ರಾಯಚೂರು: ಕಂದಕಕ್ಕೆ ವಾಲಿದ ಬಸ್; ತಪ್ಪಿದ ಭಾರಿ ಅನಾಹುತ
ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಪೈದೊಡ್ಡಿ ಕ್ರಾಸ್ ಬಳಿ ಸಾರಿಗೆ ಬಸ್ಸಿಗೆ ಕುರಿ ಅಡ್ಡಬಂದ ಪರಿಣಾಮ ಬಸ್ಸು ಕಂದಕ್ಕೆ ವಾಲಿದ ಘಟನೆ ನಡೆದಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹಾವೇರಿ ಡಿಪೋಗೆ ಸೇರಿದ ಬಸ್ ಹಾವೇರಿಯಿಂದ ಕಲಬುರಗಿ ಜಿಲ್ಲೆಗೆ ಹೊರಟಿತ್ತು. ರಸ್ತೆಯಲ್ಲಿ ಅಡ್ಡ ಬಂದ ಕುರಿಯಯನ್ನು ಉಳಿಸಲು ಹೋದ ಚಾಲಕ ಧಿಢೀರ್ ಬ್ರೇಕ್ ಹಾಕಿದ ಪರಿಣಾಮ ಬಸ್ಸು ಕಂದಕಕ್ಕೆ ವಾಲಿದೆ ಎನ್ನಲಾಗಿದೆ. ಆದರೆ ಬಸ್ಸಿನ ಅರ್ಧ ಭಾಗ ಕಂಕದ ಮೇಲೆ ನಿಂತಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಘಟನೆಯಿಂದ 5.ಕಿ,ಮೀ ವರಗೆ ಟ್ರಾಫಿಕ್ ಜಾಮ್ ಆಗಿತ್ತು, ಬಳಿಕ ಸ್ಧಳಕ್ಕೆ ಹಟ್ಟಿ ಠಾಣೆಯ ಪಿಎಸ್ಐ ಧಮಣ್ಣ ಹಾಗೂ ಸಿಬ್ಬಂದಿ ತೆರಳಿ ರಸ್ತೆಗೆ ಅಡ್ಡವಾಗಿ ನಿಂತಿದ್ದ ಬಸ್ಸನ್ನು ಕ್ರೇನ್ ಮೂಲಕ ತೆಗೆದು ನಂತರ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
ಪೈದೊಡ್ಡಿ ಗೋಲಪಲ್ಲಿಹತ್ತಿರ ರಸ್ತೆ ತಿರುವು ಇರುವುದರಿಂದ ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತವೆ. ರಸ್ತೆ ಅಗಲೀಕರಣ ಬಗ್ಗೆ ಹಲವು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹೀಗಾಗಿ ಪ್ರಯಾಣಿಕರು ಭಯದಲ್ಲಿಯೇ ಬಸ್ಸಿನಲ್ಲಿ ಪ್ರಯಾಣಿಸಬೇಕಾಗಿದೆ ಎಂದು ಸ್ಥಳೀಯರು ಅಸಮಾಧ ವ್ಯಕ್ತಪಡಿಸಿದರು.