ರಾಯಚೂರು | ನ.8 ರಂದು ಕ್ರಾಂತಿ ಕಲಾ ಸಂಘದಿಂದ ‘ಸದ್ಗುರು ಶರೀಫ’ ನಾಟಕ ಪ್ರದರ್ಶನ

Update: 2024-11-06 12:35 GMT

ರಾಯಚೂರು : ಕ್ರಾಂತಿ ಕಲಾಸಂಘ ಕರ್ನಾಟಕ ರಾಯಚೂರು ವತಿಯಿಂದ ನವೆಂಬರ್ 8ರಂದು ಸಂಜೆ 4 ಗಂಟೆಗೆ ಪಂಡಿತ್ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ‘ಸದ್ಗುರು ಶರೀಫ’ ಸಾಂಸ್ಕೃತಿಕ ವೈಚಾರಿಕ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜನಕವಿ ಸಿ.ದಾನಪ್ಪ ನಿಲೋಗಲ್ ತಿಳಿಸಿದ್ದಾರೆ.

ಪತ್ರಿಕಾ ಭವನದಲ್ಲಿ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶದ ಸ್ವಾತಂತ್ರ್ಯ ಸಮಾನತೆ ಸ್ವಾಸ್ಥಕ್ಕಾಗಿ ದಣಿವರಿಯದೆ ದುಡಿದ ಮಹನೀಯರಲ್ಲಿ ಸಾಧು ಸಂತ ಶರಣರ ಪಾತ್ರ ಅಪಾರವಾದದ್ದು. ಅವರ ಧರ್ಮತೀತ ಆಧ್ಯಾತ್ಮ, ಜಾತಿ ವಿನಾಶಕ ಆಚಾರ ವಿಚಾರ, ವೇದಾಗಮತೀತ ತತ್ವಶಾಸ್ತ್ರದ ಕೊಡುಗೆ ಅತಿ ಮಹತ್ವದ್ದಾಗಿದೆ.

ಆದರೆ ಚಾರಿತ್ರಿಕ ಸಾಂಸ್ಕೃತಿಕ ನಾಯಕರ ಸುತ್ತ ಪುರಾಣ ಮತ್ತು ಪವಾಡಗಳ ಕೋಟೆ ಕಟ್ಟಿ ಅವರ ಸಾಮಾಜಿಕ ಚರಿತ್ರೆಯನ್ನು ಮರೆಮಾಚಲಾಗಿದೆ. ಜಾತಿ ಧರ್ಮ ಭೇದ ಸುಟ್ಟು! ಮನುಷ್ಯ ಧರ್ಮ ದೇಶ ಕಟ್ಟು! ಎಂಬ ಕರೆಯುಳ್ಳ ಈ ನಾಟಕದ ಚೊಚ್ಚಲ ಪ್ರಯೋಗವನ್ನು ಯಶಸ್ಸುಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಕಲಾಭಿಮಾನಿಗಳು ಬರಬೇಕು ಎಂದು ಮನವಿ ಮಾಡಿದರು

ನಾಟಕದಲ್ಲಿ ಅಭಿನಯಿಸುವವರೆಲ್ಲರೂ ನಾಟಕರಂಗಕ್ಕೆ ಹೊಸಬರಾಗಿದ್ದಾರೆ. ರೈತ ಕಾರ್ಮಿಕ ಚಳವಳಿಯಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಹಾಗೂ ರೈತ ಕಾರ್ಮಿಕ ವರ್ಗದವರು ಸೇರಿ ಈ ನಾಟಕದಲ್ಲಿ ಇದ್ದಾರೆ.

ನಾಡಿನ ಖ್ಯಾತ ಕವಿ ಚಿಂತಕ ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ನಾಟಕ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸನ್ನಿವೇಶದಲ್ಲಿ ಜನಕವಿಸಿ ದಾನಪ್ಪ ನಿಲೋಗಲ್, ಕವಿ ಆರ್.ಮಾನಸಯ್ಯ, ನಾಟಕಕಾರ ತಾಯಣ್ಣ ಯರಗೇರಾ, ಲಿಂಗಸ್ಗೂರು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಆರ್ ಸಿ ಎಫ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ, ಮಾಜಿ ಕಸಾಪ ಅಧ್ಯಕ್ಷ ಮಹಾಂತೇಶ ಮಸ್ಕಿ ಹಾಗೂ ಜನಪದ ಗಾಯಕಿ ಗೌರಿ ಗೋನಾಳ ಉಪಸ್ಥಿತರಿರುತ್ತಾರೆ.

ನಾಟಕ ರಚನೆ ಹಾಗು ನಿರ್ದೇಶನ ರಂಜಾನ್ ಸಾಬ್ ಉಳ್ಳಾಗಡ್ಡಿ ಮಾಡಿದ್ದಾರೆ. ಸಂಗೀತ ನಿರ್ದೇಶನ ಆರ್. ಮಾನಸಯ್ಯ, ವಸ್ತ್ರ ವಿನ್ಯಾಸ ಭಾಸ್ಕರ್ ರಾಯಚೂರು, ಬೆಳಕು ಲಕ್ಷ್ಮಣ ಮಂಡಲಗೇರಾ, ತಾಂತ್ರಿಕ ಸಹಾಯ ಧರ್ಮರಾಜ ಗೋನಾಳ, ಸಂಚಾಲಕರಾಗಿ ನಾಗಪ್ಪ ತಳವಾರ್, ಪತ್ರಕರ್ತ ಗುರುರಾಜ ಗೌಡೂರು ಸಲಹೆಗಾರರಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ರಾಂತಿಕಾರಿ ಕಲಾ ಸಂಘದ ಮುಖಂಡ ಎಂ.ಗಂಗಾಧರ, ಆದೇಶನಗನೂರು, ಅಜೀಜ್ ಜಾಗೀರ್ದಾರ್, ನಿರಂಜನ್ ಕುಮಾರ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News