ಸಚಿವ ಬೋಸರಾಜು ವಿರುದ್ಧ ಗುತ್ತಿಗೆದಾರ ಸಂಘದ ಅಧ್ಯಕ್ಷರ ಆರೋಪ ಸತ್ಯಕ್ಕೆ ದೂರವಾದುದು: ವಿ. ಲಕ್ಷ್ಮೀರೆಡ್ಡಿ

ರಾಯಚೂರು: ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಮತ್ತು ಅವರ ಪುತ್ರ ರವಿ ಬೋಸರಾಜು ಗುತ್ತಿಗೆದಾರರಿಂದ ಕಮಿಷನ್ ಕೇಳಿದ್ದಾರೆ ಎಂದು ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ ಮಾಡಿರುವ ಆರೋಪವು ಸತ್ಯಕ್ಕೆ ದೂರವಾಗಿದೆ. ಅವರ ವ್ಯಕ್ತಿತ್ವದ ತೇಜೋವಧೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ಕಾಂಗ್ರೇಸ್ ಮುಖಂಡ ವಿ.ಲಕ್ಷ್ಮಿ ರೆಡ್ಡಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎನ್.ಎಸ್. ಬೋಸರಾಜುರವರು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಮತ್ತು ರಾಯಚೂರು ಜಿಲ್ಲೆಯ ಹಿರಿಯ ರಾಜಕಾರಣಿಗಳಾಗಿ ಸುಮಾರು 50 ವರ್ಷಗಳಿಂದ ಸಕ್ರಿಯವಾಗಿ ರಾಜಕೀಯದಲ್ಲಿ ಇದ್ದಾರೆ. 2 ಬಾರಿ ಶಾಸಕರಾಗಿ, 3 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಈಗ ರಾಜ್ಯದ ಸಚಿವರಾಗಿ ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಗುತ್ತಿಗೆದಾರರ ಆರೋಪ ಕೇಳಿ ಕಾರ್ಯಕರ್ತರಿಗೆ ತೀವ್ರ ನೋವುಂಟಾಗಿದೆ ಎಂದರು.
ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಯಾವತ್ತೂ ಅವರ ತಂದೆಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸುಳ್ಳು ಆರೋಪ ಮಾಡುವ ಬದಲು ತನಿಖೆಗೆ ಒತ್ತಾಯಿಸಲಿ ಎಂದು ಹೇಳಿದರು.
ಈ ವೇಳೆ ಅಂಜನಯ್ಯ, ವೀರೇಶ ಉಪಸ್ಥಿತರಿದ್ದರು.