ರಾಯಚೂರು | ಜಿಲ್ಲಾಡಳಿತದಿಂದ ಭಗವಾನ್ ಮಹಾವೀರ ಜಯಂತಿ ಆಚರಣೆ

ರಾಯಚೂರು : ಭಗವಾನ್ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆ ಬಯಸಿ ತ್ಯಾಗ, ತಪಸ್ಸು ಮಾಡಿರುವರು. ಈ ಆಧುನೀಕತೆಯಲ್ಲಿ ನಾವೆಲ್ಲ ಮಹಾವೀರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅಹಿಂಸೆ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಹೇಳಿದರು.
ಎ.10ರ ಗುರುವಾರ ದಂದು ನಗರದಲ್ಲಿ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಭಗವಾನ್ ಮಹಾವೀರ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.
ಜೈನ ಧರ್ಮೀಯರು ಶಾಂತಿ ಪ್ರಿಯರು ಮತ್ತು ಅಹಿಂಸಾ ವಾದಿಗಳು. ಅವರ ನಡೆ-ನುಡಿ ಸಮಾಜಕ್ಕೆ ಮಾದರಿಯಾಗಿದೆ. ಆಧುನೀಕತೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ. ಹೀಗಾಗಿ ಮಹಾವೀರರ ತತ್ವಾದರ್ಶಗಳನ್ನು ನಾವೆಲ್ಲ ಪಾಲಿಸಬೇಕಾಗಿದೆ ಎಂದರು.
ವಿವಿಧ ಗಣ್ಯರಿಂದ ಮಾಲಾರ್ಪಣೆ :
ಇದಕ್ಕೂ ಮುಂಚೆ ನಗರದ ಭಗವಾನ್ ಮಹಾವೀರ ಸರ್ಕಲ್ ಹತ್ತಿರ ಮಹಾವೀರ ಪುತ್ಥಳಿಗೆ ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ ಎಸ್.ಪಾಟೀಲ್, ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮ ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳಿಂದ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾಗಿ ಶ್ರೀಮತಿ ಪ್ರೇಮಲತಾ ಸೇರಿದಂತೆ ಸಮಾಜದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.