ಮೈಸೂರಿನ ರಂಗ ‘ರತ್ನ’ ಕಣ್ಮರೆ

ಆಷಾಢಭೂತಿ, ರಕ್ತಾಕ್ಷಿ, ಕದಡಿದ ನೀರು, ಜೋಕುಮಾರಸ್ವಾಮಿ, ತುಘಲಕ್, ಸ್ವಪ್ನ ವಾಸವದತ್ತಾ, ಸತ್ತವರ ನೆರಳು ಮೊದಲಾದ ನಾಟಕಗಳನ್ನು ನಿರ್ದೇಶಿಸಿದರು. ಇದರೊಂದಿಗೆ ಅಸಂಗತ ನಾಟಕಗಳ ಕಾಲದಲ್ಲಿ ಅವರು ಎಲ್ಲಿಗೆ, ಬೊಂತೆ, ನಿಮ್ಮ ಓಟು ಯಾರಿಗೆ? ಮೊದಲಾದ ಅಸಂಗತ ನಾಟಕಗಳನ್ನು ರಚಿಸಿ, ನಿರ್ದೇಶಿಸಿದರು. ಅಲ್ಲದೆ ಮೈಸೂರು ಆಕಾಶವಾಣಿಯ ನಟರಾಗಿ, ನಾಟಕಕಾರರಾಗಿದ್ದ ಅವರು, ಕೆಲ ಸಿನೆಮಾಗಳಲ್ಲೂ ನಟಿಸಿದರು. ಇಂತಹ ರತ್ನ ಅವರು ಕರ್ನಾಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳ ಪುರಸ್ಕೃತರು.

Update: 2024-06-21 09:49 GMT

ಮೈಸೂರಿನಲ್ಲಿ ಕಳೆದ ವಾರ ಖ್ಯಾತ ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರು ನಿಧನರಾದ ಒಂದು ವಾರದಲ್ಲೇ ಅವರ ನಿಡುಗಾಲದ ಗೆಳೆಯ ರಂಗಕರ್ಮಿ ನ.ರತ್ನ ಇನ್ನಿಲ್ಲವಾಗಿದ್ದಾರೆ. ಅವರಿಬ್ಬರ ನಿಧನದಿಂದ ನಿಜವಾಗಿಯೂ ಸಾಂಸ್ಕೃತಿಕ ಲೋಕ ಬಡವಾಗಿದೆ.

ಹವ್ಯಾಸಿ ರಂಗಭೂಮಿಯ ಪ್ರಮುಖರಲ್ಲಿ ಒಬ್ಬರಾಗಿದ್ದ ನ.ರತ್ನ ಅವರು ನಾಟಕ ರಚನೆಕಾರರಾಗಿ, ನಟರಾಗಿ, ನಿರ್ದೇಶಕರಾಗಿ ಹಾಗೂ ಸಂಘಟನಕಾರರಾಗಿ ಹೆಸರಾದವರು. ತಮ್ಮ ಗೆಳೆಯರೊಂದಿಗೆ ನಾಟಕದ ಸಲುವಾಗಿ ತಾಲೀಮು ನಡೆಸುತ್ತಿದ್ದ ಜಾಗವನ್ನೇ ಕೇಂದ್ರವಾಗಿರಿಸಿಕೊಂಡು ರೂಪಿಸಿದ ಭಿನ್ನ ಹೆಸರಿನ ‘ಸಮತೆಂತೊ’ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ತಂಡದ ರೂವಾರಿಯಾಗಿದ್ದರು ಜೊತೆಗೆ ಅದನ್ನು ಐವತ್ತು ವರ್ಷಗಳವರೆಗೆ ಮುನ್ನಡೆಸಿದ ಹೆಗ್ಗಳಿಕೆ ಅವರದು. ಸದಾ ಚಟುವಟಿಕೆಯ, ಮೃದು ಮಾತಿನ ಅವರದು ವಿಶಿಷ್ಟ ಧ್ವನಿ. ‘‘ಸಮಾಜಕ್ಕೆ ಮಾತು ಕಲಿಸಿದವರು, ರಂಗಭೂಮಿಗೆ ಮಾತು ಕೊಟ್ಟವರು’’ ಎನ್ನುತ್ತಾರೆ ಹಿರಿಯ ರಂಗಕರ್ಮಿ ಎಸ್.ಆರ್.ರಮೇಶ್.

ನ.ರತ್ನ ಜನಿಸಿದ್ದು 1934ರ ಡಿಸೆಂಬರ್ 12ರಂದು ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ತಾಣವಾದ ಚಿದಂಬರಂನಲ್ಲಿ. ಅವರ ತಂದೆ ಡಾ.ನಟೇಶ್ ಹಾಗೂ ತಾಯಿ ವಿಠೂಬಾಯಿ ಅಮ್ಮಾಳ್. ಮೈಸೂರಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಬಿ.ಎ. ಹಾಗೂ ಬಿ.ಇಡಿ. ಪದವಿ ಗಳಿಸಿದ ನಂತರ ನ್ಯೂಯಾರ್ಕ್ ನ ಹಂಟರ್ ವಿಶ್ವವಿದ್ಯಾನಿಲಯದಿಂದ ಎಜ್ಯುಕೇಷನ್ ಆಫ್ ದಿ ಬ್ಲೈಂಡ್‌ನಲ್ಲಿ ಎಂ.ಎಸ್. ಪದವಿ ಪಡೆದರು. ಜೊತೆಗೆ ವಾಶಿಂಗ್ಟನ್ ಡಿ.ಸಿ. ಗ್ಯಾಲೋಡೆಟ್ ಕಾಲೇಜಿನಿಂದ ಸ್ಪೀಚ್ ಪೆಥಾಲಜಿ ಹಾಗೂ ಆಡಿಯೊಲಜಿಯಲ್ಲಿ ಎಂ.ಎಸ್. ಪದವಿ ಪಡೆದರು. ಆನಂತರ ಬ್ಲೂಮಿಂಗ್ಟನ್ ಇಂಡಿಯಾ ವಿಶ್ವವಿದ್ಯಾನಿಲಯದಿಂದ ಸ್ಪೀಚ್ ಪೆಥಾಲಜಿ ಹಾಗೂ ಆಡಿಯೊಲಾಜಿಯಲ್ಲಿ ಎಂಎಟಿ ಹಾಗೂ ಸ್ಪೆಷಲ್ ಎಜ್ಯುಕೇಷನ್ ಮತ್ತು ಎಜ್ಯುಕೇಷನಲ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು. ಅಂಧರ ಹಾಗೂ ಕಿವುಡರ ಶಿಕ್ಷಣದಲ್ಲಿ ಅಮೆರಿಕದ ಡಾಕ್ಟರೇಟ್ ಪದವಿ ಪಡೆದ ಮೂರನೇ ಭಾರತೀಯ ಅವರು. ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಪರಿಣತರಾದ ಅವರು 1965ರಲ್ಲಿ ಮೈಸೂರಿನಲ್ಲಿ ಆರಂಭವಾದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಲ್ಲಿ ಮೊದಲ ಉದ್ಯೋಗಿಯಾಗಿ ಸೇರಿದರು. ನಂತರ ಅದರ ಮೊದಲ ನಿರ್ದೇಶಕರೂ ಆದರು. 1985ರಲ್ಲಿ ಮುಂಬೈನಲ್ಲಿ ಆರಂಭಗೊಂಡ ‘ಅಲಿ ಯಾವರ್ ಜಂಗ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ದಿ ಹಿಯರಿಂಗ್ ಇಂಪೇರ್ಡ್‌’ ಸಂಸ್ಥೆಯ ಸ್ಥಾಪಕ ಸದಸ್ಯರು ಕೂಡಾ. ನಂತರ ಇದರ ನಿರ್ದೇಶಕರಾಗಿ ಹೆಸರಾದರು. ಪ್ರಭಾವಶಾಲಿ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳನ್ನು ರೂಪಿಸಿದರು. ಆಯಿಷ್ ಸಂಸ್ಥೆಯನ್ನು ಜನಮುಖಿಯಾಗಿಸಿದರು. ಇದು ಅವರ ವೃತ್ತಿಗೆ ಸಂಬಂಧಿಸಿದ್ದಾದರೂ ಅವರು ಹೆಸರಾಗಿದ್ದು ರಂಗಭೂಮಿ ಮೂಲಕ. ವೃತ್ತಿ ಬೇರೆಯಾದರೂ ರಂಗಪ್ರೀತಿಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದರು.

ಆಷಾಢಭೂತಿ, ರಕ್ತಾಕ್ಷಿ, ಕದಡಿದ ನೀರು, ಜೋಕುಮಾರಸ್ವಾಮಿ, ತುಘಲಕ್, ಸ್ವಪ್ನ ವಾಸವದತ್ತಾ, ಸತ್ತವರ ನೆರಳು ಮೊದಲಾದ ನಾಟಕಗಳನ್ನು ನಿರ್ದೇಶಿಸಿದರು. ಇದರೊಂದಿಗೆ ಅಸಂಗತ ನಾಟಕಗಳ ಕಾಲದಲ್ಲಿ ಅವರು ಎಲ್ಲಿಗೆ, ಬೊಂತೆ, ನಿಮ್ಮ ಓಟು ಯಾರಿಗೆ? ಮೊದಲಾದ ಅಸಂಗತ ನಾಟಕಗಳನ್ನು ರಚಿಸಿ, ನಿರ್ದೇಶಿಸಿದರು. ಅಲ್ಲದೆ ಮೈಸೂರು ಆಕಾಶವಾಣಿಯ ನಟರಾಗಿ, ನಾಟಕಕಾರರಾಗಿದ್ದ ಅವರು, ಕೆಲ ಸಿನೆಮಾಗಳಲ್ಲೂ ನಟಿಸಿದರು. ಇಂತಹ ರತ್ನ ಅವರು ಕರ್ನಾಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ಸರಕಾರದಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳ ಪುರಸ್ಕೃತರು. ಇದಿಷ್ಟೇ ಅವರ ಕುರಿತಿಲ್ಲ. ರಂಗಕರ್ಮಿ ಜನ್ನಿ ‘‘ಅವರು ಬಹುತ್ವ ಕುರಿತು ಭಾಷಣ ಮಾಡಲಿಲ್ಲ, ಬದುಕಿ ತೋರಿಸಿದರು. ರಂಗಬಳಗಕ್ಕೆ ಪ್ರತಿಕ್ಷಣ ಕ್ರಿಯಾತ್ಮಕವಾಗಿ ನಿರೂಪಿಸಿದರು. ಎಲ್ಲರನ್ನು ಅಂದರೆ ಸಣ್ಣವರನ್ನೂ ಬಹುವಚನದಲ್ಲಿ ಮಾತಾಡಿಸುತ್ತಿದ್ದರು’’ ಎನ್ನುತ್ತಾರೆ. ‘‘ಮಾನವೀಯ ಮೌಲ್ಯಗಳನ್ನು, ನೈತಿಕ ಮೌಲ್ಯಗಳನ್ನು ಸಾಂಸ್ಕೃತಿಕವಾಗಿ ಬಹಳ ಫಲವತ್ತಾಗಿ ಬೆಳೆಸುವ ನಿರ್ದಿಷ್ಟ ಗುರಿಗಳು ಅವರಿಗಿದ್ದವು. ಗೌರವ ಮತ್ತು ಘನತೆಯ ಪ್ರತಿರೂಪದಂತಿದ್ದ ಅವರು, ರಂಗಭೂಮಿಗೊಂದು ಘನತೆಯಿದೆ, ಇದನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕಲಿಸಿದರು. ಸೌಹಾರ್ದವನ್ನು, ಸಮಾನತೆಯನ್ನು ಕೊನೆಕ್ಷಣದವರೆಗೆ ಪಾಲಿಸಿಕೊಂಡು ಬಂದರು’’ ಎನ್ನುವ ಹೆಮ್ಮೆ ಜನ್ನಿ ಅವರದು.

ರಂಗಮನೆ: ಮೈಸೂರಿನ ಸರಸ್ವತಿಪುರಂನ ಜೋಡಿರಸ್ತೆಯ ಲ್ಲಿರುವ ರತ್ನ ಅವರ ಮನೆಯು ರಂಗಕರ್ಮಿಗಳಿಗೆ ರಂಗಮನೆಯಾಗಿತ್ತು ಜೊತೆಗೆ ಮಹಾಮನೆಯಾಗಿತ್ತು. ಅವರು ಬೆಂಗಳೂರಿಗೆ ಹೊರಡುವಾಗ ನಿರಂತರ ತಂಡದ ಸದಸ್ಯರ ಬಳಿ ತಮ್ಮ ಮನೆಯ ಕೀಲಿ ಕೊಟ್ಟು ಹೋಗುತ್ತಿದ್ದರು. ಈಚಿನ ವರ್ಷಗಳಲ್ಲಿ ಕೆಂಪರಾಜು ಹಾಗೂ ಅವರ ಕುಟುಂಬ ಅವರನ್ನು ಚೆನ್ನಾಗಿ ನೋಡಿಕೊಂಡಿತು. ‘‘ಅವರದು ಬತ್ತದ ಪ್ರೀತಿ, ಜೀವನೋತ್ಸಾಹ. ಸಮಯಕ್ಕೆ ಮಹತ್ವ ಕೊಡುತ್ತಿದ್ದ ಅವರ ಬದ್ಧತೆ, ಶಿಸ್ತನ್ನು ರಂಗಭೂಮಿಯ ಯುವತಲೆಮಾರು ಅಳವಡಿಸಿಕೊಳ್ಳಬೇಕಿದೆ’’ ಎನ್ನುವ ನಿರಂತರ ತಂಡದ ಸುಗುಣ ಅವರು ‘‘ಒಮ್ಮೆ ರಂಗತಂಡದ ಕಲಾವಿದರು ನಾಟಕದ ದಿನ ತಡವಾಗಿ ಬಂದು, ತಡರಾತ್ರಿಯವರೆಗೆ ಮಾತಾಡುವುದನ್ನು ಕೇಳಿಸಿಕೊಂಡ ರತ್ನ ಅವರ ಇನ್ನೊಂದು ಮನೆಯಲ್ಲಿ ಬಾಡಿಗೆಗಿದ್ದ ವೈದ್ಯರು, ಬಹಳ ತೊಂದರೆ ಆಗುತ್ತದೆ ಎಂದು ಹೇಳಿದರು. ಆಗ ರತ್ನ ಅವರು ರಂಗಭೂಮಿಯವರು ಹಾಗೇನೇ. ಭಾವನಾತ್ಮಕವಾಗಿ ಇರ್ತೇವೆ. ನಿಮಗೆ ತೊಂದರೆಯಾದರೆ ಬೇರೆ ಮನೆ ನೋಡಿಕೊಳ್ಳಿ’’ ಎಂದದ್ದನ್ನು ಸ್ಮರಿಸಿದರು.

‘‘ರತ್ನ ಅವರು ಯು.ಆರ್.ಅನಂತಮೂರ್ತಿ, ಪಂ.ರಾಜೀವ್ ತಾರಾನಾಥ್ ಅವರಂಥ ವಿದ್ವತ್ತಿನ ಸಂಪರ್ಕದ ಜೊತೆಗೆ ಯುವತಲೆಮಾರಿನವರೊಂದಿಗೆ ನಿರಂತರ ಸಂಪರ್ಕದಲ್ಲಿರು ತ್ತಿದ್ದರು. ಎಲ್ಲರ ಯೋಗಕ್ಷೇಮ ವಿಚಾರಿಸುತ್ತಿದ್ದರು. ಜೊತೆಗೆ ಮಾರ್ಗದರ್ಶನ ನೀಡುತ್ತಿದ್ದರು. ತಮ್ಮ ಬದುಕಿನ ಪ್ರತಿಕ್ಷಣವನ್ನೂ ಅವರು ಜೀವಿಸಿದರು. ತಮ್ಮ ದೊಡ್ಡ ವ್ಯಕ್ತಿತ್ವವನ್ನು ತಮ್ಮ ಮಕ್ಕಳಾದ ಅಜಿತ್ ಹಾಗೂ ಕವಿತಾ ಅವರಿಗೆ ಧಾರೆ ಎರೆದರು’’ ಎಂದು ಸುಗುಣ ಮೆಲುಕು ಹಾಕಿದರು.

ನಿರಂತರ ತಂಡದ ಶ್ರೀನಿವಾಸ್ ಪಾಲಹಳ್ಳಿ ಅವರು ‘‘ರಂಗಭೂಮಿಯವರನ್ನು ಸದಾ ಗೌರವದಿಂದ ಕಾಣುತ್ತಿದ್ದರು. ಅವರಿಗೆ ಅಜಿತ್, ಕವಿತಾ ಅವರು ಮಾತ್ರ ಮಕ್ಕಳಲ್ಲ, ರಂಗಭೂಮಿಯವರೆಲ್ಲ ಮಕ್ಕಳೇ. ವೈಯಕ್ತಿಕವಾಗಿ ಪ್ರೀತಿ ಸಿಗುವುದು ಸಹಜ. ಆದರೆ ಸಾರ್ವಜನಿಕವಾಗಿ ಪ್ರೀತಿ ಸಿಗುವುದು ಅಪರೂಪ. ಅವರು ಎಲ್ಲರನ್ನೂ ಪ್ರೀತಿಸಿದರು. ಇದರಿಂದ ಅವರಿಗೂ ಪ್ರೀತಿ, ಗೌರವ ಸಿಕ್ಕಿತು. ಊರಿಗೆ ಹೊರಡುವಾಗ ಫ್ರಿಜ್ಜಲ್ಲಿ ತರಕಾರಿ, ಹಾಲು ಇದೆ. ಅಕ್ಕಿಯೂ ಇದೆ. ಅಡುಗೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದ ಅವರಿಗೆ ರಂಗಭೂಮಿಯವರ ಕಷ್ಟ ಗೊತ್ತಿತ್ತು. ಇದಕ್ಕಾಗಿ ಸದಾ ಸ್ಪಂದಿಸುತ್ತಿದ್ದರು’’ ಎಂದು ಸ್ಮರಿಸಿದರು.

ಆದರೆ ರತ್ನ ಅವರು ಅಷ್ಟಾಗಿ ಪ್ರಸಿದ್ಧಿಗೆ ಬರಲಿಲ್ಲ ಎನ್ನುವುದನ್ನು ಹಿರಿಯ ಪತ್ರಕರ್ತರಾಗಿದ್ದ ಜಿ.ಎನ್.ರಂಗನಾಥ ರಾವ್ ಅವರು ತಮ್ಮ ಲೇಖನದಲ್ಲಿ ಹೀಗೆ ಹೇಳಿದ್ದಾರೆ - ‘ಇವತ್ತಿನ ತಲೆಮಾರಿಗೆ ರತ್ನ ಅವರು ಅಪರಿಚಿತರಾಗಿ ಕಂಡರೆ ಅದಕ್ಕೆ, ಅವರು ಪ್ರಚಾರಪ್ರಿಯರಲ್ಲ ಇತ್ಯಾದಿ ಹಲವಾರು ಕಾರಣಗಳಿರಬಹುದು, ಆಶ್ಚರ್ಯವೇನಿಲ್ಲ. ಆದರೆ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಶಿಕ್ಷಣತಜ್ಞರಾಗಿ ಸಮಾಜದ ದೈಹಿಕ ನ್ಯೂನತೆಗಳ ಚಿಕಿತ್ಸಕರಾದರೆ, ಕಲಾವಿದರಾಗಿ ಸಮಾಜದ ಬುದ್ಧಿ-ಭಾವಗಳಿಗೆ ಸಾಣೆ ಹಿಡಿಯುವ ಇನ್ನೊಂದು ತೆರನ ಡಾಕ್ಟರು. ರತ್ನ ಅವರಿಗೆ ಈ ವೃತ್ತಿಪ್ರವೃತ್ತಿಗಳೆರಡೂ ಅವರ ತಂದೆಯಿಂದ ಬಂದ ಬಳುವಳಿಯಂತೆ ಕಾಣುತ್ತದೆ. ನಟೇಶನ್ ಅವರದು ಕನ್ನಡಿಗರು ಮರೆಯಲಾಗದಂಥ ಹೆಸರು. ಬೆಂಗಳೂರಿನಲ್ಲಿ ಎಂ.ವಿ. ಗೋಪಾಲಸ್ವಾಮಿಯವರು ಕಟ್ಟಿದ್ದ ಆಕಾಶವಾಣಿಯನ್ನು ನಟೇಶನ್ ಬೆಳೆಸಿದರು. ವೈವಿಧ್ಯಮಯ ಕಾರ್ಯಕ್ರಮಗಳು, ನಾವೀನ್ಯತೆ ಮತ್ತು ದಕ್ಷ ಆಡಳಿತದಿಂದ ಬೆಂಗಳೂರು ಆಕಾಶವಾಣಿಗೆ ಭದ್ರವಾದ ಸಾಂಸ್ಕೃತಿಕ ಬುನಾದಿ ನಿರ್ಮಿಸಿದ ಕೀರ್ತಿ ನಟೇಶನ್ ಅವರಿಗೆ ಸಲ್ಲುತ್ತದೆ. ನಟೇಶನ್ ಅವರು ಆಕಾಶವಾಣಿ ಸೇರುವುದಕ್ಕೆ ಮುನ್ನ ಮೈಸೂರಿನ ಅಂಧ ಮತ್ತು ಕಿವುಡರ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಮೈಸೂರಿನ ಹವ್ಯಾಸಿ ರಂಗಭೂಮಿಯಲ್ಲಿ ಅಭಿನಯ ಮೊದಲಾದವುಗಳಿಂದ ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದರು. ಇಂತಹ ಸಂಸ್ಕಾರಜನ್ಯ ರತ್ನ ಅವರೂ ರಂಗಭೂಮಿಯಲ್ಲಿ ಬೆಳಗಿದರು’ ಎಂದಿರುವುದು ಗಮನಾರ್ಹ.

ನ.ರತ್ನ ಅವರು ರಚಿಸಿದ, ಅಭಿನಯಿಸಿದ ಕೊನೆಯ ನಾಟಕ ‘ಆಯಾನ್ ಶಾಂತಿ ಕುಟೀರ’. ಇದು ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಗಾಲಿಕುರ್ಚಿಯ ಮೇಲೇ ಕುಳಿತು ಅಭಿನಯಿಸಿದ ರತ್ನ ಅವರು, ಈ ನಾಟಕದ ಮೂಲಕ ಹಿರಿಯರ ಕಷ್ಟಗಳನ್ನು, ಸಂಕಟಗಳನ್ನು, ಸವಾಲುಗಳನ್ನು ಸಮರ್ಥವಾಗಿ ಅನಾವರಣಗೊಳಿಸಿದ್ದರು. ತಾವಷ್ಟೇ ಅಲ್ಲ, ತಮ್ಮ ಸಮಕಾಲೀನರಾದ ರಾಮೇಶ್ವರಿ ವರ್ಮಾ, ಶ್ರೀಮತಿ ಅವರನ್ನೂ ತೊಡಗಿಸಿದ್ದರು.

ಮೈಸೂರು ಆಕಾಶವಾಣಿ ಪ್ರಸಾರಗೊಳಿಸುವ ‘ನಾನು ನ.ರತ್ನ’ ಎನ್ನುವ ಸರಣಿ ಮಾಲಿಕೆಯಲ್ಲಿ ತಮ್ಮ ಬದುಕನ್ನು ಕುರಿತು ಅವರು ವಿವರಿಸುತ್ತಿದ್ದರು. ಈಗ ಆಕಾಶವಾಣಿ ಮೂಲಕ ಅವರ ಧ್ವನಿಯಷ್ಟೇ ಕೇಳಲು ಸಾಧ್ಯ ಎನ್ನುವುದು ಸಂಕಟದ ಸಂಗತಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News