ರಾಯಚೂರು | ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಬೃಹತ್ ಪ್ರತಿಭಟನೆ

ರಾಯಚೂರು : ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ದೇವದುರ್ಗ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಟಿಎಪಿಎಂಎಸಿ ಆವರಣದಲ್ಲಿ ಮುಸ್ಲಿಂ ಜನಾಂಗದ ಎಲ್ಲಾ ನಾಯಕರು ಸಾವಿರಾರು ಜನಸಂಖ್ಯೆಯಲ್ಲಿ ಪಾಲ್ಗೊಂಡು ಕೇಂದ್ರ ಸರಕಾರ ವಿರುದ್ಧ ಕೈಗೆ ಕಪ್ಪು ಪಟ್ಟಿಕಟ್ಟಿಕೊಂಡು ಬೃಹತ್ ಪ್ರತಿಭಟನಾ ರ್‍ಯಾಲಿಗೆ ಚಾಲನೆಯನ್ನು ನೀಡಿದರು.
ಪ್ರಮುಖ ಬೀದಿಗಳಾದ ಜಹೀರುದ್ದೀನ್ ಪಾಷಾ ಸರ್ಕಲ್, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾದಿಯಾಗಿ ಮಹಾತ್ಮಗಾಂಧಿ ವೃತ್ತ, ಬಸವ ವೃತ್ತ, ಕ್ಲಬ್ ರಸ್ತೆ ಮುಂಭಾಗ ದಿಂದ ಮಿನಿವಿಧಾನ ಸೌಧವರೆಗೆ ರ್‍ಯಾಲಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಕ್ಪ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮುಸ್ಲಿಂಮರ ಹಕ್ಕನ್ನು ಕಸಿದುಕೊಂಡಿದೆ. ಸಂಸತ್ತಿನ ಎರಡು ಸದನದಲ್ಲಿ ಮಿತ್ರಪಕ್ಷಗಳ ಮೇಲೆ ಒತ್ತಡ ಹಾಕಿ ಒತ್ತಾಯ ಪೂರ್ವಕವಾಗಿ ಈ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ಮುಸ್ಲಿಂಮರಿಗೆ ನೀಡಬೇಕಿದ್ದ ವಕ್ಫ್ ಸೌಲಭ್ಯ ಮೊಟಕುಗೊಳ್ಳಲಿದ್ದು, ವಕ್ಫ್ ಆಸ್ತಿ ಸರಕಾರದ ಪಾಲಾಗುವ ಆತಂಕವಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರು, ದಲಿತರ, ಬಡವರ ಮೇಲೆ ಗಧಾ ಪ್ರಹಾರ ನಡೆಸುತ್ತಿದ್ದು, ಬಡ ಜನರು ಜೀವನ ನಡೆಸುವುದು ಕಷ್ಟವಾಗಿದೆ. ದೇಶಾದ್ಯಂತ ಕೋಮು ಗಲಭೆ ನಡೆಸುವ ಮೂಲಕ ಹಿಂದೂ, ಮುಸ್ಲಿಂಮರ ನಡುವೆ ಒಳ ಜಗಳ ಹಚ್ಚುವ ಕೆಲಸ ಸರಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಈ ಹಿಂದೆ ಇದ್ದ ವಕ್ಫ್ ಕಾಯ್ದೆಯನ್ನೆ ಮುಂದುವರಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ದೇಶಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದರು.
ಈ ವೇಳೆ ಮುಖಂಡರಾದ ಜಹೀರು ಅಬ್ಬಾಸ್ ಹಫಿಸಾಬ್, ಅರ್ಮಾನ್ ಘನಿ, ಶಾಲಾಮ್ ಆಫೀಸ್ ಸಾಬ್, ಮೈಬೂಬ್ ಮೌಲಾನಾ ಮುಕ್ತಿ, ಅಬ್ದುಲ್ ಅಜೀಜ್, ಎಕ್ಬಾಲ್ ಸಾಬ್ ಔದೊಡ್ಡಿ, ಸಾಜೀದ್ ಶೆಠ್, ರಾಜ್ ಮುಹಮ್ಮದ್ ತಾತ, ಶಬ್ಬೀರ್ ಅಹಮ್ಮದ್ ಔದೊಡ್ಡಿ, ಮೈನುದ್ದಿನ್ ಡಿಜೆ, ಅಬ್ಬಾಸ್ ಹುಸೇನಿ ಕಬಡ್ಡಿ, ಇಮ್ರಾನ್ ಕೆ.ಎಂ., ವಿಶ್ವನಾಥ ಬಲ್ಲಿದವ್, ಮೋಹನ ಬಲ್ಲಿದವ್, ಅಮಿನ್ಸಾಬ್ ಗೌರಂಪೇಟೆ, ಬಾಷಾ ಕವಾಸ್, ಖಾಜಾ ಹುಸೇನ್ ಟೈಗರ್, ಖಾಜಾಸಾಬ್ ಕರಿಗುಡ್ಡ, ಅಸ್ಪಾಕ್ ಹುಸೇನ್, ಅಬ್ಬಾಸ್ ಹುಸೇನ್, ಖಲೀಮ್ ಖುರೇಷಿ, ಸೋಫಿಬಾಬ್ ಖುರೇಷಿ, ನಿಜಾಮುದ್ದೀನ್ ನಾಗುಂಡಿ, ಖಾದರ್ ಪಾಷಾ, ಉಮಾರ್ ಕಬಡ್ಡಿ ಇತರರು ಇದ್ದರು.