ರಾಯಚೂರು: ಮುಖ್ಯ ಶಿಕ್ಷಕಿಯ ಕಿರುಕುಳದಿಂದ ಅತಿಥಿ ಶಿಕ್ಷಕರು ರಾಜೀನಾಮೆ ಆರೋಪ; ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2024-11-08 09:05 GMT

ರಾಯಚೂರು: ಶಾಲೆಯ ಮುಖ್ಯ ಶಿಕ್ಷಕಿಯ ಕಿರುಕುಳ ತಾಳಲಾರದೇ 4 ಜನ ಅತಿಥಿ ಶಿಕ್ಷಕರು ರಾಜೀನಾಮೆ ನೀಡಿರುವುದನ್ನು  ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆಯ ಆವರಣದ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ದೇವದುರ್ಗ ತಾಲೂಕಿನ ಮುಂಡರಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಶಾಲೆಯ ಮುಖ್ಯ ಶಿಕ್ಷಕಿ ಗೀತಾ ಅವರು ಸರ್ವಾಧಿಕಾರದಿಂದ ವರ್ತಿಸುತ್ತಿದ್ದಾರೆ. ಶಾಲೆಯ ಇನ್ನಿತರ ಕೆಲಸದ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಿಕೊಳ್ಳುತ್ತಿದ್ದಾರೆ ಹಾಗೂ ಶಾಲೆಯ ಶಿಕ್ಷಕರ ನಡುವೆ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅತಿಥಿ ಶಿಕ್ಷಕರು ಬೇಸತ್ತು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಶಾಲೆಯಲ್ಲಿ ಶಿಕ್ಷಕರಿಲ್ಲದೆ ಮಕ್ಕಳ ಬೋಧನೆಗೆ ತೊಡಕಾಗಿದೆ. ಒಂದೆಡೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಮಧ್ಯೆ ಸರ್ಕಾರ ಅಥಿತಿ ಶಿಕ್ಷಕರನ್ನು ನೇಮಕ ಮಾಡಿದೆ. ಆದರೆ ಮುಖ್ಯ ಶಿಕ್ಷಕರು ಅತಿಥಿ ಶಿಕ್ಷಕರಿಗೆ ಕಿರುಕುಳ ನೀಡುವುದರಿಂದ ರಾಜೀನಾಮೆ ನೀಡಿದ್ದರಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

 ಶಾಲೆಯಲ್ಲಿ ಅತಿಥಿ ಶಿಕ್ಷಕರಿಗೆ ಮೂರು ತಿಂಗಳು ಕೆಲಸ ಮಾಡಲು ಬಿಡುತ್ತಿಲ್ಲ. ಮುಖ್ಯ ಶಿಕ್ಷಕಿ ಸರ್ವಾಧಿಕಾರಿಯಾಗಿ ದುರ್ವರ್ತನೆ ತೋರುತ್ತಿದ್ದಾರೆ. ಅವರ ಪತಿ ಸಿಬ್ಬಂದಿಯೇ ಅಲ್ಲ,  ಆದರೆ ಶಾಲೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಕ್ಕಳು  ಕಣ್ಣೀರು ಹಾಕಿ ಶಾಲೆಯಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. 

ಮುಖ್ಯ ಶಿಕ್ಷಕಿ ದುರ್ನಡತೆಯಿಂದ ಶಾಲೆಗೆ ಬರಲು ಭಯವಾಗಿದ್ದು, ಅವರನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು. ಅಲ್ಲಿಯವರೆಗೆ ಎಸ್ ಡಿ ಎಂ ಸಿ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಕರಾದ ಮಲ್ಲಯ್ಯ ಕಟ್ಟಿಮನಿ , ಶಿವರಾತ್ ತಳವಾರ , ಮಾರುತಿ , ಶರಣಬಸವ, ಶಿವರಾಜ್ ಭಟ್ಟರ್ , ಶಿವಪ್ಪ ಧನಕಾಯಿ, ಹನುಮಂತ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News