ರಾಯಚೂರು | ದೇಶದಲ್ಲಿ ಮನು ಸಂಸ್ಕೃತಿ ಹೇರುವ ಹುನ್ನಾರ ನಡೆಯುತ್ತಿದೆ : ಪ್ರೊ.ಕೆ.ಎಸ್.ಭಗವಾನ
ರಾಯಚೂರು : ದೇಶದಲ್ಲಿ ಸಂವಿಧಾನ ತಿದ್ದುಪಡಿ, ಬದಲಾವಣೆ ಎಂಬ ಹೇಳಿಕೆಗಳು ಕೇಳಿಬರುತ್ತಿದ್ದು, ಇದು ಮನುವಾದಿಗಳ ಹುನ್ನಾರವಾಗಿದೆ. ಇದರ ವಿರುದ್ಧ ಜನರು ಜಾಗೃತಗೊಳ್ಳಬೇಕೆಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ ಕರೆ ನೀಡಿದರು.
ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಜ್ ಬಳಿರುವ ಕನಕಗುರುಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ-2025 ಸಮಾರಂಭದಲ್ಲಿ ಭಾನುವಾರ ಜರುಗಿದ ಸಂಕ್ರಾಂತಿ ಜಾತ್ರೆ ಕುಮುಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾನತೆ, ಸಮಬಾಳು, ಸಹಬಾಳ್ವೆ, ಸಾಮಾಜಿಕ ನ್ಯಾಯದಡಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿರುವ ಪ್ರಜಾಪ್ರಭುತ್ವ ದೇಶಕ್ಕೆ ಕಳಶಪ್ರಾಯವಾಗಿರುವ ಭಾರತ ಸಂವಿಧಾನ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.
ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮನು ಸಂಸ್ಕೃತಿ ಸಂವಿಧಾನ ಹೇರಲು ತೆರೆ ಮರೆಯ ಪ್ರಯತ್ನಕ್ಕೆ ಮುಂದಾಗಿದೆ. ಬುದ್ಧ, ಬಸವ, ಕನಕದಾಸ, ಬಸವಣ್ಣನವರು ಒಳಗೊಂಡಂತೆ ಅನೇಕ ಸಂತರು, ಶರಣರು ಮೇಲು-ಕೀಳು ಎಂಬ ಬೇಧಭಾವವಿಲ್ಲದೇ ಸಮ ಸಮಾಜ ನಿರ್ಮಾಣಕ್ಕೆ ಸಂದೇಶ ಸಾರಿರುವ ದೇಶದಲ್ಲಿ ಅಶಾಂತಿ ಮೂಡಿಸುವ ಹೇಳಿಕೆಗಳು, ಚಟುವಟಿಕೆಗಳು ನಡೆದಿರುವದು ಅಘಾತಕಾರಿ ಸಂಗತಿಯಾಗಿದೆ.
ಹಿಂದುತ್ವದ ಘೋಷಣೆಯ ಹಿಂದೆ ತಂತ್ರಗಾರಿಕೆ ಅಡಗಿದೆ. ಜಾತಿ ವೈಷಮ್ಯ ಬೀರುವ ಉದ್ದೇಶ ಅಡಗಿದೆ. ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ವ್ಯಾಪಕ ಜನಜಾಗೃತಿಯ ಅವಶ್ಯಕತೆ ಇದೆ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಾನಂದಪೂರಿ ಸ್ವಾಮೀಜಿ, ಚನ್ನಪ್ಪ ಕಟ್ಟೀಮನಿ, ದಯಾನಂದ ಹಾಗೂ ಇತರರು ಪಾಲ್ಗೊಂಡಿದ್ದರು.