರಿಸಿಲ್ಲ. ಕಾರ್ಪೊರೇಟ್ ಬಂಡವಾಳಶಾಹಿಯ ಲೂಟಿಗೆ ಮುಕ್ತ ಅವಕಾಶ ನೀಡಿರುವ ಈ ಸರಕಾರದ ಕಾಲಾವಧಿಯಲ್ಲಿ ನಿರುದ್ಯೋಗ ಹೆಚ್ಚಾಯಿತು. ಜೀವನಾಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ವಿದೇಶಿ ಸಾಲ ಹೆಚ್ಚಾಗಿದೆ. ಸಾರ್ವಜನಿಕ ಉದ್ಯಮಗಳನ್ನು ಮತ್ತು ಸರಕಾರಿ ಆಸ್ತಿಗಳನ್ನು ಅಗ್ಗದ ಬೆಲೆಗೆ ಮಾರಲಾಗುತ್ತಿದೆ. ಈಗ ಜನರ ಬಳಿ ಹೋಗಲು ಮುಖವಿಲ್ಲ. ಅಂತಲೇ ಪ್ರಾದೇಶಿಕತೆ ರಾಷ್ಟ್ರೀಯತೆಯ ಶತ್ರು ಎಂಬ ವಿಷಯ ಹರಿಬಿಟ್ಟು ಅದರ ಸುತ್ತ ಚರ್ಚೆಯಾಗುವಂತೆ ಮಾಡುವುದೇ ಇವರ ಒಳ ಉದ್ದೇಶ. ಜನಸಾಮಾನ್ಯರು ಹಸಿವೆ ಬಗ್ಗೆ ಯೋಚಿಸಬಾರದು. ಅಂತರ್‌ರಾಷ್ಟ್ರೀಯ ಹಸಿವಿನ ಸೂಚ್ಯಂಕದ ಬಗ್ಗೆ ಮಾತಾಡಬಾರದು. ಅಪೌಷ್ಟಿಕತೆಯಿಂದ ಕೊನೆಯುಸಿರೆಳೆಯುವ ಮಕ್ಕಳ ಯಾತನೆ ಚುನಾವಣಾ ವಿಷಯವಾಗಬಾರದು ಎಂದು ರಾಷ್ಟ್ರೀಯತೆಯ ಅನಸ್ತೆಸಿಯಾ ನೀಡಿ ಜನರನ್ನು ಮೂರ್ಛೆ ಹೋಗಿಸುವುದು ಇವರ ಹುನ್ನಾರ. ಗಾಯಗೊಂಡ ಮಣಿಪುರ, ಆತಂಕದಲ್ಲಿ ಇರುವ ಅಲ್ಪಸಂಖ್ಯಾತರು, ನಿರಂತರ ಯಾತನೆ ಅನುಭವಿಸುತ್ತಿರುವ ದಲಿತರು ಇವುಗಳ ಮೇಲೆ ತಿಪ್ಪೆ ಸಾರಿಸಲು ಪ್ರಾದೇಶಿಕತೆ ಮೇಲೆ ದಾಳಿ ನಡೆದಿದೆ.

ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದಿ ಹೇರುವ ಹುನ್ನಾರ ನಡೆಯುತ್ತಲೇ ಇದೆ. ಕರ್ನಾಟಕ ಭೀಕರ ಬರಗಾಲವನ್ನು ಎದುರಿಸುತ್ತಿದ್ದರೂ ಮೋದಿ ನೇತೃತ್ವದ ಬಿಜೆಪಿ ಸರಕಾರ ಒಂದು ಪೈಸೆ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಕನ್ನಡಿಗರು ಬೆವರು ಬಸಿದು ಕಟ್ಟಿದ ಹೆಮ್ಮೆಯ ಲಾಭದಲ್ಲಿದ್ದ ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೊದಲಾದ ಬ್ಯಾಂಕುಗಳನ್ನು ನಷ್ಟದಲ್ಲಿರುವ ಬ್ಯಾಂಕುಗಳ ಜೊತೆ ವಿಲೀನ ಮಾಡಿ ಕರ್ನಾಟಕಕ್ಕೆ ದ್ರೋಹ ಮಾಡಲಾಗಿದೆ. ಇದನ್ನು ಮುಚ್ಚಿ ಹಾಕಲು ‘ಒಂದೇ ದೇಶ, ಒಂದೇ ಧರ್ಮ, ಒಂದೇ ಭಾಷೆ, ಒಂದೇ ರೇಷನ್ ಕಾರ್ಡ್’ ಎಂಬ ಪ್ರಹಸನ ನಡೆಸಲಾಗುತ್ತಿದೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಒಡಿಶಾ, ಕಾಶ್ಮೀರ, ಮಣಿಪುರ ಮುಂತಾದ ರಾಜ್ಯಗಳು ಸೇರಿ ಭಾರತವಾಗಿದೆ. ಈ ರಾಜ್ಯಗಳ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಭಿನ್ನವಾಗಿವೆ. ಈ ಭಿನ್ನತೆ ಮನ್ನಿಸದೇ ಉತ್ತರ ಪ್ರದೇಶ, ಹರಿಯಾಣ ಮುಂತಾದ ರಾಜ್ಯಗಳ ಭಾಷೆ, ಸಂಸ್ಕೃತಿಗಳನ್ನು ಈ ರಾಜ್ಯಗಳ ಮೇಲೆ ಹೇರಲು ಹೊರಟರೆ ದೀರ್ಘ ಕಾಲದಲ್ಲಿ ಭಾರತದ ಏಕತೆಗೆ ಅಪಾಯ ಉಂಟಾಗಲಿದೆ. ಆದರೆ, ಬಹುತ್ವ ಭಾರತದ ಮೇಲೆ ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿ ಹೇರಲು ಹೊರಟವರಿಗೆ ಇದು ಅರ್ಥವಾಗುವುದಿಲ್ಲ.

ಕರ್ನಾಟಕ ಸರಕಾರ ತನ್ನದೇ ಆದ ಪ್ರತ್ಯೇಕ ಧ್ವಜ ಹೊಂದುವ ಪ್ರಸ್ತಾವನೆಯನ್ನು ಸರಕಾರ ಸಲ್ಲಿಸಿತ್ತು. ಆದರೆ, ಕೇಂದ್ರದ ಮೋದಿ ಸರಕಾರ ಅದಕ್ಕೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಈ ಬಾರಿ ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡ ಕನ್ನಡ ಧ್ವಜವನ್ನು ಹಾರಿಸಲಾಗುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು ಧ್ವನಿಯೆತ್ತಬೇಕಾಗಿದೆ.

ಪ್ರಾದೇಶಿಕತೆಯ ಮೇಲೆ ಪ್ರಧಾನಿ ಮೋದಿಯವರ ದಾಳಿ ಅನಿರೀಕ್ಷಿತವಲ್ಲ. ಅವರಿಗೆ ವಾಜಪೇಯಿ ಅವರಂತೆ ಸ್ವಂತದ ಅಭಿಪ್ರಾಯ ಮತ್ತು ವಿವೇಚನಾ ಶಕ್ತಿಗಳಿಲ್ಲ. ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಕಣ್ಸನ್ನೆಯಂತೆ ಅವರು ಹೇಳಿಕೆ ನೀಡುತ್ತಾರೆ. ಇಂಥ ಹೇಳಿಕೆ ನೀಡಿ ಜನರ ಪ್ರತಿಕ್ರಿಯೆ ಅವಲೋಕಿಸಿ ಅಂಥ ಆಕ್ಷೇಪ ಬರದಿದ್ದರೆ ಹೇಳಿದ್ದನ್ನು ಜಾರಿಗೆ ತರುತ್ತಾರೆ. ಬಿಜೆಪಿ ಈಗಾಗಲೇ ಕ್ರಮೇಣ ಅದನ್ನು ಜಾರಿಗೆ ತರುತ್ತಿದೆ. ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ನಾಯಕರನ್ನು ಮೂಲೆ ಗುಂಪು ಮಾಡಿ ನೇರವಾಗಿ ಮೋದಿ ಮತ್ತು ಅಮಿತ್ ಶಾ ಪ್ರಚಾರಕ್ಕೆ ಇಳಿದರು. ಜೆಡಿಎಸ್ ಜೊತೆಗಿನ ಮೈತ್ರಿಯ ಪ್ರಶ್ನೆಯಲ್ಲೂ ರಾಜ್ಯ ಬಿಜೆಪಿ ಅಧ್ಯಕ್ಷ ಕಟೀಲು ಮತ್ತು ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ಅವರನ್ನು ಕಡೆಗಣಿಸಿ ಅಮಿತ್ ಶಾ ಕುಮಾರಸ್ವಾಮಿ ಜೊತೆ ನೇರವಾಗಿ ತಾವೇ ಮಾತುಕತೆ ನಡೆಸಿದರು. ಕರ್ನಾಟಕ ವಿಧಾನಸಭಾ ಚುನಾವಣೆ ನಡೆದು ಆರು ತಿಂಗಳು ಗತಿಸಿದರೂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆಯಾಗಲಿಲ್ಲ. ಅಂದರೆ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಕರ್ನಾಟಕದ ಬಿಜೆಪಿ ನಾಯಕರಿಗಿಲ್ಲ. ಇದು ಬಿಜೆಪಿಯ ರಾಷ್ಟ್ರೀಯತೆ.

ಬಿಜೆಪಿಯ ರಾಷ್ಟ್ರೀಯತೆಗೂ ಗಾಂಧಿ, ನೆಹರೂ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್ ಪ್ರತಿಪಾದಿಸಿದ ರಾಷ್ಟ್ರೀಯತೆಗೂ ತುಂಬಾ ವ್ಯತ್ಯಾಸವಿದೆ. ಬಿಜೆಪಿಯ ಸೈದ್ಧಾಂತಿಕ ಸ್ಫೂರ್ತಿಯಾದ ಆರೆಸ್ಸೆಸ್ ರಾಷ್ಟ್ರೀಯತೆ ಭಾರತೀಯ ಮೂಲದ್ದಲ್ಲ. ಅದು ಜರ್ಮನಿ ಮತ್ತು ಇಟಲಿಯಿಂದ ಎರವಲು ತಂದ ಹಿಟ್ಲರ್ ಮತ್ತು ಮುಸ್ಸೋಲಿನಿ ಮಾದರಿಯ ರಾಷ್ಟ್ರೀಯತೆ.ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ನಾಯಕರು ಪ್ರತಿಪಾದಿಸಿದ ರಾಷ್ಟ್ರೀಯತೆ ಬಹುಜನಾಂಗ, ಬಹು ಧರ್ಮ, ಬಹುಭಾಷೆ, ಬಹುಸಂಸ್ಕೃತಿ, ವಿಭಿನ್ನ ರಾಷ್ಟ್ರೀಯತೆಗಳನ್ನು ಒಳಗೊಳ್ಳುವ ಮತ ನಿರಪೇಕ್ಷ ರಾಷ್ಟ್ರೀಯತೆ.

ಯುರೋಪ್ ಸೇರಿದಂತೆ ಪಾಶ್ಚಾತ್ಯ ದೇಶಗಳ ರಾಷ್ಟ್ರೀಯತೆಯ ಮಾದರಿ ಭಾರತಕ್ಕೆ ಸೂಕ್ತವಲ್ಲ. ಆ ದೇಶಗಳು ಒಂದೆರಡು ಕೋಟಿ ಜನಸಂಖ್ಯೆ ಹೊಂದಿರುವ ಬಹುತೇಕ ಒಂದೇ ಸಮುದಾಯಕ್ಕೆ ಸೇರಿದ ಪುಟ್ಟ ದೇಶಗಳು . ಹೀಗಾಗಿ ಅಲ್ಲಿ ಏಕ ಧರ್ಮ, ಏಕ ಸಂಸ್ಕೃತಿ ಘೋಷಣೆಯ ಮೂಲಕ ಹಿಟ್ಲರ್, ಮುಸ್ಸೋಲಿನಿಗಳು ಯೆಹೂದಿಗಳ ನರಮೇಧ ಮಾಡಿ ಮೆರೆದರು. ಆದರೆ, ಭಾರತ ಹಾಗಲ್ಲ .ಇಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಮರಾಠಾ, ತಮಿಳು ಸೇರಿದಂತೆ ಸಾವಿರಾರು ಸಮುದಾಯಗಳು, ಭಾಷೆಗಳು, ಆದಿವಾಸಿ ಬುಡಕಟ್ಟುಗಳೂ ಇವೆ. ಇವರನ್ನೆಲ್ಲ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಂವಿಧಾನವನ್ನು ಬಾಬಾಸಾಹೇಬರು ನೀಡಿದ್ದಾರೆ. ಅದರ ಬಗ್ಗೆ ಅಪಸ್ವರ ತೆಗೆಯುವುದು ನಿಜವಾದ ದೇಶ ದ್ರೋಹವಾಗಿದೆ.

ಕರ್ನಾಟಕ ಮಾತೆಯನ್ನು ಕವಿ ಕುವೆಂಪು, ‘ಭಾರತ ಮಾತೆಯ ತನುಜಾತೆ’ ಎಂದು ಕರೆದರು. ತನುಜಾತೆಯ ಕೊರಳು ಹಿಸುಕಿ ಕೊಲ್ಲುವುದನ್ನು ಭಾರತ ಮಾತೆಯೂ ಒಪ್ಪುವುದಿಲ್ಲ. ಕರ್ನಾಟಕ ಅಂದರೆ ಬರೀ ಒಂದು ಭೂ ಪ್ರದೇಶವಲ್ಲ. ಇದು ತನ್ನದೇ ಆದ ಭಾಷೆ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಗಳನ್ನೂ ಕೂಡ ಹೊಂದಿದೆ. ಇಲ್ಲಿ ಜೈನ ಧರ್ಮ ಈ ನೆಲದ ಜನ ಭಾಷೆಯನ್ನು ಅರಗಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿತು.

ನಂತರ ಬಂದ ಬೌದ್ಧ, ಇಸ್ಲಾಂ, ಕ್ರೈಸ್ತ ಹೀಗೆ ವಿಭಿನ್ನ ಸಮುದಾಯಗಳ ಜನರು ಈ ಕರ್ನಾಟಕವನ್ನು ಕಟ್ಟಿದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಬಲಿದಾನ ಮಾಡಿದ ಏಕೈಕ ಹುತಾತ್ಮ ಬಳ್ಳಾರಿಯ ರಮಝಾನ್ ಸಾಬ್, ಕನ್ನಡ ಭಾಷೆಗೊಂದು ನಿಘಂಟು ನೀಡಿದವರು ರೆವರೆಂಡ್ ಕಿಟ್ಟೆಲ್. ಇದು ಕರ್ನಾಟಕದ ಪ್ರಾದೇಶಿಕ ವೈಶಿಷ್ಟ್ಯ. ಈ ಪ್ರಾದೇಶಿಕತೆಯ ಅಸ್ಮಿತೆಯ ಕೊರಳು ಹಿಸುಕುವ ದುಸ್ಸಾಹಸಕ್ಕೆ ಯಾರೇ ಕೈ ಹಾಕಿದರೂ ಅದರಿಂದ ಭಾರತದ ಏಕತೆ, ಸಮಗ್ರತೆಗೆ ಗಂಡಾಂತರ ಬರುತ್ತದೆ. ಇದು ಕನ್ನಡ ಮಾತ್ರವಲ್ಲ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಣಿಪುರ ಸೇರಿದಂತೆ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ವಾಸ್ತವ ಸತ್ಯ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - -ಸನತ್ ಕುಮಾರ್ ಬೆಳಗಲಿ

contributor

Similar News