ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಜಗಳ; ಮೂವರ ಮೇಲೆ ಹಲ್ಲೆ, ನಾಲ್ವರು ಅರೆಸ್ಟ್
ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಯುವಕರ ಗುಂಪೊಂದು ಮೂವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ನಡೆದಿದೆ.
ಗಾಯಗೊಂಡವರನ್ನು ಲಿಂಗಸುಗೂರು ತಾಲ್ಲೂಕಿನ ಕಸಬಾ ಮಂಜುನಾಥ್, ಅನೀಲ್, ಗ್ರಾಮದವರಾದ ತಿಮ್ಮಣ್ಣ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ರಸ್ತೆ ಬದಿಯ ಡಬ್ಬಾ ಅಂಗಡಿ ಬಳಿ ಮೂತ್ರ ವಿಸರ್ಜನೆ ಮಾಡಿದ ವಿಚಾರಕ್ಕೆ ಜಗಳ ಶುರುವಾಗಿ ರಾಡ್, ದೊಣ್ಣೆ ಮತ್ತು ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಗಾಯಾಳು ಮಂಜುನಾಥ ನೀಡಿದ ದೂರಿನ ಮೇರೆಗೆ ಯಾಕೂಬ್, ರಾಜಾಸಾಬ್, ಯಜೇಶ ಪಾಶ ಸಹಿತ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ ಲಿಂಗಸುಗೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿರುವ ಬೆನ್ನಲ್ಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ರಘುವೀರ್ ನಾಯಕ್ ಒತ್ತಾಯಿಸಿದ್ದಾರೆ.