ನಾರಾಯಣಪುರ ಬಲದಂಡೆ ಕಾಲುವೆಗೆ ಎ.20ರವರೆಗೆ ನೀರು ಹರಿಸಿ : ಶಾಸಕಿ ಕರೆಮ್ಮ ಜಿ.ನಾಯಕ್

ರಾಯಚೂರು : ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದು, ನಾರಾಯಣಪುರ ಬಲದಂಡೆ ಕಾಲುವೆಗೆ ಎ.20ರವರೆಗೆ ನೀರು ಹರಿಸಬೇಕೆಂದು ದೇವದುರ್ಗ ಶಾಸಕಿ ಕರೆಮ್ಮ ಜಿ.ನಾಯಕ್ ಆಗ್ರಹಿಸಿದರು.
ದೇವದುರ್ಗ ತಾಲೂಕಿನ ಗಬ್ಬೂರು, ಕಲಮಲಾ ಮೂಲಕ ಸಾತ್‌ಮೈಲ್ ಮಾರ್ಗವಾಗಿ ಪಾದಯಾತ್ರೆ ಮೂಲಕ ಬಂದು ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿ ಮಾತನಾಡಿದರು.
ದೇವದುರ್ಗ ತಾಲೂಕು ಅತಿ ಕಡಿಮೆ ಮಳೆ ಬರುವ ಪ್ರದೇಶವಾಗಿದ್ದು, ಅಂತರ್ಜಲ ಮಟ್ಟವು ಕಡಿಮೆ ಇರುವ ಪ್ರದೇಶವಾಗಿದೆ. ತಮ್ಮ ಮತಕ್ಷೇತ್ರವು ನಾರಾಯಣಪುರ ಮತ್ತು ಭೀಮರಾಯನಗುಡಿ ವಲಯದ ಕಾಲುವೆಗಳ ಮೂಲಕ ನೀರಾವರಿ ಸೌಲಭ್ಯ ಪಡೆಯುತ್ತಿದೆ. ಈ ಬಾರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನೆಲೆ ಈ ಹಿಂದೆ ನಡೆದ ನೀರಾವರಿ ಸಲಹಾ ಸಮಿತಿಯ ನಿರ್ಧಾರದಂತೆ ಮುಂಗಾರಿಗೆ ಸಂಪೂರ್ಣ ಮತ್ತು ಹಿಂಗಾರಿಗೆ ವಾರಾಬಂದಿ ಪದ್ಧತಿಯಂತೆ ಎ.5 ರವರೆಗೆ ನೀರು ಹರಿಸಲಾಗುವುದು ಎಂದು ನಿರ್ಧರಿಸಲಾಗಿತ್ತು. ಆದರೆ ಏಕಾಏಕಿ ನೀರನ್ನು ಬಂದ್ ಮಾಡಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ತುಂಬಾ ತೊಂದರೆಯಾಗಿದೆ. ತಮ್ಮ ಮತಕ್ಷೇತ್ರದಲ್ಲಿ 25542 ಹೆಕ್ಟೇರ್ ಭೂ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈ ಬೆಳೆಗಳಿಗೆ ನೀರು ಇಲ್ಲದಿರುವುದರಿಂದ ಒಣಗಿ ಹೋಗುತ್ತಿವೆ. ಪ್ರಸ್ತುತ ಭತ್ತವು ಕಟಾವು ಹಂತದಲ್ಲಿ ಇರುವುದರಿಂದ ನೀರಿನ ಅವಶ್ಯಕತೆ ತುಂಬಾ ಇರುತ್ತದೆ ಎಂದರು.
ಈ ಹಂತದಲ್ಲಿ ನೀರು ಬಿಡದಿದ್ದರೆ ಕೆಲ ಬೆಳೆಗಳ ಇಳುವರಿ ಕಮ್ಮಿಯಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹಾಗಾಗಿ, ಎ.20ರವರೆಗೆ ನಾರಾಯಣಪುರ ಬಲದಂಡೆ ಕಾಲುವೆಗಳಿಗೆ ನೀರನ್ನು ಹರಿಸಬೇಕು ಎಂದು ಆಗ್ರಹಿಸಿದರು.
ಸರಕಾರಕ್ಕೆ ಎಲ್ಲರೂ ತಲೆಬಾಗಬೇಕೆಂಬ ಬೇಜವಾಬ್ದಾರಿತನದ ಮಾತುಗಳನ್ನು ನೀರಾವರಿ ಅಧಿಕಾರಿಗಳು ಆಡುತ್ತಿರುವುದು ಸರಿಯಲ್ಲ. ಅವಶ್ಯಕತೆ ಇದ್ದರೆ ಅಧಿಕಾರಿಗಳು, ಸರಕಾರಕ್ಕೆ ತಲೆ ಬಾಗಲಿ. ಆದರೆ ರೈತರನ್ನು ತಲೆ ಬಾಗಿ ಎಂದು ಹೇಳುವ ಅಧಿಕಾರ, ನೈತಿಕತೆ ಅಧಿಕಾರಿಗಳಿಗಿಲ್ಲ ಎಂದು ಗುಡುಗಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಮಾತನಾಡಿದರು. ಬಳಿಕ ಜಿಲ್ಲಾಧಿಕಾರಿ ನಿತೀಶ್ ಕೆ. ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಎನ್.ಶಿವಶಂಕರ, ಮುಂಡರಗಿ ಸಿದ್ದಣ್ಣ, ಸಣ್ಣ ನರಸಿಂಹ ನಾಯಕ, ಮೂಡ್ಲಗುಂಡ ಸಿದ್ದನಗೌಡ, ರಾಮಕೃಷ್ಣ, ಬೆಂಬಲಿಗರು, ಅಭಿಮಾನಿಗಳು ಇತರರು ಇದ್ದರು.