‘‘ರಂಗ ದಾಖಲೀಕರಣ ಮತ್ತೆ ಮುಂದುವರಿಯಲಿದೆ’’ -ಕೆ.ವಿ. ನಾಗರಾಜಮೂರ್ತಿ
ಜೆ.ಲೋಕೇಶ್ ಅವರು ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದಾಗ ರಂಗಭೂಮಿ ಕುರಿತು ದಾಖಲೀಕರಣ ಆರಂಭವಾಯಿತು. ಈಗ ಮತ್ತೆ ಮುಂದುವರಿಸಿದ್ದೇವೆ. ನಾಟಕ ಅಕಾಡಮಿಯಲ್ಲೇ ರಂಗಭೂಮಿಗೆ ಸಂಬಂಧಿಸಿದ ದಾಖಲೆಗಳಿರಲಿಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ರಂಗಕರ್ಮಿಗಳ, ರಂಗತಂಡಗಳ ಹಾಗೂ ರಂಗಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದು ಕರ್ನಾಟಕ ನಾಟಕ ಅಕಾಡಮಿಯ ವೆಬ್‌ಸೈಟಿನಲ್ಲಿ ಸಿಗಲಿದೆ.
ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾಗಿರುವ ಕೆ.ವಿ. ನಾಗರಾಜಮೂರ್ತಿ ಅವರು ಓದಿದ್ದು ಔಷಧ ವಿಜ್ಞಾನದಲ್ಲಿ ಡಿಪ್ಲೊಮಾ. ಆದರೆ ರಂಗಭೂಮಿಯ ನಂಟು ನಿರಂತರ. 67 ವರ್ಷ ವಯಸ್ಸಿನ ಅವರು, ಕಳೆದ 45 ವರ್ಷಗಳಿಂದ ರಂಗಭೂಮಿಯಲ್ಲಿ ನಿರತರು. ಪ್ರಯೋಗರಂಗ ತಂಡದ ಸ್ಥಾಪಕ ಕಾರ್ಯದರ್ಶಿಯಾಗಿ 67ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ. 20ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ.
1984ರಿಂದ ಭಾರತ ಯಾತ್ರಾ ಕೇಂದ್ರದ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ. ಈ ಸ್ಪರ್ಧೆಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳು ರಂಗಭೂಮಿಯತ್ತ ಬರಲು ಸಾಧ್ಯವಾಗಿದೆ. ರಂಗಭಾರತಿ ಮೂಲಕ ಸುಮಾರು ನೂರಕ್ಕೂ ಹೆಚ್ಚು ರಂಗ ತರಬೇತಿ ಶಿಬಿರಗಳನ್ನು ರಾಜ್ಯದಾದ್ಯಂತ ಯೋಜಿಸಿದ್ದಾರೆ. ಅಲ್ಲಮ ಕಲಾಶಾಲೆಯ ಮೂಲಕ ಸರಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಉಚಿತವಾಗಿ ರಂಗಭೂಮಿ ತರಬೇತಿ ನೀಡಲಾಗುತ್ತಿದೆ.
ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಸಾಣೇಹಳ್ಳಿ ಶಿವಕುಮಾರ ಪ್ರಶಸ್ತಿ, ಹೂವಿನಹಡಗಲಿ ರಂಗಭಾರತಿಯ ಎಂ.ಪಿ. ಪ್ರಕಾಶ್ ರಾಷ್ಟ್ರೀಯ ಪ್ರಶಸ್ತಿ, ಕೇರಳದ ಕೊಟ್ಟಾಯಂನ ನಾಟ್ಯರಂಗ್ ಪ್ರಶಸ್ತಿಗಳ ಪುರಸ್ಕೃತರಾದ ಅವರು, ಕರ್ನಾಟಕ ನಾಟಕ ಅಕಾಡಮಿಗೆ ಮೂರು ಬಾರಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
ಪ್ರಸಕ್ತ ರಂಗಭೂಮಿ ಕುರಿತು?
ಕೊರೋನದ ನಂತರ ರಂಗಭೂಮಿ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಕಳೆದ ಎರಡು ವರ್ಷಗಳಿಂದ ನಾಡಿನೆಲ್ಲೆಡೆ ರಂಗಭೂಮಿ ಪುನಶ್ಚೇತನಗೊಂಡಿದೆ. ನಾಟಕ ಅಕಾಡಮಿಯು ರಂಗಭೂಮಿಯ ಎಲ್ಲ ಪ್ರಕಾರಗಳನ್ನು ಬಲಪಡಿಸಲು ಒತ್ತಾಸೆ ನೀಡುತ್ತಿದೆ. ಕೇವಲ ನಾಟಕ ಪ್ರದರ್ಶನಕ್ಕಷ್ಟೇ ಸೀಮಿತವಾಗುವುದಿಲ್ಲ. ವೈಚಾರಿಕ ಚಿಂತನೆಗಳಿಗೆ ಒತ್ತು ಕೊಟ್ಟು ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಅಕಾಡಮಿ ತೊಡಗಿಕೊಂಡಿದೆ. ರಂಗಭೂಮಿಯ ವಿವಿಧ ಪ್ರಕಾರದಲ್ಲಿ ನುರಿತ ಸದಸ್ಯರಿದ್ದು, ಕ್ರಿಯಾಶೀಲ ತಂಡವಾಗಿದೆ.
ರಂಗಭೂಮಿ ಕುರಿತು ದಾಖಲೀಕರಣ?
ಜೆ.ಲೋಕೇಶ್ ಅವರು ನಾಟಕ ಅಕಾಡಮಿ ಅಧ್ಯಕ್ಷರಾಗಿದ್ದಾಗ ರಂಗಭೂಮಿ ಕುರಿತು ದಾಖಲೀಕರಣ ಆರಂಭವಾಯಿತು. ಈಗ ಮತ್ತೆ ಮುಂದುವರಿಸಿದ್ದೇವೆ. ನಾಟಕ ಅಕಾಡಮಿಯಲ್ಲೇ ರಂಗಭೂಮಿಗೆ ಸಂಬಂಧಿಸಿದ ದಾಖಲೆಗಳಿರಲಿಲ್ಲ. ರಾಜ್ಯದ ಮೂಲೆ ಮೂಲೆಗಳಿಂದ ರಂಗಕರ್ಮಿಗಳ, ರಂಗತಂಡಗಳ ಹಾಗೂ ರಂಗಶಾಲೆಗಳ ಕುರಿತು ಮಾಹಿತಿ ಸಂಗ್ರಹಿಸಿದ್ದು ಕರ್ನಾಟಕ ನಾಟಕ ಅಕಾಡಮಿಯ ವೆಬ್‌ಸೈಟಿನಲ್ಲಿ ಸಿಗಲಿದೆ.
ಮೊದಲ ಹೆಜ್ಜೆಯಾಗಿ ರಂಗ ದಾಖಲೆಗಳನ್ನು ಎಚ್.ವಿ. ವೆಂಕಟಸುಬ್ಬಯ್ಯ, ಅಜ್ಜಂಪುರ ಕೃಷ್ಣಮೂರ್ತಿ ಅವರ ಹತ್ತಿರದಲ್ಲಿದ್ದ ರಂಗಸಂಗ್ರಹವನ್ನು ಗೌರವಧನ ಕೊಟ್ಟು ಈಗಾಗಲೇ ತರಲಾಗಿದೆ. ಈಗ ಮತ್ತೆ ರಂಗ ದಾಖಲೀಕರಣ ಮುಂದುವರಿಯುವುದು. ಇದು ಮಹತ್ವದ ಯೋಜನೆ.
ಪತ್ರಿಕೆ ತರುವ ಯೋಜನೆಯಿದೆಯೆ?
ಹೌದು. ’ರಂಗ ಸಂವಾದ’ ಎನ್ನುವ ತ್ರೈಮಾಸಿಕ ಪತ್ರಿಕೆ ಪ್ರಕಟಿಸುತ್ತೇವೆ. ಸೆಪ್ಟಂಬರ್ ಮೊದಲ ವಾರದಲ್ಲಿ ಮೊದಲ ಸಂಚಿಕೆ ಬಿಡುಗಡೆಯಾಗಲಿದೆ. ಇದರ ಸಂಪಾದಕರು ನಮ್ಮ ಅಕಾಡಮಿ ಸದಸ್ಯರಾದ ರವೀಂದ್ರನಾಥ್ ಸಿರವಾರ. ಕರ್ನಾಟಕ ಸಾಹಿತ್ಯ ಅಕಾಡಮಿಯು ‘ಅನಿಕೇತನ’ ಪತ್ರಿಕೆ ತಂದ ಹಾಗೆ ನಮ್ಮ ಅಕಾಡಮಿಯಿಂದಲೂ ‘ರಂಗ ಸಂವಾದ’ ಪತ್ರಿಕೆಯನ್ನು ನಿರಂತರವಾಗಿ ತರುತ್ತೇವೆ.
ಬೇರೆ ಬೇರೆ ಕಡೆ ನಾಟಕೋತ್ಸವ?
ಇದೇ ಆಗಸ್ಟ್ 27ರಿಂದ ಧಾರವಾಡದಲ್ಲಿ ಸಕ್ಕರಿ ಬಾಳಾಚಾರ್ಯರು ಅಂದರೆ ಶಾಂತಕವಿಗಳ ನೆನಪಿನಲ್ಲಿ ನಾಟಕೋತ್ಸವ ಆರಂಭವಾಗಲಿದೆ. ಮುಂದಿನ ತಿಂಗಳು ಅಂದರೆ ಸೆಪ್ಟಂಬರ್ ತಿಂಗಳಲ್ಲಿ ವಿನಯಪುರದಲ್ಲಿ ಮಹಿಳೆಯರೇ ಪ್ರಧಾನವಾಗಿರುವ ಶರಣರ ಕುರಿತ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಇದನ್ನು ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಏರ್ಪಡಿಸಲಾಗುವುದು. ಸೆಪ್ಟಂಬರ್ ಎರಡನೆಯ ವಾರದಲ್ಲಿ ಕೋಲಾರದ ಆದಿಮದಲ್ಲಿ (ಇದು ಕೋಟಿಗಾನಹಳ್ಳಿ ರಾಮಯ್ಯ ಅವರ ಸಂಸ್ಥೆ) ಸಹಯೋಗದಲ್ಲಿ ನಾಟಕೋತ್ಸವ ನಡೆಯಲಿದೆ. ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ನಾಟಕೋತ್ಸವ ಹಮ್ಮಿಕೊಳ್ಳುತ್ತೇವೆ. ಹೀಗೆ ವಿಭಾಗೀಯ ನಾಟಕೋತ್ಸವ ನಡೆಸಲು ತೀರ್ಮಾನಿಸಿದ್ದೇವೆ. ಹಾಗೆಯೇ ಆಯಾ ವಿಭಾಗಕ್ಕೆ ಬರುವ ಜಿಲ್ಲೆಗಳ ರಂಗಭೂಮಿಯ ಬೆಳವಣಿಗೆ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗುವುದು.
ಇದಲ್ಲದೆ ದಿಲ್ಲಿ, ಮುಂಬೈ, ಗೋವಾ ಹಾಗೂ ಚೆನ್ನೈನಲ್ಲೂ ನಾಟಕೋತ್ಸವವನ್ನು ಅಲ್ಲಿನ ಕನ್ನಡ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಏರ್ಪಡಿಸುತ್ತೇವೆ. ಈಗಾಗಲೇ ರಾಜ್ಯ ಸರಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿದೆ. ಇದಕ್ಕಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲೂ ಬಸವಾದಿ ಶರಣರ ಕುರಿತು ನಾಟಕ ಪ್ರದರ್ಶನ ಹಾಗೂ ಶರಣರ ಕುರಿತು ಉಪನ್ಯಾಸ, ವಿಚಾರ ಸಂಕಿರಣವನ್ನು ಏರ್ಪಡಿಸಲಾಗುವುದು.
ಡಿಸೆಂಬರ್ ತಿಂಗಳಿನಲ್ಲಿ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಕಾಲೇಜು ವಿದ್ಯಾರ್ಥಿಗಳ ನಾಟಕೋತ್ಸವ ಏರ್ಪಡಿಸಲಾಗುವುದು. ಪ್ರತೀ ಜಿಲ್ಲೆಯ ಒಂದು ನಾಟಕ ಒಳಗೊಂಡಂತೆ ನಾಲ್ಕು ಕಂದಾಯ ವಿಭಾಗಗಳಲ್ಲಿ ನಾಟಕ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಯಾಣ ವೆಚ್ಚ ನೀಡಲಾಗುವುದು ಜೊತೆಗೆ ಮೊದಲ ಬಹುಮಾನವಾಗಿ ರೂ. 50 ಸಾವಿರ, ಎರಡನೆಯ ಬಹುಮಾನವಾಗಿ ರೂ. 30 ಸಾವಿರ ಹಾಗೂ ಮೂರನೆಯ ಬಹುಮಾನವಾಗಿ ರೂ. 20 ಸಾವಿರ ನೀಡಲಾಗುವುದು.
ಇದಲ್ಲದೆ ರಾಜ್ಯದ 16 ಜಿಲ್ಲೆಗಳಲ್ಲಿ ಪ್ರತೀ ಕಂದಾಯ ವಿಭಾಗಕ್ಕೆ ನಾಲ್ಕರಂತೆ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತೇವೆ. ಈ ಶಿಬಿರಗಳನ್ನು ರಂಗತಜ್ಞರು ಹಾಗೂ ರಂಗನಿರ್ದೇಶಕರು ಮುನ್ನಡೆಸುವರು. ಆಸಕ್ತಿಯಿರುವ ಕಾಲೇಜುಗಳಲ್ಲಿ ಶಿಬಿರ ನಡೆಯುತ್ತವೆ. ಶಿಬಿರದ ನಿರ್ದೇಶಕರ ಸಂಭಾವನೆಯನ್ನು ಅಕಾಡಮಿ ಭರಿಸಲಿದೆ.
ನಾಟಕಕಾರರನ್ನು ಪ್ರೋತ್ಸಾಹಿಸುವ ಸಲುವಾಗಿ?
ಹೊಸ ನಾಟಕಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಏಳು ದಿನಗಳವರೆಗೆ ನಾಟಕ ರಚನಾ ಶಿಬಿರವನ್ನು ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳಿಯಲ್ಲಿ ಆಯೋಜಿಸಲಾಗಿದೆ. ನಾಟಕ ರಚಿಸುವ ಆಸಕ್ತ ಮೂವತ್ತು ಜನರಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಇದರ ವಯೋಮಿತಿ 25-40 ವಯಸ್ಸು. ಈ ಶಿಬಿರದಲ್ಲಿ ಭಾಗವಹಿಸುವವರಿಗೆ ಉಚಿತ ವಸತಿ ಹಾಗೂ ಊಟದ ಜೊತೆಗೆ ಪ್ರಯಾಣ ವೆಚ್ಚವೂ ನೀಡಲಾಗುವುದು.
ಇದರೊಂದಿಗೆ ಪೌರಾಣಿಕ ನಾಟಕಗಳನ್ನು ಉತ್ತೇಜಿಸುವ ಸಲುವಾಗಿ ಮೂರು ದಿನಗಳ ನಾಟಕೋತ್ಸವವನ್ನು ಆಯೋಜಿಸುವುದರ ಜೊತೆಗೆ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಪೌರಾಣಿಕ ನಾಟಕಗಳ ತರಬೇತಿ ಶಿಬಿರವೂ ನಡೆಯಲಿದೆ.
ಅಲ್ಲದೆ ರಾಜ್ಯಮಟ್ಟದಲ್ಲಿ ಹೈಸ್ಕೂಲಿನ ಶಿಕ್ಷಕರಿಗೆ ವಿಜ್ಞಾನ ನಾಟಕ ಹಾಗೂ ಮಕ್ಕಳ ನಾಟಕಗಳ ಕುರಿತು ರಂಗ ತರಬೇತಿ ಶಿಬಿರವನ್ನು ಡಿಸೆಂಬರ್ ತಿಂಗಳಲ್ಲಿ ಆಯೋಜಿಸುತ್ತೇವೆ.
ತಿಂಗಳಿಗೊಂದು ನಾಟಕ ಸಂಭ್ರಮ?
ರಾಜ್ಯದಾದ್ಯಂತ ಸಿದ್ಧವಾಗಿರುವ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿಯ ನಾಟಕಗಳ ಪ್ರದರ್ಶನ ಬೆಂಗಳೂರಿನ ಕಲಾಗ್ರಾಮದ ಸಮುಚ್ಚಯದಲ್ಲಿ ಪ್ರತೀ ತಿಂಗಳ ಮೂರನೇ ಶನಿವಾರ ನಡೆಯುತ್ತಿದೆ. ಇದರಲ್ಲಿ ಭಾಗವಹಿಸುವ ತಂಡಗಳಿಗೆ ಊಟ, ವಸತಿ ಹಾಗೂ ಗೌರವ ಸಂಭಾವನೆ ನೀಡಲಾಗುವುದು.
ಇದಲ್ಲದೆ ನಾಟಕ ರಚನಾ ಸ್ಪರ್ಧೆಯು ಜನವರಿಯಲ್ಲಿ ಹಮ್ಮಿಕೊಳ್ಳುತ್ತೇವೆ. ಉದಯೋನ್ಮುಖ ನಾಟಕಕಾರರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಿದ್ದೇವೆ. ಹೀಗೆಯೇ ಪ್ರತೀ ತಿಂಗಳ ಕೊನೆಯ ಶನಿವಾರ ರಂಗಭೂಮಿ ಕುರಿತು ಚರ್ಚೆ, ವಿಚಾರ ಸಂಕಿರಣ, ಹೊಸ ರಂಗ ಕೃತಿಯ ಓದು, ಹಿರಿಯ ರಂಗಕರ್ಮಿಗಳೊಂದಿಗೆ ಸಂವಾದ ನಮ್ಮ ನಾಟಕ ಅಕಾಡಮಿಯ ಆವರಣದ ರಂಗಚಾವಡಿಯಲ್ಲಿ ನಡೆಯಲಿದೆ.