ಮಹಿಳೆಯರಿಗೆ ಸಾಲ ಸಂಪರ್ಕ ಒದಗಿಸಿ ಆರ್ಥಿಕವಾಗಿ ಸಬಲರನ್ನಾಗಿಸಿ: ಡಾ.ಟಿ. ರೋಣಿ
ರಾಯಚೂರು: ಗ್ರಾಮೀಣ ಪ್ರದೇಶದ ಸ್ವ-ಸಹಾಯ ಸಂಘಗಳಿಗೆ ಸಾಲ ಸಂಪರ್ಕ ಒದಗಿಸುವ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಲು ಬ್ಯಾಂಕ್‌ಗಳು ಮುಂದಾಗಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಡಾ.ಟಿ. ರೋಣಿ ಅವರು ಹೇಳಿದರು.
ಜ.09ರ ಗುರುವಾರ ದಂದು ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಅಭಿಯಾನ ನಿರ್ವಾಹಣಾ ಘಟಕ ಹಾಗೂ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ರಾಯಚೂರು ವತಿಯಿಂದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಕಾರ್ಯಾಗಾರಕ್ಕೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಬರುವಂತಹ ಕಾರ್ಯಕ್ರಮಗಳು ಹಾಗೂ ಮುಖ್ಯವಾಗಿ ಸ್ವ-ಸಹಾಯ ಗುಂಪುಗಳಿಗೆ ಸಾಲ ಸಂಪರ್ಕ ಮತ್ತು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ವೈಯಕ್ತಿಕ ಉದ್ಯಮ ಪ್ರಾರಂಭಿಸಲು ಹಣಕಾಸಿನ ಬಗ್ಗೆ ಹಾಗೂ ಇತರೆ ಹಣಕಾಸು ಸೇರ್ಪಡೆಗೆ ಸಂಬಂಧಪಟ್ಟ ಯೋಜನೆಗಳ ಮಾಹಿತಿಯು ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ತಲುಪಬೇಕು ಎಂದರು.
ಗುಂಪುಗಳನ್ನು ಬ್ಯಾಂಕನೊಂದಿಗೆ ಲಿಂಕ್ ಮಾಡುವುದು ಹಣಕಾಸಿನ ಸೇರ್ಪಡೆಯನ್ನು ಉತ್ತೇಜಿಸಲು ಅತ್ಯಗತ್ಯ ಪೂರ್ವಾಪೇಕ್ಷಿತವಾಗಿದೆ. ಬ್ಯಾಂಕ್ ಲಿಂಕೇಜ್ ನಿಧಿಯ ರವಾನೆ, ವಿಮೆ ಮುಂತಾದ ಇತರೆ ಸೇವೆಗಳನ್ನು ಬಳಸಿಕೊಳ್ಳಲು ಗುಂಪುಗಳನ್ನು ಶಕ್ತಗೊಳಿಸುತ್ತದೆ. ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್ ಸಂಪರ್ಕವು ಹಣಕಾಸಿನ ಸೇವೆಗಳನ್ನು ತಲುಪಿಸಲು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಲಿಂಕ್ ಮಾಡುವುದು ವ್ಯವಸ್ಥಿತವಾಗಿ ಜಾರಿಯಾಗಬೇಕು ಎಂದರು.
ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು ಈಗಾಗಲೇ ಕೆನರಾ ಬ್ಯಾಂಕ್, ಐಸಿಐಸಿಐ, ಯುಬಿಐ, ಯುಕೋ ಬ್ಯಾಂಕ್, ಐಪಿಪಿಬಿ ಮತ್ತು ಎಸ್.ಬಿ.ಐ ಜೊತೆಗೆ ಎಂಓಯು ಸಹಿ ಹಾಕಿದೆ. ಮುಂಬರುವ ದಿನಗಳಲ್ಲಿ ಬ್ಯಾಂಕ್ ಸಾಲ ಸಂಪರ್ಕ ತ್ವರಿತಗೊಳಿಸಲು ಇನ್ನೂ ಕೆಲ ಬ್ಯಾಂಕ್‌ಗಳೊಂದಿಗೆ ಎಂಓಯು ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಗ್ರಗಣ್ಯ ಬ್ಯಾಂಕ್ ವ್ಯವಸ್ಥಾಪಕ ಟಿ.ತಿರುಮಲೇಶ, ನರ್ಬಾಡ್ ಡಿ.ಡಿ.ಎಮ್ ಕಲಾವತಿ, ಎಸ್.ಬಿ.ಐ ಆರ್.ಸೆ.ಟಿ ನಿರ್ದೇಶಕರಾದ ವಿಜಯ ಕುಮಾರ, ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ.ರಮೇಶ ಸುವಾರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನ್ನಾಥ ಜೆ, ಎನ್.ಆರ್.ಎಲ್.ಎಮ್. ಜಿಲ್ಲಾ ವ್ಯವಸ್ಥಾಪಕರಾದ ವಿಜಯ ಕುಮಾರ, ಶ್ರೀಕಾಂತ ಬನ್ನಿಗೋಳ, ಟಿ.ಪಿ.ಎಂ. ಶಿವರಾಜ, ಬಿ.ಎಂ, ಮೌನೇಶ, ವಲಯ ಮೇಲ್ವಿಚಾರಕರಾದ ಪ್ರಕಾಶ, ಸೂರತ್ ಪ್ರಸಾದ ಗಟ್ಟು, ಶರಣು ಬಸವ, ಪ್ರದೀಪ್ ಕುಮಾರ, ಡಿ.ಎಂ.ಐ.ಎಸ್ ಮಂಜುನಾಥ, ಡಿಇಒ ನಾಗನಗೌಡ ಸೇರಿದಂತೆ ವಿವಿಧ ಬ್ಯಾಂಕಗಳ ಸಿಬ್ಬಂದಿ ಇದ್ದರು.