ಒಗ್ಗಟ್ಟಿನ ಚಳವಳಿಯಿಂದ ಸಮಾಜದ ತೊಡಕು ನಿವಾರಣೆ ಸಾಧ್ಯ : ಡಾ.ಶಂಕರ್ ವಿ ಅಭಿಮತ

Update: 2024-11-05 15:56 GMT

ರಾಯಚೂರು : ಒಗ್ಗಟ್ಟಿನ ಚಳವಳಿಗಳಿಂದ ಸಮಾಜದ ತೊಡಕುಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಶಂಕರ್.ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ರಾಯಚೂರು ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಹಾಗೂ ಕಲಾ ವಿಭಾಗಗಳ ಸಹಯೋಗದಲ್ಲಿ ‘ಭಾರತದಲ್ಲಿ ಸಾಮಾಜಿಕ ಚಳುವಳಿಗಳು’ ಶೀರ್ಷಿಕೆ ಅಡಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಸಮಾಜದಲ್ಲಿ ಯಾವುದೇ ಚಳವಳಿ ಪರಿಣಾಮಕಾರಿಯಾಗಿ ಕೈಗೊಂಡಿದ್ದೇ ಆದಲ್ಲಿ ಅದು ಸಮಾಜದ ತೊಡಕುಗಳನ್ನು ಸುಧಾರಿಸುವ ನಿಟ್ಟಿನಲ್ಲಿಯೇ ಕೆಲಸ ಮಾಡಿ, ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಾಕಷ್ಟು ಅನಿಷ್ಟ ಪದ್ಧತಿಗಳನ್ನು ಚಳವಳಿಗಳ ಮೂಲಕ ಹೊಗಲಾಡಿಸಲಾಗಿದೆ. ಹಲವಾರು ಬುದ್ಧಿ ಜೀವಿಗಳು, ಸಂಘಟನೆಗಳು, ಹೋರಾಟಗಾರರು ಯಾವುದೇ ಜಾತಿ, ಮತ, ಧರ್ಮ, ಪಂಥಗಳಿಗೆ ಸೀಮಿತವಾಗದೇ ಎಲ್ಲರೂ ಒಗ್ಗಾಟ್ಟಾಗಿ ಚಳವಳಿಯನ್ನು ಕೈಗೊಂಡಿದ್ದೇ ಆದಲ್ಲಿ ಅಂತಹ ಚಳವಳಿಗಳ ಧ್ಯೇಯೋದ್ದೇಶವು ಪೂರ್ಣಗೊಳ್ಳುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆ ಗಟ್ಟಿಗೊಳ್ಳುವುದರಲ್ಲಿ ಚಳವಳಿಗಳ ಪಾತ್ರ ಪ್ರಮುಖವಾಗಿದೆ. ಇಂತಹ ಚಳವಳಿಗಳನ್ನು ರೂಪಿಸುವ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮುಂದಾಗಬೇಕು. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತಹ ಚಳವಳಿಗಳು ರೂಪುಗೊಳ್ಳಬೇಕಾಗಿದ್ದು, ಇಂತಹ ಪ್ರಯತ್ನಗಳನ್ನು ಸಾಗಬೇಕಾಗಿದೆ ಎಂದು ಹೇಳಿದರು.

ಹೈದರಾಬಾದ್ನ ಉಸ್ಮಾನಿಯ ವಿಶ್ವವಿದ್ಯಾಲಯ ಮಾಜಿ ಡೀನ್ ಪ್ರೊ.ಹರ ಗೋಪಾಲ್ ಅವರು ವಿಡಿಯೋ ಕಾನ್ಫರೆನ್ಸಿ ಮುಖಾಂತರ ಮಾತನಾಡಿ, ಸಾಮಾಜಿಕ ಮತ್ತು ರಾಜಕೀಯ ಚಳವಳಿ ನಡುವೆ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ಯಾವುದೇ ಚಳವಳಿಯನ್ನು ಕೈಗೊಂಡರೂ ಸಹ ಅದು ಉತ್ತಮ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ತಿಳಿಸಿದರು.

ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ, ಚಾಮರಾಜನಗರದ ಕೆಆರ್ಆರ್ಎಸ್ನ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತ್ತೇಪುರ, ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಯರಿಸ್ವಾಮಿ, ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ್, ವಿವಿಧ ವಿಷಯಗಳ ಡೀನ್ ಗಳಾದ ಪ್ರೊ.ಪಾರ್ವತಿ ಸಿ.ಎಸ್., ಪ್ರೊ.ಪಿ.ಭಾಸ್ಕರ್, ಸಹ ಪ್ರಾಧ್ಯಪಕ ಡಾ.ಲತಾ, ಸಿಂಡಿಕೇಟ್ ಸದಸ್ಯ ಚನ್ನಬಸವ ದದ್ದಲ್, ಸಾಹಿತಿಗಳು, ಪತ್ರಕರ್ತರು, ರೈತ ಸಂಘಟನೆಕಾರರು, ಮಹಿಳಾ ಸಂಘಟನೆಕಾರರು, ವಿವಿಧ ಜಿಲ್ಲೆಗಳ ಮಹಾವಿದ್ಯಾಲಯಗಳ ಉಪನ್ಯಾಸಕರು, ಸಂಶೋಧನಾ ಅಭ್ಯರ್ಥಿಗಳು ಹಾಗೂ ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News