ರಾಯಚೂರು | ಒಳಮೀಸಲಾತಿ ಗಣತಿಯ ಸಮರ್ಪಕ ಮಾಹಿತಿ ನೀಡಲು ವಸಂತ ಮನವಿ

ರಾಯಚೂರು : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿಗಾಗಿ ಎ.6 ರಿಂದ ರಾಜ್ಯದಾದ್ಯಂತ ನಡೆಯಲಿರುವ ಗಣತಿಯಲ್ಲಿ ಛಲವಾದಿ ಸಮುದಾಯದ ಜನರು ಮೂಲ ಜಾತಿಯನ್ನು ನಮೂದಿಸುವ ಮೂಲಕ ಸಮರ್ಪಕ ಮಾಹಿತಿಯನ್ನು ದಾಖಲಿಸಬೇಕೆಂದು ಛಲವಾದಿ ಮಹಾಸಭಾ ರಾಜ್ಯ ನಿರ್ದೇಶಕ ಎಂ.ವಸಂತ ಮನವಿ ಮಾಡಿದರು.
ಅವರಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಉಪಜಾತಿಗಳ ಆಧಾರದ ಮೇಲೆ ಜಾತಿಗಳ ಗಣತಿ ನಡೆಯುತ್ತಿದ್ದು, ಛಲವಾದಿ ಸಮುದಾಯದ ಉಪಜಾತಿಗಳು ಮೂಲ ಜಾತಿಯನ್ನು ನಮೂದಿಸಬೇಕು. ಹರಿಜನ ಎಂದು ನಮೂದಿಸಿ ಗೊಂದಲಕ್ಕೆ ಕಾರಣವಾಗಬಾರದು. ಗಣತಿದಾರರು ಮನೆ ಮನೆಗೆ ಆಗಮಿಸಿದಾಗ ಛಲವಾದಿ, ಬಲಗೈ, ಹೊಲೆಯ ಸಂಬಂಧಿತ ಜಾತಿಗಳಾದ ಬ್ಯಾಗಾರ, ಬೇಗಾರ, ಮಾಲ ಎಂದು ನಮೂದಿಸಬೇಕು. ಕೆಲ ಜಿಲ್ಲೆಗಳ ಶಾಲಾ ದಾಖಲೆಗಳಲ್ಲಿ ಹರಿಜನ ಎಂದು ನಮೂದಾಗಿರುತ್ತದೆ. ಮೂಲ ಜಾತಿ ನಮೂದಿಸಿದರೆ ಗಣತಿಗೆ ಸಹಕಾರವಾಗುತ್ತದೆ. ಅನಗತ್ಯಗೊಂದಲಗಳಿಗೆ ಒಳಗಾಗದೇ ಖಚಿತ ಮಾಹಿತಿ ದಾಖಲಿಸಬೇಕೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ವೀರೇಶ ಗಾಣಧಾಳ, ಯಲ್ಲಪ್ಪ,ಬಿ, ವಿಜಯ ಪ್ರಸಾದ, ರಮೇಶ, ಅಂಜನರೆಡ್ಡಿ, ಉಪಸ್ಥಿತರಿದ್ದರು.