ರಾಯಚೂರು | ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನರೇಗಾ ಕೂಲಿ ಕಾರ್ಮಿಕರಿಂದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ

ರಾಯಚೂರು : ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಸೇವಾ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ನರೇಗಾ ಕೂಲಿಕಾರ್ಮಿಕರಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಇಂದು(ಮಾ.11) ಪ್ರತಿಭಟನೆ ನಡೆಯಿತು.
ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಯ ಕೆಲಸಕ್ಕೆ ಅನುಗುಣವಾಗಿ ಕೂಲಿ ಪಾವತಿಸಬೇಕು. ಕಾಮಗಾರಿ ಮುಗಿದ ತಕ್ಷಣ ಕೂಲಿಯ ಹಣ ನೀಡಬೇಕು. ದಿನಕ್ಕೆ 2 ಬಾರಿ ಎನ್.ಎಮ್.ಎಮ್.ಎಸ್. ಮೂಲಕ ಫೋಟೊ ಸೆರಿ ಹಿಡಿಯುತ್ತಿದ್ದು, ಸದರಿ ಸಮಯದಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳಿಂದ ಸೇರೆ ಹಿಡಿಯದೇ ಇದ್ದಲ್ಲಿ ಅಂದಿನ ಹಾಜರಾತಿಯು ಎಂ.ಐ.ಎಸ್.ನಲ್ಲಿ ಗೈರು ಹಾಜರಾಗುತ್ತಿದೆ. ಇದರಿಂದ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಮತ್ತೊಮ್ಮೆ ಕೆಲಸ ಸ್ಥಳಕ್ಕೆ ಹೋಗಿ ಎನ್.ಎಮ್.ಎಮ್.ಎಸ್. ನಲ್ಲಿ ಫೋಟೋ ತೆಗೆಸಿಕೊಳ್ಳುವಂತಾಗಿದೆ. ಈ ರೀತಿ ತೊಂದರೆಯಾಗುವುದರಿಂದ ಸದರಿ ಎನ್. ಎಮ್.ಎಮ್.ಎಸ್. ರದ್ದುಪಡಿಸಬೇಕು ಹಾಗೂ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕು. ಹಾಜರಾತಿಗಾಗಿ ಕಾಲಕಾಲಕ್ಕೆ ಹೊಸ ತಂತ್ರಾಂಶಗಳು ಬರುತ್ತಿದ್ದು, ಸದರಿ ತಂತ್ರಾಂಶಗಳ ಕುರಿತು ಮೇಟ್‌ಗಳಿಗೆ ಮತ್ತು ಕೂಲಿಕಾರ್ಮಿಕರಿಗೆ ಸೂಕ್ತ ಮಾಹಿತಿ ಒದಗಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಶಿಘ್ರವೇ ಈಡೇರಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕರ ಜಿಲ್ಲಾಧ್ಯಕ್ಷ ಕರಿಯಪ್ಪ ಅಚೊಳ್ಳಿ ಸೇರಿದಂತೆ ಇತರರಿದ್ದರು.