ರಾಯಚೂರು | ಬಾಲಕಾರ್ಮಿಕನ ರಕ್ಷಣೆ : ಮಾಲಕನ ವಿರುದ್ಧ ಪ್ರಕರಣ ದಾಖಲು

Update: 2024-11-05 16:31 GMT

ರಾಯಚೂರು : ಪ್ಯಾನ್ ಇಂಡಿಯಾ ರೆಸ್ಕ್ಯೂ ಮತ್ತು ರಿಹಾಬಿಲಿಟೇಷನ್ ಕ್ಯಾಂಪೆನ್ ಅಂಗವಾಗಿ ಸೋಮವಾರ ಟಾಸ್ಕ್ ಫೊರ್ಸ್ ಸಮಿತಿಯ ಅಧಿಕಾರಿಗಳಿಂದ ಜಿಲ್ಲೆಯ ದೇವದುರ್ಗ ನಗರದ ವಿವಿಧ ಹೋಟೆಲ್, ಬೇಕರಿ, ಕಿರಾಣಿ ಅಂಗಡಿ ಗ್ಯಾರೇಜ್ ಸೇರಿದಂತೆ ಇನ್ನಿತರೆ ಕಡೆ ತಪಾಸಣೆ ಮಾಡಿ, ಒಬ್ಬ ಕಿಶೋರ ಬಾಲಕಾರ್ಮಿಕನ್ನು ರಕ್ಷಣೆ ಮಾಡಿದ್ದು, ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವದುರ್ಗದ ಸಮರ್ಥ ಆಟೋ ಗ್ಯಾರೇಜ್, ಇಂಡಿಯನ್ ಪೆಟ್ರೋಲ್ ಬಂಕ್ಎದುರುಗಡೆ, ಜಾಲಹಳ್ಳಿ ರಸ್ತೆ ಬಳಿ ಕೆಲಸ ಮಾಡುತ್ತಿದ್ದ ಒಬ್ಬ ಬಾಲಕಾರ್ಮಿಕನನ್ನು ರಕ್ಷಣೆ ಮಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಇ.ಬಿ ಕಾಲೋನಿ ದೇವದುರ್ಗದಲ್ಲಿ 6ನೇ ತರಗತಿಗೆ ದಾಖಲು ಮಾಡಿ, ಮಗುವನ್ನು ಪೋಷಕರಿಗೆ ಒಪ್ಪಿಸಲಾಯಿತು.

ಮಗುವನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದ ಗ್ಯಾರೇಜ್ ಮಾಲಕರ ವಿರುದ್ಧ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥರೆಡ್ಡಿ ಅವರು ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2016ರಂತೆ 14ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೂ 15ರಿಂದ 18ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಒಂದು ವೇಳೆ ದುಡಿಸಿಕೊಂಡರೆ, 50ಸಾವಿರ ರೂ.ಗಳ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ಇರುತ್ತದೆ ಎಂದು ವಿವರಿಸಿದರು.

ವಾಹನಗಳಲ್ಲಿ ಮಕ್ಕಳನ್ನು ಕೃಷಿ ಚಟುವಟಿಕೆಗಳಿಗಾಗಿ ಅಕ್ರಮ ಮತ್ತು ಕಾನೂನು ಬಾಹಿರವಾಗಿ ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದುಡಿಯುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-1098ಗೆ ಮಾಹಿತಿ ನೀಡಬಹುದಾಗಿದೆ ಎಂದು ಮನವಿ ಮಾಡಿದರು.

ಮಾನವಿ ವೃತ್ತದ ಕಾರ್ಮಿಕ ನಿರೀಕ್ಷಕರಾದ ಮಲ್ಲಪ್ಪ, ಶಿಕ್ಷಣ ಇಲಾಖೆ ಇ.ಸಿ.ಒ ರಾಜನಗೌಡ, ಗ್ರಾಮ ಆಡಳಿತಾಧಿಕಾರಿ ವಿರೇಶ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಕ್ಕಯ್ಯ, ಡಾನ್ಬಾಸ್ಕೋ ಸಂಸ್ಥೆಯ ನಾಗರಾಜ ಮತ್ತು ಬಸವರಾಜ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News