ಹಿರಿಯ ಜೀವಗಳ ಜೀವಾಳವಾದ ‘ಕಾಲಚಕ್ರ’

ನಾಟಕ: ಕಾಲಚಕ್ರ ತಂಡ: ರಂಗಸಮೂಹ ಮಂಚಿಕೇರಿ ಮರಾಠಿ ಮೂಲ: ಜಯವಂತ ದಳವಿ ಕನ್ನಡಕ್ಕೆ: ಎಚ್.ಕೆ. ಕರ್ಕೇರ ವಿನ್ಯಾಸ, ನಿರ್ದೇಶನ: ಹುಲಗಪ್ಪ ಕಟ್ಟಿಮನಿ ಸಹನಿರ್ದೇಶನ: ಸಾಲಿಯಾನ್ ಉಮೇಶ ನಾರಾಯಣ ಸಂಚಾಲಕರು: ರಾಮಕೃಷ್ಣ ಭಟ್ ದುಂಡಿ, ಎಂ.ಕೆ.ಭಟ್ ಬೆಳಕು: ನಾಗರಾಜ ಹೆಗಡೆ ಜಾಲಿಮನೆ ಸಂಗೀತ: ಕಿರಣ್ ಹೆಗಡೆ

Update: 2024-06-14 09:52 GMT

‘‘ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಾರೆ. ಹಾಗೆನೇ ವಯಸ್ಸಾದ ತಂದೆ-ತಾಯಿಗಳು ಅನಾಥರಾಗಿದ್ದಲ್ಲಿ ಅವರನ್ನು ಯಾಕೆ ದತ್ತು ಪಡೆಯಬಾರದು? 70-75 ವರ್ಷ ವಯಸ್ಸಿನವರನ್ನು ಹಾಗೆ ದತ್ತು ಪಡೆಯಬಹುದಲ್ಲ? ದಂಪತಿ ಉಪಲಬ್ಧರು’

ಇಂಥದೊಂದು ಜಾಹೀರಾತನ್ನು ಮುಖ್ಯ ಪಾತ್ರವಾದ ವಿಠಲ ಇನಾಮದಾರರು ‘ಸಮಾಚಾರ’ ಪತ್ರಿಕೆಯಲ್ಲಿ ಕೊಡುತ್ತಾರೆ. ಅವರ ಪತ್ನಿ ರುಕ್ಮಿಣಿಯ ಕಾಲಿಗೆ ಪೆಟ್ಟಾದಾಗ ನೋಡಿಕೊಳ್ಳಲು ಯಾರೂ ಇಲ್ಲವೆಂದು ಜಾಹೀರಾತು ಕೊಡುತ್ತಾರೆ. ಅವರಿಗೆ ಇಬ್ಬರು ಪುತ್ರರು, ಸೊಸೆ ಇದ್ದಾಗಲೂ! ನಂತರ ಜಾಹೀರಾತು ನೋಡಿದ ರಾಘವ ಕರಂಕರ್ ಅವರು ಕರೆದುಕೊಂಡು ತಮ್ಮ ಮನೆಗೆ ಹೋಗುತ್ತಾರೆ. ರಾಘವ ಅವರಿಗೆ ತಂದೆ-ತಾಯಿಯೂ ಇರುವುದಿಲ್ಲ, ಮಕ್ಕಳೂ ಇರುವುದಿಲ್ಲ.

ಇದು ‘ಕಾಲಚಕ್ರ’ ನಾಟಕದ ಬಹಳ ಗಮನಾರ್ಹವಾದ ದೃಶ್ಯ. ಇದರಲ್ಲಿ ಇಡೀ ನಾಟಕದ ತಿರುಳಿದೆ. ಅಕಾಡಮಿ ಆಫ್ ಮ್ಯೂಸಿಕ್ ಸಂಸ್ಥೆಯು ಮೂರು ದಿನಗಳ ನಾಟಕೋತ್ಸವವನ್ನು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಕಳೆದ ವಾರ ಏರ್ಪಡಿಸಿತ್ತು. ಇದನ್ನು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ ಸಂಘಟಿಸಿದ್ದರು. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯ, ದುಂಡಿ ಭಟ್ಟರ ನೇತೃತ್ವದ ರಂಗಸಮೂಹ ತಂಡವು ರವಿವಾರ (ಜೂನ್ 9) ಪ್ರಸ್ತುತಪಡಿಸಿದ ‘ಕಾಲಚಕ್ರ’ ನಾಟಕ ಹೆಚ್ಚು ಸೇರಿದ್ದ ಪ್ರೇಕ್ಷಕರಿಗೆ ಹಿಡಿಸಿತು.

ನಾಟಕ ಆರಂಭವಾಗುವುದೇ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ ಸಿನೆಮಾ ಹಾಡನ್ನು ಹೆಗಲಿಗೆ ನೇತು ಹಾಕಿಕೊಂಡಿರುವ ರೇಡಿಯೊ ಕೇಳುತ್ತ ಬರುವ ಇನಾಮದಾರರ ಮೂಲಕ. ಆಗ ಅವರ ಹೆಂಡತಿ ರುಕ್ಮಿಣಿ ಟಿವಿ ನೋಡುತ್ತಿರುತ್ತಾರೆ. ರೇಡಿಯೊ ಕೇಳುವುದರಲ್ಲೇ ಮಗ್ನರಾಗಿದ್ದ ಇನಾಮದಾರರಿಗೆ ಫೋನ್ ರಿಂಗಾಗುವುದು ಕೇಳಿಸುವುದಿಲ್ಲ. ಅವರ ಹೆಂಡತಿಯೇ ನೆನಪಿಸುತ್ತಾರೆ. ಆಗ ರಿಸೀವರ್ ಎತ್ತಿ ಮಾತನಾಡುವ ಇನಾಮದಾರರು ತಮ್ಮ ಮನೆತನಕ್ಕೆ ಬ್ರಿಟಿಷರು 1914ರಲ್ಲಿ ಇನಾಮು ನೀಡಿದ್ದಕ್ಕೆ ಇನಾಮುದಾರರು ಎನ್ನುವ ಹೆಸರು ಬಂತೆಂದು ಹೇಳುವ ಹೊತ್ತಿಗೆ ದೂರವಾಣಿ ಕಟ್ ಆಗುತ್ತದೆ. ಅವರು ಗಡಿಯಾರ ದುರಸ್ತಿ ಮಾಡುವವರು. ಅಂಗಡಿಯಿಂದ ತಂದ ವಡೆಯನ್ನು ರುಕ್ಮಿಣಿಗೂ ಕೇಳುತ್ತಾರೆ. ‘ಸಣ್ಣ ಚೂರು ಕೊಡಿ’ ಎಂದು ಕೇಳುವ ಆಕೆಗೆ ‘‘ಬೇಗ ತಿಂದು ಬಿಡಿ. ಸೊಸೆ ಬಂದರೆ ಡಯಟಿಂಗ್ ಎಂದು ಹೆದರಿಸುತ್ತಾಳೆ’’ ಎಂದು ಎಚ್ಚರಿಕೆಯನ್ನೂ ನೀಡುತ್ತಾಳೆ. ಬಳಿಕ ಕಿಟಕಿ ಬಳಿ ನಿಲ್ಲುವ ರುಕ್ಮಿಣಿ ‘‘ಮನುಷ್ಯ ಸಾಯಬೇಕು ಅನ್ನಿಸಿದಾಗ ಸಾಯುವಂಗ ಇದ್ದಿದ್ರೆ ಚೆನ್ನಾಗಿರುತ್ತಿತ್ತು. ಆ ಇಚ್ಛಾಮರಣದ ಕಾಯ್ದೆ ಬಂತೇನು?’’ ಎಂದು ಕೇಳುತ್ತಾಳೆ. ಇಲ್ಲವೆಂದು ಇನಾಮದಾರರು ಹೇಳಿದಾಗ ‘‘ಸಾಯೋಕಾದ್ರೂ ಆಗ್ತಿತ್ತು’’ ಎನ್ನುವ ಆಕೆಗೆ ‘‘ಹಾಗೆ ಸಾಯಬೇಕು ಅಂದ್ರೆ ಸಾವಿರಾರು ದಾರಿಗಳಿವೆ. ನಮ್ಮಪ್ಪ ಬಾವಿಗೆ ಹಾರಿ ಸಾಯಲಿಲ್ವೆ?’’ ಎನ್ನುವ ಇನಾಮದಾರರು ‘‘ಹಂಗಂತ ನೀನು ಕಿಟಕಿ ಹಾರಿ ಸಾಯೋಕೆ ಹೋಗಬೇಡ. ಕೈಕಾಲು ಮುರಿದೀತು’’ ಎಂದು ಹೇಳುತ್ತಾರೆ. ‘‘ಸಾಯೋಕಾದ್ರೂ ತ್ರಾಣ ಎಲ್ಲಿದೆ?’’ ಎನ್ನುವ ರುಕ್ಮಿಣಿ ‘‘ಬಿಪಿ ಮಾತ್ರೆ ತಂದ್ರಾ?’’ ಎಂದು ಕೇಳುತ್ತಾಳೆ. ‘‘ವಡೆಯ ಮಂಜು ಅಂಗಡಿಯಲ್ಲೇ ಬಿಟ್ಟು ಬಂದೆ’’ ಎನ್ನುತ್ತಾರೆ ಇನಾಮದಾರರು. ಮಗ ತಂದಾನೆಂಬ ಭರವಸೆ ರುಕ್ಮಿಣಿಗೆ.

‘‘ನಾವು ಎಲ್ಲಾದರೂ ಹೋಗಿ ಸಾಯಲೇಬೇಕು. ಹೋಗೋಣ’’ ಎಂದ ಇನಾಮದಾರರಿಗೆ ‘‘ಎಲ್ಲಿ ಹೋಗಿ ಸಾಯಬೇಕು?’’ ಎಂದು ರುಕ್ಮಿಣಿ ಕೇಳುತ್ತಾಳೆ. ಹೀಗೆ ಸಾಯುವ ಕುರಿತು ಮಾತನಾಡಲು ಕಾರಣ ಅವರ ಮಕ್ಕಳು ಸರಿಯಾಗಿ ನೋಡದೆ ಇರುವುದಕ್ಕೆ ಜೊತೆಗೆ ಸಿಟ್ಟಾಗುವ, ಸಿಡುಕುವ ಸೊಸೆ. ಹೀಗಿರುವಾಗ ಚಿಕಿತ್ಸಾ ಶಾಲೆಯಲ್ಲಿ ಕಲಿಯುವಾಗ ಪರಿಚಯವಾಗಿದ್ದ ಶರಧಿನಿಯ ನೆನಪು ಆಗಾಗ ಮಾಡಿಕೊಳ್ಳುತ್ತಾರೆ ಇನಾಮದಾರರು. ಕವನ ಸಂಕಲನ ಕಳಿಸಿಕೊಟ್ಟಿದ್ದನ್ನೂ ಹೇಳುತ್ತಾರೆ.

ಹೀಗೆ ಹಿರಿಯರ ಹಳವಂಡಗಳು, ನೆನಪುಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ ಈ ನಾಟಕ. ಔಷಧಿ ತಯಾರಿಸುವ ಕಂಪೆನಿಯಲ್ಲಿ ಕೆಲಸ ಮಾಡುವ ಇನಾಮದಾರರ ಚಿಕ್ಕಮಗ ಶರತ್, ತನ್ನ ಹೆತ್ತವರಿಗೇ ಸರಿಯಾಗಿ ಔಷಧಿಯನ್ನು ತಂದುಕೊಡುವುದಿಲ್ಲ. ‘‘ಔಷಧಿ ತಯಾರಿಸೋ ಕಂಪೆನೀಲಿ ಕೆಲಸ ಮಾಡುವ ನೀನು ಸಾಯೋಕೆ ಉಪಯೋಗ ಆಗುವಂಥ ಔಷಧಿ ಕಂಡು ಹಿಡಿಬಾರ್ದು?’’ ಎಂದು ರುಕ್ಮಿಣಿ ಕೇಳುವ ಮಾತು ಮನ ತಟ್ಟುತ್ತದೆ. ಹೀಗಿರುವಾಗ ತನ್ನ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸಾಗ ಹಾಕಬೇಕೆಂದು ಶರತ್ ಹಾಗೂ ವಿಶ್ವನಾಥ ನಿರ್ಧರಿಸುತ್ತಾರೆ.

‘‘ಇನ್ವೆಸ್ಟ್‌ಮೆಂಟ್ ರೂಪದಲ್ಲಿ ಮಕ್ಕಳನ್ನು ಬೆಳೆಸುವುದಲ್ಲ. ನಾವೇನು ಇನ್ವೆಸ್ಟ್‌ಮೆಂಟ್ ಅಲ್ಲ’’ ಎನ್ನುವ ಶರತ್‌ಗೆ ಇನಾಮದಾರರು ‘‘ಇನ್ವೆಸ್ಟ್‌ಮೆಂಟ್ ಅಲ್ಲ ಅಂಥ ನೀನು ಹೇಳ್ತಿ. ನನಗ ಕಲಿಸಲಿಲ್ಲಂತ ವಿಶ್ವ ಹೇಳ್ತಾನೆ. ನನ್ನ ಗಡಿಯಾರ ರಿಪೇರಿಯ ಸಂಪಾದನೆಯಲ್ಲಿ ಏನು ಮಾಡಬಹುದಿತ್ತು? ಆದರೂ ತಂದೆ-ತಾಯಿಯನ್ನು ನೋಡಲಿಕ್ಕೆ ನಿಮಗಾಗಲ್ಲ. ರಾಘವ-ಇರಾವತಿಗೆ ನಾವೇನು? ನಾವೇನೂ ಅಲ್ಲ, ನಮ್ಮನ್ನು ಕರ್ಕೊಂಡು ಸಾಕ್ತಾರೆ’’ ಎನ್ನುವ ಭರವಸೆ ಅವರಿಗೆ. ತಮ್ಮ ಮಕ್ಕಳ ಮನೆಯಲ್ಲಿ ದುಃಖ, ಸಂಕಟ, ಬೇಸರ ಅನುಭವಿಸುತ್ತಿದ್ದ ಅವರನ್ನು ಅವರ ಮಕ್ಕಳು ಚಾರಿಟಿ ಹೋಂಗೆ ಸೇರಿಸುತ್ತಾರೆ. ಹೀಗಿದ್ದಾಗಲೇ ಅವರ ಮನೆಗೆ ರಾಘವ ಬಂದು ತಮ್ಮ ಮನೆಯಲ್ಲಿ ಇರಿಸಿಕೊಳ್ಳುವ ಭರವಸೆ ನೀಡುತ್ತಾರೆ. ಆಗ ವಿಶ್ವ, ಶರತ್ ಇಬ್ಬರೂ ‘‘ಇನ್ನೊಬ್ಬರ ಹೆತ್ತವರನ್ನು ಸಾಕುವ ಉದ್ದೇಶವೇನು?’’ ಎಂದು ಕೇಳುತ್ತಾರೆ. ಆಗ ರಾಘವ ‘‘ಇದರಲ್ಲಿ ಲಾಭನಷ್ಟದ ಉದ್ದೇಶವಿಲ್ಲ. ಅವರ ಜೀವನವನ್ನು ಸುಖಮಯ ಮಾಡುವುದಾಗಿದೆ’’ ಎನ್ನುತ್ತಾರೆ. ಆಗ ಶರತ್ ‘‘ಇದು ತಲೆಹರಟೆ’’ ಎಂದು ಬಯ್ಯುತ್ತಾನೆ. ಅಲ್ಲದೆ ರಾಘವನ ಹೆತ್ತವರ ಕುರಿತು ವಿಚಾರಿಸುತ್ತಾರೆ.

‘‘15 ದಿನದ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡೆ. ಅಪ್ಪ ಮನೆ ಬಿಟ್ಟು ಹೋದರು’’ ಎಂದು ರಾಘವ ಹೇಳಿದಾಗ ‘‘ನಿಮ್ಮಪ್ಪ ತಿರುಗಿ ಬಂದರೆ ನಮ್ಮ ಅಪ್ಪ-ಅಮ್ಮನನ್ನು ವಾಪಸ್ ಕಳಿಸುವಿರಾ?’’ ಎಂದು ಪ್ರಶ್ನಿಸುತ್ತಾರೆ. ‘‘ನಾವೆಲ್ಲ ಒಟ್ಟಿಗೇ ಇರ್ತೀವಿ’’ ಎಂದು ರಾಘವ ಭರವಸೆ ನೀಡುತ್ತಾರೆ. ಹೀಗಿರುವಾಗಲೇ ಚಾರಿಟಿ ಹೋಂನಿಂದ ಇನಾಮದಾರರು-ರುಕ್ಮಿಣಿ ವಾಪಸ್ ಮನೆಗೆ ಬರುತ್ತಾರೆ. ಆಗ ವಿಶ್ವ, ಶರತ್ ಗಾಬರಿಯಾಗಿ ಹೇಗೆ ತಪ್ಪಿಸಿಕೊಂಡು ಬಂದಿರೆಂದು ಕೇಳುತ್ತಾರೆ. ‘‘ಅಲ್ಲಿ ಕಣ್ಣೆದುರೇ ಸಾಯುವುದನ್ನು ಕಂಡೆವು’’ ಎಂದು ಇನಾಮದಾರರು ಕಳವಳಪಡುತ್ತಾರೆ. ಆಗ ರಾಘವ ಪ್ರವೇಶಿಸಿ ತನ್ನ ಮನೆಗೆ ಆಹ್ವಾನಿಸುತ್ತಾರೆ. ಜೊತೆಗೆ ಅಪ್ಪ, ಅಮ್ಮ ಎಂದು ಕರೆದಾಗ ಇಬ್ಬರೂ ಖುಷಿಯಾಗುತ್ತಾರೆ. ಇವರ ಮನೆಗೆ ಬರುವ ಬಾಬೂರಾವ್ ತಮಗೆ ಕಿವುಡತನವಿದೆಯೆಂದು ನಟಿಸುತ್ತಾರೆ. ಆದರೆ ನಿಜವಾಗಿಯೂ ಅವರು ಕಿವುಡರಲ್ಲ ಎಂದು ಆಮೇಲೆ ಸಾಬೀತುಪಡಿಸುತ್ತಾರೆ. ತಾನು ಕಿವುಡನೆಂದು ತನ್ನೆದುರೇ ತನ್ನ ಕುರಿತು ಮಾತನಾಡುವುದನ್ನೂ ಕೇಳಿಸಿಕೊಳ್ಳುತ್ತಾರೆ. ಹೀಗೆ ತಮಾಷೆಯಿಂದ ನಾಟಕ ಸಾಗುವಾಗ ಅವರ ಜೀವನವೇ ಮುಗಿದುಹೋಗುತ್ತದೆ. ಅಂದರೆ ರುಕ್ಮಿಣಿ ನಂತರ ಇನಾಮದಾರರು ಮೃತರಾಗುತ್ತಾರೆ. ಇಲ್ಲಿಗೆ ನಾಟಕ ಮುಗಿಯುತ್ತದೆ.

ಹಿರಿಯರಿಗೆ ಬೇಕಾದುದು ನೆಮ್ಮದಿ, ತೃಪ್ತಿ ಎನ್ನುವುದನ್ನು ಈ ನಾಟಕ ಮನದಟ್ಟು ಮಾಡುತ್ತದೆ ಜೊತೆಗೆ ವಯಸ್ಸಾದವರು ಹೊರೆಯಲ್ಲ, ಅವರನ್ನು ಪ್ರೀತಿಯಿಂದ ಕಾಣಿರಿ ಎನ್ನುವ ಸಂದೇಶವೂ ಇದೆ. ಇನಾಮದಾರರಾಗಿ ನಾಗರಾಜ ಹೆಗಡೆ, ರುಕ್ಮಿಣಿಯಾಗಿ ಯಕ್ಷಗಾನ ಕಲಾವಿದೆ ನಿರ್ಮಲಾ ಹೆಗಡೆ ಮನದಲ್ಲಿ ಉಳಿಯುತ್ತಾರೆ. ಬಾಬೂರಾವ್ ಪಾತ್ರಧಾರಿ ಎಂ.ಕೆ.ಭಟ್ ತಮ್ಮ ತಮಾಷೆಯಿಂದ ಪ್ರೇಕ್ಷಕರನ್ನು ಖುಷಿಯಾಗಿಡುತ್ತಾರೆ. ಇವರೊಂದಿಗೆ ಕಿರಣ್ ಹೆಗಡೆ, ಸುಬೋಧ ಹೆಗಡೆ, ಪ್ರಕಾಶ ಭಟ್, ಅಮೃತಾ ಪೂಜಾರಿ, ರಕ್ಷಿತಾ ಹೂಗಾರ... ಹೀಗೆ ಎಲ್ಲರೂ ಅಭಿನಯಿಸಿಲ್ಲ, ಪಾತ್ರವೇ ತಾವಾಗಿದ್ದಾರೆ. ಇವರನ್ನು ಹೀಗೆ ತಿದ್ದಿ ತೀಡಿದವರು ನಿರ್ದೇಶಕ ಹುಲಗಪ್ಪ ಕಟ್ಟಿಮನಿ.

ಹಳೆಯ ಸಿನೆಮಾ ಹಾಡುಗಳನ್ನು ಸನ್ನಿವೇಶಗಳಿಗೆ ತಕ್ಕಂತೆ ಬಳಸಿಕೊಂಡಿರುವುದು ಗಮನಾರ್ಹ. ಹಳೆಯ ಗಡಿಯಾರ, ಟ್ರಂಕು, ಬಾಗಿಲು... ಹೀಗೆ ರಂಗಸಜ್ಜಿಕೆಯೂ ಚೆನ್ನಾಗಿದೆ.

ಹಿರಿಯರು ಹೊರೆಯೆಂದು ತಿಳಿಯುವ ಮಕ್ಕಳಿಗೆ ತಿಳಿವಳಿಕೆ ನೀಡುವ ಎರಡು ಗಂಟೆಯ ಈ ನಾಟಕದಲ್ಲೊಂದು ಪುಟ್ಟ ವಿರಾಮವಿದೆ. ಆದರೆ ಎರಡು ಗಂಟೆಯ ಬದಲು 15ರಿಂದ ಅರ್ಧ ತಾಸಿನಷ್ಟು ನಾಟಕವನ್ನು ಎಡಿಟ್ ಮಾಡಿ ಆಡಿದರೆ ಚೆನ್ನ ಎನ್ನಿಸುತ್ತದೆ. ಕುರುಡರ ಪ್ರವೇಶ, ಬಾಬೂರಾವ್ ಅವರ ತಮಾಷೆಯ ಸನ್ನಿವೇಶಗಳಿಗೆ ಸ್ವಲ್ಪ ಕತ್ತರಿ ಹಾಕಬಹುದು. ಏಕೆಂದರೆ ಪ್ರೇಕ್ಷಕರ ತಾಳ್ಮೆಯನ್ನೂ ಈ ನಾಟಕ ಬಯಸುತ್ತದೆ. ಅದರಲ್ಲೂ ಪ್ರತೀ ದೃಶ್ಯಗಳಿಗೆ ಪ್ರೇಕ್ಷಕರ ಚಪ್ಪಾಳೆಯಿಂದ ಉತ್ತೇಜನಗೊಳ್ಳುವ ಕಲಾವಿದರು ಮತ್ತಷ್ಟು ಎಳೆಯುತ್ತಾರೆಂದು ಅನ್ನಿಸುತ್ತಿತ್ತು.

‘‘60 ವರ್ಷಗಳ ಹಿಂದೆ ಜಯವಂತ ದಳವಿ ಅವರು ಮರಾಠಿಯಲ್ಲಿ ಬರೆದ ಈ ನಾಟಕ ಈಗಲೂ ಎಷ್ಟು ಪ್ರಸ್ತುತ ನೋಡ್ರಿ’’ ಎಂದು ಮೆಚ್ಚುಗೆಯಾಡಿದರು ಲೇಖಕರಾದ ಜಯಂತ ಕಾಯ್ಕಿಣಿ. ಅಂದ ಹಾಗೆ ಈ ನಾಟಕ ಇದೇ ಜೂನ್ 22ರಂದು ಸಂಜೆ 6:30 ಗಂಟೆಗೆ ಶಿರಸಿಯ ಎಪಿಎಂಸಿ ಯಾರ್ಡಿನ ಟಿಆರ್‌ಸಿ ಸಭಾಂಗಣದಲ್ಲಿ ಕ್ಯಾನ್ಸರ್ ರೋಗಿಗಳ ಸಹಾಯಾರ್ಥವಾಗಿ ಆಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News