ನೂರು ಪ್ರದರ್ಶನ ಕಂಡ ಮರ್ಡರ್ ಮಿಸ್ಟರಿಯ ‘ಚೆಕ್‌ಮೇಟ್’

ನಾಟಕ: ಚೆಕ್‌ಮೇಟ್ ಮೂಲ: ಯೋಗೇಶ್ ಸೋಮನ್ ಕನ್ನಡಕ್ಕೆ: ಡಾ. ತಿಪ್ಪೇಸ್ವಾಮಿ ಸಂಗೀತ: ಶ್ರೀನಿವಾಸ ಭಟ್ (ಚೀನಿ) ಸಂಗೀತ ನಿರ್ವಹಣೆ: ಅಂಜು ಸಿಂಗ್, ಧನಂಜಯ್ ಆರ್.ಸಿ. ರಂಗವಿನ್ಯಾಸ: ಎಚ್.ಕೆ. ದ್ವಾರಕಾನಾಥ್ ಬೆಳಕಿನ ವಿನ್ಯಾಸ: ಮಹೇಶ್ ಕಲ್ಲತ್ತಿ ರಂಗಸಜ್ಜಿಕೆ: ಪಿ. ಜನಾರ್ದನ್ ವಸ್ತ್ರಾಲಂಕಾರ: ಗೀತಾ ಮೋಂಟಡ್ಕ ನಿರ್ದೇಶನ: ಅನೂಪ್ ಜೋಶಿ (ಬಂಟಿ) ತಂಡ: ಮೈಸೂರು ರಂಗಾಯಣ

Update: 2024-11-22 10:37 GMT

‘‘ನೀವು ಎಂದಾದರೂ ನಿಮ್ಮನ್ನು ನೀವೇ ಕೊಂದುಕೊಂಡಿದ್ದೀರಾ? ಐ ಮೀನ್ ನಿಮ್ಮನ್ನು ನೀವೇ ಹತ್ಯೆ ಮಾಡಿಕೊಂಡಿದ್ದೀರಾ? ನಿಮ್ಮ ಹೆಸರಿನ ಮುಂದೆ ದಿವಂಗತ, ಲೇಟ್ ಎಂದು ಬರೆದದ್ದನ್ನು ಓದಿದ್ದೀರಾ? ಹೋಗಲಿ, ನಿಮ್ಮ ಹೆಂಡತಿಯನ್ನು ವಿಧವೆ ರೂಪದಲ್ಲಿ ನೋಡಿದ್ದೀರಾ? ಇಲ್ಲ ತಾನೆ? ಆದರೆ ನಾನು ನೋಡಿದ್ದೇನೆ. ನನ್ನನ್ನು ನಾನೇ ಹತ್ಯೆ ಮಾಡಿಕೊಂಡಿದ್ದೇನೆ...’’

‘ಚೆಕ್‌ಮೇಟ್’ ನಾಟಕ ಆರಂಭವಾಗುವುದೇ ಈ ಮಾತಿನಿಂದ. ಈ ಮಾತುಗಳು ನಚಿಕೇತ ಪಾತ್ರಧಾರಿ ಹುಲಗಪ್ಪ ಕಟ್ಟಿಮನಿ ಅವರವು. ಮುಂದುವರಿದು ‘‘ಮದುವೆಯಾಯಿತು, ಒಳ್ಳೆಯ ನೌಕರಿ. ನಾವು ಒಳ್ಳೆಯ ಗೃಹಸ್ಥ ಜೀವನವನ್ನು ಪ್ರಾರಂಭಿಸಿದೆವು. ನಾವಿಬ್ಬರೇ, ನಮ್ಮದೇ ಆದ ಮನೆ. ಒಟ್ಟು ದಿನಗಳು ಮಜವಾಗಿ ಕಳಿತಾ ಇದ್ವು. ಆದರೆ ಎಲ್ಲೋ ಏನೋ ಇದೇನಾ ನನ್ನ ಡೆಸ್ಟಿನಿ ಎನ್ನುವ ಪ್ರಶ್ನೆ ಕಾಡ್ತಾ ಇತ್ತು.

ವಿದೇಶಕ್ಕೆ ಹೋಗಬೇಕೆಂಬ ಬಲವಾದ ಇಚ್ಛಾಶಕ್ತಿ ಇರದೆ ಹೋಗಿದ್ರೆ ಹಗಲುರಾತ್ರಿ ಈ ಸೀಲಿಂಗ್ ಅನ್ನೇ ನೋಡ್ತಾ ನೋಡ್ತಾ ಹುಚ್ಚನಾಗಿಬಿಡ್ತಿದ್ದೆ’’ ಎನ್ನುವ ಮೂಲಕ ನಚಿಕೇತ ಹೊಸದೊಂದು ಸಂಚಿಗೆ ಮುಂದಾಗುತ್ತಾನೆ. ಮಜಾ ಉಡಾಯಿಸಬೇಕು, ವಿದೇಶಕ್ಕೆ ಹೋಗಬೇಕು... ಇದಕ್ಕಾಗಿ ದುಡ್ಡು ಹೊಂದಿಸಬೇಕು ಎನ್ನುವ ಹಂಬಲಕ್ಕೆ ವಿಮೆಯ ಮೊತ್ತ ಒಂದೆರಡು ಕಂತು ತುಂಬಿ ತಾನು ಅಪಘಾತದಲ್ಲಿ ಸತ್ತೆ ಎಂಬುದನ್ನು ಬಿಂಬಿಸುತ್ತಾನೆ. ಇದಕ್ಕಾಗಿ ಭಿಕ್ಷುಕನನ್ನು ಕೊಲ್ಲುತ್ತಾನೆ. ಇದಕ್ಕೂ ಮೊದಲು ಭಿಕ್ಷುಕನೊಂದಿಗೆ ಚಹಾ ಕುಡಿಯುತ್ತಾನೆ, ಊಟ ಮಾಡುತ್ತಾನೆ. ಹೀಗೆ ವಿಶ್ವಾಸ ಗಳಿಸಿಕೊಂಡು ಮುಂದೊಂದು ದಿನ ರೈಲಿನ ಪ್ರಯಾಣಕ್ಕೆ ಭಿಕ್ಷುಕನನ್ನೂ ಕರೆದೊಯ್ಯುತ್ತಾನೆ. ಆಮೇಲೆ ಆತನನ್ನು ಸಾಯಿಸಿ ತನ್ನ ಉದ್ಯೋಗದ ಉಡುಪು, ಗುರುತಿನಚೀಟಿಯನ್ನು ಭಿಕ್ಷಕನಿಗೆ ಹಾಕುತ್ತಾನೆ. ಹೀಗೆ ತಾನು ಸತ್ತೆನೆಂದು ಸಾಬೀತುಪಡಿಸಿ ಹೆಂಡತಿ ನಂದಿನಿ ಮೂಲಕ ವಿಮೆಯ 50 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಪಡೆದುಕೊಳ್ಳುತ್ತಾನೆ. ಹೀಗೆ ಪಡೆದುಕೊಳ್ಳುವ ಮುನ್ನ ಪೊಲೀಸ್ ಠಾಣೆ, ವಿಮಾ ಕಚೇರಿ ಅಲೆದುದು, ಅಲ್ಲಿನ ವಿಚಾರಣೆ, ಪೊಲೀಸರ ಹಾಗೂ ವಿಮಾ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ನಂದಿನಿ... ಅಂತೂ ಕೊನೆಗೆ ಪರಿಹಾರದ ಐವತ್ತು ಲಕ್ಷ ರೂಪಾಯಿ ಚೆಕ್ ಪಡೆದುಕೊಂಡು ಬರುವಲ್ಲಿಗೆ ಯಶಸ್ವಿಯಾಗುತ್ತಾಳೆ. ಆದರೆ ಅಸಲಿ ಆಟ ಶುರುವಾಗುವುದು ಈಗ. ಚೆಕ್ ಮೊತ್ತದ ನಗದಿನೊಂದಿಗೆ ಇನ್ನೇನು ಕೆನಡಾಕ್ಕೆ ಹೊರಡಬೇಕೆಂದು ಸಿದ್ಧತೆಯಲ್ಲಿರುವಾಗ ಕ್ರೈಮ್ ಬ್ರ್ಯಾಂಚ್ ಇನ್‌ಸ್ಪೆಕ್ಟರ್ ಸತ್ಯಶೀಲ ಸತ್ಯನ ಪ್ರವೇಶವಾಗುತ್ತದೆ. ಆಗ ನಚಿಕೇತ ಹಾಗೂ ನಂದಿನಿ ಗಾಬರಿಯಾಗುತ್ತಾರೆ. ಬಾಗಿಲಿನ ಕರೆಗಂಟೆಗೆ ಮಹಡಿಗೆ ಹೋಗುವ ನಚಿಕೇತ, ಸತ್ಯಶೀಲ ಸತ್ಯನ ಪ್ರಶ್ನೆಗಳಿಗೆ ಉತ್ತರಿಸಲು ನಂದಿನಿ ತಡವರಿಸುತ್ತಾಳೆ.

ಹಾರ ಹಾಕಿದ ನಚಿಕೇತನ ಫೋಟೊ, ಹಾರ ನೋಡುವ ಸತ್ಯಶೀಲ, ‘‘ಸದೃಢನಾಗಿರುವ ನಚಿಕೇತ ಎಪ್ಪತ್ತು ಕಿಲೋ ತೂಗಬಹುದು. ಆದರೆ ಅಪಘಾತದಲ್ಲಿ ಸತ್ತ ನಚಿಕೇತನ ತೂಕ ಕೇವಲ 45 ಕಿಲೋ. ಎಪ್ಪತ್ತು ಮೈನಸ್ ನಲ್ವತ್ತೈದು. ಸಿಂಪಲ್ ಮೆಥೆಮೆಟಿಕ್ಸ್ 25’’ ಎಂದು ಕೇಳುವ ಮೂಲಕ ನಂದಿನಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ಹೀಗೆ ಮುಂದುವರಿಯುವ ನಾಟಕದಲ್ಲಿ ಕುಡಿಯಲು ನೀರು ಕೇಳುವ ಸತ್ಯಶೀಲನಿಗೆ, ನೀರು ತರಲು ನಂದಿನಿ ಒಳಹೋದಾಗ ಆಕೆಯ ವ್ಯಾನಿಟಿಬ್ಯಾಗಿನಲ್ಲಿ ಸಿಗುವ ಆಸ್ಪತ್ರೆಯ ಚೀಟಿಯನ್ನು ಎತ್ತಿಟ್ಟುಕೊಳ್ಳುತ್ತಾನೆ. ಮರುದಿನ ವಿಚಾರಣೆಗೆ ಬಂದು ‘‘ನಚಿಕೇತ ಸತ್ತು ಆರು ತಿಂಗಳಾಯಿತು. ನೀನೀಗ ನಾಲ್ಕು ತಿಂಗಳ ಗರ್ಭಿಣಿ’’ ಎನ್ನುತ್ತಾನೆ.

‘‘ಚದುರಂಗದ ಹಾಸು ಬಿಚ್ಚಿಯಾಗಿದೆ. ಅವನು ನನಗೆ ಚೆಕ್ ಕೊಟ್ಟಿದ್ದಾನೆ. ತಿರುಗಿ ನಾವು ಅವನನ್ನು ಚೆಕ್‌ಮೇಟ್ ಮಾಡಬೇಕು’’ ಎನ್ನುವ ನಚಿಕೇತ, ನಂದಿನಿಗೆ ಅಬಾರ್ಷನ್ ಮಾಡಿಸಿಕೊಳ್ಳಲು ಒತ್ತಾಯಿಸುತ್ತಾನೆ. ಮೊದಮೊದಲು ಒಪ್ಪದ ನಂದಿನಿ ಕೊನೆಗೆ ಒಪ್ಪಿಕೊಳ್ಳುತ್ತಾಳೆ. ‘‘ಅಬಾರ್ಷನ್ ಮಾಡಿಸಿಕೊಳ್ಳಲು ಇಂಥ ಆಸ್ಪತ್ರೆಗೆ ಸೇರಿದ್ದೆ’’ ಹೀಗೆ ಹೇಳುವ ಮೂಲಕ ಸತ್ಯಶೀಲ, ನಂದಿನಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ‘‘ಏ ಮೇಡಮ್, ಮಲಗಿದ್ದೀಯಾ? ಮಲಗು, ಆರಾಮವಾಗಿ ಮಲಗು. ಗಂಡನನ್ನು ಕೊಲೆ ಮಾಡಿದೆ. ಅಂಥಾ ಕೆಟ್ಟವನಾ ಅವನು. ಒಳ್ಳೆ ಹ್ಯಾಂಡ್ಸಮ್ ಆಗಿದ್ದ. ಆ ಲಾಕಪ್ಪಿನ ಆ ಗೋಡೆಗಳ ರಂಗೇ ಬೇರೆ. ಪಾಚಿಗಟ್ಟಿರುತ್ತೆ. ಈ ಮನೆಯಲ್ಲಿ ನಿನಗೆ ಕೊನೆ ನಿದ್ದೆ. ನಾಳೆಯಿಂದ ನೀನು ಲಾಕಪ್‌ನಲ್ಲಿ ಮಲಗಬೇಕಾಗುತ್ತೆ. ಥರ್ಡ್ ಡಿಗ್ರಿ ಪನಿಶ್‌ಮೆಂಟ್ ಬಳಸಬೇಕಾದ ಅಗತ್ಯವಿಲ್ಲ’’ ಎಂದು ಎಚ್ಚರಿಸುತ್ತಾನೆ. ಆತ ಹೋದ ಮೇಲೆ ಮಹಡಿಯಿಂದ ಬರುವ ನಚಿಕೇತ ‘‘ಚದುರಂಗದ ಬಾಜಿಯಲ್ಲಿ ಇದು ಆನೆಯ ನೇರವಾದ ಅಟ್ಯಾಕ್. ಇದರ ವಿರುದ್ಧ ಕುದುರೆಯ ಕೌಂಟರ್ ಅಟ್ಯಾಕ್ ಮಾಡಿ ನಮ್ಮ ವಿರುದ್ಧದ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಬೇಕು’’ ಎನ್ನುತ್ತಾನೆ. ಆಗ ಸತ್ಯಶೀಲ, ನಂದಿನಿಗೆ ಆಫರ್ ಕೊಡುತ್ತಾನೆ. ‘‘ನಿನ್ನ ಗಂಡನನ್ನು ನೀನೇ ಕೊಂದೆಯೆಂದು ಜೈಲು ಸೇರುತ್ತೀಯಾ? ಐವತ್ತು ಲಕ್ಷ ರೂಪಾಯಿಯೊಂದಿಗೆ ನನ್ನ ಮದುವೆಯಾಗುತ್ತೀಯಾ?’’ ಎಂದು ಕೇಳುತ್ತಾನೆ. ಈ ಆಫರನ್ನೂ ನಂದಿನಿ ಒಪ್ಪಿಕೊಳ್ಳುತ್ತಾಳೆ. ಇದಕ್ಕಾಗಿ ನಚಿಕೇತನನ್ನೂ ತೊರೆದು ಹೋಗಲು ಸಿದ್ಧಳಾಗುತ್ತಾಳೆ. ಕೊನೆಗೆ ‘‘ಆಪರೇಷನ್ ಗೋಲ್ಡ್‌ಫಿಶ್ ಸಕ್ಸಸ್‌ಫುಲ್. ಚೆಕ್ ಆ್ಯಂಡ್ ಚೆಕ್‌ಮೇಟ್’’ ಎಂದು ಹೇಳುವಲ್ಲಿಗೆ ನಾಟಕ ಕೊನೆಗೊಳ್ಳುತ್ತದೆ.

ಅಪರಾಧಿ ಯಾರು ಎನ್ನುವ ಹುಡುಕಾಟವೇ ನಾಟಕದ ತಿರುಳು ಹಾಗೂ ಮಹತ್ವದ್ದು. ಯಾರು ಯಾರಿಗೆ ಚೆಕ್‌ಮೇಟ್ ಕೊಟ್ಟರು ಎನ್ನುವ ಕುತೂಹಲ ಕೊನೆಯವರೆಗೂ ನಾಟಕ ಉಳಿಸಿಕೊಳ್ಳುತ್ತದೆ.

ಇದೇ 17ರಂದು ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ ‘ಚೆಕ್‌ಮೇಟ್’ ನೂರನೆಯದಾಗಿತ್ತು. ಅವತ್ತು ಮೊದಮೊದಲು ನೋಡಿದ ಪ್ರೇಕ್ಷಕರೊಂದಿಗೆ ಹೊಸ ತಲೆಮಾರಿನ ಪ್ರೇಕ್ಷಕರು ಹೆಚ್ಚು ಬಂದಿದ್ದರಿಂದ ಭೂಮಿಗೀತ ರಂಗಮಂದಿರ ಹೌಸ್‌ಫುಲ್ ಆಗಿತ್ತು.

ನಚಿಕೇತನಾಗಿ ಹುಲಗಪ್ಪ ಕಟ್ಟಿಮನಿ, ನಂದಿನಿಯಾಗಿ ಗೀತಾ ಮೋಂಟಡ್ಕ ಹಾಗೂ ಸತ್ಯಶೀಲ ಸತ್ಯನಾಗಿ ಪ್ರಶಾಂತ್ ಹಿರೇಮಠ ಅಭಿನಯಿಸದೆ ಪಾತ್ರಗಳೇ ಅವರಾಗಿದ್ದಾರೆ. ಮಾಗಿದ ಅವರ ಅಭಿನಯ ಇಂದಿನ ತಲೆಮಾರಿನ ಕಲಾವಿದರಿಗೆ ಮಾದರಿ. ಎರಡೂಕಾಲು ಗಂಟೆಯ ಈ ನಾಟಕ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಆದರೆ ಪ್ರೇಕ್ಷಕರ ಚಪ್ಪಾಳೆಯ ಪ್ರೋತ್ಸಾಹದಿಂದ ಸ್ವಲ್ಪ ಎಳೆದ ಹಾಗೆ ಅನ್ನಿಸುವುದು ಸಹಜ. ಇದಕ್ಕಾಗಿ ಎರಡು ಗಂಟೆಗೆ ಕೊನೆಗೊಳಿಸುವುದು ಸೂಕ್ತವೆನ್ನಿಸುತ್ತದೆ. ದ್ವಾರ್ಕಿ ಅವರ ರಂಗವಿನ್ಯಾಸ ಹಾಗೂ ಮಹೇಶ್ ಕಲ್ಲತ್ತಿ ಅವರ ಬೆಳಕಿನ ಸಂಯೋಜನೆ ಗಮನಾರ್ಹ.

ಮರಾಠಿ ಮೂಲದ ಈ ನಾಟಕದಲ್ಲಿ ಕ್ರೈಮ್, ಥ್ರಿಲ್ಲರ್ ಇದೆ. 2007ರಿಂದ ಪ್ರದರ್ಶನಗೊಂಡ ಈ ನಾಟಕ ಈಗ ಹೆಚ್ಚು ಪ್ರಸ್ತುತವಾಗುತ್ತಿದೆ. ಹೆಚ್ಚಿದ ಹೊಸ ಬಗೆಯ ಅಪರಾಧ ಪ್ರಕರಣಗಳು, ಹೊಸ ಬಗೆಯ ಅಪರಾಧಿಗಳು... ಹೀಗೆ ಗಮನಿಸಬಹುದಾದ ಅಂಶಗಳೂ ಇವೆ.

‘‘ಇಂಥದ್ದೇ ಕ್ರೈಮ್, ಥ್ರಿಲ್ಲರ್ ಒಳಗೊಂಡ ‘ಪ್ರತಿಶೋಧ’ ನಾಟಕವು ಬಿ.ವಿ. ಕಾರಂತರು ರಂಗಾಯಣದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಪ್ರದರ್ಶನಗೊಂಡಿತ್ತು. ಕೃಷ್ಣಪ್ರಸಾದ್ ರಚನೆಯ ಪ್ರತಿಶೋಧ ನಾಟಕವನ್ನು ಪಿ. ಗಂಗಾಧರಸ್ವಾಮಿ ನಿರ್ದೇಶಿಸಿದ್ದರು. ‘ಚೆಕ್‌ಮೇಟ್’ ಕೂಡಾ ಮರ್ಡರ್ ಮಿಸ್ಟರಿ. ಈ ಮೂಲಕ ವೃತ್ತಿ ಕಂಪೆನಿಯ ವೃತ್ತಿಪರತೆ ನೆನಪಾಯಿತು. ಇದು ನಟರ ಮೂಲಕ ಗೆಲ್ಲುವ ನಾಟಕ’’ ಎಂದು ರಂಗಕರ್ಮಿ ಸಿ.ಬಸವಲಿಂಗಯ್ಯ ಮೆಚ್ಚಿಕೊಂಡರು.

ಈ ನಾಟಕದ ಹಾಗೆ ಮೈಸೂರು ರಂಗಾಯಣದ ಶೂದ್ರತಪಸ್ವಿ, ಕಿಂದರಿಜೋಗಿ, ಪುಗಳೇಂದಿ ಪ್ರಹಸನ, ಕೃಷ್ಣೇಗೌಡನ ಆನೆ ನಾಟಕಗಳು ನೂರಾರು ಪ್ರದರ್ಶನ ಕಂಡಿವೆ. ಈ ಸಾಲಿಗೆ ‘ಚೆಕ್‌ಮೇಟ್’ ನಾಟಕ ಕೂಡಾ ಸೇರಿದೆ. ಹಿರಿಯ ಕಲಾವಿದರಾದ ಹುಲಗಪ್ಪ ಕಟ್ಟಿಮನಿ ಹಾಗೂ ಪ್ರಶಾಂತ್ ಹಿರೇಮಠ ಅವರು ರಂಗಾಯಣದಿಂದ ನಿವೃತ್ತಿಯಾಗಿದ್ದರೂ ಈ ನಾಟಕದ ಮೂಲಕ ಮತ್ತೆ ರಂಗಕ್ಕೇರಿದರು. ನಾಟಕ ಮುಗಿದ ನಂತರ ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ‘‘ಹಳೆಯ ನಾಟಕಗಳ ಮರುಪ್ರದರ್ಶನಕ್ಕೆ ಈ ನಾಟಕ ಮುನ್ನುಡಿ’’ ಎಂದಾಗ ಪ್ರೇಕ್ಷಕರೆಲ್ಲ ಜೋರಾದ ಚಪ್ಪಾಳೆ ಮೂಲಕ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News