ನಿರಂಜನರ ಜೊತೆಗಿನ ಒಡನಾಟದ ನೆನಪುಗಳು

Update: 2024-06-24 04:19 GMT

1976ರಲ್ಲಿ ದಾವಣಗೆರೆಯಲ್ಲಿ ನಡೆದ ಪ್ರಗತಿಪಂಥ ಸ್ಥಾಪನಾ ಸಮ್ಮೇಳನದಲ್ಲಿ ನಿರಂಜನರು ಉಪಸ್ಥಿತರಿದ್ದರು.

ನಿರಂಜನ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದ ಕುಳಕುಂದ ಶಿವರಾಯರು ಬದುಕಿದ್ದರೆ ನೂರನೇ ವರ್ಷದಲ್ಲಿ ಕಾಲಿಡುತ್ತಿದ್ದರು. ಈಗ ಅವರನ್ನು ನೋಡಿದವರು ಮತ್ತು ಒಡನಾಟ ಹೊಂದಿದವರು ಅಪರೂಪಕ್ಕೆ ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರೆ. ನಿರಂಜನರು ಬದುಕಿದ್ದಾಗ ನಾನು ಅವರ ಸಂಪರ್ಕ ಮತ್ತು ಒಡನಾಟ ಹೊಂದಿದವನು ಎಂದು ಹೇಳಲು ಹೆಮ್ಮೆ ಅನ್ನಿಸುತ್ತದೆ. ಎಪ್ಪತ್ತರ ದಶಕದ ಆ ದಿನಗಳು ಮನಪಟಲದ ಮೇಲೆ ಸುಳಿದಾಡಿದಾಗ ಮತ್ತೆ ಇಂದಿನ ದುರಿತ ಕಾಲಕ್ಕೆ ಬರಲು ಮನಸ್ಸು ಒಲ್ಲೆ ಅನ್ನುತ್ತದೆ. ಆ ನೆನಪುಗಳಲ್ಲಿ ಕಳೆದು ಹೋಗುವುದಿದೆಯಲ್ಲ ಅದಕ್ಕಿಂತ ಖುಷಿ ಬೇರೆ ಇಲ್ಲ. ಅದರಲ್ಲೂ ನಿರಂಜನ, ಬಸವರಾಜ ಕಟ್ಟಿಮನಿ, ರಾವ ಬಹಾದ್ದೂರು ಮತ್ತು ಸುಬ್ಬಣ ಎಕ್ಕುಂಡಿಯವರ ಜೊತೆಗಿನ ಮಾತುಕತೆ ಹರಟೆ ಇನ್ನೆಲ್ಲಿ ಸಿಗಲು ಸಾಧ್ಯ?

ಆ ದಿನಗಳೇ ಹಾಗಿದ್ದವು. ನಾನು ಜನಿಸಿ, ಬೆಳೆದ ಅವಿಭಜಿತ ಬಿಜಾಪುರ ಜಿಲ್ಲೆಯ ಜಮಖಂಡಿಯಲ್ಲಿ ಗ್ರಾಮಾಯಣ ಖ್ಯಾತಿಯ ರಾವ ಬಹಾದ್ದೂರ ಮತ್ತು ಸತ್ಯಕಾಮ ನೆಲೆಸಿದ್ದರು. ಸಮೀಪದ ಬನಹಟ್ಟಿಯಲ್ಲಿ ದು.ನಿಂ.ಬೆಳಗಲಿ ಇದ್ದರು. ನಿತ್ಯ ರಾವ ಬಹಾದ್ದೂರ ಮನೆಗೆ ಹೋಗಿ ಅವರ ಅನುಭವದ ಸಂಪತ್ತನ್ನು ಸವಿಯುವ ಅವಕಾಶ ನನಗೆ ಸಿಕ್ಕಿತ್ತು. ಬಾಲ್ಯದಲ್ಲಿ ಇಂಚಗೇರಿ ಮಠದ ಮಹಾದೇವರ ಸಂಪರ್ಕದಿಂದ ಎಡಪಂಥೀಯ ವಿಚಾರ ಮತ್ತು ಚಳವಳಿಯ ಜೊತೆಗೆ ಒಡನಾಟ ಬೆಳೆಯಿತು. ಆಗ ಪುಸ್ತಕಗಳನ್ನು ಓದುವ ಹುಚ್ಚು ಹಿಡಿಯಿತು. ಈಗಿನಂತೆ ಸುಲಭದಲ್ಲಿ ಪುಸ್ತಕಗಳು ಸಿಗುತ್ತಿರಲಿಲ್ಲ. ಅಲ್ಲಿಲ್ಲಿ ಓದಿ ತಿಳಿವಳಿಕೆ ಗಳಿಸಿಕೊಂಡ ಪರಿಣಾಮವಾಗಿ ಕೋಮು ಮತ್ತು ಜಾತಿ ವ್ಯಾಧಿ ನನಗೆ ತಗುಲಲಿಲ್ಲ.

ನಿರಂಜನರ ‘ಚಿರಸ್ಮರಣೆ’ ಮತ್ತು ಬಸವರಾಜ ಕಟ್ಟಿಮನಿಯವರ ‘ಜ್ವಾಲಾಮುಖಿಯ ಮೇಲೆ’ ಕಾದಂಬರಿಗಳನ್ನು ಓದಲು ಕೆಲ ಸಂಗಾತಿಗಳು ಹೇಳಿದರು. ಅವುಗಳ ಹಳೆಯ ಮುದ್ರಣಕ್ಕಾಗಿ ಅಲ್ಲಿಲ್ಲಿ ಹುಡುಕಿ ಓದಿದ್ದಾಯಿತು. ಆಗ ಕನ್ನಡದಲ್ಲಿ ನವೋದಯದ ನಂತರ ಪ್ರಗತಿಶೀಲ ಸಾಹಿತ್ಯ ಚಳವಳಿ ಐವತ್ತರ ದಶಕದಲ್ಲಿ ಇತ್ತೆಂದು ಗೊತ್ತಾಯಿತು. ನಿರಂಜನ ಮತ್ತು ಕಟ್ಟಿಮನಿ, ಅ.ನ.ಕೃಷ್ಣ ರಾಯರು ಮತ್ತು ತರಾಸು ಪ್ರಗತಿಶೀಲ ಸಾಹಿತ್ಯ ಚಳವಳಿಯ ನೇತಾರರಾಗಿದ್ದರು ಎಂದು ತಿಳಿಯಿತು. ನಂತರದ ದಿನಗಳಲ್ಲಿ ಅನಕೃ ಮತ್ತು ನಿರಂಜನರಿಗೆ ಭಿನ್ನಾಭಿಪ್ರಾಯ ಬಂದು ಪ್ರಗತಿಶೀಲ ಸಾಹಿತ್ಯ ಚಳವಳಿ ನಿಷ್ಕ್ರಿಯವಾಯಿತು ಎಂದು ಗೊತ್ತಾಯಿತು.

ಅದು 1974-75ನೇ ಇಸವಿ. ನನಗಾಗ ಇಪ್ಪತ್ತೊಂದು. ಆಗ ನಮ್ಮ ತಲೆಯಲ್ಲಿ ಒಂದು ಹುಳ ಹೊಕ್ಕಿತು. ನಿಷ್ಕ್ರಿಯವಾಗಿರುವ ಪ್ರಗತಿಶೀಲ ಸಾಹಿತ್ಯ ಚಳವಳಿಗೆ ಪುನಶ್ಚೇತನ ನೀಡಬೇಕೆಂಬ ತೀರ್ಮಾನಕ್ಕೆ ನಾವು ಜಮಖಂಡಿಯ ಕೆಲ ಗೆಳೆಯರು ಬಂದೆವು. ಒಮ್ಮೆ ತೀರ್ಮಾನಿಸಿದ ನಂತರ ತಡ ಮಾಡಲಿಲ್ಲ. ತಕ್ಷಣ ಹಣ ಹೊಂದಿಸಿಕೊಂಡು ಧಾರವಾಡಕ್ಕೆ ಹೋಗಿ ಬಸವರಾಜ ಕಟ್ಟಿಮನಿ ಅವರನ್ನು ಭೇಟಿಯಾದೆವು (ಆಗ ಜಮಖಂಡಿಯಿಂದ ಧಾರವಾಡಕ್ಕೆ ಬಸ್ ಪ್ರಯಾಣ ದರ 6 ರೂಪಾಯಿ. ಈಗ 200 ರೂಪಾಯಿ ಸಮೀಪ ಇದೆ) ಕಟ್ಟಿಮನಿಯವರು ಪ್ರೋತ್ಸಾಹ ನೀಡಿದರು. ನಿರಂಜನರನ್ನು ಕಾಣಲು ಹೇಳಿದರು. ಬೆಂಗಳೂರಿಗೆ ಹೋಗಲು ಹಣವಿರಲಿಲ್ಲ. ಪತ್ರ ಬರೆದು ನಿರಂಜನರಿಗೆ ಸವಿಸ್ತಾರವಾಗಿ ತಿಳಿಸಿದೆವು. ಅವರು ತಕ್ಷಣ ಉತ್ತರಿಸಿ, ಸಹಮತ ವ್ಯಕ್ತಪಡಿಸಿದರು.

1973ರಲ್ಲಿ ಆರಂಭವಾದ ನಿರಂಜನರ ಜೊತೆಗಿನ ಪತ್ರ ಸಂಪರ್ಕ ಮುಂದೆ ಎರಡು ದಶಕಗಳ ವರೆಗೆ ಇತ್ತು. ನಿರಂಜನರು ಬರೆದರೆ 3 ರಿಂದ 4 ಪುಟಗಳ ಸುದೀರ್ಘ ಪತ್ರ ಬರೆಯುತ್ತಿದ್ದರು. ನಾನು ಅವರ ಸಲಹೆ, ಸೂಚನೆಯನ್ನು ಕೋರಿ ಪತ್ರ ಬರೆಯುತ್ತಿದ್ದೆ. ಪರಸ್ಪರ ಭೇಟಿಯಾಗಿದ್ದು ತುಂಬಾ ತಡವಾಗಿ. ಅವರನ್ನು ಕಾಣಲೆಂದೇ ಹೊಂದಿಸಿಕೊಂಡು ಬೆಂಗಳೂರಿಗೆ ಹೋದೆ. ಸಿಟಿ ಬಸ್ ಹತ್ತಿ ಜಯನಗರ ಟಿ ಬ್ಲಾಕ್‌ನಲ್ಲಿ ಇಳಿದು ಅವರ ಮನೆಯನ್ನು ಹುಡುಕಿಕೊಂಡು ಹೋದೆ. ಪಾರ್ಶ್ವವಾಯು ಪೀಡಿತರಾಗಿದ್ದ ನಿರಂಜನರು ಹೊರಗೆ ಎಲ್ಲೂ ಹೋಗುತ್ತಿರಲಿಲ್ಲ. ನಾನು ಹೋದಾಗ ಡಾ. ಅನುಪಮಾ ನಿರಂಜನರೂ ಮನೆಯಲ್ಲಿದ್ದರು. ಮೊದಲು ಚಹ ಕೊಟ್ಟು ನಂತರ ಊಟ ಮಾಡಿಸಿದರು.

ಮಾತನಾಡುತ್ತ ಕುಳಿತಾಗ ತಮ್ಮ ಕಮ್ಯುನಿಸ್ಟ್ ಚಳವಳಿಯ ದಿನಗಳನ್ನು ನೆನಪಿಸಿಕೊಂಡರು. ಕೆಲ ಹೊತ್ತು ತುಂಬಾ ಭಾವುಕರಾದರು. ‘ಒಬ್ಬ ಲೇಖಕ ಕಮ್ಯುನಿಸ್ಟ್ ಪಕ್ಷ ಸೇರಬಾರದು. ಸೇರಿದ ನಂತರ ಬಿಡಬಾರದು’ ಎಂದು ಒಮ್ಮೆ ಹೇಳಿದರು. ನಾನು ಮೊದಲು ಬರೆದ ಕೆಲ ಕತೆಗಳನ್ನು ಓದಿ ಮೆಚ್ಚುಗೆ ಸೂಚಿಸಿದರು. ನಂತರ ‘ಸಂಯುಕ್ತ ಕರ್ನಾಟಕ’ ಸೇರಿ ನಾನು ಪತ್ರಿಕಾ ರಂಗವನ್ನು ಪ್ರವೇಶಿಸಿದಾಗ ನಿರಂಜನರು ತಮ್ಮ ಅನುಭವಗಳ ಗಂಟನ್ನು ಬಿಚ್ಚಿಟ್ಟರು. ಅವರೂ ಒಮ್ಮೆ ಪತ್ರಿಕಾರಂಗ ಪ್ರವೇಶಿಸಿ ಹೊರಗೆ ಬಂದ ಕತೆ ಹೇಳಿದರು. ‘ಒಬ್ಬ ಸೃಷ್ಟಿಶೀಲ ಲೇಖಕ ಪತ್ರಕರ್ತನಾದರೆ ಅವನ ಭಾಷೆ ಬದಲಾಗುತ್ತದೆ. ಸೃಷ್ಟಿಶೀಲತೆ ಮಾಯವಾಗಿ ಎಲ್ಲ ಬರಹಗಳು ವರದಿಗಳಾಗುತ್ತವೆ’ ಎಂದು ನಿರಂಜನ ಹೇಳಿದರು.

ನಿರಂಜನರ ಹೆಸರನ್ನು ನಾನು ಮೊದಲು ಕೇಳಿದ್ದು 1969ರ ಕೊನೆಯಲ್ಲಿ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಕುಳಕುಂದ ಅವರ ಜನ್ಮಸ್ಥಳ. ಅಂತಲೇ ಅವರ ಮೊದಲಿನ ಬರಹಗಳೆಲ್ಲ ಕುಳಕುಂದ ಶಿವರಾಯ ಎಂದೇ ಇರುತ್ತಿದ್ದವು. ಅವರಿಗೆ ‘ಚಿರಸ್ಮರಣೆ’ ಕಾದಂಬರಿ ಬರೆಯಲು ಪ್ರೇರಣೆಯಾದ ಕಯ್ಯೂರು ಹೋರಾಟ, ಹುತಾತ್ಮ ರದವರ ರೋಚಕ ಕತೆ ಇವೆಲ್ಲ ಅವರು ಕಣ್ಣಾರೆ ಕಂಡ ದೃಶ್ಯಗಳು. ಕಯ್ಯೂರು ಪ್ರಕರಣದ ವಿಚಾರಣೆ ಮಂಗಳೂರು ನ್ಯಾಯಾಲಯದಲ್ಲಿ ನಡೆದಾಗ ನಿರಂಜನರು ಪ್ರತಿನಿತ್ಯ ಅಲ್ಲಿ ಬಂದು ಸ್ಥಳೀಯ ಪತ್ರಿಕೆಯೊಂದಕ್ಕೆ ವರದಿ ಮಾಡುತ್ತಿದ್ದರು. ಆ ಬಲಿದಾನದ ಘಟನೆಯಿಂದ ಸ್ಫೂರ್ತಿ ಪಡೆದು ಕಮ್ಯುನಿಸ್ಟ್ ಚಳವಳಿಗೆ ಧುಮುಕಿದ ನಿರಂಜನರು ಹೊರಳಿ ನೋಡಲಿಲ್ಲ.

ಆಗ ಸ್ವಾತಂತ್ರ್ಯ ಹೋರಾಟ ಎಲ್ಲೆಡೆ ವ್ಯಾಪಿಸಿತ್ತು. ಕರ್ನಾಟಕ ಎಂಬ ರಾಜ್ಯ ಅಸ್ತಿತ್ವದಲ್ಲಿರಲಿಲ್ಲ. ಆದರೆ, ಅವಿಭಜಿತ ಭಾರತ ಕಮ್ಯುನಿಸ್ಟ್ ಪಕ್ಷ ಕರ್ನಾಟಕ ಎಂದು ಹೆಸರಿಡುವ ಎಷ್ಟೋ ವರ್ಷಗಳ ಮೊದಲು ಕರ್ನಾಟಕ ಎಂಬ ಪದವನ್ನು ಪಕ್ಷದ ಚಟುವಟಿಕೆಗಳಲ್ಲಿ ಬಳಸುತ್ತಿತ್ತು. ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಇತ್ತು. ಕುಳಕುಂದ ಶಿವರಾಯರು (ನಿರಂಜನ) ಕಮ್ಯುನಿಸ್ಟ್ ಪಕ್ಷದ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಆಗಿದ್ದರು. ಜೊತೆಗೆ ಕಮ್ಯುನಿಸ್ಟ್ ಪಕ್ಷದ ಮುಖಪತ ‘ಜನಶಕ್ತಿ’ ಸಂಪಾದಕರಾಗಿದ್ದರು.

ಮೈಸೂರು ಭಾಗ ಮಹಾರಾಜರ ಆಡಳಿತಕ್ಕೆ ಒಳಪಟ್ಟಿದ್ದರಿಂದ ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳ ಕೇಂದ್ರ ಹುಬ್ಬಳ್ಳಿಯಾಗಿತ್ತು. ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ಕಮ್ಯುನಿಸ್ಟ್ ಪಕ್ಷದ ಕಚೇರಿ. ಹೀಗಿರುವಾಗ ಒಮ್ಮೆಲೇ ಕಮ್ಯುನಿಸ್ಟ್ ಪಕ್ಷದ ಮೇಲೆ ಸರಕಾರ ನಿಷೇಧ ಹೇರಿತು. ಕುಳಕುಂದ ಶಿವರಾವ ಭೂಗತರಾದರು. ಆಗ ತಮ್ಮ ಹೆಸರನ್ನು ‘ನಿರಂಜನ’ ಎಂದು ಬದಲಿಸಿಕೊಂಡು ಬರವಣಿಗೆಯಲ್ಲಿ ತೊಡಗಿದರು. ಅವರ ತಾಯಿ ಅವರ ಜೊತೆಗಿದ್ದರು. ಒಂದು ರಹಸ್ಯ ಜಾಗದಲ್ಲಿ ನಿರಂಜನರ ವಾಸ್ತವ್ಯ. ಅವರ ಕಾವಲಿಗೆ ಮುಲ್ಲಾ ಎಂಬ ಕಮ್ಯುನಿಸ್ಟ್ ಕಾರ್ಯಕರ್ತ. ಮುಲ್ಲಾ ಹೆಸರು ಬದಲಿಸಿಕೊಂಡು ಗಣೇಶ ಎಂದಾಗಿದ್ದ. ಹೀಗೆ ಭೂಗತ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಮತ್ತು ಜನಶಕ್ತಿ ಸಂಪಾದಕರಾಗಿ ನಿರಂಜನರು ಹಗಲೂ ರಾತ್ರಿ ದುಡಿದವರು. ಈ ಅನುಭವಗಳನ್ನು ನಿರಂಜನ ನೆನಪಿಸಿಕೊಳ್ಳುತ್ತಿದ್ದರು. ನಿರಂಜನರ ಅಂದಿನ ದಿನಗಳನ್ನು ಕಣ್ಣಾರೆ ಕಂಡ ಪಾಟೀಲ ಪುಟ್ಟಪ್ಪನವರು ನನಗೆ ಒಂದು ಇಡೀ ದಿನ ಅದರ ಬಗ್ಗೆ ರೋಚಕವಾಗಿ ಹೇಳಿದ್ದರು.

ಸ್ವಾತಂತ್ರ್ಯ ನಂತರ ಡಾ. ಅನುಪಮಾ ಅವರನ್ನು ಪ್ರೀತಿಸಿ ವಿವಾಹವಾದ ನಿರಂಜನರು ಕಮ್ಯುನಿಸ್ಟ್ ಪಕ್ಷದಿಂದ ಹೊರಗೆ ಹೋದರು. ಹೊರಹೋಗಲು ಯಾವುದೇ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಕೆಲ ಸಣ್ಣಪುಟ್ಟ ಸಂಘಟನಾತ್ಮಕ ಸಮಸ್ಯೆಗಳು ಮತ್ತು ಅದಕ್ಕಿಂತ ಮಿಗಿಲಾಗಿ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬ ತೀರ್ಮಾನದಿಂದ ಹೊರಗೆ ಹೋಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಇಷ್ಟೆಲ್ಲ ಆದರೂ ನಿರಂಜನರ ಮಾರ್ಕ್ಸ್‌ವಾದಿ ದೃಷ್ಟಿ ಕೋನ ಅಚಲವಾಗಿತ್ತು.

ನಾವು ಬಿಜಾಪುರದ ಯುವಕರು ಪ್ರಗತಿಶೀಲ ಸಾಹಿತ್ಯ ಚಳವಳಿಯನ್ನು ಪುನರಾರಂಭಿಸಬೇಕೆಂದು ಆಸಕ್ತಿ ತೋರಿಸಿದಾಗ ತಕ್ಷಣ ಸ್ಪಂದಿಸಿದ ನಿರಂಜನರು ಮನೆಯಲ್ಲಿ ಕುಳಿತೇ ಪತ್ರ ವ್ಯವಹಾರ ಮೂಲಕ ಸಮ್ಮೇಳನದ ಕಾರ್ಯದಲ್ಲಿ ತೊಡಗಿಸಿಕೊಂಡರು. ಪ್ರಗತಿಶೀಲ ಸಾಹಿತ್ಯ ಎಂದು ಹೆಸರು ಬೇಡ ‘ಪ್ರಗತಿ ಪಂಥ’ ಎಂದು ಬದಲಿಸೋಣ ಎಂದು ಅವರೇ ಹೆಸರು ಸೂಚಿಸಿದರು. ಮೊದಲು ಜಮಖಂಡಿಯಲ್ಲಿ ರಾಜ್ಯ ಪ್ರಗತಿಶೀಲ ಲೇಖಕರ ಸಮ್ಮೇಳನ ಮಾಡಬೇಕೆಂದು ತೀರ್ಮಾನಿಸಿದೆವು. ಆದರೆ, ಸಾಧ್ಯವಾಗಲಿಲ್ಲ. ಆಗ ದಾವಣಗೆರೆ ನಗರ ಕಮ್ಯುನಿಸ್ಟರ ಕೋಟೆಯಾಗಿತ್ತು. ಕಾಮ್ರೇಡ್ ಪಂಪಾಪತಿ ನಗರಪಾಲಿಕೆ ಅಧ್ಯಕ್ಷರಾಗಿದ್ದರು. ಪ್ರಗತಿಪಂಥ ಸಮ್ಮೇಳನ ನಡೆಸಲು ಅವರ ಸಹಕಾರ ಕೋರಿದೆವು. ದಾವಣಗೆರೆಯಲ್ಲಿ ನಡೆಸಲು ಅವರು ಒಪ್ಪಿದರು.

1976ರಲ್ಲಿ ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪ ಛತ್ರದಲ್ಲಿ ಪ್ರಗತಿಪಂಥ ಸಾಹಿತ್ಯ ಸಮ್ಮೇಳನ ನಡೆಯಿತು. ಅದರ ಉದ್ಘಾಟನೆಗೆ ಹಿರಿಯ ಹಿಂದಿ ಮತ್ತು ಉರ್ದು ಸಾಹಿತಿ ಭೀಷ್ಮ ಸಹಾನಿ ಬಂದಿದ್ದರು. ಸೋವಿಯತ್ ರಶ್ಯದಿಂದ ವಚನ ಸಾಹಿತ್ಯ ಅಧ್ಯಯನ ಮಾಡಿದ ದೆಷ್ಕೋ ಕೂಡ ಬಂದಿದ್ದರು. ಆಗಿನ್ನೂ ವಿದ್ಯಾರ್ಥಿಗಳಾಗಿದ್ದ ಕವಿ ಸಿದ್ಧಲಿಂಗಯ್ಯ, ಡಿ.ಆರ್.ನಾಗರಾಜ. ಶೂದ್ರ ಶ್ರೀನಿವಾಸ, ಸಾಹಿತಿಗಳಾದ ಎಚ್.ಎಸ್.ರಾಘವೇಂದ್ರ ರಾವ್, ಬಸವರಾಜ ಕಟ್ಟಿಮನಿ ಮೊದಲಾದವರು ಬಂದಿದ್ದರು. ಸಿದ್ಧಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನಅಲ್ಲಿ ಬಿಡುಗಡೆಯಾಯಿತು.

ಪ್ರಗತಿಪಂಥ ಸಾಹಿತ್ಯ ಸಮ್ಮೇಳನದಲ್ಲಿ ನಿರಂಜನರು ಮಾತನಾಡುವಾಗ ತುಂಬಾ ಭಾವುಕರಾಗಿ ಒಮ್ಮೆ ಕಣ್ಣೀರು ಹಾಕಿದರು. ಅದು ತುರ್ತು ಪರಿಸ್ಥಿತಿ ಕಾಲ. ಅದರ ಬಗ್ಗೆ ನಿರಂಜನರು ಸೂಕ್ಷ್ಮವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ಆಗಲೇ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಬಸವರಾಜ ಕಟ್ಟಿಮನಿ ಅವರು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿ ಇಂದಿರಾ ಗಾಂಧಿ ಅವರ ಬಗ್ಗೆ ಪದ್ಯ ಬರೆದು ಹಾಡಿದರು.

ಮುಂದೆ ಪ್ರಗತಿಪಂಥದ ಎರಡು ಸಮ್ಮೇಳನಗಳು ನಡೆದವು. 1977ರಲ್ಲಿ ಬಿಜಾಪುರ ಜಿಲ್ಲೆಯ ಮಹಾಲಿಂಗಪುರದಲ್ಲಿ ಮತ್ತು 1978ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದವು. ಮುಂದೆ ಮತ್ತೆ ನಡೆಯಲಿಲ್ಲ. ಆದರೆ, ನಿರಂಜನರ ಬರವಣಿಗೆ ನಿಲ್ಲಲಿಲ್ಲ. ನವಕರ್ನಾಟಕ ಪ್ರಕಾಶನಕ್ಕಾಗಿ ವಿಶ್ವ ಕಥಾಕೋಶ ಎಂಬ ಸಂಪುಟಗಳ ಸಂಪಾದಕತ್ವ ವಹಿಸಿ ಅನಾರೋಗ್ಯದ ನಡುವೆ ಯಶಸ್ವಿಯಾಗಿ ನಿಭಾಯಿಸಿದರು.

ಜಗತ್ತಿನ ಎಲ್ಲ ದೇಶಗಳ ಕತೆಗಳ ಈ ಸಂಪುಟಗಳಿಗೆ ಪ್ರತಿಯೊಂದಕ್ಕೂ ನಿರಂಜನರು ಬರೆದ ಮುನ್ನುಡಿ ಇದೆಯಲ್ಲ ಅದೊಂದು ಅದ್ಭುತ. ನಿರಂಜನರ ಅಪಾರ ಓದು, ಜ್ಞಾನ ಸಂಪತ್ತು ಇಲ್ಲಿ ದಾಖಲಾಗಿದೆ. ಈ ಮುನ್ನುಡಿಗಳದ್ದೇ ಒಂದು ಪುಸ್ತಕವನ್ನು ನವಕರ್ನಾಟಕ ಪ್ರಕಟಿಸಿದೆ.

ಪ್ರಗತಿಶೀಲ ಸಾಹಿತ್ಯ ಚಳವಳಿಯನ್ನು ನಿರಂಜನ, ಕಟ್ಟಿಮನಿ, ಅ.ನ.ಕೃಷ್ಣ ರಾವ್, ತರಾಸು ಸೇರಿ ಆರಂಭಿಸಿದರು. ಮುಂದೆ ಇವರಲ್ಲೇ ಭಿನ್ನಾಭಿಪ್ರಾಯ ಬಂತು. ನಿರಂಜನರನ್ನು ಟೀಕಿಸಿ ಅನಕೃ ಅವರು ಒಂದು ಕಾದಂಬರಿಯನ್ನೇ ಬರೆದರು. ಅದರಲ್ಲಿ ‘ಹುನಗುಂದ ಶಿವರಾಯ’ ಎಂಬ ಪಾತ್ರವನ್ನು ಸೃಷ್ಟಿಸಿದರು. ಮುಂದೆ ಬಂಡಾಯ ಸಾಹಿತ್ಯ ಸಂಘಟನೆಯ ಸ್ಥಾಪನಾ ಸಮ್ಮೇಳನಕ್ಕೂ ನಿರಂಜನರು ಬಂದಿದ್ದರು.

ನಿರಂಜನರಂಥ ನಿರಂತರ ಬರವಣಿಗೆಯಲ್ಲಿ ತೊಡಗಿಸಿಕೊಂಡವರು ಅಪರೂಪ. ಮೈಸೂರು ವಿಶ್ವವಿದ್ಯಾನಿಲಯಕ್ಕಾಗಿ ಅವರು ಸಂಪಾದಿಸಿ ಕೊಟ್ಟ ವಿಶ್ವ ಕೋಶ ಸಂಪುಟಗಳು ಅವರ ದಣಿವರಿಯದ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ. ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಾಗಲೂ ‘ಮೃತ್ಯುಂಜಯ’ ದಂಥ ಅಪರೂಪದ ಕಾದಂಬರಿಯನ್ನು ನೀಡಿದವರು ನಿರಂಜನರು. ರಶ್ಯದ ಕ್ರಾಂತಿಕಾರಿ ಸಾಹಿತಿ ಮ್ಯಾಕ್ಸಿಂ ಗಾರ್ಕಿ ಅವರ ‘ತಾಯಿ’ ಕಾದಂಬರಿಯನ್ನು ನಿರಂಜನರು ಅನುವಾದಿಸಿದರು. ಗಾರ್ಕಿಯೇ ಕನ್ನಡದಲ್ಲಿ ಬರೆದಿದ್ದಾರೇನೋ ಎಂಬಂತೆ ಅದು ಓದಿಸಿಕೊಂಡು ಹೋಗುತ್ತದೆ. ಉಳಿದ ಸೋವಿಯತ್ ಪ್ರಕಟಣೆಗಳ ಭಾಷೆ ಸತ್ವಹೀನವಾಗಿದ್ದರೂ ನಿರಂಜನರು ಅನುವಾದಿಸಿದ ‘ತಾಯಿ’ ಕಾದಂಬರಿ ವಿಭಿನ್ನವಾಗಿದೆ.

ನಿರಂಜನರ ಪುತ್ರಿ ತೇಜಸ್ವಿನಿಯವರೂ ಕವಯಿತ್ರಿ ಪ್ಯಾಬ್ಲ್ಯೊ ನೆರೂಡಾ ಪದ್ಯಗಳನ್ನು ಮೊದಲು ಕನ್ನಡಕ್ಕೆ ತಂದವರು ಅವರು. ವೈದ್ಯಕೀಯ ಸಾಹಿತ್ಯಕ್ಕೆ ಡಾ.ಅನುಪಮಾ ನಿರಂಜನರ ಕೊಡುಗೆ ಈಗಲೂ ಪ್ರಸ್ತುತ. ಇಡೀ ಕುಟುಂಬದಲ್ಲಿ ಸಾಹಿತ್ಯಕ ವಾತಾವರಣ ಇತ್ತು.

ನಿರಂಜನರು ಬದುಕಿದ್ದರೆ ಈಗ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಆದರೆ, ಅವರ ಶತಮಾನೋತ್ಸವದ ಯಾವ ಕಾರ್ಯಕ್ರಮಗಳೂ ನಡೆದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ಗಮನಿಸಲಿ. ಅದಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಈ ಬಗ್ಗೆ ಗಮನ ಹರಿಸಿ ಎಪ್ಪತ್ತು ವರ್ಷಗಳ ಹಿಂದೆ ಸಮಾನತೆಯ ಸಂದೇಶ ಸಾರಿದ ನಿರಂಜನರ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಲಿ. ಅವರ ಸಾಹಿತ್ಯದ ಕುರಿತು ಎಲ್ಲೆಡೆ ವಿಚಾರ ಸಂಕಿರಣಗಳು ನಡೆಯಲಿ. ಈಗ ಇದೊಂದೇ ನಾವು ನಿರಂಜನರಿಗೆ ಸಲ್ಲಿಸುವ ನೈಜ ಗೌರವವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಸನತ್ ಕುಮಾರ್ ಬೆಳಗಲಿ

contributor

Similar News