ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಕುರಿತು ಪ್ರಧಾನಿ ಜೊತೆ ಚರ್ಚೆ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯಕುಮಾರ
ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಸುದೀರ್ಘ ಹೋರಾಟ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲಿಯೇ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ವಿಜಯಕುಮಾರ ತಿಳಿಸಿದರು.
ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಿಯೋಗ ಶುಕ್ರವಾರ ನಗರದ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಐಐಟಿಯಿಂದ ವಂಚಿತಗೊಂಡ ಮಹತ್ವಕಾಂಕ್ಷಿ ಜಿಲ್ಲೆ, ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರಾತಿಗಾಗಿ ಸುದೀರ್ಘ 960 ದಿನಗಳಿಂದ ಹೋರಾಟ ನಡೆದಿದ್ದು, ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ಚರ್ಚಿಸಿ ಮಂಜೂರು ಮಾಡಿಸುವಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಏಮ್ಸ್ ಆರೋಗ್ಯ ಸಂಸ್ಥೆಗಾಗಿ ನಡೆದಿರುವ ಸುದೀರ್ಘ ಹೋರಾಟದ ಬಗ್ಗೆ ನನಗೆ ಗೊತ್ತಿದೆ. ನಾನು ಆದಷ್ಟು ಶೀಘ್ರದಲ್ಲಿ ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿ ರಾಯಚೂರಿನಲ್ಲಿ ನಡೆದಿರುವ ಸುಧೀರ್ಘ ಹೋರಾಟದ ಬಗ್ಗೆ ಮನವರಿಕೆ ಮಾಡಿ ಮಹತ್ವಕಾಂಕ್ಷಿ ಜಿಲ್ಲೆ, ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಕುರಿತು ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ನಗರ ಶಾಸಕ ಡಾ .ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ನಿತಿಶ್ ಕೆ., ಏಮ್ಸ್ ಹೋರಾಟ ಸಮಿತಿ ಸಂಚಾಲಕರಾದ ಬಸವರಾಜ ಕಳಸ, ಅಶೋಕ ಕುಮಾರ ಜೈನ್, ಜಾನ್ ವೆಸ್ಲಿ, ಎಂ.ಆರ್ ಭೇರಿ, ಜಗದೀಶ ಪಾಟೀಲ ಪೂರತಿಪ್ಲಿ, ವಿನಯ ಕುಮಾರ್ ಚಿತ್ರಗಾರ, ಡಾ.ಎಸ್ .ಎಸ್ ಪಾಟೀಲ ಉಪಸ್ಥಿತರಿದ್ದರು.