ಬಣ್ಣದ ಬದುಕಿಗೆ ವಿದಾಯ ಹೇಳಿದ ಬಾಬಣ್ಣ
ನಿಧನರಾಗುವ ಮೂರು ದಿನಗಳ ಮೊದಲು ಪತ್ರಕರ್ತರಿಗೆ ಫೋನ್ ಮಾಡಿ ‘‘ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆಯಾಗಿ ವರ್ಷದ ಮೇಲಾಯಿತು. ದಯವಿಟ್ಟು ಪ್ರಶಸ್ತಿ ಸಿಕ್ರ ಆರ್ಥಿಕವಾಗಿ ಅನುಕೂಲ ಆಗ್ತದ’’ ಎಂದು ಹೇಳಿಕೊಂಡಿದ್ದರು. ಪ್ರಬುದ್ಧ ಕಲಾವಿದರಾಗಿದ್ದ ಅವರು, ಅಂತ್ಯಕಾಲದಲ್ಲಿ ಘೋಷಣೆಯಾಗಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆಯಲಾಗಲಿಲ್ಲ.
ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಹೀಗೆ ನಾಲ್ಕೂ ಆಯಾಮಗಳ ನಾಟಕಗಳಲ್ಲಿ ಬಣ್ಣ ಹಚ್ಚಿದವರು ಅಪರೂಪ. ಇಂಥ ಅಪರೂಪರಲ್ಲಿ ಬಾಬಣ್ಣ ಕಲ್ಮನಿ ಕುಕನೂರ ಒಬ್ಬರು. ಅವರದ್ದೇ ಇನ್ನೊಂದು ವಿಶೇಷ ಎಂದರೆ ಶಿಶುನಾಳ ಶರೀಫ ಪಾತ್ರವನ್ನು ಒಂದಲ್ಲ, ಮೂರು ನಾಟಕಗಳಿಗೆ ಬಣ್ಣ ಹಚ್ಚುತ್ತಿದ್ದರು.
ಮಲ್ಲಿಕಾರ್ಜುನ ಸಿಂದಗಿ ಅವರ ‘ಶಿಶುನಾಳ ಶರೀಫ’ ನಾಟಕದಲ್ಲಿ ಬಾಬಣ್ಣ ಅವರು ಶರೀಫರಾಗಿ, ಶಿವಶಂಕರ ಬ್ಯಾಳಿ ಅವರ ‘ಅಜಾತ ನವಲಗುಂದ ನಾಗಲಿಂಗ ಲೀಲೆ’ ನಾಟಕದಲ್ಲಿ ಶರೀಫರಾಗಿ ಹಾಗೂ 20 ಸಾವಿರಕ್ಕೂ ಅಧಿಕ ಪ್ರಯೋಗಗಳನ್ನು ಕಂಡ ಶಿವಶಂಕರ ಬ್ಯಾಳಿ ಅವರ ‘ಹುಬ್ಬಳ್ಳಿ ಸಿದ್ಧಾರೂಢ ಮಹಾತ್ಮೆ’ ನಾಟಕದಲ್ಲಿ ಶರೀಫ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು ಬಾಬಣ್ಣ. ಅವರಿಗೆ ಸಾಥಿಯಾಗಿ ಅಂದರೆ ‘ಶಿಶುನಾಳ ಶರೀಫ’ ನಾಟಕದಲ್ಲಿ ಗುರು ಗೋವಿಂದ ಭಟ್ಟರಾಗಿ ಹಿರಿಯ ಕಲಾವಿದರಾದ ಧಾರವಾಡದ ಎಂ.ಎಸ್. ಕೊಟ್ರೇಶ ಬಣ್ಣ ಹಚ್ಚುತ್ತಾರೆ. ಹೀಗೆಯೇ ‘ಅಜಾತ ನವಲಗುಂದ ನಾಗಲಿಂಗ ಲೀಲೆ’ ನಾಟಕದಲ್ಲಿ ನಾಗಲಿಂಗನಾಗಿ ಹಾಗೂ ‘ಹುಬ್ಬಳ್ಳಿ ಸಿದ್ಧಾರೂಢ ಮಹಾತ್ಮೆ’ ನಾಟಕದಲ್ಲಿ ಸಿದ್ಧಾರೂಢರಾಗಿ ಕೊಟ್ರೇಶ ಅವರು ಪಾತ್ರಧಾರಿಗಳು. ಗದುಗಿನ ಪುಟ್ಟರಾಜ ಗವಾಯಿಗಳ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘವು ಆಯೋಜಿಸುವ ‘ಅಜಾತ ನವಲಗುಂದ ನಾಗಲಿಂಗ ಲೀಲೆ’ ನಾಟಕದಲ್ಲಿ ಎಂ.ಎಸ್.ಕೊಟ್ರೇಶ ಹಾಗೂ ಬಾಬಣ್ಣ ಅವರು ಖಾಯಂ ಬಣ್ಣ ಹಚ್ಚುತ್ತಿದ್ದರು. ಮೂರು ತಿಂಗಳ ಹಿಂದೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಮುಕ್ಕಾಂ ಮಾಡಿದ್ದ ಪಂಚಾಕ್ಷರ ಗವಾಯಿಗಳ ಕಂಪೆನಿಯ ‘ಅಜಾತ ನವಲಗುಂದ ನಾಗಲಿಂಗ ಲೀಲೆ’ ನಾಟಕಕ್ಕೆ ಶರೀಫರ ಪಾತ್ರಕ್ಕೆ ಬಾಬಣ್ಣ ಬಣ್ಣ ಹಚ್ಚಿದ್ದೇ ಕೊನೆಯಾಯಿತು. ಈ ನಾಟಕವು ಬೆಳ್ಳಟ್ಟಿಯಲ್ಲಿ 24 ಪ್ರಯೋಗಗಳನ್ನು ಕಂಡಿದ್ದು, ಎಲ್ಲವೂ ಹೌಸ್‌ಫುಲ್. ಟಿಕೆಟ್ ಸಿಗದ ಪ್ರೇಕ್ಷಕರು ವಾಪಸು ಹೋಗುವುದು ಸಾಮಾನ್ಯವಾಗಿತ್ತು. ಆಮೇಲೆ ಅಂದರೆ ತಿಂಗಳ ಹಿಂದೆ ಬಾಬಣ್ಣ ಅವರು ಕುಕನೂರಿನ ತಮ್ಮ ಮನೆಯಲ್ಲಿ ಶೌಚಾಲಯಕ್ಕೆ ಹೋಗಿ ಮೇಲೇಳುವಾಗ ಅವರ ಎಡಗೈನ ಮೂಳೆ ಮುರಿಯಿತು. ಬಳಿಕ ಅವರು ಸುಧಾರಿಸಿಕೊಳ್ಳಲಿಲ್ಲ. ಕಳೆದ ರವಿವಾರ (ಡಿಸೆಂಬರ್ 10) ನಿಧನರಾದರು. ಅವರಿಗೆ ತೊಂಬತ್ತು ವರ್ಷ ವಯಸ್ಸಾಗಿತ್ತು (ಜನನ: 2.11.1934).
ಅವರ ಮೂಲ ಹೆಸರು ಜಮಾಲುದ್ದೀನ್. ಆದರೆ ಆ ಹೆಸರಿನಿಂದ ಯಾರೂ ಕರೆಯುತ್ತಿರಲಿಲ್ಲ. ಕಲ್ಮನಿ ಎಂಬುದು ಅವರ ತಾಯಿ ರಹಿಮಾನವ್ವ ಅವರಿಂದ ಬಳುವಳಿಯ ಅಡ್ಡಹೆಸರು. ಕೊಪ್ಪಳ ಜಿಲ್ಲೆಯ ಕುಕನೂರು ಅವರ ಊರು. ಹೀಗಾಗಿ ಬಾಬಣ್ಣ ಕಲ್ಮನಿ ಕುಕನೂರ. ಕುಕನೂರ ಬಾಬಣ್ಣ ಎಂದೇ ಜನಪ್ರಿಯರಾದರು. ಅವರದು ಕಲಾವಿದರ ಕುಟುಂಬ. ಅವರ ತಾಯಿ ರಹಿಮಾನವ್ವ ಕಲ್ಮನಿ ಅಭಿಜಾತ ರಂಗ ಕಲಾವಿದೆ. ಅವರ ತಂದೆ ನಂದರಾಜ ಮೇವುಂಡಿ ಒಳ್ಳೆಯ ನಟರು. ತಳಕಲ್ಲ ವೆಂಕರೆಡ್ಡಿ ಅವರ ವಿಶ್ವರಂಜನಿ ನಾಟ್ಯ ಸಂಘದಲ್ಲಿದ್ದಾಗ ಇಬ್ಬರೂ ಮದುವೆಯಾಗುತ್ತಾರೆ. ಇದರಿಂದ ಅವರ ಕುಟುಂಬ ಹಿಂದೂ ಸಂಸ್ಕೃತಿಯಿಂದ ತುಂಬಿದೆ. ಈಗಲೂ ಬಾಬಣ್ಣ ಅವರ ಮನೆ ಜಗಲಿಯಲ್ಲಿ ಹಾನಗಲ್ಲ ಕುಮಾರಸ್ವಾಮಿಗಳಿಗೆ, ಪುಟ್ಟರಾಜ ಗವಾಯಿಗಳಿಗೆ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಅವರ ಹೆಸರುಗಳೂ ಬದಲಾದವು. ಬಾಬಣ್ಣ ತಂಗಿ ಜನ್ನತ್‌ಬಿ ಲಲಿತೆಯಾದರು. ಅವರ ತಮ್ಮ ಉಮರ್ ಉಮೇಶನಾದರು. ಅವರ ಇನ್ನೊಬ್ಬ ತಂಗಿ ಮಹಮ್ಮದ್‌ಬಿ ಮಂಜುಳಾ ಕುಕನೂರ ಎಂದೇ ರಂಗಭೂಮಿಯಲ್ಲಿ ಹೆಸರಾದರು. ಈ ಮಂಜುಳಾ ಅವರು ಹುಟ್ಟಿದ್ದು ರಂಗದ ಮೇಲೆ. ಹೇಗೆಂದರೆ ರಾಯಚೂರು ಜಿಲ್ಲೆಯ ಮುದಗಲ್ಲದಲ್ಲಿ ರಹಿಮಾನವ್ವ ಅವರ ನಾಟಕ ಕಂಪೆನಿ ಲಲಿತಕಲಾ ನಾಟ್ಯ ಸಂಘದ ಮುಕ್ಕಾಮಿತ್ತು. ಅಲ್ಲಿ ಮೋಹರಂ ಪ್ರಸಿದ್ಧ. ಈ ಪ್ರಯುಕ್ತ ನಾಟಕ ಕಂಪೆನಿ ಬೀಡುಬಿಟ್ಟಿತ್ತು. ‘ಹರಿಶ್ಚಂದ್ರ’ ನಾಟಕವಾಡುತ್ತಿದ್ದರು. ಆಗ ಪ್ರಸಿದ್ಧರಾಗಿದ್ದ ಎಲಿವಾಳ ಸಿದ್ಧಯ್ಯ, ದುರ್ಗಾದಾಸ ನಟಿಸುತ್ತಿದ್ದರು. ರಹಿಮಾನವ್ವ ಅವರು ತಾರಾಮತಿಯ ಪಾತ್ರ ನಿರ್ವಹಿಸುತ್ತಿದ್ದರು. ಬಾಬಣ್ಣ ಅವರು ನಾರದನ ಪಾತ್ರವಾಗಿದ್ದರು. ಇದ್ದಕ್ಕಿದ್ದಂತೆ ರಹಿಮಾನವ್ವ ‘ತಡಿಯೊ, ಬಣ್ಣ ಅಳಿಸಬ್ಯಾಡ’ ಎಂದರು. ‘ಯಾಕೆವ್ವಾ?’ ಎಂದು ಬಾಬಣ್ಣ ಕೇಳಿದಾಗ ‘ಸಂಕಟ ಆಗ್ತದ’ ಎಂದರು ತುಂಬು ಗರ್ಭಿಣಿಯಾಗಿದ್ದ ರಹಿಮಾನವ್ವ. ಹಾಗೆ ಸೈಡ್‌ವಿಂಗಿಗೆ ಹೋದರು. ಆಗ ಬಾಬಣ್ಣ ಅವರು ನಾರದನ ವೇಷದ ಮೇಲೆಯೇ ಸೀರೆ ಉಟ್ಟುಕೊಂಡು, ಕುಂಕುಮ ಹಚ್ಚಿಕೊಂಡು ತಾರಾಮತಿಯಾಗಿ ಪ್ರೇಕ್ಷಕರ ಎದುರು ನಿಂತರು. ಸ್ವಲ್ಪಹೊತ್ತಿನಲ್ಲೇ ಸೈಡ್‌ವಿಂಗಿನಿಂದ ಮಗು ಅಳುವ ಧ್ವನಿ ಕೇಳಿದಾಗ ಪ್ರೇಕ್ಷಕರೆಲ್ಲ ‘ತಾರಾಮತಿ ಹಡದ್ಲು’ ಎಂದರು. ಮುಂದೆ ಮಗುವಿಗೆ ಮಂಜುಳಾ ಎಂದು ಹೆಸರಿಡಲಾಯಿತು.
ಇಂಥ ಬಾಬಣ್ಣ ಅವರು ತಮ್ಮ 12ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚುತ್ತಾರೆ. ಅದು ಸ್ತ್ರೀ ಪಾತ್ರದ ಮೂಲಕ. ಮಾಂಡ್ರೆ ಅವರ ‘ಸ್ತ್ರೀರತ್ನ’ ನಾಟಕದ ಮೂಲಕ ಅವರ ರಂಗಪ್ರವೇಶವಾಯಿತು. 1942ರಲ್ಲಿ ಕುಕನೂರು ಪಕ್ಕದಲ್ಲಿರುವ ರಾಜೂರಲ್ಲಿ ರಹಿಮಾನವ್ವ ಕಂಪೆನಿಯಿತ್ತು. ಆಗ ‘ಸ್ತ್ರೀರತ್ನ’ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ಯುವತಿಗೆ ದಿನವೊಂದಕ್ಕೆ ಹತ್ತು ರೂಪಾಯಿ ಪಗಾರ ಕೊಡುತ್ತಿದ್ದರು ರಹಿಮಾನವ್ವ. ಇದ್ದಕ್ಕಿದ್ದಂತೆ ‘‘ಇಪ್ಪತ್ತು ರೂಪಾಯಿ ಕೊಟ್ಟರೆ ಮಾತ್ರ ಮಾಡುವೆ ಇಲ್ಲದಿದ್ದರೆ ಇಲ್ಲ’’ ಎಂದು ಯುವತಿ ಹಟ ಹಿಡಿದಳು. ಇದನ್ನು ಕಂಡ ಬಾಬಣ್ಣ ‘‘ಈಕಿಗ್ಯಾಕ ಇಪ್ಪತ್ತು ರೂಪಾಯಿ ಕೊಡ್ತೀರಿ. ನಾನ ಪಾತ್ರ ಮಾಡ್ತೀನಿ’’ ಅಂದರು. ಆಗ ರಹಿಮಾನವ್ವ ‘‘ಬಾ ಮಗನ’’ ಎಂದು ಕರೆದು ನಡುವೆ ಬೈತಲೆ ತೆಗೆದು, ಹೇರ್‌ಪಿನ್ ಇಟ್ಟು ಪಾತ್ರಕ್ಕೆ ಸಿದ್ಧಗೊಳಿಸಿದರು. ಹೀಗೆ ಅವರು 26ನೇ ವಯಸ್ಸಿನವರೆಗೂ ಸ್ತ್ರೀಪಾತ್ರಗಳನ್ನೇ ನಿರ್ವಹಿಸಿದರು. ಇದರಿಂದ ಸ್ತ್ರೀಪಾತ್ರಗಳ ಕೊರತೆ ನೀಗಿಸಿದರು.
ಅವರು ಸ್ತ್ರೀಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾಗ ನಡೆದ ಸ್ವಾರಸ್ಯಕರ ಸಂಗತಿಯೊಂದಿದೆ. ಪಿ.ಬಿ.ಧುತ್ತರಗಿ ಅವರ ‘ತಾಯಿಕರುಳು’ ನಾಟಕದಲ್ಲಿ ಸರಸ್ವತಿ ಪಾತ್ರವನ್ನು ಬಾಬಣ್ಣ ನಿರ್ವಹಿಸುತ್ತಿದ್ದರು. ಇದು ಖಳನಾಯಕಿಯ ಪಾತ್ರ. ಅತ್ತೆಯ ಅಂದರೆ ಗೌರವ್ವನ ಪಾತ್ರವನ್ನು ರಹಿಮಾನವ್ವ ಮಾಡುತ್ತಿದ್ದರು. ಇವರಿಬ್ಬರ ನಟನೆಯಿಂದ ನಾಟಕ ಕಳೆಗಟ್ಟುತ್ತಿತ್ತು. ಅದೊಮ್ಮೆ ಬಳ್ಳಾರಿ ಜಿಲ್ಲೆಯ ಸಿರಿಗೇರಿಯಲ್ಲಿ ‘ತಾಯಿಕರುಳು’ ನಾಟಕವಾಡುವಾಗ ಆಗ ಶಾಸಕರಾಗಿದ್ದ ರೇವಣಸಿದ್ಧಯ್ಯ ಹಾಗೂ ಮುದೇನೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಮುಂದಿನ ಸಾಲಲ್ಲಿ ಕುಳಿತಿದ್ದರು. ಸರಸ್ವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಬಾಬಣ್ಣ ಅವರನ್ನು ಕಂಡ ಶಾಸಕ ರೇವಣಸಿದ್ಧಯ್ಯ ಅವರು ‘ರಹಿಮಾನವ್ವನ ಮಗಳು ಎಷ್ಟು ಚೆಂದ ಪಾತ್ರ ಮಾಡ್ತಾಳ!’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ಗ್ರಾಮ ಪಂಚಾಯತ್ ಅಧ್ಯಕ್ಷ ‘ಮಗಳಲ್ಲ, ಮಗ’ ಎಂದರು. ಶಾಸಕರು ನಂಬಲಿಲ್ಲ. ‘ಸಾಧ್ಯವಿಲ್ಲ, ಮಗಳೇ’ ಎಂದು ವಾದಿಸಿದರು. ಕೊನೆಗೆ ಇಬ್ಬರೂ ಪಂದ್ಯ ಕಟ್ಟಿದರು. ‘‘ಹೆಣ್ಣಾಗಿದ್ರೆ ಇಡೀ ಕಂಪೆನಿಗೆ ಹೋಳಿಗೆ ಊಟ ಹಾಕಿಸುವೆ. ಗಂಡಾಗಿದ್ರೆ ನೀವು ಹೋಳಿಗೆ ಊಟ ಹಾಕಿಸಬೇಕು’’ ಎಂದು ಅಧ್ಯಕ್ಷರು ಹೇಳಿದರು. ಇದಕ್ಕೆ ಶಾಸಕರು ಒಪ್ಪಿದರು. ನಾಟಕ ಮುಗಿದ ಮೇಲೆ ಗ್ರೀನ್‌ರೂಮಿಗೆ ಅವರು ಹೋದಾಗ ಬಟ್ಟೆ ಬಿಚ್ಚಿ, ಚಡ್ಡಿ ಮೇಲೆ ನಿಂತಿದ್ದ ಬಾಬಣ್ಣ ಅವರನ್ನು ಕಂಡ ಶಾಸಕರು ಎಲ್ಲರಿಗೂ ಊಟ ಹಾಕಿಸಬೇಕಾಯಿತು ಎಂದು ಪೇಚಾಡಿದರು. ಆಗ ಕಂಪೆನಿಯಲ್ಲಿ 40-50 ಜನರಿದ್ದರು. ಆಗ ಹೋಳಿಗೆ ಊಟ ಹಾಕಿಸುವುದು ಸುಲಭ ಇರಲಿಲ್ಲ. ಹೀಗಾಗಿ ಶಾಸಕರೂ ಪೇಚಾಡಿಕೊಂಡರು.
ಮುಂದೆ ಸಿರಿಗೇರಿಯಲ್ಲಿ ಆರು ಕಲಾವಿದರು ಒಮ್ಮೆಲೇ ರಹಿಮಾನವ್ವ ಅವರ ಕಂಪೆನಿ ಬಿಟ್ಟುಹೋದಾಗ ನಾಟಕ ನಡೆಯಲಿಲ್ಲ; ಉಳಿದವರು 15 ಕಲಾವಿದರು ಮಾತ್ರ. ಬೇರೆ ಊರಿಗೆ ಹೋಗಲು ಬಸ್‌ಚಾರ್ಜ್ ಇರಲಿಲ್ಲ. ಆಗ ಹತ್ತಿರದಲ್ಲಿದ್ದ ಮುದೇನೂರಲ್ಲಿ ರಹಿಮಾನವ್ವ ಕಂಪೆನಿ ಶುರು ಮಾಡಿದರು. ಊಟಕ್ಕಾಗಿ ಬೋರ್ಡಿಂಗ್ ಶುರು ಮಾಡಲು ಹಣಕಾಸಿನ ಅಡಚಣೆಯಾಯಿತು. ಆಗ ಅಲ್ಲಿದ್ದ ಗೌಡರು ತಮ್ಮ ಮನೆಯಲ್ಲಿ ಊಟ ಮಾಡಿ ಎಂದರು. ಎಲ್ಲರೂ ಊಟವಾದ ಮೇಲೆ ಮಾಲಕರ ಮಗನೆಂದು ಕೊನೆಗೆ ಊಟ ಮಾಡಲು ಬಾಬಣ್ಣ ತಟ್ಟೆಯೊಂದಿಗೆ ಕೂಡುತ್ತಾರೆ. ಗೌಡರ ಹೆಂಡತಿ ಬಂದು ‘‘ಎಷ್ಟು ಜನಕ್ಕ ಊಟ ಹಾಕಬೇಕು?’’ ಎಂದು ಬೈದು ತಟ್ಟೆ ಕಸಿದುಕೊಂಡರು. ಹಾಗೆ ಎದ್ದ ಬಾಬಣ್ಣ ಬೇಸರಗೊಂಡು ಆ ಊರಲ್ಲಿದ್ದ ಕಾಲುವೆ ಹತ್ತಿರ ಅಳುತ್ತ ಕುಳಿತಿರುವಾಗ ರಹಿಮಾನವ್ವ ಬರುತ್ತಾರೆ. ಅವರಿಗೆ ಯಾರೋ ನಡೆದ ಘಟನೆಯನ್ನು ತಿಳಿಸಿರುತ್ತಾರೆ. ಆಗ ಅವರು ಬಾಬಣ್ಣ ಅವರಿಗೆ ಹೇಳುವ ಮಾತುಗಳಿವು- ‘‘ನಮ್ಮ ಜೀವನದಾಗ ಇಂತಾವು ಆಗೂವ. ಮನಸಿಗೆ ಹಚ್ಚಿಕೊಳ್ಳಬಾರದು. ಹೆಂಗಿರಬೇಕು ಅಂದ್ರ ಹೊಳಿಯಾಗಿನ ಕಲ್ಲು ಇದ್ದಂಗ ಇರಬೇಕು ಅಂದ್ರ ನೀರಿನ ಸೆಳವಿಗೆ ಅತ್ತಾಗ ಬಡದು, ಇತ್ಲಾಗ ಬಡದು ಬೆಣಕಪ್ಪ ಆಗ್ತದ. ಬೆಣಕಪ್ಪು ಆದ ಮ್ಯಾಲ ಪೂಜೇಕ ತಗೊಂಡು ಹೋಗ್ತಾರ. ಹಂಗ ಬೆಣಕಪ್ಪು ಆಗಬೇಕು. ಇವೆಲ್ಲ ಕಲ್ಲು. ಬಡಿತಿರತಾವು ಅತ್ಲಾಗ ಇತ್ಲಾಗ. ಮನಸಿಗೆ ಹಚ್ಚಿಕೊಬ್ಯಾಡ. ನಗತಿರಬೇಕು. ನಗಾಕ ಏನು ಗಂಟು ಹೋಗೇತಿ?’’ ಎಂದು ಸಮಾಧಾನ ಮಾಡಿದ್ದರು.
26ನೇ ವಯಸ್ಸಿನಲ್ಲಿದ್ದಾಗ ಬಾಬಣ್ಣ ಅವರಿಗೆ ಶೀತವಾಗಿ ಧ್ವನಿ ಬದಲಾದ ಪರಿಣಾಮ ಸ್ತ್ರೀಪಾತ್ರಗಳಿಗೆ ಕೊನೆ ಹಾಡಿದರು. ಅಲ್ಲಿಂದ ಹಾಸ್ಯ ಪಾತ್ರಗಳಿಗೆ ಹೆಸರಾದರು. ಬಿ.ಆರ್.ಅರಶಿಣಗೋಡಿ ಅವರ ಕಮತಗಿಯ ಹುಚ್ಚೇಶ್ವರ ನಾಟ್ಯ ಸಂಘ, ಗುಡಗೇರಿ ಬಸವರಾಜ ಅವರ ಸಂಗಮೇಶ್ವರ ನಾಟ್ಯ ಸಂಘ, ಸುಳ್ಳದ ದೇಸಾಯಿ ಅವರ ಶ್ರೀಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಶ್ರೀ ಕುಮಾರ ವಿಜಯ ನಾಟ್ಯ ಸಂಘ, ಲಕ್ಷ್ಮೇಶ್ವರದ ಪುರಾಣಿಕಮಠ ಅವರ ರವಿಕಲಾ ನಾಟ್ಯಸಂಘ... ಕಂಪೆನಿಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ ಅದರಲ್ಲೂ ಹಾಸ್ಯಪಾತ್ರಕ್ಕೆ ಸೈ ಎನ್ನಿಸಿಕೊಂಡರು. ಬಿ.ಆರ್. ಅರಷಿಣಗೋಡಿ ಅವರ ‘ಬಸ್ ಕಂಡಕ್ಟರ್’ ನಾಟಕದ ಕಂಡಕ್ಟರ್ ಪಾತ್ರಕ್ಕೆ ಅವರು ಹೆಸರಾಗಿದ್ದರು. ಅವರಿಗೆ ನಾಲ್ವರು ಮಕ್ಕಳು. ದಾನಮ್ಮ, ನೀರಜ್ ಅಹ್ಮದ್, ರಾಜಣ್ಣ ಹಾಗೂ ಶಾಹಿರಾ. ಆದರೂ ಬಾಬಣ್ಣ ಅವರು ಬಣ್ಣ ಹಚ್ಚಲೇಬೇಕಿತ್ತು. ‘‘ಬಣ್ಣ ಹಚ್ಚಿದ್ರ ತುತ್ತು ಅನ್ನ ಉಂತೀವ್ರಿ. ಮಾಸಾಶನದ ರೊಕ್ಕಾ ಔಷಧಿಗೆ ಸಾಲೂದಿಲ್ರಿ. ಬದುಕುವ ಸಲುವಾಗಿ ಬಣ್ಣ ಹಚ್ಚಬೇಕ್ರಿ’’ ಎನ್ನುತ್ತಿದ್ದರು.
ನಿಧನರಾಗುವ ಮೂರು ದಿನಗಳ ಮೊದಲು ಪತ್ರಕರ್ತರಿಗೆ ಫೋನ್ ಮಾಡಿ ‘‘ಗುಬ್ಬಿ ವೀರಣ್ಣ ಪ್ರಶಸ್ತಿ ಘೋಷಣೆಯಾಗಿ ವರ್ಷದ ಮೇಲಾಯಿತು. ದಯವಿಟ್ಟು ಪ್ರಶಸ್ತಿ ಸಿಕ್ರ ಆರ್ಥಿಕವಾಗಿ ಅನುಕೂಲ ಆಗ್ತದ’’ ಎಂದು ಹೇಳಿಕೊಂಡಿದ್ದರು.
ಪ್ರಬುದ್ಧ ಕಲಾವಿದರಾಗಿದ್ದ ಅವರು, ಅಂತ್ಯಕಾಲದಲ್ಲಿ ಘೋಷಣೆಯಾಗಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪಡೆಯಲಾಗಲಿಲ್ಲ. ‘‘ತೊಂಬತ್ತು ವರ್ಷ ವಯಸ್ಸಾಗಿದ್ದರೂ ನಾಟಕಗಳಿಗೆ ಬಣ್ಣ ಹಚ್ತಾ ಇದ್ದ. ರಾಜ್ಯೋತ್ಸವ ತಿಂಗಳಲ್ಲಾದರೂ ಪ್ರಶಸ್ತಿ ಕೊಡಬೇಕಿತ್ತು. ಆ ನೋವಿನಲ್ಲೇ ಹೋಗಿಬಿಟ್ಟ. ದಿವಸ ಫೋನ್ ಮಾಡತಿದ್ದ. ಆ ಕೊರಗಿನಲ್ಲೇ ಜೀವ ಬಿಟ್ಟ’’ ಎಂ.ಎಸ್.ಕೊಟ್ರೇಶ ಅವರು ಬೇಸರ ವ್ಯಕ್ತಪಡಿಸಿದರು.