ವಕೀಲ ಕೃಷ್ಣನ್ ಹತ್ಯೆ : ರಾಯಚೂರು ವಕೀಲರ ಸಂಘ ಖಂಡನೆ
Update: 2024-11-22 15:40 GMT
ರಾಯಚೂರು : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನ್ಯಾಯಾಲಯದ ಆವರಣದಲ್ಲಿ ನ.20ರಂದು ನಡೆದ ವಕೀಲ ಕೃಷ್ಣನ್ ಕೊಲೆಯನ್ನು ಖಂಡಿಸಿ ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ಮೃತರ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ನೀಡುವಂತೆ ಜಿಲ್ಲಾಡಳಿತದ ಮೂಲಕ ತಮಿಳುನಾಡು ಸರಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹೊಸೂರು ನ್ಯಾಯಾಲಯದ ಆವರಣದಲ್ಲಿ ಆನಂದ್ ವಕೀಲ ಕೃಷ್ಣನ್ ಅವರ ಹತ್ಯೆ ಮಾಡಿದ್ದರಿಂದ ನ್ಯಾಯವಾದಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಜಿಲ್ಲೆ ಸೇರಿ ರಾಜ್ಯದ ಎಲ್ಲಾ ನ್ಯಾಯಾಲಯಗಳ ಆವರಣದ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕು ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಸರಕಾರಕ್ಕೆ ವಕೀಲರು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ವಕೀಲರಾದ ಹನುಮಂತ ಮೇಟಿ, ಸೈಯದ್ ನವಾಝ್ ಪಾಷಾ, ಜಹೀರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.