ಅಮೀರಬಾಯಿ; ವಿಜಾಪುರ ಮಂದಿಯೂ ಮರೆತರೆ?
ಅಮೀರಬಾಯಿ ಹಾಡಿಗೆ ಮನಸೋತ ಮುಂಬೈ ಸಹೃದಯರು ಕನ್ನಡ ಕೋಗಿಲೆ ಎಂದು ಕರೆದರು. ತಮ್ಮ ಕನ್ನಡದ ನೆಲದ ಮೇಲಿನ ಪ್ರೀತಿಗೆ ಅವರು ಕರ್ನಾಟಕಿ ಎಂದು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡರು. ‘‘ಆಕಿ ಹಾಡಿದ ಹಾಡಿನೊಳಗ ಸ್ಪಷ್ಟ ಶಬ್ದೋಚ್ಚಾರ, ಉಚ್ಚಾರದೊಳಗ ಸಾಧಿಸಿದ ಹಿಡಿತ, ಧ್ವನಿಯೊಳಗಿದ್ದ ಏರಿಳಿತದಿಂದ ಹಾಡಿನೊಳಗ ಭಾವ ಅರಳಿಸೋ ಶಕ್ತಿ ಇತ್ತು’’ ಎಂದು ಏಣಗಿ ಬಾಳಪ್ಪ ಅವರು ಸ್ಮರಿಸುತ್ತಿದ್ದರು.
ಮೊನ್ನೆ ವಿಜಾಪುರದಲ್ಲಿ ಗೆಳೆಯರೊಂದಿಗೆ ಮಾತನಾಡುವಾಗ ‘‘ಅಮೀರ ಟಾಕೀಸ್ ಮಾರಾಟ ಮಾಡ್ಯಾರ. ಅದನ್ನು ಸಚಿವರೊಬ್ಬರು ಖರೀದಿಸಿದ್ದು, ಅಲ್ಲಿ ಮಾಲ್ ಬರಲಿದೆ’’ ಎಂದಾಗ ಕುತೂಹಲದಿಂದ ಸಿದ್ಧೇಶ್ವರ ಗುಡಿಯ ಹಿಂದೆ ಇರುವ ಅಮೀರ ಟಾಕೀಸ್ ಬಳಿ ಹೋದೆ. ಆಗ ಸಿಕ್ಕವರು ಆ ಟಾಕೀಸ್ ಮಾಲಕರಾದ ಸಮದ್ ಬೀಳಗಿ. ಅವರು ಅಮೀರಬಾಯಿ ಅವರ ಸೋದರ ದಸ್ತ್‌ಗೀರ್ ಸಾಬ್ ಅವರ ಪುತ್ರ ತಾಜುದ್ದೀನ್ ಅವರ ಪುತ್ರ. ‘‘ಮಾರ್ತೀವಿ ಅಂತ ರೂಮರ್ ಆಗಿ ಭಾಳ ವರ್ಷ ಆತ್ರಿ. ಅಮೀರಬಾಯಿ ಆಸ್ತಿಯಿದು. ಇದನ್ನ ಮಾರೋ ವಿಚಾರ ಇಲ್ರಿ. ಆದ್ರ ಸಿನೆಮಾ ಟಾಕೀಸ್ ನಡೆಸೋದು ಕಷ್ಟ ಐತಿ. ಮುಂದ ಇಲ್ಲೇ ಕಾಂಪ್ಲೆಕ್ಸ್ ಕಟ್ಟಿಸೋ ಯೋಚನೆ ಐತ್ರಿ’’ ಎಂದು ಸಮದ್ ಸಮಜಾಯಿಷಿ ನೀಡಿದರು.
ಅವರೊಂದಿಗೆ ಮಾತನಾಡುವಾಗ ಸಂಜೆ ಆರಾಗಿತ್ತು. ಪ್ರೇಕ್ಷಕರು ಬರದ ಕಾರಣ ಮಧ್ಯಾಹ್ನದ ಪ್ರದರ್ಶನ ನಡೆದಿರಲಿಲ್ಲ. ಹೀಗೆಯೇ ಸಂಜೆಯ ಪ್ರದರ್ಶನ ಕೂಡಾ ರದ್ದಾಯಿತು. ಇದಕ್ಕೆ ಕಾರಣವೇನೆಂದು ಅವರನ್ನು ಕೇಳಿದೆ ‘‘ಸಿನೆಮಾ ಮೊದಲು ಕ್ರಿಯೇಟಿವ್ ಇಂಡಸ್ಟ್ರಿಯಾಗಿತ್ತು. ಈಗ ಕಾರ್ಪೊರೇಟ್ ಇಂಡಸ್ಟ್ರಿಯಾಗ್ಯದ. ಹಿಂಗಾಗಿ ನಿಧಾನವಾಗಿ ಸಾಯ್ತಾ ಹೋಗ್ತದ. ಆಗ ಕಥೆ ಇರ್ತಿತ್ತು. ಕಥೆಯೊಳಗ ಪಾತ್ರಗಳನ್ನು ಹುಡುಕಾಡುತ್ತಿದ್ದೆವು. ಈಗ ಕಥೆಯಿಲ್ಲ, ಪಾತ್ರನೂ ಇಲ್ರಿ. ‘ಕಸ್ತೂರಿ ನಿವಾಸ’ ಸಿನೆಮಾದೊಳಗ ಡಾ.ರಾಜಕುಮಾರ್ ಅವ್ರ ಆ ಪಾತ್ರವನ್ನು ನಿರ್ವಹಿಸಿದ ರೀತಿಗೆ ಸಿನೆಮಾ ಯಶಸ್ವಿಯಾಯಿತು. ಈಗ ದೊಡ್ಡ ಹೀರೋಗಳ ಇಮೇಜ್ ತಕ್ಕ ಹಾಗೆ ಸಿನೆಮಾ ತೆಗೆದ್ರ ಸೋಲ್ತಾವು. ಕೊರೋನ ನಂತ್ರ ಕನ್ನಡ ಸಿನೆಮಾ ಇಂಡಸ್ಟ್ರಿ ಮೇಲೇಳ್ತಾನ ಇಲ್ರಿ’’ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಅಮೀರ ಟಾಕೀಸಿಗೂ ಕನ್ನಡ ರಂಗಭೂಮಿಗೂ ನಂಟಿದೆ. ಅಮೀರಬಾಯಿ ಕರ್ನಾಟಕಿ ಹಾಗೂ ಗೋಹರಬಾಯಿ ಕರ್ನಾಟಕಿ ಸೋದರಿಯರು ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ತುಮ್ಮರಮಟ್ಟಿಯವರು. ಆಮೇಲೆ ಬೀಳಗಿಯಲ್ಲಿ ನೆಲೆಸಿದರು. 1906ರಲ್ಲಿ ಬೀಳಗಿಯಲ್ಲಿ ಜನಿಸಿದ ಅಮೀರಬಾಯಿ ಅವರ ತಂದೆ ಹುಸೇನ್ ಸಾಬ್, ತಾಯಿ ಆಮಿನಮ್ಮ. ಹಾಡುವುದು ಅವರ ಮನೆತನದಲ್ಲೇ ಇತ್ತು. ಹುಸೇನ್ ಸಾಬ್ ಅವರು ಅಮೀರಬಾಯಿ ಅವರಿಗೆ ಸಂಗೀತ ಹೇಳಿ ಕೊಟ್ಟ ಪರಿಣಾಮ ನಾಟಕ ಕಂಪೆನಿಗಳು ಅಭಿನಯಿಸಲು ಆಹ್ವಾನಿಸಿದವು. ಬೀಳಗಿ, ಬಾಗಲಕೋಟೆ, ಗುಳೇದಗುಡ್ಡದಲ್ಲಿ ಮೊಕ್ಕಾಂ ಮಾಡುತ್ತಿದ್ದ ನಾಟಕ ಕಂಪೆನಿಗಳಲ್ಲಿ ರಂಗಗೀತೆ, ಜಾನಪದ ಹಾಡು ಜೊತೆಗೆ ಖವ್ವಾಲಿ ಹಾಡಿದಾಗ ಪ್ರೇಕ್ಷಕರು ತಲೆದೂಗುತ್ತಿದ್ದರು. ನಂತರ ಹುಸೇನ್ ಸಾಬ್ ಅವರು ಸ್ವಂತ ನಾಟಕ ಕಂಪೆನಿ ಕಟ್ಟಿದರು. ಸಂಗೀತ ಪ್ರಧಾನ ನಾಟಕಗಳನ್ನೇ ಆಡಿದರು. ಬೇವೂರ ಬಾದಷಾ ಗವಾಯಿಗಳು, ಲಾಡಸಾಹೇಬ ಅಮೀನಗಡ ಅವರು ಅವರ ಕಂಪೆನಿಯಲ್ಲಿದ್ದರು. ಮಹಾನಂದಾ, ಸಂತ ಸಕ್ಕು ನಾಟಕದ ಶೃಂಗಾರದ ಪಾತ್ರಗಳಿಗೆ ಅಮೀರಬಾಯಿ ಜೀವ ತುಂಬಿದರು. ಅವರ ಸೋದರಿ ಗೋಹರಬಾಯಿ ಅವರು ವೈಯಾರದ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದರು. ಆದರೆ ಹುಸೇನ್ ಸಾಬ್ ಅವರ ಕಂಪೆನಿ ಬಹಳ ದಿನಗಳವರೆಗೆ ನಡೆಯಲಿಲ್ಲ. 1928ರಲ್ಲಿ ಯರಾಸಿ ಭರಮಪ್ಪ ಅವರ ಶ್ರೀ ವಾಣಿ ಕಂಪೆನಿಗಾಗಿ ಅಮೀರಬಾಯಿ ಹಾಗೂ ಗೋಹರಬಾಯಿ ಅವರಿಗೆ ಆಹ್ವಾನ ಸಿಕ್ಕಿತು. ಅಲ್ಲಿದ್ದ ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ಮನ್ಸೂರ, ಹಂದಿಗನೂರು ಸಿದ್ರಾಮಪ್ಪ ಮೊದಲಾದ ಪ್ರಸಿದ್ಧ ಕಲಾವಿದರ ಜೊತೆಗೆ ಈ ಸೋದರಿಯರು ಬಣ್ಣ ಹಚ್ಚಿದರು. ಈ ಕಂಪೆನಿ ಆಡುತ್ತಿದ್ದ ‘ಕಿತ್ತೂರ ರುದ್ರಮ್ಮ’ ನಾಟಕದಲ್ಲಿ ರುದ್ರಮ್ಮಳಾಗಿ ಅಮೀರಬಾಯಿ ಅವರು ಬಾಗೇಶ್ರೀ ರಾಗದಲ್ಲಿ ಹಾಡುತ್ತಿದ್ದ ‘ಪ್ರಿಯಕರ ಮಮಬಾಲಾ’ ಹಾಗೂ ‘ಸುರವರ ಕೃತ್ಯಸಮಾನ’ ಹಾಡುಗಳು ಪ್ರೇಕ್ಷಕರನ್ನು ಹಿಡಿದಿಡುತ್ತಿದ್ದವು.
ಆಮೇಲೆ ಎಚ್‌ಎಂವಿ ಕಂಪೆನಿಯವರು ಅಮೀರಬಾಯಿ ಅವರ ಹಾಡಿನ ಧ್ವನಿಮುದ್ರಣಕ್ಕಾಗಿ ಮುಂಬೈಗೆ ಆಹ್ವಾನಿಸಿದರು. ಆಗ ಅವರಿಗೆ ಹದಿನಾರು ವರ್ಷ ವಯಸ್ಸು. ಎಚ್‌ಎಂವಿ ಕಂಪೆನಿಗೆ ಅವರು ಹಾಡಿದ್ದು ಖವ್ವಾಲಿ. ಇದರಿಂದ ಅವರ ಭವಿಷ್ಯವೇ ಬದಲಾಯಿತು. ಹಾಡಿದ್ದು ಯಾರೆಂದು ಕೇಳುವ ಹಾಗಾಯಿತು. 1934ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಅವರು ನಟಿಸಿದ ಮೊದಲ ಹಿಂದಿ ಸಿನೆಮಾ ‘ವಿಷ್ಣುಭಕ್ತಿ’. ಸಹನಟಿಯಾಗಿ ಐದಾರು ಸಿನೆಮಾಗಳಲ್ಲಿ ನಟಿಸಿದ ನಂತರ 1937ರಲ್ಲಿ ಅನಿಲ್ ವಿಶ್ವಾಸ್ ಮತ್ತು ಮಾಧವಲಾಲ್ ಡಿ. ಮಾಸ್ಟರ್ ಅವರ ‘ದುಖಿಯಾಲಿ’ ಸಿನೆಮಾದಲ್ಲಿ ನಾಯಕಿಯಾದರು. ನಂತರ ಜಂಟಲ್‌ಮನ್ ಡಾಕು, ಇನ್ಸಾಫ್, ಬಾಗಿ, ಏಕ್ ಹಿ ಭೂಲ್, ಹಮಾರಾ ದೇಶ್, ಕಿಸ್ಮತ್... ಹೀಗೆ ಅವರು ಅಭಿನಯಿಸಿದ ಪ್ರಮುಖ ಸಿನೆಮಾಗಳು. ‘‘ಕಿಸ್ಮತ್ ಸಿನೆಮಾ ಮೂರೂವರೆ ವರ್ಷಗಳವರೆಗೆ ನಡೆಯಿತು. ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ಗಳಿಸಿತ್ತು. ಈ ಸಿನೆಮಾದ ಹಾಡುಗಳನ್ನೆಲ್ಲ ಅಮೀರಬಾಯಿಯೇ ಹಾಡಿದ್ದರು’’ ಎನ್ನುತ್ತಾರೆ ಸಮದ್.
ಅಮೀರಬಾಯಿ ಹಾಡಿಗೆ ಮನಸೋತ ಮುಂಬೈ ಸಹೃದಯರು ಕನ್ನಡ ಕೋಗಿಲೆ ಎಂದು ಕರೆದರು. ತಮ್ಮ ಕನ್ನಡದ ನೆಲದ ಮೇಲಿನ ಪ್ರೀತಿಗೆ ಅವರು ಕರ್ನಾಟಕಿ ಎಂದು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡರು. ‘‘ಆಕಿ ಹಾಡಿದ ಹಾಡಿನೊಳಗ ಸ್ಪಷ್ಟ ಶಬ್ದೋಚ್ಚಾರ, ಉಚ್ಚಾರದೊಳಗ ಸಾಧಿಸಿದ ಹಿಡಿತ, ಧ್ವನಿಯೊಳಗಿದ್ದ ಏರಿಳಿತದಿಂದ ಹಾಡಿನೊಳಗ ಭಾವ ಅರಳಿಸೋ ಶಕ್ತಿ ಇತ್ತು’’ ಎಂದು ಏಣಗಿ ಬಾಳಪ್ಪ ಅವರು ಸ್ಮರಿಸುತ್ತಿದ್ದರು.
‘ವೈಷ್ಣವ ಜನತೋ’ ಗುಜರಾತಿ ನಾರ್ಸಿ ಭಜನೆಯನ್ನು ಮೊದಲು ಹಾಡಿದ್ದು ಅಮೀರಬಾಯಿ. ಈಗಲೂ ದಿಲ್ಲಿಯ ಗಾಂಧಿಭವನದೊಳಗ ಅವರು ಹಾಡಿದ ಪ್ರಾರ್ಥನಾಗೀತೆಯನ್ನೇ ಹಾಕುತ್ತಾರೆ. ಆಮ್ಯಾಲ ಲತಾ ಮಂಗೇಶ್ಕರ್ ಅವರು ಈ ಹಾಡನ್ನು ಹಾಡಿ ಪ್ರಸಿದ್ಧಿಗೊಳಿಸಿದ್ರು’’ ಎಂದು ಮೆಲುಕು ಹಾಕುತ್ತಾರೆ ಸಮದ್ ಬೀಳಗಿ. 1965ರಲ್ಲಿ ಅಮೀರಬಾಯಿ ನಿಧನರಾದಾಗ ಅವರ ಅಂತ್ಯಕ್ರಿಯೆಯನ್ನು ವಿಜಾಪುರದ ಇಬ್ರಾಹೀಂ ರೋಜಾ ಖಬರಸ್ಥಾನದೊಳಗೆ ನೆರವೇರಿಸಲಾಯಿತು.
ಇವರ ತಂಗಿ ಗೋಹರಬಾಯಿ ಅವರು ಏರಾಸಿ ಭರಮಪ್ಪ ಅವರ ಕಂಪೆನಿಯಲ್ಲಿಯೇ ಇದ್ದರು. ಅಮೀರಬಾಯಿ ಅವರು ಮುಂಬೈಗೆ ಹೋದ ನಂತರ ‘ಕಿತ್ತೂರು ರುದ್ರಮ್ಮ’ ನಾಟಕದಲ್ಲಿ ರುದ್ರಮ್ಮ ಪಾತ್ರವನ್ನು ಗೋಹರಬಾಯಿ ನಿರ್ವಹಿಸಿದರು. ಬಳಿಕ ಅವರೂ ಮುಂಬೈಗೆ ಹೋಗಿ ಕೆಲವು ಹಿಂದಿ ಸಿನೆಮಾಗಳಲ್ಲಿ ನಟಿಸಿದ ನಂತರ ಮರಾಠಿ ರಂಗಭೂಮಿಗೆ ಕಾಲಿಟ್ಟರು. ಇದಕ್ಕೆ ಕಾರಣ ವರನಟ ಬಾಲಗಂಧರ್ವರು. ಅವರ ಕಂಪೆನಿ ಸೇರಿದ ನಂತರ ಗಾಯಕಿನಟಿಯಾದರು. ಗಂಧರ್ವರು ನಟಿಸುತ್ತಿದ್ದ ರಾಣಿಪಾತ್ರಗಳನ್ನು ಗೋಹರಬಾಯಿ ನಿರ್ವಹಿಸಿದರು. ಇದಕ್ಕಾಗಿ ಅವರು ಮರಾಠಿಯನ್ನೂ ಕಲಿತರು. ಇದರೊಂದಿಗೆ ಬಾಲಗಂಧರ್ವರು ತಮ್ಮ ಕಂಪೆನಿ ನಡೆಸುವ ಸಲುವಾಗಿ ಮಾಡಿದ ಸಾಲವನ್ನು ತೀರಿಸಲು ಬಹಳ ಶ್ರಮಿಸಿದರು. ಇದರಿಂದ ಅವರು ಬಾಲಗಂಧರ್ವರಿಗೆ ಹತ್ತಿರವಾದ ಪರಿಣಾಮ ಅವರ ಕೈಹಿಡಿದರು. ಆಗಾಗ ಬಾಲಗಂಧರ್ವರಿಗೆ ಸನ್ಮಾನವಾದ ನಂತರ ಹಾಡಬೇಕೆಂದು ಪ್ರೇಕ್ಷಕರಿಂದ ಒತ್ತಾಯ ಬರುತ್ತಿತ್ತು. ಆದರೆ ಕೆಮ್ಮಿನಿಂದ ಅವರಿಗೆ ಹಾಡಲಾಗದಾಗ ಗೋಹರಬಾಯಿ ಹಾಡುತ್ತಿದ್ದರು. ಇದನ್ನು ಕಂಡ ಮರಾಠಿಯ ಪ್ರಸಿದ್ಧ ಸಾಹಿತಿ ಶಿರವಾಡಕರ್ ಅವರು ‘‘ಗಂಧರ್ವರೇ ಗೋಹರಬಾಯಿ ರೂಪ ತಾಳಿ ಬಂದ ಹಾಗಿದೆ’’ ಎಂದು ಹೊಗಳುತ್ತಿದ್ದರು. ನಂತರ ಬಾಲಗಂಧರ್ವರು ತಮ್ಮ ಸ್ವಯಂವರ, ದ್ರೌಪದಿ, ಕಾನ್ಹೋಪಾತ್ರ ನಾಟಕಗಳ ಹಕ್ಕುಪತ್ರವನ್ನು ಗೋಹರಬಾಯಿ ಹೆಸರಿಗೆ ಬರೆದರು. ತಮ್ಮ ಕಂಪೆನಿ ಒಡೆತನವನ್ನೂ ಅವರಿಗೆ ನೀಡಿದರು. ಹೀಗೆ ಕನ್ನಡ ಹಾಗೂ ಮರಾಠಿ ರಂಗಭೂಮಿಗೆ ದುಡಿದರು ಗೋಹರಬಾಯಿ.
ಐವರು ಸೋದರಿಯರಿಗೆ ಒಬ್ಬನೇ ಸೋದರ ದಸ್ತ್‌ಗೀರ್ ಸಾಬ್. ಅವರು ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಬಿಎಸ್ಸಿ ಓದಿದ ಬಳಿಕ ವಿಜಾಪುರಕ್ಕೆ ಮರಳಿ ಬಂದು 1955ರಲ್ಲಿ ಸಿನೆಮಾ ಟಾಕೀಸ್ ಕಟ್ಟಿಸಿದರು. ಇದಕ್ಕೆ ಅಮೀರ ಟಾಕೀಸ್ ಎಂದು ಹೆಸರಿಟ್ಟರು. ಮೊದಲ ಹತ್ತು ವರ್ಷಗಳವರೆಗೆ ಬೇರೆಯವರು ಬಾಡಿಗೆ ಪಡೆದು ನಡೆಸಿದರು. 1965ರಿಂದ ದಸ್ತ್‌ಗೀರ್ ಸಾಬ್ ಮುನ್ನಡೆಸಿದರು. ಅವರೊಂದಿಗೆ ಅವರ ಮಕ್ಕಳಾದ ಹಾಜಿ ಹುಸೇನ್, ತಾಜುದ್ದೀನ್ ಬೀಳಗಿ ಹಾಗೂ ಶೌಕತ್ ಬೀಳಗಿ ಅವರು ನೋಡಿಕೊಂಡರು. ಈಗ ಅವರ ಮಕ್ಕಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇಂಥ ಅಪೂರ್ವ ಸೋದರಿಯರ ಹೆಸರು ವಿಜಾಪುರದ ಒಂದು ರಸ್ತೆಗಾಗಲಿ, ವೃತ್ತಕ್ಕಾಗಲಿ ಇಲ್ಲವೆನ್ನುವುದು ವಿಷಾದದ ಸಂಗತಿ. ಡಾ.ರಹಮತ್ ತರೀಕೆರೆ ಅವರ ‘ಅಮೀರಬಾಯಿ ಕರ್ನಾಟಕಿ’ ಕೃತಿ ಬಿಡುಗಡೆ ಸಮಾರಂಭ ವಿಜಾಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದಾಗ ಸಮದ್ ಅವರು ಅಮೀರಬಾಯಿ ಅವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು. ಆ ಭಾವಚಿತ್ರವು ಈಗ ಕಂದಗಲ್ ಹನುಮಂತರಾಯ ರಂಗಮಂದಿರ ಪ್ರವೇಶದ್ವಾರದಲ್ಲಿದೆ. ಕುತೂಹಲಕಾರಿ ಸಂಗತಿ ಎಂದರೆ; ದಸ್ತ್‌ಗೀರ್ ಸಾಬ್ ಅವರು ವಿಜಾಪುರದ ಮೇಯರ್ ಆಗಿದ್ದರೂ ತಮ್ಮ ಸೋದರಿಯರ ಹೆಸರು ಉಳಿಸುವ ಪ್ರಯತ್ನಕ್ಕೆ ಮುಂದಾಗಲಿಲ್ಲ.
ಬ್ಯಾಂಕ್ ಉದ್ಯೋಗಿಯಾಗಿದ್ದ ಸಮದ್ ಅವರು 2016ರಿಂದ ವಿಜಾಪುರದಲ್ಲೇ ನೆಲೆಸಿದ್ದಾರೆ. ಅವರ ತಂದೆ ತಾಜುದ್ದೀನ್ ಅವರಿಗೆ ವಯಸ್ಸಾದ ಕಾರಣ ಟಾಕೀಸನ್ನು ನೋಡಿಕೊಳ್ಳುತ್ತಿದ್ದಾರೆ. ‘ಅವರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಏರ್ಪಡಿಸುತ್ತೇವೆ’ ಎನ್ನುತ್ತಾರೆ ಅವರು.
‘‘ಕರ್ನಾಟಕಿ ಎಂದರೆ ಕರ್ನಾಟಕ್ಕೆ ಹೆಸರು ಮಾಡಿದ ಅಮೀರಬಾಯಿ ಅವರ ಹೆಸರು ಉಳಿಸುವ ಕೆಲಸವಾಗಬೇಕಿದೆ. ಅವರ ಸಮಾಧಿಯ ಮೇಲೆ ಹುಲ್ಲು ಬೆಳೆದಿದೆ. ಅದನ್ನು ಸ್ವಚ್ಛ ಗೊಳಿಸಬೇಕು. ಪ್ರವಾಸಿಗರು ಅಲ್ಲಿಗೆ ಭೇಟಿ ಕೊಡುವಂತಾಗಬೇಕು. ಅವರ ಹೆಸರಿನ ನಾಟಕೋತ್ಸವ ನಡೆಯಬೇಕು. ಜೊತೆಗೆ ಅವರ ಹೆಸರಿನಲ್ಲಿ ರಂಗಕರ್ಮಿಗಳಿಗೆ ಅದರಲ್ಲೂ ಕಲಾವಿದೆಯರಿಗೆ ಪ್ರಶಸ್ತಿ ಕೊಡುವಂತಾಗಬೇಕು’’ ಎನ್ನುವ ಒತ್ತಾಯ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲ ಕಂಪೆನಿಯ ಮಾಲಕರಾದ ಶೇಕ್ ಮಾಸ್ತರ ಅವರದು.