ನಾಗಮಂಗಲದ ‘ನಾಗರಂಗ’ವೆಂಬ ರಂಗಜಾತ್ರೆ
‘‘15 ವರ್ಷಗಳ ಹಿಂದೆ ನಾಟಕೋತ್ಸವ ಶುರು ಮಾಡಿ, ಅತ್ಯುತ್ತಮ ನಾಟಕಗಳನ್ನು ಹುಡುಕಿ ಆಡಿಸುತ್ತೇವೆ. ಪ್ರತೀ ವರ್ಷ ಏಳು ನಾಟಕಗಳನ್ನು ಪ್ರದರ್ಶಿಸುತ್ತೇವೆ. ಇದರಿಂದ ಇತರ ತಂಡಗಳಿಗೆ, ಸಂಘ-ಸಂಸ್ಥೆಗಳಿಗೆ ನಮ್ಮ ಸಂಘ ಮಾದರಿಯಾಗಿದೆ. ವೇದಿಕೆ ಮೇಲೆ ಅತಿಥಿಗಳು ಮಾತ್ರ ಇರುತ್ತಾರೆ. ಪದಾಧಿಕಾರಿಗಳಿರುವುದಿಲ್ಲ. ಇದನ್ನು ಇತರರು ಅನುಕರಿಸುತ್ತಿದ್ದಾರೆ.’’ -ನಾ.ಸು. ನಾಗೇಶ್
‘‘ಎಳೆತನದ ಹುರುಪಿನಲ್ಲಿ ಹುಟ್ಟಿದ್ದು ಕನ್ನಡ ಸಂಘ. ಎಲ್ಲವನ್ನೂ ಇಲ್ಲಿಯೇ ಪಡೆಯಬೇಕೆನ್ನುವ ಹುರುಪು. ಅದಕ್ಕೆ ತಕ್ಕ ಹಟ. ಐವತ್ತು ವರ್ಷಗಳು ಕುಣಿದು ಕುಪ್ಪಳಿಸಿದ್ದೇವೆ. ಚಿಂತನೆಗಳನ್ನು ಚೆಲ್ಲಿದ್ದೇವೆ. ಆನಂದದ ಅಲೆಗಳನ್ನು ಹಾಯಿಸಿದ್ದೇವೆ. ಬೆರಗು ತೋರಿಸಿದ್ದೇವೆ. ಹೊಸ ಬೀಜಗಳ ಬಿತ್ತಿ ನೀರೆರೆದಿದ್ದೇವೆ. ಆರಂಭದ ಸಂಘಟನೆಯಲ್ಲಿರುವ ಗೆಳೆಯರು ಈಗ ಸಂಘದೊಡನಿಲ್ಲ. ಆದರೆ ಅವರ ಆಸೆಗಳು ಪ್ರೇರಣೆಯಾಗಿ ಸಂಘವನ್ನು ಮುನ್ನಡೆಸಿದೆ. ಹಳ್ಳತೊರೆಗಳು ಕೂಡಿ ಮುಂದೆ ನಾಲೆಗಳು ಟಿಸಿಲೊಡೆದು ಹರಿದರೂ ಮುಖ್ಯವಾಹಿನಿಯಾಗಿ ಹರಿವ ನದಿಯಂತೆ ಈವರೆಗೆ ಬತ್ತದೇ ಹರಿಯುತ್ತಿದೆ.
ಊರಿನ ಸಾಂಸ್ಕೃತಿಕ ಅಗತ್ಯಗಳನ್ನು ಕಂಡುಕೊಂಡು ಪೂರೈಸುವುದೇ ನಮ್ಮ ಗುರಿ. ಗ್ರಂಥಾಲಯವಿಲ್ಲದಿದ್ದಾಗ ಗ್ರಂಥಾಲಯ ಆರಂಭಿಸಿದ್ದೇವೆ. ಕಲಾಶಾಲೆ ತೆರೆದು ಸಂಗೀತ, ನೃತ್ಯ, ಚಿತ್ರರಚನೆಗಳಿಗೆ ಅವಕಾಶ ಕಲ್ಪಿಸಿದ್ದೇವೆ. ಜ್ಞಾನವೃದ್ಧಿಗೆ ಪೂರಕವಾಗಿ ಉಪನ್ಯಾಸಗಳು, ಸಂಗೀತ, ನೃತ್ಯಪ್ರದರ್ಶನ, ವಿಚಾರಸಂಕಿರಣ, ನಾಟಕ ಪ್ರದರ್ಶನ, ರಂಗ ತರಬೇತಿ ಶಿಬಿರ, ಆಧುನಿಕ ನಾಟಕಗಳ ಪರಿಚಯಕ್ಕಾಗಿ ನಾಟಕೋತ್ಸವ... ಹೀಗೆ ಹಲವು ಬಗೆಯಲ್ಲಿ ಈ ನೆಲದ ಕೊರತೆಗಳನ್ನು ನೀಗುವ ಪ್ರಯತ್ನ ಮಾಡಿದ್ದೇವೆ.
ಇಲ್ಲಿ ಜಾತಿ, ಧರ್ಮ, ವೃತ್ತಿ, ಆಸ್ತಿ-ಅಂತಸ್ತುಗಳ ಭೇದವಿಲ್ಲ. ಎಲ್ಲ ವಯೋಮಾನದವರ ನಡುವೆ ಸಾಮರಸ್ಯ. ಪ್ರತೀ ವರ್ಷ ಹೊಸ ಕಾರ್ಯಪಡೆಯ ಆಯ್ಕೆ. ಹೊಸ ಉತ್ಸಾಹ, ಕನಸುಗಳಿಗೆ ಅವಕಾಶ. ಅಧ್ಯಕ್ಷ, ಕಾರ್ಯದರ್ಶಿ ಅಧಿಕಾರಿಗಳಿಲ್ಲ ಬದಲಿಗೆ ಜವಾಬ್ದಾರಿಗಳೆನ್ನುವ ನಂಬಿಕೆ. ಇವೆಲ್ಲವೂ ನಮಗಾಗಿ, ಎಲ್ಲರಿಗಾಗಿ ಹಾಗೂ ಈ ನೆಲದ ಋಣಕ್ಕಾಗಿ. ಹೀಗೇ ಐವತ್ತೊಂದು ದಾಟಿದ್ದೇವೆ. ಉತ್ಸಾಹ ಇರುವವರೆಗೆ ಸಾಗುತ್ತೇವೆ...’’
- ಇದು ಮಂಡ್ಯ ಜಿಲ್ಲೆಯ ನಾಗಮಂಗಲದ ಕನ್ನಡ ಸಂಘದ ಐವತ್ತೊಂದು ವರ್ಷಗಳ ಕುರಿತ ಒಕ್ಕಣಿಕೆ. ಪ್ರತೀ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ನಾಗರಂಗ’ ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಿದ್ದು, ಈ ವರ್ಷ ನವೆಂಬರ್ 24ರಿಂದ 30ರ ವರೆಗೆ ನಡೆಯಿತು. ಸಂಘಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣ ನಾಗಮಂಗಲದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ, ಇತಿಹಾಸ ಪುರುಷ ಹಾಗೂ ನಾಗಮಂಗಲದ ಪಾಳೇಗಾರ ತಿಮ್ಮಣ್ಣ ಡಣಾಯಕರ ವೇದಿಕೆಯಲ್ಲಿ ನಾಟಕೋತ್ಸವ ನಡೆದಿದೆ. ಉದ್ಘಾಟನೆ ದಿನ ರಂಗ ಗೌರವ ಮೂಲಕ ಸತ್ಕರಿಸಲಾಯಿತು. ಈ ಬಾರಿ ಸಾಹಿತಿ ಡಾ.ಗಜಾನನ ಶರ್ಮಾ ಅವರನ್ನು ‘ನುಡಿ ಗೌರವ’ವೆಂದು ಹಾಗೂ ರಂಗಕರ್ಮಿ ಹಾಗೂ ಸಿನೆಮಾ ನಟ ಎಂ.ಎಸ್.ಉಮೇಶ್ ಅವರನ್ನು ‘ರಂಗ ಗೌರವ’ವೆಂದು ಸತ್ಕರಿಸಲಾಯಿತು. ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸೌಮ್ಯಕೇಶವಸ್ವಾಮಿ ದೇವಸ್ಥಾನದಿಂದ ವೇದಿಕೆವರೆಗೆ ಜಾನಪದ ತಂಡಗಳಿಂದ ಮೆರವಣಿಗೆ ನಡೆಯಿತು. ಈ ಮೂಲಕ ನಾಟಕೋತ್ಸವ ಶುರುವಾಗುತ್ತದೆ ಎಂಬ ಪ್ರಚಾರವೂ ನಡೆಯಿತು.
ಹೀಗೆ 15 ವರ್ಷಗಳಿಂದ ನಾಟಕೋತ್ಸವ ನಡೆಯುತ್ತಿದೆ. ನಾಟಕೋತ್ಸವ ನಡೆಯುವ ಆವರಣವನ್ನು ಸಿಂಗರಿಸಲಾಗುತ್ತದೆ. ತಿಂಡಿ ಅಂಗಡಿಗಳೂ ಇರುತ್ತವೆ. ಈ ಮೂಲಕ ಅಲ್ಲಿ ರಂಗಜಾತ್ರೆ ನಡೆಯುತ್ತಿದೆ. ಹೊರಗಿನ ತಂಡಗಳ ನಾಟಕಗಳನ್ನು ಪ್ರದರ್ಶಿಸುವುದರ ಜೊತೆಗೆ ಕನ್ನಡ ಸಂಘದ ನಾಟಕವೂ ಇರುತ್ತಿತ್ತು. ಎರಡು ವರ್ಷಗಳಿಂದ ಕನ್ನಡ ಸಂಘದ ನಾಟಕವಾಗಿಲ್ಲ. ಇರಲಿ. ಕನ್ನಡ ಸಂಘದ ಮೂಲಕ ನಾಟಕೋತ್ಸವ ಆಗುತ್ತದೆ ಎಂಬುದೇ ದೊಡ್ಡ ಸಂತಸದ ಸಂಗತಿ.
ಇದೆಲ್ಲ ಶುರುವಾಗಿದ್ದು ಹೇಗೆ? ಈ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ನಾ.ಸು.ನಾಗೇಶ್ ಅವರನ್ನು ಮಾತಾಡಿಸಿದಾಗ:
‘‘1972ರಲ್ಲಿ 20 ವರ್ಷದ ಹುಡುಗರು ನಾವೆಲ್ಲ ಸೇರಿ ಶುರು ಮಾಡಿದ್ದು ಕನ್ನಡ ಸಂಘ. ಆಗ ಮೈಸೂರಲ್ಲಿ ಓದ್ತಾ ಇದ್ದೆ. ಮೈಸೂರಲ್ಲಿ ಎಂತೆಂಥಾ ಕಾರ್ಯಕ್ರಮಗಳಾಗ್ತಾ ಇದ್ವು! ಹಾಗೆಯೇ ಬೆಂಗಳೂರಲ್ಲೂ. ಬರೀ ಮೈಸೂರು, ಬೆಂಗಳೂರು ಮಾತ್ರ ಮೀಸಲಾಗಬಾರ್ದು. ನಮ್ಮೂರಿನ ಜನರು ನೋಡುವಂತಾಗಬೇಕೆಂದು ನಮ್ಮ ನಾಗಮಂಗಲದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮ ಶುರು ಮಾಡಿದ್ವಿ. 1972ರ ಮೇ 5ರಂದು ಕನ್ನಡ ಸಂಘ ಶುರುವಾಯಿತು. ತರಾಸು, ಆರ‌್ಯಂಬ ಪಟ್ಟಾಭಿ, ಯು.ಆರ್.ಅನಂತಮೂರ್ತಿ, ಏಣಗಿ ಬಾಳಪ್ಪ... ಹೀಗೆ ಅನೇಕರು ಬಂದರು. ಸಂಘದ 22ನೇ ವರ್ಷಕ್ಕೆ ಶಿವರಾಮ ಕಾರಂತರು ಬಂದಿದ್ದರು. ಮೊದಲ ನುಡಿ ಗೌರವ ಅವರು ಸ್ವೀಕರಿಸಿದರು. ಸಂಘದ ಬೆಳ್ಳಿಹಬ್ಬವು ಅವರ ಉಪಸ್ಥಿತಿಯಲ್ಲಿಯೇ ನಡೆಯಿತು. ಒಟ್ಟು ಮೂರು ಬಾರಿ ಅವರು ಬಂದಿದ್ದರು’’ ಎಂದು ನೆನಪಿಸಿಕೊಂಡರು.
ರಾಜ್ಯೋತ್ಸವ ಆಚರಣೆಗೆ ಮಾತ್ರ ಸೀಮಿತವಾಗದ ಅವರು, ತಮ್ಮ ಊರಲ್ಲಿ ಆಡುತ್ತಿದ್ದ ಪಾರಂಪರಿಕ ನಾಟಕಗಳನ್ನು ಹೊರತುಪಡಿಸಿ ಅಂದರೆ ‘ಈಡಿಪಸ್’ ನಾಟಕವಾಡಿದರು (1975). ಆಮೇಲೆ ನೀನಾಸಂನ ಮೊದಲನೇ ತಿರುಗಾಟದ ನಾಟಕಗಳನ್ನು ಪ್ರದರ್ಶಿಸಿದರು. ಈ ತಿರುಗಾಟದಲ್ಲಿ ಮಂಡ್ಯ ರಮೇಶ್ ಇದ್ದರು. ಅವರು ‘ಮಿಸ್ ಸದಾರಮೆ’ ನಾಟಕದಲ್ಲಿ ನಿರ್ವಹಿಸಿದ ಪಾತ್ರವನ್ನು ನಾಗೇಶ್ ಮರೆಯಲಿಲ್ಲ. ‘‘ನಮ್ಮ ನಾಗಮಂಗಲದಲ್ಲೇ ಬೆಳೆದ ಹುಡುಗ ಮಂಡ್ಯ ರಮೇಶ್. ಅವನ ವಿದ್ಯಾಭ್ಯಾಸ ನಾಗಮಂಗಲದಲ್ಲೇ ಆಯಿತು. ನೀನಾಸಂ ತಿರುಗಾಟ ಮುಗಿಸಿ ಬಂದಾಗ ನಾಟಕ ಆಡಿಸಲು ಕೇಳಿದೆವು. ಮೊದಲಿಗೆ ರಂಗ ತರಬೇತಿ ಶಿಬಿರ ಮಾಡಿದ ನಂತರ ಪ್ರಸನ್ನ ಅವರ ‘ಮಹಿಮಾಪುರ’ ನಾಟಕ ಆಡಿಸಿದ. ಈ ಸಂದರ್ಭದಲ್ಲಿ ಏಣಗಿ ನಟರಾಜ ಕೂಡಾ ಬಂದಿದ್ದರು. ಒಟ್ಟು ಏಳು ನಾಟಕಗಳನ್ನು ಮಂಡ್ಯ ರಮೇಶ್ ಆಡಿಸಿದ. ಉಡುಪಿಯ ರಂಗಭೂಮಿ ಸಂಸ್ಥೆ ಏರ್ಪಡಿಸುವ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು. ಸತತವಾಗಿ ಮೂರು ವರ್ಷ ಮೊದಲ ಬಹುಮಾನ ಬಂತು. ಇವೆಲ್ಲ ಮಂಡ್ಯ ರಮೇಶ್ ನಿರ್ದೇಶಿಸಿದ ನಾಟಕಗಳಾಗಿದ್ದವು. ಆಮೇಲೆ ಅವನು ಮೈಸೂರಲ್ಲಿ ನೆಲೆ ನಿಂತ. ನಮ್ಮ ತಂಡಕ್ಕೆ ನಾಟಕಗಳನ್ನು ನಿರ್ದೇಶಿಸಲು ಬೇರೆ ಬೇರೆ ನಿರ್ದೇಶಕರನ್ನು ಆಹ್ವಾನಿಸಿದೆವು. ಉಡುಪಿಯ ರಂಗಭೂಮಿ ತಂಡದ ಆನಂದ ಗಾಣಿಗ ಅವರು ತಮ್ಮ ತಂಡದ ನಾಟಕಗಳನ್ನು ನಮ್ಮಲ್ಲಿ ಪ್ರದರ್ಶಿಸಿದರು. ನಮ್ಮ ನಾಟಕಗಳ ಪ್ರದರ್ಶನಕ್ಕೆ ಅವರು ನೆರವಾಗಿದ್ದಾರೆ’’ ಎಂದು ಮೆಲುಕು ಹಾಕಿದರು ನಾಗೇಶ್.
‘‘15 ವರ್ಷಗಳ ಹಿಂದೆ ನಾಟಕೋತ್ಸವ ಶುರು ಮಾಡಿ, ಅತ್ಯುತ್ತಮ ನಾಟಕಗಳನ್ನು ಹುಡುಕಿ ಆಡಿಸುತ್ತೇವೆ. ಪ್ರತೀ ವರ್ಷ ಏಳು ನಾಟಕಗಳನ್ನು ಪ್ರದರ್ಶಿಸುತ್ತೇವೆ. ಇದರಿಂದ ಇತರ ತಂಡಗಳಿಗೆ, ಸಂಘ-ಸಂಸ್ಥೆಗಳಿಗೆ ನಮ್ಮ ಸಂಘ ಮಾದರಿಯಾಗಿದೆ. ವೇದಿಕೆ ಮೇಲೆ ಅತಿಥಿಗಳು ಮಾತ್ರ ಇರುತ್ತಾರೆ. ಪದಾಧಿಕಾರಿಗಳಿರುವುದಿಲ್ಲ. ಇದನ್ನು ಇತರರು ಅನುಕರಿಸುತ್ತಿದ್ದಾರೆ. ಮುಖ್ಯವಾಗಿ ಉಪನ್ಯಾಸ, ವಿಚಾರ ಸಂಕಿರಣಗಳಿಂದ ಓದುಗರು ಹೆಚ್ಚಿದ್ದಾರೆ. ನಾಟಕಗಳಾಗುವುದರಿಂದ ವೈಚಾರಿಕವಾಗಿ ಪ್ರಬಲರಾಗಿದ್ದಾರೆ. ತಿಂಗಳಿಗೊಂದು ಕಾರ್ಯಕ್ರಮ ಕಡ್ಡಾಯ. ಉಪನ್ಯಾಸ, ಬೇಸಿಗೆ ಶಿಬಿರ ಹೀಗೆ ನಿರಂತರವಾಗಿ ಕ್ರಿಯಾತ್ಮಕತೆ ಕಾಪಾಡಿಕೊಂಡಿದ್ದೇವೆ’’ ಎನ್ನುವ ಹೆಮ್ಮೆ ಅವರದು.
‘‘ಉದ್ಯೋಗ ಅರಸಿ ಬೇರೆ ಊರಿಗೆ ಹೋಗಲಿಲ್ಲ. ನಮ್ಮ ತಂದೆ ಎನ್.ವಿ.ಸುಬ್ಬಾರಾವ್ ಅವರು ಸಿವಿಲ್ ಗುತ್ತಿಗೆದಾರರು. ಅವರೊಂದಿಗೇ ಉಳಿದೆ, ಅವರ ಉದ್ಯೋಗ ಮುಂದುವರಿಸಿದೆ. ಆಗ ಹವ್ಯಾಸವೊಂದು ಬೇಕಿತ್ತು. ಗೆಳೆಯರೊಡನೆ ಕೂಡಿಕೊಂಡು ಕನ್ನಡ ಸಂಘ ಕಟ್ಟಿದೆ. 2-3 ಬಾರಿ ಸಂಘದ ಅಧ್ಯಕ್ಷನಾಗಿರುವೆ. 50ನೇ ವರ್ಷಕ್ಕೆ ಅಧ್ಯಕ್ಷನಾಗಿದ್ದೆ’’ ಎನ್ನುವ ಖುಷಿ ಅವರಿಗೆ. ಸ್ಥಾಪಕ ಸದಸ್ಯರಲ್ಲಿ ಉಳಿದವರಲ್ಲಿ ಅವರೊಬ್ಬರೇ.
ಮುಖ್ಯವಾಗಿ ಪದಾಧಿಕಾರಿಗಳು ಪ್ರತೀ ವರ್ಷ ಬದಲಾಗುತ್ತಾರೆ. ಈ ವರ್ಷ ಅಧ್ಯಕ್ಷರಾಗಿ ಛಾಯಾಗ್ರಾಹಕ ಕೆ.ಅಲಮೇಲ, ಕಾರ್ಯದರ್ಶಿಯಾಗಿ ಉಪ ನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಡಿಟಿಪಿ ಅಂಗಡಿ ಇಟ್ಟುಕೊಂಡಿರುವ ಹರೀಶ್ ಬಾಬು, ಖಜಾಂಚಿಯಾಗಿ ಶಿಕ್ಷಕಿ ಕೆ.ರತ್ನಮ್ಮ ಹಾಗೂ ಸಂಚಾಲಕರಾಗಿ ಶಿಕ್ಷಕ ಮಂಜುನಾಥ್ ಆಯ್ಕೆಯಾಗಿದ್ದು, 30 ಸದಸ್ಯರಿದ್ದಾರೆ. ಇವರೆಲ್ಲ ಬೇರೆ ಬೇರೆ ವೃತ್ತಿಯಲ್ಲಿರುವವರು.
‘‘20 ವರ್ಷಗಳ ಹಿಂದೆ ನಾಗಮಂಗಲದವರೇ ನಾಟಕ ಆಡುತ್ತಿದ್ದರು. ಆಗ ನಮ್ಮ ತಂದೆ ವೆಂಕಟೇಶ್ ಅವರು ‘ವೆಂಕಟೇಶ್ವರ ಟೀ ಸ್ಟಾಲ್’ ನಡೆಸುತ್ತಿದ್ದರು. ಅವರು ಕೂಡಾ ಪೌರಾಣಿಕ ನಾಟಕಗಳ ಕಲಾವಿದರು. ಅವರು ನಾಟಕಗಳನ್ನು ನೋಡಲಾಗದಿದ್ದಾಗ ಚಿಕ್ಕವನಾಗಿದ್ದ ನನ್ನನ್ನು ಟಿಕೆಟ್ ಕೊಟ್ಟು ಕಳಿಸುತ್ತಿದ್ದರು. ಆಮೇಲೆ ಅಂದರೆ ನಾಗರಂಗ ನಾಟಕೋತ್ಸವ ನೋಡಿಕೊಂಡು ಬೆಳೆದೆ. ನಮ್ಮಂಥವರಿಗೆ ಹಿರಿಯರು ಮಾರ್ಗದರ್ಶನ ನೀಡುತ್ತಾರೆ. ಯುವಕರು ಉತ್ಸಾಹದಿಂದ ನಾಟಕೋತ್ಸವದಲ್ಲಿ ತೊಡಗಿಕೊಳ್ಳುತ್ತಾರೆ. ಇದು ಮಕ್ಕಳಿಗೂ ಪಾಠವಾಗಲಿದೆ. ಹೊಸ ತಂಡದ ಹೊಸ ನಾಟಕಗಳನ್ನು ತರಿಸುತ್ತೇವೆ. ಸಾಧಕ ಸಾಹಿತಿ, ರಂಗಕರ್ಮಿಗಳನ್ನು ಕರೆಸಿ ಸನ್ಮಾನಿಸುತ್ತೇವೆ. ಹೀಗೆ ನಾಗರಂಗ ಉತ್ಸವ ಇಡೀ ತಾಲೂಕಿಗೇ ದೊಡ್ಡ ಹಬ್ಬ. ಜಾತ್ಯತೀತವಾದ, ಧರ್ಮಾತೀತವಾದ ಹಬ್ಬವಿದು’’ ಎನ್ನುವ ಸಂತಸ ಸಂಘದ ಕಾರ್ಯದರ್ಶಿ ಹರೀಶ್ ಬಾಬು ಅವರದು.
42 ವರ್ಷಗಳಿಂದ ಈ ಸಂಘದ ಸದಸ್ಯರಾಗಿರುವ, 2-3 ಬಾರಿ ಅಧ್ಯಕ್ಷರಾಗಿರುವ ಹಾಗೂ ಸಂಘದ ವಿಶ್ವಸ್ಥ ಮಂಡಳಿ ಅಧ್ಯಕ್ಷರಾಗಿರುವ ಹಾಗೂ ನಾಗಮಂಗಲದ ವೈಭವ ಹೋಟೆಲಿನ ಮಾಲಕರಾದ ಎಸ್.ಎಚ್.ರಮಾನಂದ ಅವರು ‘‘ಕಷ್ಟಪಟ್ಟು ನಾಟಕೋತ್ಸವ ಶುರು ಮಾಡಿದ್ವಿ. ನಾಗಮಂಗಲ ಉತ್ಸವ ಏರ್ಪಾಟು ಮಾಡಬೇಕೆಂದುಕೊಂಡಿದ್ದೆವು. ಇದರ ಬದಲು ನಾಟಕೋತ್ಸವ ಮಾಡಿರೆಂದು ಸಲಹೆ ಕೊಟ್ಟವರು ಪತ್ರಕರ್ತ ಎಲ್.ಪ್ರಕಾಶ್. ನಾಟಕೋತ್ಸವಕ್ಕೆ ನಿತ್ಯ ಎರಡು ಸಾವಿರವರೆಗೆ ಜನರು ಸೇರುತ್ತಾರೆ. ಉಮಾಶ್ರೀ ಅವರ ‘ಒಡಲಾಳ’ ನಾಟಕಕ್ಕೆ ಏಳೆಂಟು ಸಾವಿರ ಜನರು ಸೇರಿದ್ದು ಮರೆಯಲಾಗದು. ನಮ್ಮ ಸಂಘದ ನಾಟಕಕ್ಕೆ ನಾಲ್ಕೈದು ಸಾವಿರ ಜನರು ಸೇರುತ್ತಾರೆ. ಆದರೆ ಸಂಘದ ಕಟ್ಟಡ ಅರ್ಧವಾಗಿದೆ. ಇದರಲ್ಲೇ ಸಂಗೀತ ಶಾಲೆ ನಡೆಯುತ್ತಿದೆ. ಇದು ಪೂರ್ಣಗೊಳ್ಳಬೇಕು. ಹಾಗೆಯೇ ರಂಗಮಂದಿರ ಆಗಬೇಕಿದೆ. ಸರಕಾರದ ಭರವಸೆ ಸಿಗುತ್ತಿದೆಯಷ್ಟೆ’’ ಎಂದು ಬೇಸರ ವ್ಯಕ್ತಪಡಿಸಿದರು.
ಹೀಗೆ ನಾಟಕೋತ್ಸವ ನೆಪದಲ್ಲಿ ಜನರು ಸೇರಿ, ನಾಟಕಗಳನ್ನು ನೋಡುವ, ಈಮೂಲಕ ರಂಗಪರಂಪರೆ ಬೆಳೆಯುತ್ತಿದೆ ಎನ್ನುವುದು ಗಮನಾರ್ಹ.