ರಾಯಚೂರು: ಮಹಿಳಾ ಸಾಂಸ್ಕೃತಿಕ ಸಂಘದಿಂದ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ
ರಾಯಚೂರು| ನಗರದ ಸಿಯತಲಾಬ್ ಬಡಾವಣೆಯ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ಯಿಂದ ಸಿಯತಲಾಬ್ ಬಡಾವಣೆಯ ಕಿತೇಶ್ವರ ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಸಂಘಟನೆಯ ಜಿಲ್ಲಾ ಸಂಚಾಲಕಿ ಸರೋಜ ಗೋನವಾರ್ ಮಾತನಾಡಿ, ರಾಜ್ಯ ಸಮಿತಿಯಿಂದ ಜನವರಿ 3 ರಿಂದ ಜನವರಿ 18ರ ವರೆಗೆ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನಾಚರಣೆಯನ್ನು ಮಹಿಳಾ ಶಿಕ್ಷಣ, ಉದ್ಯೋಗ, ಆರೋಗ್ಯ, ಭದ್ರತೆ ಖಾತ್ರಿಗಾಗಿ ಒತ್ತಾಯಿಸಲಾಗುತ್ತಿದೆ. ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಹಾಗೂ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರನ್ನು ಪ್ರತಿಯೊಬ್ಬ ಹೆಣ್ಣು ಮಗಳು ನೆನಪಿಸಿಕೊಳ್ಳಲೇಬೇಕು ಎಂದು ಹೇಳಿದರು.
ಸಾವಿತ್ರಿಬಾಯಿ ಫುಲೆಯವರು ಚಿಕ್ಕ ವಯಸ್ಸಿನಲ್ಲೇ ಗಂಡ ಜ್ಯೋತಿಬಾ ಫುಲೆ ಅವರಿಂದ ಶಿಕ್ಷಣವನ್ನು ಕಲಿತು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ, ಅವರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು.
ಶಿಕ್ಷಣದ ಅರಿವೇ ಇರದ ಕಾಲದಲ್ಲಿ ಮನು ವಾದವನ್ನು ಮೆಟ್ಟಿನಿಂತು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಕೇವಲ ನಾಲ್ಕು ವರ್ಷಗಳಲ್ಲಿ 18 ಶಾಲೆಗಳನ್ನು ತೆರೆದರು. ಸಮಾನತೆಯನ್ನು ಪಡೆಯಬೇಕಾದರೆ ಶಿಕ್ಷಣ ಬಹಳ ಮುಖ್ಯ ಎಂಬುದು ಅರಿವಾದ ತಕ್ಷಣವೇ ಸಾವಿತ್ರಿಬಾಯಿ ಫುಲೆ ಅವರು ಅದನ್ನು ತಮ್ಮ ಜೀವನದ ಗುರಿಯಾಗಿ ಒಪ್ಪಿಕೊಂಡರು ಎಂದು ತಿಳಿಸಿದರು.
ಇಂದು ಶಿಕ್ಷಣ ವ್ಯಾಪಾರಿಕರಣವಾಗಿದೆ. ಬಡವರ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಅಸಾಧ್ಯವಾಗಿದೆ. ಇಂತಹ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆಯವರ ಶ್ರಮ ಹಾಗೂ ಧೈರ್ಯ, ಸಾಹಸಗಳನ್ನು ಮೆಚ್ಚಲೇ ಬೇಕಾಗಿದೆ. ಇಂತಹ ಅವರ ಆದರ್ಶ ಗುಣಗಳನ್ನು ನಾವು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಕವಿತಾ, ನಾಗವೇಣಿ, ಅನ್ನಪೂರ್ಣ , ರಂಗಮ್ಮ ಉಪಸ್ಥಿತರಿದ್ದರು.