ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ: ಡಾ.ಶರಣಪ್ರಕಾಶ್ ಪಾಟೀಲ್

Update: 2025-04-12 14:13 IST
ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ: ಡಾ.ಶರಣಪ್ರಕಾಶ್ ಪಾಟೀಲ್
  • whatsapp icon

ರಾಯಚೂರು, ಏ.12: ಹಣದ ಕೊರತೆ ಇದ್ದರೆ ತಿಳಿಸಿ, ಅನುದಾನ ಕೊಡುತ್ತೇವೆ. ಆದರೆ, ನೀರಿಲ್ಲ ಅಂತ ಜನತೆ ಕೊಡ ಹಿಡಿದು ಅಡ್ಡಾಡುವಂತಾಗಬಾರದು. ನೀರು ಪೂರೈಕೆ ವಿಷಯದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹೇಳಿದರು.

ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯವ ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏಪ್ರಿಲ್ 12ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಿಲ್ಲ ಎಂದು ಜನರು ಪ್ರತಿಭಟನೆಗೆ ಇಳಿಯುವ ಹಂತಕ್ಕೆ ಬರಬಾರದು. ಎಲ್ಲ ತಾಲೂಕಗಳಲ್ಲಿ ಟಾಸ್ಕ ಪೋರ್ಸ ಸಭೆ ‌ನಡೆಸಬೇಕು. ಬೇಸಿಗೆಯ ಈ ಸಂದರ್ಭದಲ್ಲಿ ಎಲ್ಲ ಗ್ರಾಮ ಪಂಚಾಯತಗಳ ಪಿಡಿಓಗಳು ಕರೆ ಸ್ವೀಕರಿಸಿ ಜನತೆಗೆ ಸ್ಪಂದನೆ ನೀಡಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ನಿಯಮಿತವಾಗಿ ಟ್ಯಾಂಕರ್ ಪೂರೈಕೆ ಮಾಡಬೇಕು. ಜನರಿಗೆ ಅನುಕೂಲವಾಗುವ ಹಾಗೆ ಸಹಾಯವಾಣಿ ಆರಂಭಿಸಲು ಕ್ರಮ ವಹಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಂಧನೂರ, ಮಸ್ಕಿ ಮತ್ತು ಮಾನವಿ ತಾಲೂಕುಗಳ ವ್ಯಾಪ್ತಿಯಲ್ಲಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಬೆಳೆ ಹಾನಿಗೀಡಾದ ಬಗ್ಗೆ ಕೂಡಲೇ ಸರ್ವೆ ನಡೆಸಿ ವರದಿ ನೀಡಲು ಕ್ರಮವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು. ನೋಡಲ್ ಅಧಿಕಾರಿಗಳು, ತಹಸೀಲ್ದಾರರು, ತಾಪಂ ಇಓಗಳು ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ಬೋರ್‌ವೆಲ್ ಮೂಲಕ ನೀರು ಪೂರೈಸಿ: ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ಕೂಡಲೇ ಬೊರವೆಲ್ ಮೂಲಕ ನೀರು ಪೂರೈಸಬೇಕು. ಇತ್ತೀಚೆಗೆ ಆಲಿಕಲ್ಲು ಮಳೆ ಸುರಿದು ಹಾನಿಗೀಡಾಗಿದ್ದಕ್ಕೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ ಅವರು ಹೇಳಿದರು.

ಕೆರೆಗಳನ್ನು ತುಂಬಿಸಿ: ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ರಾಯಚೂರ ತಾಲೂಕು ವ್ಯಾಪ್ತಿಯಲ್ಲಿನ ಕೆಲವು ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಬೇಕು. ಜಲಜೀವನ ಮಿಷನ್,‌ ಜಲಧಾರೆ ಯೋಜನೆಗಳು ಬಂದ ಬಳಿಕ ಕುಡಿವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಮರ್ಪಕ ಅನುದಾನ ಸಿಗುತ್ತಿಲ್ಲ. ಸಂಪೂರ್ಣವಾಗಿ ಗ್ರಾಮ ಪಂಚಾಯತ್ ಮೇಲೆಯೇ ಅವಲಂಬಿತವಾಗಿದ್ದೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಅನುದಾನವನ್ನು ಪಂಚಾಯತ‌ ರಾಜ್ಯ ಇಲಾಖೆಯಿಂದ ಬಿಡುಗಡೆ ಮಾಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದಾಗಿ ಹೇಳಿದರು.

ಸರ್ವೆ ನಡೆಸಿ: ಸಿಂಧನೂರ ತಾಲೂಕಿನ ಚನ್ನಹಳ್ಳಿ ಸೇರಿದಂತೆ ಇನ್ನೀತರ ಕಡೆ ಬಿರುಗಾಳಿ, ಜೋರು ಮಳೆ ಸುರಿದು ಬೆಳೆ ಹಾನಿಯಾಗಿದೆ. ಇದರ ಸಮೀಕ್ಷೆ ಆಗಬೇಕು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ಸಿಂಧನೂರು ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಹೇಳಿದರು.

ರಾಯಚೂರ ನಗರದಲ್ಲಿ ನೀರಿನ ಸಮಸ್ಯೆ: ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ್ ಅವರು ಮಾತನಾಡಿ, ರಾಯಚೂರ ನಗರ ವ್ಯಾಪ್ತಿಯಲ್ಲಿ ಕುಡಿವ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ನಗರಕ್ಕೆ ನೀರು ಪೂರೈಸುವ ಪಂಪಗಳು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಜಾಕವೆಲ್ ಸ್ಟಾರ್ಟ್ ಇಲ್ಲ. ಗಾಳಿ ಮಳೆ ಶುರುವಾದರೆ ವಿದ್ಯುತ್ ಕಡಿತವಾಗಿ ಜೆಸ್ಕಾಂ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ತಿಳಿಸಿದರು.

ಜಿಪಂ ಸಿಇಓಗೆ ಸೂಚನೆ: ಮಸ್ಕಿ ಕ್ಷೇತ್ರದ್ದೆ ಪ್ರತ್ಯೇಕವಾಗಿ ಸಭೆ ನಡೆಸಿ ಮಸ್ಕಿ ತಾಲೂಕಿನಲ್ಲಿನ ಜ್ವಲಂತ ಕುಡಿಯುವ ನೀರು ಪೂರೈಕೆಯ ಬಗ್ಗೆ ಚರ್ಚಿಸಿ ಸಮಸ್ಯೆ ಪರಿಹರಿಸಿ. ಸಮಸ್ಯೆ ಇರುವ ಕಡೆಗೆ ಭೇಟಿ ನೀಡಿ ಎಂದು ಇದೇ ವೇಳೆ ಸಚಿವರು ಜಿಪಂ ಸಿಇಓ ಅವರಿಗೆ ಸೂಚನೆ ನೀಡಿದರು.

ಅಧಿಕಾರಿಗಳು ಚುರುಕಾಗಿ ಕಾರ್ಯ‌ನಿರ್ವಹಿಸಲಿ: ಜಿಲ್ಲೆಯ ಬಹುತೇಕ ಕಡೆಯ ಜನರು ಕೆರೆಯ ನೀರನ್ನೇ ಅವಲಂಬಿಸಿದ್ದಾರೆ. ಇದನ್ನು ಅಧಿಕಾರಿಗಳು ಅರಿತು ಜನತೆಗೆ ಸ್ಪಂದನೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎ. ವಸಂತಕುಮಾರ ಅವರು ತಿಳಿಸಿದರು.

ಜಿಲ್ಲಾಡಳಿತದಿಂದ ಉತ್ತಮ ನಿರ್ವಹಣೆ: ಜಿಲ್ಲಾಡಳಿತವು ವಿಶೇಷ ಮುತುವರ್ಜಿ ವಹಿಸಿ ತಾಲೂಕುವಾರು, ಜಿಲ್ಲಾವಾರು ಅಧಿಕಾರಿಗಳನ್ನು ನಿಯೋಜಿಸಿ ವರದಿ ಪಡೆದು,‌ ಮೇಲಿಂದ ಮೇಲೆ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಪೂರೈಕೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳು ಎಂದು ತಾಲೂಕುವಾರು ರಾಯಚೂರಲ್ಲಿ 15, ದೇವದುರ್ಗದಲ್ಲಿ 25, ಲಿಂಗಸೂರನಲ್ಲಿ 21 ಮತ್ತು ಮಸ್ಕಿಯಲ್ಲಿ 28 ಹಳ್ಳಿಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಭೆಗೆ ವಿವರಿಸಿದರು.

ಲಿಂಗಸೂರ ತಾಲೂಕಿನಲ್ಲಿ 21 ಹಳ್ಳಿಗಳಲ್ಲಿ ಬಾಡಿಗೆ ಬೋರು ಪಡೆದು ನೀರು ಪೂರೈಸುತ್ತಿದ್ದೇವೆ. ದೇವದುರ್ಗ ತಾಲೂಕಿನಲ್ಲಿ 25 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಕೊಡುತ್ತಿದ್ದೇವೆ ಎಂದು ಆಯಾ ತಾಲೂಕಿನ ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ಮಾನವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪುಟ್ಟಮಾದಯ್ಯ ಎಂ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರಾದ ಬಸವಣಪ್ಪ ಕಲಶೆಟ್ಟಿ, ಗಜಾನನ ಬಾಳೆ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News