ರಾಯಚೂರು | ರಸ್ತೆ ಬದಿ ನಿಲ್ಲಿಸಿದ್ದ ಲಾರಿಗೆ ಮತ್ತೊಂದು ಲಾರಿ ಢಿಕ್ಕಿ: ಓರ್ವ ಮೃತ್ಯು

Update: 2024-11-06 05:47 GMT

ರಾಯಚೂರು: ರಸ್ತೆ ಬದಿಯಲ್ಲಿ ವಿಶ್ರಾಂತಿಗಾಗಿ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಬಂದ ಮತ್ತೊಂದು ಲಾರಿ ಢಿಕ್ಕಿ ಹೊಡೆದ ಪರಿಣಾಮ ಚಾಲಕನೊಬ್ಬ ಮೃತಪಟ್ಟಿರುವ  ಘಟನೆ ತಾಲ್ಲೂಕಿನ ಜವಳಗೇರಾ ಸಮೀಪದ ಮಣ್ಣಿಕೇರಿ ಕ್ಯಾಂಪಿನ ಬಳಿ ಮಂಗಳವಾರ ನಡೆದಿದೆ.

ಅಮರೇಶ ಬಸವರಾಜ ಮೃತ ಲಾರಿ ಚಾಲಕ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನಿಂದ ರಾಯಚೂರಿಗೆ ಕಟ್ಟಿಗೆಗಳನ್ನು ತುಂಬಿಕೊಂಡು ಸಾಗುತ್ತಿದ್ದ ವೇಳೆ ಲಾರಿ ಚಾಲಕ ವಿಶ್ರಾಂತಿಗೆಂದು ರಸ್ತೆಯ ಬದಿಗೆ ನಿಲ್ಲಿಸಿದ್ದನು. ಮೈನ್ಸ್ ತುಂಬಿಕೊಂಡು ಹೊಸಪೇಟೆಯಿಂದ ರಾಯಚೂರು ಕಡೆ ಹೊರಟಿದ್ದ ಅತಿವೇಗವಾಗಿ ಬಂದ ಮತ್ತೊಂದು ಲಾರಿ ನಿಂತ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಮೈನ್ಸ್ ತುಂಬಿ ಕೊಂಡು ಬಂದಿದ್ದ ಲಾರಿಯ ಕ್ಯಾಬಿನ್ ಸಂಪೂರ್ಣ ಡ್ಯಾಮೇಜ್ ಆಗಿದ್ದು ಚಾಲಕ ಅಮರೇಶ ಬಸವರಾಜ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಲಾರಿಯ ಸ್ಟೇರಿಂಗ್ ಹೊಟ್ಟೆಗೆ ಒತ್ತಿದ್ದರಿಂದ ಹೊಟ್ಟೆಗೆ ಪೆಟ್ಟಾಗಿದ್ದು, ಎರಡೂ ಮೊಣಕಾಲುಗಳು ಮುರಿದು ಕುಳಿತ ಸೀಟ್‌ನಲ್ಲಿಯೇ ಸಿಲುಕಿಕೊಂಡಿದ್ದರು. ನಂತರ 108 ಅಂಬ್ಯುಲೆನ್ಸ್ ಮೂಲಕ ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆತರುವಾಗ ಜವಳಗೇರಾ ಬಸ್ ನಿಲ್ದಾಣದ ಬಳಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬಳಗಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಯರಿಯಪ್ಪ ಅಂಗಡಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News