ಎಪ್ಪತ್ತರ ಜೋಡೆತ್ತಿನ ನಾಟಕ ಕಂಪೆನಿ

ಹಾನಗಲ್ಲ ಕಂಪೆನಿಯು 1983ರ ಆಗಸ್ಟ್ 4ರಂದು ಮಹಾರಾಷ್ಟ್ರದ ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಎಲ್.ಬಿ. ಶೇಕ್ ಮಾಸ್ತರ ಒಡೆತನದಲ್ಲಿ ಆರಂಭಗೊಂಡಿತು. ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಸಾಮಾಜಿಕ ನಾಟಕಗಳನ್ನು ಆಡುತ್ತಿದೆ. ಸದ್ಯ ಸಾಮಾಜಿಕ ನಾಟಕಗಳಿಗೆ ಸೀಮಿತಗೊಂಡಿದೆ. ಲಾಡ್ಲೇಸಾಬ್ ಬಾವಸಾಬ್ ಶೇಕ್ ಎಂದರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ಶೇಕ್ ಮಾಸ್ತರ ಎಂದರೆ ರಂಗಭೂಮಿಯಲ್ಲಿ ಹೆಸರಾದವರು.

Update: 2024-09-27 10:02 GMT

ಇಂದು (ಸೆಪ್ಟಂಬರ್ 27) ಕಲಬುರಗಿಯ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲ ನಾಟಕ ಕಂಪೆನಿಯ 42ನೇ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಡಾ.ಚನ್ನವೀರ ಶಿವಾಚಾರ್ಯರ ಹಾರಕೂಡ ಅವರ 719ನೇ ನಾಣ್ಯ ತುಲಾಭಾರ ಜೊತೆಗೆ 60 ರಂಗಕರ್ಮಿಗಳಿಗೆ ‘ಕುಮಾರಶ್ರೀ’ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಲಬುರಗಿಯಲ್ಲಿಯೇ ಈ ಸಮಾರಂಭ ಆಯೋಜಿಸಲು ಮುಖ್ಯ ಕಾರಣ; ಈ ಹಾನಗಲ್ಲ ಕಂಪೆನಿಯು ಸತತವಾಗಿ 13 ವರ್ಷಗಳವರೆಗೆ ಕಲಬುರಗಿಯಲ್ಲಿ ಕಂಪೆನಿ ನಡೆಸಿತು. ಅದು ಕೂಡಾ ಸಿನೆಮಾ ಟಾಕೀಸ್ ಎದುರು. 2003ರ ಆಗಸ್ಟ್ 22ರಂದು ಕೆ.ಎನ್. ಸಾಳುಂಕೆ ವಿರಚಿತ ‘ಕಿವುಡ ಮಾಡಿದ ಕಿತಾಪತಿ’ ನಾಟಕ ಪ್ರದರ್ಶನದೊಂದಿಗೆ ಶುರುವಾಯಿತು. 13 ವರ್ಷಗಳವರೆಗೆ ಒಂದೇ ಸ್ಥಳದಲ್ಲಿ ಸುಮಾರು 24 ನಾಟಕಕಾರರ 60 ನಾಟಕಗಳನ್ನು ಒಂಭತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ ಖ್ಯಾತಿ ಈ ಹಾನಗಲ್ಲ ಕಂಪೆನಿಯದು. ಈ ಮೂಲಕ ರಂಗಭೂಮಿಯಲ್ಲಿ ದಾಖಲೆಯನ್ನು ಸ್ಥಾಪಿಸಿತು. ಇದರಂಗವಾಗಿ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲ ಅಭಿನಂದನಾ ಸಮಿತಿಯು ಡಾ.ಪಂ. ಪುಟ್ಟರಾಜ ಗವಾಯಿಗಳ ಹಾಗೂ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಕಂಪೆನಿ ಮಾಲಕ ಎಲ್.ಬಿ. ಶೇಕ್ ಮಾಸ್ತರ ಹಾಗೂ ಸಂಚಾಲಕ ಶ್ರೀಧರ ಹೆಗಡೆ ಅವರಿಗೆ ಬೆಳ್ಳಿ ಕಿರೀಟ ತೊಡಿಸಲಾಗಿದೆ. ಈ ಸಂಘದ ಎಲ್ಲ ಕಲಾವಿದರಿಗೆ ಬೆಳ್ಳಿಯ ದೀಪಗಳನ್ನು ನೀಡಿ ಸತ್ಕರಿಸಲಾಗಿದೆ. ಅಲ್ಲದೆ ‘ರಂಗಾಂತರಂಗ’ ಸ್ಮರಣ ಸಂಚಿಕೆಯು ಬಿಡುಗಡೆಗೊಂಡಿದೆ.

ಇಂತಹ ಸಂಘವು 1983ರ ಆಗಸ್ಟ್ 4ರಂದು ಮಹಾರಾಷ್ಟ್ರದ ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಎಲ್.ಬಿ. ಶೇಕ್ ಮಾಸ್ತರ ಒಡೆತನದಲ್ಲಿ ಆರಂಭಗೊಂಡಿತು. ಪೌರಾಣಿಕ, ಐತಿಹಾಸಿಕ, ಧಾರ್ಮಿಕ ಹಾಗೂ ಸಾಮಾಜಿಕ ನಾಟಕಗಳನ್ನು ಆಡುತ್ತಿದೆ. ಸದ್ಯ ಸಾಮಾಜಿಕ ನಾಟಕಗಳಿಗೆ ಸೀಮಿತಗೊಂಡಿದೆ. ಲಾಡ್ಲೇಸಾಬ್ ಬಾವಸಾಬ್ ಶೇಕ್ ಎಂದರೆ ಅನೇಕರಿಗೆ ಗೊತ್ತಾಗಲಿಕ್ಕಿಲ್ಲ. ಆದರೆ ಶೇಕ್ ಮಾಸ್ತರ ಎಂದರೆ ರಂಗಭೂಮಿಯಲ್ಲಿ ಹೆಸರಾದವರು. ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಲಿಂಗದಳ್ಳಿ ಗ್ರಾಮದ ಶೇಕ್ ಅವರು ಓದಿದ್ದು ಎಸೆಸೆಲ್ಸಿ. ತಾಳಿಕೋಟೆಯ ಖಾಸ್ಗತೇಶ್ವರ ಮಠದಲ್ಲಿ ಸಂಗೀತ ಕಲಿತರು. ಬಾಲ್ಯದಲ್ಲೇ ತಮ್ಮೂರಿಗೆ ಬರುತ್ತಿದ್ದ ವೇಷಗಾರರು ಅಥವಾ ಬಹುರೂಪಿಗಳ ವೇಷ ಹಾಗೂ ನಾಟಕಗಳನ್ನು ನೋಡಿ ಬೆಳೆದರು. ಹಾರ್ಮೋನಿಯಂ ಮಾಸ್ತರರ ಮಗ್ಗುಲಲ್ಲೇ ಕುಳಿತು ನಾಟಕ ನೋಡುವಾಗ, ಪೇಟಿ (ಹಾರ್ಮೋನಿಯಂ) ಮಾಸ್ತರ ಆಗಬೇಕು, ಕಂಪೆನಿ ಸರ್ವೀಸ್ ಮಾಡಬೇಕೆಂಬ ಆಸೆ ಅವರಲ್ಲಿ ಚಿಗುರೊಡೆಯಿತು. ನಾಟಕ ನಿರ್ದೇಶನವನ್ನೂ ಕಲಿತರು. ಇದಕ್ಕಾಗಿ ಕಟಗೇರಿ ರಾಮನಗೌಡರ ಕಂಪೆನಿ, ಗೋಕಾಕ ವೀರಯ್ಯಸ್ವಾಮಿಗಳ ಕಂಪೆನಿ ಹಗೂ ಕಿತ್ತೂರು ಮಡಿವಾಳಪ್ಪನವರ ಕಂಪೆನಿಯಲ್ಲಿ ತರಬೇತಿಗೊಂಡರು. ಮುಂದೆ ಸ್ವಂತ ಕಂಪೆನಿ ಕಟ್ಟಿದ ಮೇಲೆ ಬನಹಟ್ಟಿಯ ಗಂಗಾಧರ ಬೂತೆ ಅವರ ‘ರೈತನ ಕರೆ ನಾಡಿಗೆ ಸಕ್ಕರೆ’ ನಾಟಕಕ್ಕೆ ಶೇಕ್ ಅವರು ಹಾಡುಗಳನ್ನು ರಚಿಸಿ, ಸಂಗೀತ ಸಂಯೋಜಿಸಿದರು. ಬಳಿಕ ಎಸ್.ಎಂ. ಕಣವಿ ಅವರ ‘ಕೈಲಾಗದ ಗಂಡ ಕೈಲಾಸ ಕಂಡ’ ಹಾಗೂ ‘ಹಸಿರುಬಳೆ’ ನಾಟಕಗಳಿಗೂ ಹಾಡು ರಚಿಸಿ, ಸಂಗೀತ ಸಂಯೋಜಿಸಿದರು. ಹೀಗೆ ಕಂಪೆನಿ ಮುನ್ನಡೆಸಿದ ಅವರು ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರೂ ಆದರು.

‘‘ಈಗ ಸಿನೆಮಾ ಹಾಡುಗಳಿಗೆ ಕಲಾವಿದರು ತುಟಿ ಚಲನೆ ಮಾಡುತ್ತಾರಷ್ಟೇ. ಹಾಡುತ್ತಿಲ್ಲ. ಹಾಡು ಕಲಿಯುವ ಆಸಕ್ತಿಯೂ ಇರುವುದಿಲ್ಲ. ಕಲಿಯುವ ಅವಶ್ಯಕತೆ ಇಲ್ಲವೆನ್ನುವವರೂ ಇದ್ದಾರೆ. ಹೀಗಾಗಿ ವೃತ್ತಿ ರಂಗಭೂಮಿ ಹಿಂದುಳಿಯುತ್ತಿದೆ. ಶ್ರದ್ಧೆಯಿಂದ ಅಭಿನಯಿಸುವ ಕಲಾವಿದರು ಕಮ್ಮಿಯಾಗುತ್ತಿದ್ದಾರೆ. ತಾಲೀಮಿಗೂ ಹೆಚ್ಚು ಬರುವುದಿಲ್ಲ. ಹೊಸ ನಾಟಕಗಳನ್ನು ಕೂಡಿ ಸಲು ಕಷ್ಟವಿದೆ. ಹಳೆಯ ನಾಟಕಗಳನ್ನೇ ಮತ್ತೆ ಮತ್ತೆ ಆಡುವುದು ಅನಿವಾರ್ಯವಾಗುತ್ತಿದೆ’’ ಎನ್ನುವ ಸಂಕಟ ಅವರದು.

‘‘ವೃತ್ತಿ ರಂಗಭೂಮಿಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದೇವೆ. ಗುಬ್ಬಿ ವೀರಣ್ಣ, ಸುಳ್ಳದ ದೇಸಾಯಿ, ಚಿತ್ತರಗಿ ಗಂಗಾಧರ ಶಾಸ್ತ್ರಿಗಳು, ಏಣಗಿ ಬಾಳಪ್ಪ ಅವರ ಕಾಲಘಟ್ಟ ಈಗಿಲ್ಲ. ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ತಮ್ಮ ಕಂಪೆನಿಗೆ ಕೆ.ಎನ್. ಸಾಳುಂಕೆ ಅವರ ‘ಭಾಗ್ಯ ಬಂತು ಬುದ್ಧಿ ಹೋಯ್ತು’ ನಾಟಕಕ್ಕೆ ಏಳು ಬಾಗಿಲುಗಳು ಒಮ್ಮೆಲೇ ತೆರೆಯುವಂಥ ದೃಶ್ಯವನ್ನು ತೋರಿಸುತ್ತಿದ್ದರು. ಇಂಥದನ್ನೆಲ್ಲ ಈಗ ಮಾಡಲು ಸಾಧ್ಯವೆ? ಮೊಬೈಲ್ ಫೋನ್, ಟಿವಿ, ಸಿನೆಮಾ, ಗ್ರಾಫಿಕ್ಸ್ ನಡುವೆ ಹಗ್ಗ ಜಗ್ಗಿ ಪರದೆ ಬಿಡುವುದು ಹಳೆಯದು ಎನ್ನುವ ಪ್ರೇಕ್ಷಕರಿದ್ದಾರೆ. ಹೀಗಾಗಿ ಈ ಕಾಲದಲ್ಲಿ ಯಾವುದೂ ಅದ್ಭುತವಲ್ಲ. ಕಂಪೆನಿ ನಾಟಕಗಳಲ್ಲಿ ದ್ವಂದ್ವಾರ್ಥ ಸಂಭಾಷಣೆ, ಐಟಂ ಸಾಂಗ್ ಇದೆ ಎಂದು ಪ್ರೇಕ್ಷಕರು ಹೇಳುತ್ತಾರೆ. ಆದರೆ ಈಗ ರಿಯಾಲಿಟಿ ಷೋಗಳಲ್ಲಿ ದ್ವಂದ್ವಾರ್ಥ ಸಂಭಾಷಣೆ ಇಲ್ಲವೇ?. ಇನ್ನೊಬ್ಬರ ಮೇಲೆ ಬೀಳುವುದು, ಹೊಡೆಯುವುದು ಹಾಸ್ಯ ಅನ್ನುತ್ತಾರೆ’’ ಎಂದು ಎಪ್ಪತ್ತು ವರ್ಷ ವಯಸ್ಸಿನ ಶೇಕ್ ಮಾಸ್ತರರು ಬೇಸರ ವ್ಯಕ್ತಪಡಿಸಿದರು.

ಅವರ ಕಂಪೆನಿಯ ಸಂಚಾಲಕರು ಶ್ರೀಧರ ಹೆಗಡೆ. ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೆರೆಹೊಂಡ ದವರು. ಅವರು ಮಿಲಿಟರಿ ಸೇರಬೇಕೆಂದು ಬೆಳಗಾವಿಗೆ ಹೋದರು. 1974ರಲ್ಲಿ ಮೂರು ದಿನಗಳಿಗೊಮ್ಮೆ ಮಿಲಿಟರಿಗೆ ಆಯ್ಕೆ ನಡೆಯುತ್ತಿತ್ತು. ಏಳನೇ ತರಗತಿ ಪಾಸಾದವರು, ದೈಹಿಕ ಸದೃಢತೆ ಇದ್ದರೆ ಮಿಲಿಟರಿ ಸೇರಬಹುದಿತ್ತು. ಆದರೆ ಶ್ರೀಧರ ಅವರು ಹೋದಾಗ ಒಂದು ತಿಂಗಳಮಟ್ಟಿಗೆ ಮಿಲಿಟರಿ ಕ್ಯಾಂಪ್ ಬಂದ್ ಆಗಿತ್ತು. ಇಷ್ಟರಲ್ಲಿ ಮನೆ ಬಿಟ್ಟು ಬಂದಿದ್ದ ಅವರು, ಗದಗದಲ್ಲಿ ಸೂಡಿ ಶೇಖರಯ್ಯ ಅವರ ಭಾರತಿ ನಾಟ್ಯ ಸಂಘವು ಆಡುತ್ತಿದ್ದ ಕೆ.ಎನ್. ಸಾಳುಂಕೆ ಅವರ ‘ಬದುಕು ಬಂಗಾರವಾಯಿತು’ ನಾಟಕ ನೋಡಿದರು. ಈ ಕಂಪೆನಿಯಲ್ಲಿ ಶಿರಸಿ ಹತ್ತಿರದ ಅಮಚಿಮನೆಯ ಶ್ರೀಪತಿ ಹೆಗಡೆ ಅವರು ಕಲಾವಿದರಾಗಿದ್ದರು. ಶ್ರೀಧರ ಅವರ ಸಂಬಂಧಿಕರೂ ಹೌದು.

ನಾಟಕ ನೋಡಿದ ಮೇಲೆ ಶೇಖರಯ್ಯ ಅವರು ಪಾತ್ರ ಮಾಡೆಂದರು. ಹೂ ಮಾರುವ ಹುಡುಗನ ಪಾತ್ರ ಸಿಕ್ಕಿತು. ಆದರೆ ರೊಟ್ಟಿ ಊಟಕ್ಕೆ ಹೊಂದಿಕೊಳ್ಳದ ಕಾರಣ ಮತ್ತೆ ಮಿಲಿಟರಿ ಸೇರಲು ಬೆಳಗಾವಿಗೆ ಹೋದಾಗ ನಾಲ್ಕು ಕಿಲೊ ತೂಕ ಕಳೆದುಕೊಂಡಿದ್ದರು. ಇದರಿಂದ ಮಿಲಿಟರಿ ಸೇರಲು ಆಗಲಿಲ್ಲ. ಆಗ ಬೆಳಗಾವಿಯಲ್ಲಿ ಶಂಕ್ರಯ್ಯ ಕಡಪಟ್ಟಿ ಅವರ ಕಂಪೆನಿಯಿತ್ತು. ಇಷ್ಟರಲ್ಲಿ ಗದಗದಲ್ಲಿ ಶ್ರೀಧರ ಹೆಗಡೆ ಅವರ ನಾಟಕವನ್ನು ಅವರು ನೋಡಿದ್ದರು. ಅವರು ತಮ್ಮ ಕಂಪೆನಿಯ ಶಾಖೆಗೆ ಕರೆದರು. ಅಲ್ಲೂ ‘ಬದುಕು ಬಂಗಾರವಾಯಿತು’ ನಾಟಕವಿತ್ತು. ಆದರೆ ನಾಯಕನ ಪಾತ್ರಧಾರಿ ಕೈಕೊಟ್ಟ ಕಾರಣ ಶ್ರೀಧರ ಹೆಗಡೆ ಅವರು ನಾಯಕನ ಪಾತ್ರ ನಿರ್ವಹಿಸಿದಾಗ ಕಂಪೆನಿಯೇ ಖಾಯಂ ಆಯಿತು. ಮುಂದೆ ಶಂಕ್ರಯ್ಯ ಕಡಪಟ್ಟಿ ಅವರೊಂದಿಗೆ ಗುರುಪ್ರಸಾದ ನಾಟ್ಯ ಸಂಘ ಶುರು ಮಾಡಿದರು. ಆದರೆ ಯಶ ಕಾಣಲಿಲ್ಲ. ಆಮೇಲೆ ವರವಿ ಫಕೀರಪ್ಪ ಅವರೊಂದಿಗೆ ರಾಘವೇಂದ್ರ ವಿಜಯ ನಾಟ್ಯ ಸಂಘ, ಜತ್ತ ಎಂಬ ಕಂಪೆನಿ ಶುರು ಮಾಡಿದರು. ಏಳು ವರ್ಷಗಳವರೆಗೆ ನಡೆಸಿ ಬಂದ್ ಮಾಡಿದರು. ಬಳಿಕ ಶೇಕ್ ಮಾಸ್ತರರ ಕಂಪೆನಿ ಸೇರಿ ಸಂಚಾಲಕರಾಗಿ ದುಡಿಯುತ್ತಿದ್ದಾರೆ.

‘‘ಏಳುಬೀಳು ಕಂಡು ಇಷ್ಟು ವರ್ಷ ಕಂಪೆನಿ ನಡೆಸಿದೆವು. ಈಗಿನ ವೃತ್ತಿ ರಂಗಭೂಮಿ ಕುರಿತು ಬೇಸರವಿದೆ. ಕಂಪೆನಿ ನಾಟಕಗಳಿಗೆ ಹೊಸ ಕಲಾವಿದರು ಬರುತ್ತಿಲ್ಲ. ಬಂದ ಕಲಾವಿದರಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ. ಕಲಾವಿದರ ಮಕ್ಕಳೇ ಬರುತ್ತಾರೆ ಹೊರತು ಹೊಸಬರು ಬರುತ್ತಿಲ್ಲ. ನಾಟಕ ನಿರ್ದೇಶಿಸುವ ಹೊಸಬರಿಲ್ಲ. ಆಗ ಕಂಪೆನಿಗೊಬ್ಬರು ನಿರ್ದೇಶಕರು ಇರುತ್ತಿದ್ದರು. ಈಗ ನಿರ್ದೇಶನ ಎನ್ನುವುದೇ ಇಲ್ಲ. ನಟರು ತಮಗೆ ತಿಳಿದಂತೆ ನಟಿಸುತ್ತಾರೆ’’ ಎನ್ನುವ ಅಸಮಾಧಾನ ಅವರದು. ಅವರಿಗೂ ಈಗ ಎಪ್ಪತ್ತು ವರ್ಷ ವಯಸ್ಸು.

ಈ ಎಪ್ಪತ್ತರ ಜೋಡಿಯ ಜೋಡೆತ್ತಿನ ನಾಟಕ ಕಂಪೆನಿ ಇನ್ನೂ ಮುಂದುವರಿಯಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News