ಹೊಸ ವರ್ಷಕ್ಕೆ ರಾಯಚೂರು ನೂತನ ಮಿನಿ ವಿಧಾನಸೌಧದಲ್ಲಿ ಕಾರ್ಯಾರಂಭ

Update: 2024-12-27 11:21 GMT

ರಾಯಚೂರು : ಜಿಲ್ಲೆಯ ಅನೇಕ ವರ್ಷಗಳ ಬೇಡಿಕೆಯಾಗಿದ್ದ, ನೂತನ ಮಿನಿ ವಿಧಾನಸೌಧ ಹೊಸವರ್ಷದ ನಿಮಿತ್ತವಾಗಿ ಜನವರಿಯಲ್ಲಿ ಕಾರ್ಯಾರಂಭ ಮಾಡುವ ಮೂಲಕ ಸರ್ಕಾರ ಸಾರ್ವಜನಿಕರಿಗೆ, ಸಿಬ್ಬಂದಿಗೆ ಹೊಸ ವರ್ಷದ ಗಿಫ್ಟ್ ನೀಡಲು ಸಜ್ಜಾಗಿದೆ.

ನಗರದ ಹೊರವಲಯದ ಯಕ್ಲಾಸಪೂರ ಗ್ರಾಮದಲ್ಲಿ ನೂತನ ಮಿನಿ ವಿಧಾನಸೌಧ ನಿರ್ಮಾಣದ ಕಾಮಗಾರಿಗೆ 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದರು. ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅಂದುಕೊಂಡಂತೆ ಆದರೆ ಜನವರಿ ಮೊದಲನೆ ವಾರ ನೂತನ ಮಿನಿ ವಿಧಾನಸೌಧ ಕಾರ್ಯಾರಂಭವಾಗಲಿದೆ ಎಂದು ತಿಳಿದುಬಂದಿದೆ.

ದಶಕಗಳಿಂದ ಸಾಥ್ ಕಚೇರಿಯಲ್ಲಿಯೇ ಜಿಲ್ಲಾಧಿಕಾರಿಗಳ ಕಚೇರಿ ಜೊತೆಗೆ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ರಾಯಚೂರು ನಗರದಲ್ಲಿಯೇ ಇರುವುದರಿಂದ ನಗರ ಮತ್ತು ತಾಲ್ಲೂಕುಗಳ ಜನರಿಗೆ ಬಂದು ಹೋಗಲು ಅನುಕೂಲವಾಗಿತ್ತು, ಇದೀಗ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧವು ನಗರ ಕೇಂದ್ರದಿಂದ 5 ಕಿ.ಮಿ ದೂರದಲ್ಲಿರುವುದರಿಂದ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಗರ ಪ್ರದೇಶದ ನಾಗರೀಕರಿಗೆ ಓಡಾಟಕ್ಕೆ ಆರಂಭದಲ್ಲಿ ಸಮಸ್ಯೆ ಎದುರಾದರೂ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎನ್ನುವ ಆಶಾಭವನೆಯೊಂದಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸಾರ್ವಜನಿಕರು ಹೊಸ ಮಿನಿ ವಿಧಾನಸೌಧಕ್ಕೆ ತೆರಳಲು ಸಿದ್ಧರಾಗಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ಸಂಚಾರ ದಟ್ಟಣೆ, ಒಂದೇ ಸೂರಿನಡಿ ಸರ್ಕಾರಿ ಇಲಾಖೆಗಳನ್ನು ತರುವುದು, ವಿವಿಧ ತಾಲ್ಲೂಕುಗಳ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯ ಯಕ್ಲಾಸಪುರ ಸಮೀಪದ 18 ಎಕರೆ ಜಮೀನಿನಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಜಿಲ್ಲಾಡಳಿತ ಭವನ ನಿರ್ಮಿಸಲಾಗಿದೆ. ಸುಣ್ಣ-ಬಣ್ಣ, ಜಂಗಲ್ ಕಟ್ಟಿಂಗ್, ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಗುಣಟ್ಟದ ಅಂತರ್ಜಾಲ ಸೇವೆ ಸೇರಿದಂತೆ ಅಗತ್ಯ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಅಂತಿಮ ಹಂತದ ಕೆಲಸ-ಕಾರ್ಯಗಳು ಭರದಿಂದ ಸಾಗಿವೆ.

ಪರ-ವಿರೋಧಗಳ ನಡುವೆ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧ ಕಾರ್ಯಾರಂಭಗೊಳ್ಳಲು ಪೂರ್ವ ತಯಾರಿ ವೇಗವಾಗಿ ನಡೆಯುತ್ತಿದೆ.

ಜಿಲ್ಲಾಧಿಕಾರಿ ಕಚೇರಿ ಸೇರಿ 10 ಕ್ಕೂ ಹೆಚ್ಚು ಇಲಾಖೆಗಳು ಸ್ಥಳಾಂತರ :

ರಾಯಚೂರು ನಗರದಲ್ಲಿನ ಐತಿಹಾಸಿಕ ಸಾಥ್ ಕಚೇರಿ ಕಟ್ಟಡದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಇಲಾಖೆ, ನಗರಾಭಿವೃದ್ಧಿ ಜಿಲ್ಲಾ ಕೋಶ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಖಜಾನೆ, ಭೂ ದಾಖಲೆಗಳ ಉಪನಿರ್ದೇಶಕರ ಇಲಾಖೆ, ಸಣ್ಣ ಉಳಿತಾಯ ಖಾತೆ, ಧಾರ್ಮಿಕ ದತ್ತಿ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಹಾಗೂ ಉಪನೋಂದಣಿ ಇಲಾಖೆಗಳು ಮೊದಲ ಹಂತದಲ್ಲಿ ಸ್ಥಳಾಂತರಗೊಳ್ಳುತ್ತಿವೆ.

ಜನವರಿಯಲ್ಲಿ ಮಿನಿ ವಿಧಾನಸೌಧದಲ್ಲಿ ಕಚೇರಿಗಳನ್ನು ಕಾರ್ಯಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತವಾಗಿ ಜಿಲ್ಲಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ ಸೇರಿ ಇತರೆ ಇಲಾಖೆಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಳಿದ ಇಲಾಖೆಗಳ ಸ್ಥಳಾಂತರಿಸಲು ಕ್ರಮ ವಹಿಸಲಾಗುವುದು.

- ನಿತೀಶ್ ಕೆ. ಜಿಲ್ಲಾಧಿಕಾರಿ, ರಾಯಚೂರು.

ಮಿನಿ ವಿಧಾನಸೌಧದ ಕೆಲಸ ಶೇ.90 ರಷ್ಟು ಪೂರ್ಣಗೊಂಡಿವೆ. ಜಿಲ್ಲಾಧಿಕಾರಿ ಕಚೇರಿ ಸೇರಿ ಹತ್ತು ಇಲಾಖೆಗಳ ಸ್ಥಳಾಂತರದ ಕಾರ್ಯಗಳನ್ನು ಆರಂಭಿಸಲಾಗಿದೆ. ಹೊಸ ವರ್ಷಕ್ಕೆ ಕಾರ್ಯಾರಂಭ ಮಾಡಲು ಬೇಕಾದ ಎಲ್ಲ ರೀತಿಯ ಸಿದ್ಧತೆಳನ್ನು ಕೈಗೊಳ್ಳಲಾಗಿದೆ.

-ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತ ರಾಯಚೂರು.

ಜಿಲ್ಲಾಡಳಿತ ಭವನ ನಗರದಿಂದ 5 ಕಿ.ಮೀ ದೂರದಲ್ಲಿರುವ ಕಾರಣ ಸರಕಾರಿ ಬಸ್ ಸೌಕರ್ಯ ವ್ಯವಸ್ಥೆ ಮಾಡಬೇಕು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಟೋ ಚಾಲಕರ ಹಾಗೂ ಸಂಘ ಸಂಸ್ಥೆಗಳ ಜೊತೆ ಸಭೆ ಕರೆಯಬೇಕು. ಆಟೋಗಳ ಪ್ರಯಾಣಕ್ಕೆ ಸೂಕ್ತ ದರ ನಿಗದಿ ಮಾಡಬೇಕು. ಜನರಿಗೆ ತೊಂದರೆಯಾಗದ ರೀತಿಯಲ್ಲಿ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು.

- ವಿಜಯಕುಮಾರ್, ನಗರ ನಿವಾಸಿ ರಾಯಚೂರು.

ಜಿಲ್ಲಾಡಳಿತ ಭವನ ಯಕ್ಲಾಸಪುರ ಗೆ ಶಿಫ್ಟ್ ಆಗುತ್ತಿರುವುದು ಶ್ಲಾಘನೀಯ. ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲಕರ ವ್ಯವಸ್ಥೆ ಆಗಬೇಕು. ಕೇವಲ ಕಚೇರಿ ಸ್ಥಳಾಂತರ ವಾದರೆ ಸಾಲದು ಆಡಳಿತ ಚುರುಕಾಗಿ ನಡೆದು ಜನಸ್ನೇಹಿಯಾಗಿ ಆಗಲಿ.

-ರಮೇಶ ವೀರಾಪೂರು, ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಾಯಚೂರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ಬಾವಸಲಿ,ರಾಯಚೂರು

contributor

Similar News