ರಾಯಚೂರು | ಅಂಗನವಾಡಿ ಕಾರ್ಯಕರ್ತೆಯರಿಂದ ಮೊಟ್ಟೆ ಹಣ ಸಂಗ್ರಹ ಆರೋಪ: ಮೇಲ್ವಿಚಾರಕಿ ಅಮಾನತು

ರಾಯಚೂರು : ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಮೊಟ್ಟೆ ಖರೀದಿಯಲ್ಲಿ ನಿಯಮಬಾಹಿರವಾಗಿ ಹಣ ಸಂಗ್ರಹದ ಆರೋಪದಡಿ ದೇವದುರ್ಗ ವಲಯದ ಮೇಲ್ವಿಚಾರಕಿ ಕಮಲಾಕ್ಷಿ ಎಂಬುವವರನ್ನು ಅಮಾನತುಗೊಳಿಸಿ ರಾಯಚೂರು ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ.
ಕಮಲಾಕ್ಷಿ ಅವರ ವಿರುದ್ಧ ಆರೋಪಗಳ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆಪಾದಿತರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು 1958ರ ನಿಯಮ 58 ರನ್ವಯ ಜೀವನಾಧಾರ ಭತ್ತೆಯನ್ನು ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣದ ಹಿನ್ನೆಲೆ: ದೇವದುರ್ಗ ವಲಯದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಮಸರಕಲ್-ಬಿ ವಲಯದ ಅಂಗನವಾಡಿ ಕಾರ್ಯಕರ್ತೆಯರಿಂದ ‘ನಿಯಮಬಾಹಿರ ಮೊಟ್ಟೆ ಹಣ ಸಂಗ್ರಹ' ಎಂಬ ಶೀರ್ಷಿಕೆಯಡಿ ಕೆಲವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಾಗೂ ವಿಡಿಯೋ ತುಣುಕು ಪ್ರಸಾರವಾಗಿತ್ತು. ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಮೇಲ್ವಿಚಾರಕಿ ಕಮಲಾಕ್ಷಿ ಅವರಿಗೆ ನೋಟಿಸ್ ನೀಡಲಾಗಿತ್ತು.
ಮಾರ್ಗಸೂಚಿಯನ್ವಯ ಮೊಟ್ಟೆ ಹಣವು ಬಾಲವಿಕಾಸ ಸಲಹಾ ಸಮಿತಿಯ ಜಂಟಿ ಖಾತೆಗೆ ಜಮೆಯಾಗಬೇಕು. ಅಂಗನವಾಡಿ ಕಾರ್ಯಕರ್ತೆಯರ ವೈಯಕ್ತಿಕ ಖಾತೆಗೆ ಜಮಾ ಯಾಗುವುದಿಲ್ಲ. ಆದರೆ, ಮೊಟ್ಟೆ ಹಣವನ್ನು ಕಾರ್ಯಕರ್ತೆಯರಿಂದ ಕೇಳಿರುವ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಬಗ್ಗೆ ಸೂಕ್ತ ರೀತಿಯ ಉತ್ತರವನ್ನು ಕಮಲಾಕ್ಷಿ ನೀಡಿರಲಿಲ್ಲ.
ಅಲ್ಲದೆ ಇಲಾಖೆಗೆ ಮುಜುಗರವಾಗುವಂತೆ ವರ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಕಮಲಾಕ್ಷಿ ವಿರುದ್ಧ ಆರೋಪಗಳ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ, ಮುಂದಿನ ಆದೇಶದªರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.