ನೂರರ ನೆನಪಲ್ಲಿ ಡಾ. ಎಚ್.ಕೆ. ರಂಗನಾಥ್

Update: 2024-08-09 04:34 GMT
Editor : Ismail | Byline : ಗಣೇಶ ಅಮೀನಗಡ

ಡಾ.ಎಚ್.ಕೆ.ರಂಗನಾಥ್. ಅವರ ಪಿಎಚ್.ಡಿ. ಅಧ್ಯಯನ ಕೃತಿ ‘ಕರ್ನಾಟಕ ರಂಗಭೂಮಿ’ಗೆ ಸಾಹಿತಿ ಸ.ಸ.ಮಾಳವಾಡರು. ಪ್ರೊ.ಕೆ.ಜಿ.ಕುಂದಣಗಾರ ಹಾಗೂ ಬೇಂದ್ರೆಯವರು ಮೌಲ್ಯಮಾಪಕರು. ಪಿಎಚ್.ಡಿ. ಮಂಡನೆ ಮಾಡಿದ ರಂಗನಾಥ್ ಅವರನ್ನು ಧಾರವಾಡ ಆಕಾಶವಾಣಿಗೆ ಹುಡುಕಿಕೊಂಡು ಬಂದು ಭೇಟಿಯಾಗಿ ಖುಷಿ ವ್ಯಕ್ತಪಡಿಸಿದವರು ಕುಂದಣಗಾರರು. ಈಗಲೂ ‘ಕರ್ನಾಟಕ ರಂಗಭೂಮಿ’ ಆಕರ ಗ್ರಂಥವಾಗಿದೆ. ಈ ಕೃತಿಯು ಫ್ರೆಂಚ್, ಜರ್ಮನ್ ಹಾಗೂ ಸ್ಪ್ಯಾನಿಶ್ ಭಾಷೆಗಳಿಗೆ ಅನುವಾದಗೊಂಡಿದೆ.

ಮುಖ್ಯಮಂತ್ರಿ ಚಂದ್ರು, ಡಾ.ಬಿ.ವಿ. ರಾಜಾರಾಂ, ಕನ್ನರ್ಪಾಡಿ ರಾಮಕೃಷ್ಣ, ಚನ್ನಕೇಶವಮೂರ್ತಿ, ಎಚ್.ವಿ. ಕೃಷ್ಣಮೂರ್ತಿ, ಡಾ.ಕೆ.ಆರ್. ಸುಧೀಂದ್ರ ಶರ್ಮಾ, ಡಾ. ಉಷಾಚಾರ್, ನಾಗವಲ್ಲಿ ನಾಗರಾಜ್, ಚಾಮಿ ಶ್ರೀನಿವಾಸ್, ವಸಂತಕುಮಾರ್ ಶೆಣೈ ಮೊದಲಾದವರೆಲ್ಲ ಈಗ ರಂಗಕರ್ಮಿಗಳಾಗಿ ಹೆಸರು ಗಳಿಸಿದ್ದಾರೆ. ಇವರಿಗೆಲ್ಲ ಗುರುಗಳಾಗಿದ್ದವರು ಡಾ.ಎಚ್‌ಕೆಆರ್ ಎಂದೇ ಪ್ರಸಿದ್ಧರಾಗಿದ್ದ ಡಾ.ಎಚ್.ಕೆ.ರಂಗನಾಥ್. ಅವರ ಶಿಷ್ಯರಲ್ಲಿ ಹೆಚ್ಚು ಪ್ರಸಿದ್ಧರಾದವರು ಮುಖ್ಯಮಂತ್ರಿ ಚಂದ್ರು. ಅವರು ಮೈಮ್ ಚಂದ್ರು ಎಂದು ಹೆಸರು ಗಳಿಸಲು ಎಚ್‌ಕೆಆರ್ ಕಾರಣರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಚಂದ್ರು ಅವರು ರಂಗ ಕಾರ್ಯಾಗಾರಕ್ಕೆ ಅಮೆರಿಕದಿಂದ ಬಂದಿದ್ದ ಆ್ಯಡಮ್ ಅಬ್ರಹಾಂ ಅವರ ಬಳಿ ಮೂಕಾಭಿನಯ ಕಲಿತರು. ಹೀಗಿದ್ದಾಗ 1977-78ರಲ್ಲಿ ಆಗಿನ ಮದ್ರಾಸ್‌ನಲ್ಲಿ ಪ್ಯಾರಿಸ್‌ನವರು ಏರ್ಪಡಿಸಿದ ಅಂತರ್‌ರಾಷ್ಟ್ರೀಯ ಮೂಕಾಭಿನಯ ಸಮಾವೇಶದಲ್ಲಿ ಚಂದ್ರು ಅವರು ಭಾಗವಹಿಸಲು ಅವಕಾಶ ನೀಡಿದವರು ಡಾ. ಎಚ್‌ಕೆಆರ್. ಅವರ ಮೂಕಾಭಿನಯ ಯಶಸ್ವಿಯಾಗುತ್ತಿದ್ದಂತೆ ಬೆಲ್ಜಿಯಂ, ಪ್ಯಾರಿಸ್, ಸ್ವಿಟ್ಸರ್‌ಲ್ಯಾಂಡ್, ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ ಅವಕಾಶ ಲಭಿಸಿದವು. ಬಳಿಕ ಬಿ.ವಿ.ರಾಜಾರಾಂ ಅವರ ಕಲಾಗಂಗೋತ್ರಿ ತಂಡದಿಂದ ‘ಮೂಕಿಟಾಕಿ’ ಎಂಬ ಮೂಕಾಭಿನಯವನ್ನು ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದರು.

ಪ್ರತಿಯೊಬ್ಬರನ್ನೂ ಹುರಿದುಂಬಿಸುತ್ತಿದ್ದ ಎಚ್‌ಕೆಆರ್ ಅವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಹಿಂಭಾಗ ಪ್ರಸನ್ನಕುಮಾರ್ ಬ್ಲಾಕ್ ಹತ್ತಿರ ಬಸ್ಸಿನ ಗ್ಯಾರೇಜನ್ನು ಬಿಡಿಸಿಕೊಂಡು ಪ್ರತೀ ಗುರುವಾರ ‘ಪ್ರತಿಭಾರಂಗ’ ಎನ್ನುವ ಹೆಸರಡಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದರು. ‘ರಂಗಚಕ್ರ’ ಎಂಬ ತಂಡ ಕಟ್ಟಿಕೊಂಡು ಬೇರೆ ಬೇರೆ ಕಾಲೇಜು ಹಾಗೂ ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ ನಾಟಕ ಮಾಡಿಸಿದರು. ಆಮೇಲೆ ‘ಎಲ್ಲಾರೂ ಮಾಡುವುದು’ ನಾಟಕವನ್ನು ಆಡಿಸಿದರು. ಇದನ್ನು ಬಿ.ವಿ.ರಾಜಾರಾಂ ನಿರ್ದೇಶಿಸಿದರು. ವಿಶ್ವವಿದ್ಯಾನಿಲಯದ ಕಟ್ಟಡ ಹಾಗೂ ಬಯಲನ್ನು ನಾಟಕಕ್ಕೆ ಬಳಸಿಕೊಂಡರು. ಅರಮನೆಯ ದೃಶ್ಯವೊಂದಕ್ಕೆ ಎಚ್‌ಕೆಆರ್ ಅವರು ತಮ್ಮ ಪತ್ನಿ ಶಾಂತಿ ಅವರ ಹದಿನೈದು ಸೀರೆಗಳನ್ನು ತಂದಿದ್ದರು. ಬಹಳ ಅದ್ದೂರಿಯಾಗಿ ನಾಟಕ ನಡೆಯಿತು.

ಸದಾ ಪ್ರೋತ್ಸಾಹಿಸುವ ಕುರಿತು ಉದಾಹರಣೆ ಹೇಳುವೆ. ಒಂದು ದಿನ ತಮ್ಮ ಶಿಷ್ಯರನ್ನು ಕರೆದು ‘‘ಬರೀ ನಾಟಕ ಮಾಡಿದರೆ ಸಾಲದು. ಒಳ್ಳೆಯ ರಂಗಕರ್ಮಿಯಾಗಲು ನೃತ್ಯ, ಸಂಗೀತವನ್ನು ಅಲ್ಪಸ್ವಲ್ಪ ಕಲಿಯಬೇಕು. ನಿಮಗೆಲ್ಲ ಶರೀರ ಸೌಷ್ಠವ ಚೆನ್ನಾಗಿದೆ. ಮುಂದಕ್ಕೂ ಚೆನ್ನಾಗಿರಬೇಕು. ಹೊಟ್ಟೆಗಿಟ್ಟೆ ಇರಬಾರದು. ಯೋಗ ಕಲಿಯಿರಿ. ವ್ಯವಸ್ಥೆ ಮಾಡುವೆ’’ ಎಂದರು. ಎಲ್ಲರೂ ಕಲಿಯುತ್ತೇವೆ ಎಂದರು.

ಮೊದಲು ನೃತ್ಯಕ್ಕೆ ಏರ್ಪಾಡಾಯಿತು. ಅಂತರ್‌ರಾಷ್ಟ್ರೀಯ ಖ್ಯಾತಿಯ ಉಷಾ ದಾತಾರ್ ಹಾಗೂ ರೇಖಾ ಎನ್ನುವ ಇನ್ನೊಬ್ಬ ನೃತ್ಯಗುರು ನೃತ್ಯ ಕಲಿಸಲು ಆರಂಭಿಸಿದರು. ಒಂದೂವರೆ ತಿಂಗಳಾದರೂ ಮೈಮ್ ಚಂದ್ರು ಸೇರಿದಂತೆ ಇತರರು ಪ್ರಾಥಮಿಕ ಪಾಠಗಳನ್ನು ಸರಿಯಾಗಿ ಕಲಿಯಲಿಲ್ಲ. ಒಂದಿನ ಉಷಾ ದಾತಾರ್ ಅವರು ಅವರನ್ನೆಲ್ಲ ಕರೆದುಕೊಂಡು ರಂಗನಾಥ್ ಅವರ ಬಳಿ ಹೋಗಿ ‘‘ಸರ್ ಇವರೆಲ್ಲ ಒಳ್ಳೆಯ ಹುಡುಗರು. ನಾಟ್ಕಾನೂ ಚೆನ್ನಾಗಿ ಮಾಡ್ತಾರೆ. ಆದರೆ ಡ್ಯಾನ್ಸ್... ನನಗೆ ತಾಳಗಳು ಮರೆತು ಹೋಗೋ ಮುಂಚೆ ಇವರಿಗೆ ಕಲಿಸೋದು ನಿಲ್ಲಿಸಿಬಿಡಿ ಸರ್. ಇವರಿಗೆ ಡ್ಯಾನ್ಸ್ ಕಲಿಯೋದು ಬೇಡ ಅನ್ನಿ. ನಮ್ಮ ಸ್ನೇಹ ಚೆನ್ನಾಗಿರುತ್ತೆ’’ ಎಂದರು.

ಸಂಗೀತ ಕಲಿಸುತ್ತಿದ್ದವರು ರಂಗನಾಥ್ ಅವರ ಬಳಿ ಬಂದು ‘‘ಇವರಿಗೆ ಸಂಗೀತ ಕಲಿಸಲು ಸಾಧ್ಯವೇ ಇಲ್ಲ. ಹಾಗೊಂದು ವೇಳೆ ಕಲಿಸಿದರೂ ಇವರ ಕೇಳುಗರಿಗೆ ದೊಡ್ಡ ವಿಪತ್ತು ಆಗುತ್ತೆ. ಈ ನಿಮ್ಮ ಶಿಷ್ಯರಿಗೆ ಸಂಗೀತ ಕಲಿಸಲಾರೆ’’ ಎಂದರು. ಆಗ ಮೈಮ್ ಚಂದ್ರು (ಈಗಿನ ಮುಖ್ಯಮಂತ್ರಿ ಚಂದ್ರು) ಅವರು ‘‘ಹೆಂಗೋ ನಾಟಕ ಮಾಡ್ಕೊಂಡು ಹೋಗ್ತೀವಿ ಬಿಡಿ ಸರ್. ಇವೆಲ್ಲ ನಮಗೆ ಬರಲ್ಲ’’ ಎಂದಾಗ ಅವರು ನಕ್ಕು ಸುಮ್ಮನಾದರು.

ಇಂಥ ಹಾಸನದ ಕೃಷ್ಣಸ್ವಾಮಿ ರಂಗನಾಥ್ (ಎಚ್.ಕೆ.ರಂಗನಾಥ್) ಅವರ ಜನ್ಮಶತಮಾನೋತ್ಸವ ವರ್ಷವಿದು (8.8.1924-26-3-2007). ಅವರು ಹುಟ್ಟಿದ್ದು ತೀರ್ಥಹಳ್ಳಿಯಲ್ಲಿ. ಬೆಳೆದದ್ದು ನರಸಿಂಹರಾಜಪುರದಲ್ಲಿ. ಕಲಿತದ್ದು ಮೈಸೂರಿನಲ್ಲಿ. ಅವರ ತಂದೆ ಕೃಷ್ಣಸ್ವಾಮಿ ಅವರು ಮೈಸೂರಿನ ಕೋರ್ಟಿನಲ್ಲಿ ನಾಝರ್ ಆಗಿದ್ದರು. ನಾಝರ್ ಅಂದರೆ ಕೋರ್ಟಿನ ಆದೇಶಗಳನ್ನು ಜಾರಿ ಮಾಡುವವರ ಮೇಲ್ವಿಚಾರಕರು. ತಾಯಿ ಚಿನ್ನಮ್ಮ. ರಂಗನಾಥ್ ಅವರು ಶಾಲೆಯಲ್ಲಿದ್ದಾಗ ರಂಗಭೂಮಿಗೆ ವಾಲಿಸಿದವರು ಕನ್ನಡ ಶಿಕ್ಷಕರಾಗಿದ್ದ ಜಿ.ವಿ.ರಾಮಸ್ವಾಮಿ ಅಯ್ಯಂಗಾರರು. ಅವರು ಹರಿಕಥೆ ಹೇಳುವಾಗ ರಂಗನಾಥ್ ಅವರಿಗೆ ಆಗಾಗ ಹಾಡು ಹೇಳಲು ಹುರಿದುಂಬಿಸಿದರು. ಬಳಿಕ ಅಯ್ಯಂಗಾರರ ‘ನಿರ್ಭಾಗ್ಯ ಭಾರತಿ’ ನಾಟಕದಲ್ಲಿ ಭಾರತಿ ಪಾತ್ರಕ್ಕೆ ಬಣ್ಣ ಹಚ್ಚಿದವರು ರಂಗನಾಥ್. ಕುವೆಂಪು ಅವರ ಗುರುಗಳಾಗಿದ್ದ ಟಿ.ಎಸ್.ವೆಂಕಣ್ಣಯ್ಯ ಅವರ ಮನೆ ಎದುರು ಆಡಿ ಬೆಳೆದವರು. ಹೀಗೆ ರಂಗಭೂಮಿ, ಸಾಹಿತ್ಯದ ಪ್ರಭಾವದಿಂದಾಗಿ ಲೇಖಕರಾದರು, ರಂಗಕರ್ಮಿಯಾದರು.

ಮೈಸೂರು ಆಕಾಶವಾಣಿ ಸಂಸ್ಥಾಪಕರಾದ ಎಂ.ವಿ. ಗೋಪಾಲಸ್ವಾಮಿ ಹಾಗೂ ಸಾಹಿತಿ ನಾ. ಕಸ್ತೂರಿ ಅವರ ಮೆಚ್ಚುಗೆಯಿಂದ ವಾರ್ತಾ ವಾಚಕರಾದರು. ಆಗ ಅವರ ಸಂಬಳ ಇಪ್ಪತ್ತು ರೂಪಾಯಿ. ಅವರ ಗಂಭೀರ ಧ್ವನಿ, ಭಾಷಾ ಸಾಮರ್ಥ್ಯದ ಪರಿಣಾಮ ನಾ.ಕಸ್ತೂರಿ ಅವರು ‘ತರಂಗರಂಗ’ ಎಂಬ ಪತ್ರಿಕೆಗೆ ರಂಗನಾಥ್ ಅವರನ್ನು ಸಹಾಯಕರನ್ನಾಗಿ ನೇಮಿಸಿದರು. ಕನ್ನಡ ಆಕಾಶವಾಣಿಯ ಮೊದಲ ವಾರ್ತಾ ವಾಚಕರಾದ ರಂಗನಾಥ್, ಧಾರವಾಡ ಆಕಾಶವಾಣಿಗೆ ಮೊದಲ ಧ್ವನಿಯಾದವರು. ಅಲ್ಲಿ ಇದ್ದಾಗ ಉತ್ತರ ಕರ್ನಾಟಕದ ಸಾಹಿತಿಗಳ ಸಹವಾಸ ಸಿಕ್ಕಿತು ಜೊತೆಗೆ ರಂಗಕರ್ಮಿಗಳ ಒಡನಾಟವೂ ದಕ್ಕಿತು. ಅವರ ‘ಭವದೀಯ’ (ನಿಮ್ಮವ) ಕಾರ್ಯಕ್ರಮ ಬಹಳ ಜನಪ್ರಿಯವಾಯಿತು. ಅದು ಕೇಳುಗರ ಪತ್ರೋತ್ತರ ಪ್ರಸಾರ. ವಾರಕ್ಕೆ 300-500 ಪತ್ರಗಳು ಬರುತ್ತಿದ್ದವು. ಪ್ರತೀ ರವಿವಾರ ರಾತ್ರಿ ಏಳೂವರೆಗೆ ‘ಭವದೀಯ’ ಕಾರ್ಯಕ್ರಮ ಪ್ರಸಾರವಾಗುವಾಗ ಧಾರವಾಡದ ಅಂಗಡಿಗಳ ಮುಂದೆ ಜನರ ಜಾತ್ರೆ! ‘ಭವದೀಯ’ ಯಾರೆಂಬ ಕುತೂಹಲ. ಇದನ್ನು ನಡೆಸಿಕೊಡುತ್ತಿದ್ದ ರಂಗನಾಥ್ ಅವರ ಧ್ವನಿಗೆ ಮಾರುಹೋದವರು ಪತ್ರ ಬರೆದೇ ಬರೆದರು. ಅವರನ್ನು ಭೇಟಿಯಾಗಬಹುದೆ? ಮದುವೆಯಾಗಿದೆಯೇ ಮೊದಲಾದ ಪತ್ರಗಳು ಬರುತ್ತಲೇ ಇದ್ದವು. ನಾಟಕ ವಿಭಾಗವನ್ನೂ ನೋಡಿಕೊಳ್ಳುತ್ತಿದ್ದ ಅವರಿಗೆ ಅಲ್ಲಿಯೇ ಪರಿಚಯವಾದವರು ಸಹೋದ್ಯೋಗಿ ಶಾಂತಿ ಶಾನುಭಾಗ, ಅವರನ್ನು ಧಾರವಾಡದಲ್ಲಿ ಮದುವೆಯಾದರು. ಮದುವೆಯ ನೇತೃತ್ವ ವಹಿಸಿದವರು ಕವಿ ಸಾಲಿ ರಾಮಚಂದ್ರರಾಯರು. ರಂಗನಾಥ್ ಅವರ ಹೆತ್ತವರ ಸ್ಥಾನದಲ್ಲಿ ನಿಂತವರು ರಂಗಕರ್ಮಿ ಶ್ರೀರಂಗರು, ಅವರ ಪತ್ನಿ ಶಾರದಾ.

ಧಾರವಾಡದಲ್ಲಿದ್ದಾಗಲೇ ‘ಕರ್ನಾಟಕ ರಂಗಭೂಮಿ’ ಕುರಿತು ಪಿಎಚ್.ಡಿ. ಅಧ್ಯಯನ ಕೈಗೊಂಡು, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಒಪ್ಪಿಸಿದರು. ಸಾಹಿತಿ ಸ.ಸ.ಮಾಳವಾಡರು. ಪ್ರೊ.ಕೆ.ಜಿ.ಕುಂದಣಗಾರ ಹಾಗೂ ಬೇಂದ್ರೆಯವರು ಮೌಲ್ಯಮಾಪಕರು. ಪಿಎಚ್.ಡಿ. ಮಂಡನೆ ಮಾಡಿದ ರಂಗನಾಥ್ ಅವರನ್ನು ಧಾರವಾಡ ಆಕಾಶವಾಣಿಗೆ ಹುಡುಕಿಕೊಂಡು ಬಂದು ಭೇಟಿಯಾಗಿ ಖುಷಿ ವ್ಯಕ್ತಪಡಿಸಿದವರು ಕುಂದಣಗಾರರು. ಈಗಲೂ ‘ಕರ್ನಾಟಕ ರಂಗಭೂಮಿ’ ಆಕರ ಗ್ರಂಥವಾಗಿದೆ. ಈ ಕೃತಿಯು ಫ್ರೆಂಚ್, ಜರ್ಮನ್ ಹಾಗೂ ಸ್ಪ್ಯಾನಿಶ್ ಭಾಷೆಗಳಿಗೆ ಅನುವಾದಗೊಂಡಿದೆ. ಶಿಲಾಬಾಲೆ, ವಿಷಕನ್ಯೆ, ಬ್ರಹ್ಮಲಿಪಿ, ರಕ್ಷತಾ, ದುರಂತ ಅವರ ಜನಪ್ರಿಯವಾದ ಬಾನುಲಿ ನಾಟಕಗಳು. ಅವರು ನಿರ್ಮಿಸಿದ, ಸಂದರ್ಶನ ಆಧರಿಸಿದ ‘ಕನ್ನಡದ ಅಲೆಗಳು’ ಸರಣಿ ಈಗಲೂ ಆಕಾಶವಾಣಿಯ ಆಸ್ತಿ. ಇವರೇ ನಮ್ಮವರು, ಜೇನಹನಿ, ನೆನೆದವ ಮನದಲ್ಲಿ, ಬಣ್ಣ ಬೆಳಕು, ಜಾಗೃತ ಭಾರತಿ ಅವರ ಪ್ರಸಿದ್ಧವಾದ ಕೃತಿಗಳು. ಜಾಗೃತ ಭಾರತಿ ನಾಟಕಕ್ಕೆ ಮೋತಿಲಾಲ್ ಶತಮಾನೋತ್ಸವ ಪ್ರಶಸ್ತಿ ಪುರಸ್ಕೃತವಾಯಿತು. ಅವರ ಆತ್ಮಕಥನ ‘ನೆನಪಿನ ನಂದನ’ ಗಮನಾರ್ಹ.

ಆಕಾಶವಾಣಿಯಲ್ಲದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ದಕ್ಷಿಣ ಕೇಂದ್ರದ ಸಂಗೀತ ಮತ್ತು ನಾಟಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿದ್ದರು ಮತ್ತು ವಲಯ ಮುಖ್ಯಸ್ಥರಾಗಿದ್ದರು. ಗಾಂಧಿ ಕೇಂದ್ರ ವಿಜ್ಞಾನ ಮತ್ತು ಮಾನವ ಮೌಲ್ಯಗಳು ಹಾಗೂ ಬೆಂಗಳೂರಿನ ಭಾರತೀಯ ವಿದ್ಯಾಭವನದ ಗೌರವ ನಿರ್ದೇಶಕರಾಗಿದ್ದರು. ಯುನೆಸ್ಕೊ ಫೆಲೊಶಿಪ್ ಪಡೆದಿದ್ದ ಅವರು, ಯುನೆಸ್ಕೊ ಸಲಹೆಗಾರರಾಗಿದ್ದರು. ಯುನೆಸ್ಕೊ ಪರವಾಗಿ ಏಳು ವಾರಗಳಲ್ಲಿ 12 ದೇಶಗಳನ್ನು ದರ್ಶಿಸಿ ಬಂದ ಮೊದಲ ಕನ್ನಡಿಗರು. ಬೊಂಬೆಯ ಮೇಳದ ತಿರುಗಾಟವನ್ನು ಜಪಾನ್, ಸ್ವಿಸ್ ಮೊದಲಾದ ದೇಶಗಳಲ್ಲಿ ಆಯೋಜಿಸಿದರು. ಬಿಬಿಸಿ ಪ್ರಸಾರ ಸಂಸ್ಥೆಯಲ್ಲಿ ಪ್ರಾಯೋಗಿಕವಾಗಿ ಮೊದಲ ಬಾರಿಗೆ ಕನ್ನಡ ವಾರ್ತಾಪ್ರಸಾರವನ್ನೂ ಕೈಗೊಂಡವರು.

ಅವರ ಜನ್ಮದಿನವಾದ ನಿನ್ನೆ (ಆಗಸ್ಟ್ 8) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗ ಸಂಗ, ಭಾರತೀಯ ವಿದ್ಯಾ ಭವನ, ಕಲಾಗಂಗೋತ್ರಿ, ನವಚೇತನ ಟ್ರಸ್ಟ್ ಸಹಯೋಗದಲ್ಲಿ ನೂರನೇ ಜನ್ಮದಿನವನ್ನು ಆಚರಿಸಲಾಯಿತು. ಅಲ್ಲದೆ ರಂಗನಾಥ್ ಅವರ ರಚಿಸಿದ ‘ಅಮೃತವರ್ಷ’ ನಾಟಕವು ಬಿ.ವಿ.ರಾಜಾರಾಂ ನಿರ್ದೇಶನದಲ್ಲಿ ಕಲಾಗಂಗೋತ್ರಿ ತಂಡ ಪ್ರಸ್ತುತಪಡಿಸಿದೆ. ಈ ಮೂಲಕ ರಂಗಗುರುವಿಗೆ ಗೌರವ ಸಲ್ಲಿಸಿದ್ದು ಅಭಿನಂದನೀಯ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಗಣೇಶ ಅಮೀನಗಡ

contributor

Similar News