ರಾಯಚೂರು | ಪೊಲೀಸರ ಹಲ್ಲೆಯಿಂದ ಯುವಕ ಮೃತ್ಯು ಆರೋಪ ಪ್ರಕರಣ: ಸಿಐಡಿಯಿಂದ ತನಿಖೆ ಆರಂಭ

ವೀರೇಶ ಮೃತ ಯುವಕ
ರಾಯಚೂರು : ಇಲ್ಲಿನ ಈಶ್ವರ ನಗರದ ವೀರೇಶ ಎಂಬ ಯುವಕ ಪೊಲೀಸರ ಹಲ್ಲೆಯಿಂದ ಮೃತಪಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದ್ದು, ತನಿಖೆ ಆರಂಭಿಸಿದ ಸಿಐಡಿ ತಂಡ ನಗರಕ್ಕೆ ಆಗಮಿಸಿದೆ.
ಪೊಲೀಸರ ಹಲ್ಲೆಯಿಂದ ವೀರೇಶ ಮೃತಪಟ್ಟಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮೃತರ ಕುಟುಂಬ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿ ವಲಯದ ಐಜಿ ಲೋಕೇಶ ಕುಮಾರ ಅವರು ಸಿಐಡಿ ತನಿಖೆಗೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ತಂಡ ನಗರಕ್ಕೆ ಆಗಮಿಸಿದೆ.
ಡಿವೈಎಸ್‌ಪಿ ಮಾಲತೇಶ ನೇತೃತ್ವದಲ್ಲಿ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈಶ್ವರ ನಗರದ ನಿವಾಸಿ ವಿರೇಶ ಅವರು ಪತ್ನಿ ನರಸಮ್ಮರೊಂದಿಗೆ ಜಗಳವಾಡಿಕೊಂಡಿರುವ ಹಿನ್ನಲೆಯಲ್ಲಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪಶ್ಚಿಮ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ವಿಚಾರಣೆ ಹೆಸರಿನಲ್ಲಿ ಪಿಎಸ್‌ಐ ಮಂಜುನಾಥ ಹಾಗೂ ಸಿಪಿಐ ನಾಗರಾಜ ಮೇಕಾ ಇವರು ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದರಿಂದ ವಿರೇಶ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಪಿಎಸ್‌ಐ ಮಂಜುನಾಥ ಮತ್ತು ಸಿಪಿಐ ಅವರನ್ನು ಸೇವೆಯಿಂದ ಅಮಾನತ್ ಗೊಳಿಸಲಾಗಿದೆ. ದೂರುದಾರರು ಸೇರಿದಂತೆ ಇಲಾಖೆ ಅಧಿಕಾರಿಗಳ ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.