ರಾಯಚೂರಿಗೆ ಬಂದಿದ್ದ ಮಾಜಿ ಪ್ರಧಾನಿ: ನೆರೆ ಹಾವಳಿಯ ಸಂದರ್ಭದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಮನಮೋಹನ್ ಸಿಂಗ್
ರಾಯಚೂರು: ಮಾಜಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಇಹಲೋಕ ತ್ಯಜಿಸಿದ್ದು ಎಲ್ಲೆಡೆ ಅವರ ಸಾಧನೆ ಬಗ್ಗೆ ಕೊಂಡಾಡುತ್ತಿದ್ದಾರೆ. ಆರ್ಥಿಕ ಕ್ರಾಂತಿಗೆ ಶ್ರಮಿಸಿದ ಅವರು ರಾಯಚೂರಿನಲ್ಲಿ 2009ರಲ್ಲಿ ಸಂಭವಿಸಿದ್ದ ನೆರೆಹಾವಳಿಯ ವೇಳೆ ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದು ನೆನಪಿನಲ್ಲಿ ಅಳಿಯದೇ ಉಳಿದಿದೆ.
2009ರಲ್ಲಿ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ಭೀಕರ ನೆರೆ ಹಾವಳಿ ಸಂಭವಿಸಿ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿತ್ತು. ಅದರಲ್ಲೂ ರಾಯಚೂರು ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿ ತೀರದ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿತ್ತು. ಜಿಲ್ಲೆಯ ಗಡಿಭಾಗದ ಆಂಧ್ರಪ್ರದೇಶದ ಮಂತ್ರಾಲಯ ಕ್ಷೇತ್ರವೆಲ್ಲ ಜಲಾವೃತಗೊಂಡಿತ್ತು. ರಾಯಚೂರು ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಅಲ್ಲಿನ ಮಠಾಧೀಶರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು.
ಇಲ್ಲಿನ ಕರುಣಾಜನಕ ಸ್ಥಿತಿಗೆ ಮರುಗಿದ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಖುದ್ದು ತಾವೇ ಜಿಲ್ಲೆಗೆ ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಜಿಲ್ಲಾದ್ಯಂತ ಹಾರಾಟ ನಡೆಸಿ ವಸ್ತು ಸ್ಥಿತಿಯನ್ನು ಕಣ್ಣಾರೆ ಅರಿತಿದ್ದರು. ಕೇಂದ್ರ ಸರ್ಕಾರದಿಂದ 1500 ಕೋಟಿ ರೂ. ಹಣ ಬಿಡುಗಡೆ ಮಾಡುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ನೆರೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ್ದ ಅವರು ಕೇಂದ್ರದಿಂದ ರಕ್ಷಣಾ ತಂಡವನ್ನು ಕಳುಹಿಸಿ ಹೆಚ್ಚಿನ ಅನಾಹುತ ಆಗದಂತೆ ತಡೆಯಲು ಕ್ರಮ ವಹಿಸುವುದಾಗಿ ತಿಳಿಸಿದ್ದರು.
ಈ ವೇಳೆ ವಿದೇಶಾಂಗ ಸಚಿವ ಎಸ್.ಎಂಕೃಷ್ಣ, ವೀರಪ್ಪ ಮೋಯ್ಲಿ, ಮಲ್ಲಿಕಾರ್ಜುನ ಖರ್ಗೆ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರು ಗಣ್ಯರು ಪಾಲ್ಗೊಂಡಿದ್ದರು.