ಕೇಂದ್ರ ಗೃಹಮಂತ್ರಿ ಸ್ಥಾನದಿಂದ ಅಮಿತ್ ಶಾ ರನ್ನು ವಜಾಗೊಳಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

Update: 2024-12-20 07:06 GMT

ರಾಯಚೂರು: ಸಂಸತ್ತಿನ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಅಂಬೇಡ್ಕರ್ ರವರ ಬಗ್ಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರವರು ಅತ್ಯಂತ ಹಗುರವಾಗಿ ಹಾಗೂ ನಾಲಗೆಯ ಮೇಲೆ ಹಿಡಿತವಿಲ್ಲದ ಮಾತನಾಡಿದ್ದಾರೆ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದೇವದುರ್ಗ ನಗರದ ತಹಶೀಲ್ದಾರ ಕಚೇರಿ ಮುಂದೆ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ತಹಶೀಲ್ದಾರ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.

ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಗೌರವಿಸುವುದಿಲ್ಲ ಎನ್ನುವುದು ಸಾಬೀತಾಗಿದೆ.ಅವರ ಮನುಸ್ಮೃತಿ ಮತ್ತು ಆರ್.ಎಸ್.ಎಸ್. ಸಂಘ ಪರಿವಾರದ ಸಿದ್ಧಾಂತವು ಸ್ಪಷ್ಟಪಡಿಸಿದೆ ಇಂತಹ ಹೇಳಿಕೆ ನೀಡಿರುವ ಕೇಂದ್ರ ಗೃಹಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಅಮಿತ್ ಶಾ ರವರಿಗೆ ಯಾವ ನೈತಿಕತೆಯೂ ಇರುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಹನುಮಂತಪ್ಪ ಮನ್ನಪುರಿ ಅವರು ಅಂಬೇಡ್ಕರ್ ಹೆಸರು ಹೇಳುವುದು ಇತ್ತೀಚಿನ ದಿನಗಳಲ್ಲಿ ಅದೊಂದು ಫ್ಯಾಷನ್ ಆಗಿದೆ , ಅಂಬೇಡ್ಕರ್, ಅಂಬೇಡ್ಕರ್ ಎನ್ನುವವರು ಇಷ್ಟೊಂದು ಬಾರಿ ಭಗವಂತನ ಸ್ಮರಣೆ ಮಾಡಿದ್ದಾದರೆ ಏಳೇಳು ಜನ್ಮದ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು ಎಂದು ಅಂಬೇಡ್ಕರ್ ರವರ ಬಗ್ಗೆ ನಾಲಿಗೆ ಹರಿ ಬಿಟ್ಟಿರುವ ಗೃಹ ಮಂತ್ರಿ ಅಮಿತ ಶಾ ರವರು ದೇಶದ ಜನತೆಗೆ ಕ್ಷಮೆ ಕೇಳಬೇಕು ಎಂದರು.

ಅಂಬೇಡ್ಕರ್ ಅವರು ದಮನಕ್ಕೆ, ತುಳಿತಕ್ಕೆ ಒಳಪಟ್ಟಂತಹ ದಲಿತ ದಮನಿತ ಸಮುದಾಯಗಳ ಉಸಿರಾಗಿದ್ದಾರೆ. ಅಂಬೇಡ್ಕರ್ ಅವರು ಬಂದ ನಂತರವೇ ನಮಗೆ ಸ್ವರ್ಗ ಮೋಕ್ಷ ಹಾಗೂ ಸ್ಮರಣೆ ಎಲ್ಲವೂ ಆಗಿದೆ ಎಂದು ಹೇಳಿದರು.

ಬಾಬಾ ಸಾಹೇಬರಿಗೆ ಆದ ಅವಮಾನವನ್ನು ಸಹಿಸುವುದಿಲ್ಲ. ಈ ಹೇಳಿಕೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರೊಬ್ಬರ ಹೇಳಿಕೆಯಾಗದೇ ಬಿಜೆಪಿಯ ಪಟಾಲಂ ಮತ್ತು ಆ‌ರ್.ಎಸ್.ಎಸ್. ಸಿದ್ಧಾಂತದ ಮನುವಾದಿಗಳ ಹೇಳಿಕೆಯಾಗಿದೆ ಎಂದು ದೂರಿದ್ದಾರೆ.

ಈ ವೇಳೆ ಕರ್ನಾಟಕ ಜನಶಕ್ತಿ ಮುಖಂಡ ಮಾರೆಪ್ಪ ಹರವಿ, ಮಲ್ಲಪ್ಪ ಗೌಡೂರು, ನರಸಣ್ಣಗೌಡ ಗಣೆಕಲ್ , ಶಿವಪ್ಪ ಚಿಂಚೋಡಿ , ಶಿವರಾಜ್ ರುದ್ರಾಕ್ಷಿ ಸೇರಿದಂತೆ ಇನ್ನಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News