ಆಧುನಿಕತೆ ಗಾಳಿ; ಸಂಘರ್ಷದ ‘ಗೆಂಡೆತಿಮ್ಮ’
ನಾಟಕ: ಪರಸಂಗದ ಗೆಂಡೆತಿಮ್ಮ ಮೂಲ: ಶ್ರೀಕೃಷ್ಣ ಆಲನಹಳ್ಳಿ ಕಾದಂಬರಿ ರಂಗರೂಪ: ಡಾ.ಎಂ. ಬೈರೇಗೌಡ ನಿರ್ದೇಶನ: ಕೆಎಸ್‌ಡಿಎಲ್ ಚಂದ್ರು ಸಹನಿರ್ದೇಶನ: ಎನ್. ರಾಮಚಂದ್ರ ಕಲೆ: ವಾದಿರಾಜ್, ಕೆಎಸ್‌ಡಿಎಲ್ ಚಂದ್ರು ಸಂಗೀತ: ದೇಸಿ ಮೋಹನ್ ಹಿನ್ನೆಲೆ ಗಾಯನ: ರತ್ನಾ ಸಕಲೇಶಪುರ ಬೆಳಕು: ಟಿ.ಎಂ.ನಾಗರಾಜ್, ರಂಗವಿನ್ಯಾಸ: ರಾಜು, ರಾಮಚಂದ್ರ ಉಡುಗೆ: ಚೈತನ್ಯ ಪರಿಕರ: ಸುಜಯ್, ದಿನೇಶ್, ಸಾಯಿಕುಮಾರ್ ಪ್ರಸಾಧನ: ರಾಮಕೃಷ್ಣ ಬೆಳ್ತೂರು ನಿರ್ಮಾಣ ವಿನ್ಯಾಸ: ವಿ.ಗಂಗಾಧರ್ ಪ್ರೇಕ್ಷಕರ ಮುಂದೆ ಗೆಂಡೆತಿಮ್ಮ: ಮುರುಡಯ್ಯ, ಮರಂಕಿ: ರುಚಿಕಾ ಬೇದಿಯಮ್ಮ: ಮಂಜುಳಾ ವಾರಗಿತ್ತಿ, ಸಣ್ಣಿ: ಶಿವರಾಜಿ ಗೌಡ್ರು: ಸೂರ್ಯಗೌಡ, ರತ್ನಿ: ಚಿನ್ಮಯಿ ಚಿಕ್ಕೀರ: ಮಂಜುನಾಥ್ ಬಿ.ಎಸ್., ಕೆಂಚ: ಶ್ರೀವತ್ಸ ತಮ್ಮಣ್ಣ: ವೆಂಕಟರಾಜು, ಕರಿಯ: ಸುಹಾಸ್ ಗೂಳನಾಯ್ಕ: ರಾಜು, ಗೌಡ್ತಿ: ಕಲಾವತಿ ಮುದ್ದ: ಗೌತಮಿ, ಕಾಳ: ದಿನೇಶ್, ನಾಗ: ವರ್ಚಸ್ ರಂಗ: ಹಿರೇಮಠ, ಸಣ್ಣ ಪುಟ್ಟಪ್ಪ: ಗಜಾನನ ವಿ.ಎಸ್. ನಾಗವ್ವ, ಮಲತಾಯಿ: ನಾಗರತ್ನ, ಕೆಂಪಕ್ಕ: ಶ್ಯಾಮಲಾ ಮೇಷ್ಟ್ರು ಶಿವಣ್ಣ: ಸುಜಯ್, ಕೆಂಪಗೌರಿ: ವಿದ್ಯಾ ಮಾವ: ವೆಂಕಟಾಚಲ, ಪಟೇಲ: ಎನ್.ವೆಂಕಟರಾಜು
‘‘ಮರಂಕಿ, ನಮ್ಮ ಬಟ್ಟೆ, ನಮ್ಮ ಶರೀರ ಶುದ್ಧವಾಗಿದ್ರೆ ಸಾಕಾ? ಮನಸನೂ ಶುದ್ಧವಾಗಿರೋದು ಬ್ಯಾಡ್ವಾ?’’ ಎಂದು ಗೆಂಡೆತಿಮ್ಮ ತನ್ನ ಹೆಂಡತಿಯನ್ನು ಕೇಳುವ ಮೂಲಕ ಮಹತ್ವದ ಮಾತನ್ನು ದಾಟಿಸುತ್ತಾನೆ. ಗೆಂಡೆತಿಮ್ಮನ ಪಾತ್ರದಲ್ಲಿ ಮುರುಡಯ್ಯ ಮಿಂಚುತ್ತಾರೆಂದಷ್ಟೇ ಹೇಳಿದರೆ ಸಾಲದು. ಇಡೀ ನಾಟಕವನ್ನು ತೂಗಿಸಿಕೊಂಡು ಹೋಗುತ್ತಾರೆ. ಹಳ್ಳಿಯ ಮುಗ್ಧ ಗೆಂಡೆತಿಮ್ಮನ ಪಾತ್ರವಾಗಿಲ್ಲ; ಪಾತ್ರವೇ ಅವರಾಗಿದ್ದಾರೆ. ಅವರಿಗೆ ಕಲಾವಿದೆಯರು ಸರಿಯಾದ ಸಾಥಿಯಾಗಿದ್ದಾರೆ. ಹೊಸ ಹುಡುಗರು ಅಭಿನಯದಲ್ಲಿ ಇನ್ನಷ್ಟು ಪಳಗಬೇಕಿತ್ತು. ಹಾಗೆಯೇ ಎರಡು ಗಂಟೆಯ ನಾಟಕವನ್ನು ಹದಿನೈದು ನಿಮಿಷಗಳವರೆಗೆ ಕಡಿಮೆಗೊಳಿಸಿ ನಾಟಕವಾಡಿದರೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ.
60-70ರ ದಶಕದಲ್ಲಿ ಬದಲಾಗುತ್ತಿದ್ದ ಹಳ್ಳಿಗಳ ಸ್ಥಿತಿಯನ್ನು ಶ್ರೀಕೃಷ್ಣ ಆಲನಹಳ್ಳಿ ಅವರು ತಮ್ಮ ‘ಪರಸಂಗದ ಗೆಂಡೆತಿಮ್ಮ’ ನಾಟಕದಲ್ಲಿ ಬಹು ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ. ಈ ಕಾದಂಬರಿಯನ್ನು ಆಧರಿಸಿ ಡಾ. ಎಂ. ಬೈರೇಗೌಡ ಅವರು ಸಮರ್ಥವಾಗಿ ರಂಗರೂಪವಾಗಿಸಿದ್ದಾರೆ.
ಮೈಸೂರಿನಿಂದ ಖರೀದಿಸಿದ ಪದಾರ್ಥಗಳನ್ನು ಸಾಲುಂಡಿ, ಹುಳಿಮಾವು, ಗೌವಳ್ಳಿಯಲ್ಲಿ ಬುಟ್ಟಿಯಲ್ಲಿಟ್ಟುಕೊಂಡು ಮಾರುವ ಗೆಂಡೆತಿಮ್ಮ ‘ಎಲೆಅಡಿಕೆ’ ಎಂದು ಕೂಗುತ್ತ ಸಾಗುತ್ತಾನೆ. ಪೆಪ್ಪರ್‌ಮೆಂಟು, ಹುಳಿಪೆಪ್ಪರ್‌ಮೆಂಟು, ಬೀಡಿ, ಬೆಂಕಿಪೊಟ್ಟಣ, ವಯಸ್ಸಾದವರಿಗೆ ಮಾತ್ರೆಗಳನ್ನು ತಂದು ಮಾರುವ ಗೆಂಡೆತಿಮ್ಮನಿಗೆ ಪ್ರಮುಖವಾಗಿ ವ್ಯಾಪಾರ ಎಲೆ ಅಡಿಕೆಯೇ. ಹೀಗಿದ್ದಾಗಲೇ ಮರಂಕಿಯೊಂದಿಗೆ ಮದುವೆ ಗೊತ್ತಾಗಿದೆಯೆಂದು ವ್ಯಾಪಾರ ಮಾಡುತ್ತಲೇ ಹೇಳುತ್ತಾನೆ ಜೊತೆಗೆ ಮದುವೆಗೆ ಆಹ್ವಾನಿಸುತ್ತಾನೆ.
ಮರಂಕಿಯನ್ನು ಮದುವೆಯಾಗಿ ತನ್ನ ಹಳ್ಳಿಯ ಮನೆಗೆ ಕರೆದುಕೊಂಡು ಬಂದಾಗಲೇ ಗೆಂಡೆತಿಮ್ಮನಿಗೆ ಕಷ್ಟಗಳು ಎದುರಾಗುತ್ತವೆ. ಪೇಟೆಯ ಶೋಕಿ ತಗಲಿಸಿಕೊಂಡು ಮರಂಕಿಯು ಅತ್ತರು ಬಳಿದುಕೊಳ್ಳುವುದನ್ನು ಕಂಡು ‘‘ಇದೇನಮ್ಮಿ ವಾಸ್ನೆ? ಇಲಿನೊ ಹೆಗ್ಗಣನೀ ಸತ್ತೋಗದೆ ಅಂತ ಕಾಣ್ತದೆ?’’ ಎಂದು ಕೇಳುತ್ತಾನೆ.
ಮರಂಕಿ ನಕ್ಕು ‘‘ಅಯ್ಯೋ, ಇಲಿನೋ ಅಲ್ಲ, ಹೆಗ್ಗಣನೂ ಅಲ್ಲ. ಇದು...’’ ಎಂದು ಅತ್ತರಿನ ಬಾಟಲಿ ತೋರಿಸುತ್ತಾಳೆ. ಗೆಂಡೆತಿಮ್ಮ ‘‘ಇದೇನು?’’ ಎಂದು ಕೇಳುತ್ತಾನೆ.
‘‘ಇದು ಸೆಂಟ್ ಬಾಟ್ಲು. ಪೇಟೇಲಿ ಇದು ಬೆವರು ವಾಸ್ನೆ ಬರದೆ ಇರಲಿ ಅಂತ ಬಟ್ಟೆಗೆ ಹಾಕ್ಕೊತ್ತಾರೆ’’ ಎಂದು ಮರಂಕಿ ಹೇಳುತ್ತಾಳೆ.
‘‘ಹೌದಾ? ಇಷ್ಟು ದಿನ ಆದ್ರೂ ನನಗೆ ಈ ಇಸಯ ಗೊತ್ತೇ ಇರಲಿಲ್ಲ. ಗಮ್ಮಂತದೆ’’ ಎನ್ನುವ ಗೆಂಡೆತಿಮ್ಮನಿಗೆ ದಿನವೂ ಸ್ನಾನ ಮಾಡಬೇಕೆಂದು ಮರಂಕಿ ಹೇಳಿದಾಗ ‘‘ನಾನು ಹದಿನೈದು ದಿನಕ್ಕೆ ಒಂದಪ ನೀರು ಹುಯ್ಕೊಳುದು. ಕಲ್ನಾಗೆ ಮೈಯಿ ಉಜ್ಕೊಂಡು ಸ್ನಾನ ಮಾಡಿದ್ರೆ ಮತ್ತೆ ಹದಿನೈದು ದಿನ ಬಿಟ್ಟೆ ಸ್ನಾನ ಮಾಡೋದು’’ ಎನ್ನುತ್ತಾನೆ. ದಿನಾಲು ಸ್ನಾನ ಮಾಡದಿದ್ರೆ ಹತ್ತಿರ ಬರಬೇಡಿ ಎಂದು ತಾಕೀತು ಮಾಡುತ್ತಾಳೆ. ಆಮೇಲೆ ದಿನಾಲು ಸೋಪ್ ಹಚ್ಚಿಕೊಂಡು ಸ್ನಾನ ಮಾಡಿ, ಮುಖಕ್ಕೆ ಪೌಡರ್ ಹಾಕಿಕೊಂಡು, ತಲೆಗೆ ಗಮಲದೆಣ್ಣೆ ಹಾಕಿಕೊಂಡು, ತಲೆ ಬಾಚಿಕೊಂಡು, ಒಗೆದಿರುವ ಬಟ್ಟೆ ಹಾಕಿಕೊಳ್ಳಬೇಕೆಂದು ಒತ್ತಾಯಿಸುತ್ತಾಳೆ. ಇದಕ್ಕೆಲ್ಲ ಗೆಂಡೆತಿಮ್ಮ ಒಪ್ಪಿಕೊಳ್ಳುತ್ತಾನೆ. ಆದರೆ ಗೆಂಡೆತಿಮ್ಮನ ತಾಯಿ ಬೇದಿಯಮ್ಮನೊಂದಿಗೆ ಮರಂಕಿ ಹೊಂದಾಣಿಕೆ ಆಗುವುದು ಕಷ್ಟವಾಗುತ್ತದೆ. ಮನೆಯೊಳಗೇ ಬರುವ ಕೋಳಿಗಳನ್ನು ಹೇಗೆ ಸಹಿಸಿಕೊಳ್ಳುವುದು ಎನ್ನುವುದು ಮರಂಕಿ ಪ್ರಶ್ನೆ. ಹೀಗೆಯೇ ಚನ್ನಂಜಿಯ ತಲೆ ಬಾಚಲು ಮರಂಕಿ ಮುಂದಾದಾಗಲೂ ಅವಳ ಅತ್ತೆ ಬೇಡ ಎನ್ನುತ್ತಾಳೆ. ‘‘ಅಪ್ಪ, ತಾತನ ಕಾಲದಿಂದ ಇರೋದು ಈಗೇನು ಮಾಡೋಕೆ ಬಂದೆ?’’ ಎಂದು ಅತ್ತೆ ಕೇಳುತ್ತಾಳೆ. ‘‘ಈ ಮನೆ ಹೇಗಿದೆಯೋ ಹಂಗೆ ಇರಲು ಬಿಡು. ಬದಲಿಸೋದು ಬೇಕಿಲ್ಲ’’ ಎನ್ನುತ್ತಾಳೆ ಬೇದಿಯಮ್ಮ. ಹೀಗೆಯೇ ತೊಟ್ಟಿಯಲ್ಲಿ ನೀರು ನಿಂತು ಗಬ್ಬು ನಾರುವುದನ್ನು ಪ್ರಶ್ನಿಸುವ ಮರಂಕಿಗೆ ‘‘ನಾನು ಈ ಮನೆ ಯಜಮಾನಿ. ನೀನು ಯಜಮಾನ್ಕೆ ಮಾಡೋಕೆ ಬರಬ್ಯಾಡ’’ ಎನ್ನುತ್ತಾಳೆ. ಹೀಗೆ ತಿಕ್ಕಾಟ ಶುರುವಾಗುತ್ತದೆ. ‘‘ಕೊಳಕು ಮಧ್ಯೆ ಕೊಳೆತು ನಾರತೀನಿ ಅಂದರೆ ಅದು ನಿಮ್ಮ ಕರ್ಮ. ನಾನಂತೂ ದಿನಾ ಸ್ನಾನ ಮಾಡ್ತೀನಿ. ನನ್ನ, ಗಂಡನ ಬಟ್ಟೇನ ಸೋಪಿನಲ್ಲೇ ಒಗೆಯೋದು, ಲಂಗ, ಬಾಡಿ, ಟೇಪು, ಗಮಲದೆಣ್ಣೆ ಹಾಕಿಕೊಳ್ಳುವುದು ರೂಢಿ ಆಗಿದೆ’’ ಎನ್ನುವ ಮರಂಕಿಗೆ ಅವಳ ಅತ್ತೆ ‘‘ಪ್ಯಾಟೆ ಹೆಣ್ಣು ಹಳ್ಳಿಯಾಗೆ ಬಾಳಾಟ ಮಾಡೋಕೆ ಲಾಯಕ್ ಅಲ್ಲ ಅನ್ನೋ ಮಾತು ನಿಜ. ಈ ಮಾಯಗಾತಿ ಬಂದು ಬಸಣ್ಣಂಗಿದ್ದ ನನ್ನ ಮಗನ್ನ ಕೋತಿ ಕುಣಿಸದಂಗೆ ಕುಣಿಸುತವಳೆ’’ ಎಂದು ಪೇಚಾಡುತ್ತಾಳೆ. ಬಳಿಕ ಬರುವ ಗೆಂಡೆತಿಮ್ಮ ವ್ಯಾಪಾರದ ದುಡ್ಡನ್ನು ಮರಂಕಿ ಕೈಗೆ ಕೊಡುವಾಗ ಬೇದಿಯಮ್ಮ ಕಸಿದುಕೊಳ್ಳುವಳು. ಹೀಗೆ ತನ್ನ ಯಜಮಾನಿಕೆ ಹೊರಟುಹೋಗುತ್ತದೆ ಎಂಬ ಆತಂಕ ಒಂದೆಡೆಯಾದರೆ, ಹೆಂಡತಿಯ ಮಾತನ್ನು ಕೇಳುವ ಮಗನೆಂಬ ಬೇಸರ ಬೇದಿಯಮ್ಮನಿಗೆ. ಮರಂಕಿಯೂ ತನ್ನ ತವರುಮನೆಯಲ್ಲಿ ಮಲತಾಯಿ ಕಾಟ, ಇಲ್ಲಿ ಅತ್ತೆ ಕಾಟ ಎಂದು ದುಃಖಿಸುತ್ತಾಳೆ.
ನಂತರ ಬರುವ ಮರಂಕಿ ಅಪ್ಪ ಅವಳನ್ನು ತನ್ನೂರಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿದ್ದಾಗಲೇ ಬೇರೆ ಮನೆ ಮಾಡುವಂತೆ ಗೆಂಡೆತಿಮ್ಮನಿಗೆ ಮಾವ ಒತ್ತಾಯಿಸುತ್ತಾನೆ. ಹೀಗೆ ಬೇರೆ ಮಾಡುವ ಮನೆಗೆ ಮೇಷ್ಟ್ರು ಬಂದು ಹೋಗುತ್ತಾನೆ. ಊರವರು ಮಾತಾಡಿಕೊಳ್ಳುವುದನ್ನು ಕಂಡರೂ ಕೇಳದ ಗೆಂಡೆತಿಮ್ಮನಿಗೆ ಕೊನೆಗೆ ತನ್ನ ಮನೆಗೆ ಬಂದಾಗ ಮೇಷ್ಟ್ರು ಹೊರಹೋಗುವುದನ್ನು ಕಾಣುತ್ತಾನೆ. ಕೊನೆಗೆ ಮನೆ ಬಿಟ್ಟು ಹೊರಡುತ್ತಾನೆ. ಮರಂಕಿ ನೇಣಿಗೆ ಶರಣಾಗುತ್ತಾಳೆ.
ಇದಕ್ಕೂ ಮೊದಲು ಮರಂಕಿಯನ್ನು ನೋಡಿದ ಹಳ್ಳಿಗಳ ಹುಡುಗಿಯರು ಗಮಲದೆಣ್ಣೆ, ಪೌಡರುಗಳನ್ನೆಲ್ಲ ಗೆಂಡೆತಿಮ್ಮನಿಂದ ತರಿಸಿಕೊಳ್ಳುತ್ತಾರೆ. ನಿಧಾನವಾಗಿ ಹಳ್ಳಿಗಳು ಬದಲಾಗುವ ಬಗೆಯನ್ನು ಚಿತ್ರಿಸಲಾಗಿದೆ. ಹೀಗೆ ಆಧುನಿಕತೆ ಗಾಳಿಗೆ ಬದಲಾಗುತ್ತಿರುವ ಹಳ್ಳಿಗಳು, ಹೊಸ ತಲೆಮಾರಿನೊಂದಿಗೆ ಹಳೆ ತಲೆಮಾರಿನವ ಸಂಘರ್ಷದ ಅನಾವರಣವನ್ನು ನಾಟಕ ಕಟ್ಟಿಕೊಡುತ್ತದೆ.