ರಾಯಚೂರು: ಸಾರಿಗೆ ಪ್ರಯಾಣ ದರ ಹೆಚ್ಚಳ ಖಂಡಿಸಿ ಸಿಪಿಐಎಂನಿಂದ ಪ್ರತಿಭಟನೆ
ರಾಯಚೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರ ಹೆಚ್ಚಳ ಮಾಡಿದ ಕ್ರಮವನ್ನು ಖಂಡಿಸಿ ಸಿಪಿಐ(ಎಂ) ಜಿಲ್ಲಾ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಡೀಸೆಲ್ ದರಗಳ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚದ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಆವೈಜ್ಞಾನಿಕವಾಗಿದೆ. ದರ ಹೆಚ್ಚಳ ಜನ ಸಾಮಾನ್ಯ ವಿರೋಧಿಯಾಗಿದೆ ಎಂದು ಪ್ರತಭಟನಾಕಾರರು ದೂರಿದರು.
ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವು ಮುಕ್ತ ಮಾರುಕಟ್ಟೆ ದರಗಳಿಗಿಂತ ದುಬಾರಿಯಾಗಿದೆ. ಸರಕಾರಕ್ಕೆ ವೆಚ್ಚವನ್ನು ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು. ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇ.15 ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಸುಳ್ಳು ನೆಪವಾಗಿದೆ ಎಂದು ಆಪಾದಿಸಿದರು.
ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ವೆಚ್ಚ ಹೆಚ್ಚಳವಾಗಿದೆ ಎಂದು ಎನ್ನಲಾಗಿದೆ. ನಾಲ್ಕು ನಿಗಮಗಳಲ್ಲಿ ಸಿಬ್ಬಂದಿ ಗಳಿಗೆ ಸುಮಾರು 3 ವರ್ಷಗಳ ವೇತನ ಬಾಕಿ ನೀಡಬೇಕಿದೆ ಮತ್ತು ಹೊಸ ವೇತನ ಒಪ್ಪಂದ ಮಾಡಬೇಕಿದೆ ಎಂದು ಆಗ್ರಹಿಸಿದರು.
1950 ರ ಆರ್‌ಟಿಸಿ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯವಾಗಿದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಲಾಭ ನಷ್ಟದ ಲೆಕ್ಕದಲ್ಲಿ ಸರಕಾರ ನೋಡಬಾರದು. ನಷ್ಟ ಉಂಟಾದಲ್ಲಿ ಸರಕಾರ ಅದನ್ನು ಭರಿಸಬೇಕಾಗಿದೆ ಹಾಗೂ ಖಾಸಗಿ ಕಂಪನಿಗಳ ಜೊತೆ ದುಬಾರಿ ಒಪ್ಪಂದಗಳನ್ನು ಮಾಡಿಕೊಂಡು ನಿಗಮಗಳೇ ನಷ್ಟ ಉಂಟು ಮಾಡಿಕೊಳ್ಳುತ್ತಿವೆ. ನಿಗಮದ ಬಸ್ ಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬಹುದು. ಈ ವಿಧಾನಗಳನ್ನು ಕೈ ಬಿಟ್ಟು ದರ ಹೆಚ್ಚಿಸುತ್ತಿರುವುದು ಜನವಿರೋಧಿ ಕ್ರಮಕ್ಕೆ ಸರಕಾರ ಮುಂದಾಗಿದೆ ಎಂದು ದೂರಿದರು.
ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ರಾಜ್ಯ ಸರ್ಕಾರ ದರ ಹೆಚ್ಚಳದ ತೀರ್ಮಾನವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವಿರೇಶ, ತಾಲೂಕ ಕಾರ್ಯದರ್ಶಿ ಹೆಚ್.ಪದ್ಮಾ, ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೋಳ್ಳಿ, ವರಲಕ್ಷ್ಮೀ, ಗೋಕರಮ್ಮ, ಶ್ರೀನಿವಾಸ, ಕೆ.ಶ್ರೀನಿವಾಸ ಸೇರಿದಂತೆ ಅನೇಕರು ಇದ್ದರು.