ರಂಗಾಯಣ ರಂಗ ಸಮಾಜದ ನೆಲೆ-ಬೆಲೆ

ನಿರ್ದೇಶಕರಿಲ್ಲದೆ ರಂಗಾಯಣಗಳು ಚಟುವಟಿಕೆಗಳಿಲ್ಲದೆ ನಿಷ್ಕ್ರಿಯಗೊಂಡಿವೆ. ಬೇರೆ ಇಲಾಖೆ ರೀತಿ ಕಾರಕೂನಿಕೆಯಂತೆ ಕೆಲಸ ನಡೆಯುತ್ತಿದೆ. ರಂಗ ಚಟುವಟಿಕೆಗಳಿಲ್ಲ. ನಾಟಕಗಳಾಗುತ್ತಿಲ್ಲ. ಇದರಿಂದ ಪ್ರೇಕ್ಷಕರಿಲ್ಲ. ಮುಖ್ಯವಾಗಿ ಅನುದಾನ ಕೊಟ್ಟಿಲ್ಲ. ಸಹಜವಾಗಿ ರಂಗ ಚಟುವಟಿಕೆಗಳು ನಡೆಯುತ್ತಿಲ್ಲ.

Update: 2024-07-05 08:50 GMT

ಆ ಘಟನೆ ಈಗಲೂ ನೆನಪಿದೆ.

ಆಗ ಧರಂಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದರು. ಎಂ.ಪಿ. ಪ್ರಕಾಶ್ ಅವರು ಉಪಮುಖ್ಯಮಂತ್ರಿಯಾಗಿ ದ್ದರು. ರಂಗಸಮಾಜದ ಅತ್ಯಂತ ಕಿರಿಯ ಸದಸ್ಯ ನಾನು. ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯ ಹವಾನಿಯಂತ್ರಿತ ಕೋಣೆಯಲ್ಲಿ ಅದೊಂದು ದಿನ ಮಧ್ಯಾಹ್ನ ಸಭೆ ನಿಗದಿಯಾಗಿತ್ತು. ಆಗ ಇದ್ದುದು ಮೈಸೂರು ರಂಗಾಯಣ ಒಂದೇ. ಇಲ್ಲಿನ ಕಲಾವಿದರ ಸಂಬಳ ಹೆಚ್ಚಿಸಬೇಕೆಂಬ ಬಹುವರ್ಷಗಳ ಬೇಡಿಕೆ ಕುರಿತು ಚರ್ಚೆ ಶುರುವಾಯಿತು. ಆಗ ಇದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖ್ಯ ಕಾರ್ಯದರ್ಶಿಗಳು ಆರ್ಥಿಕ ಇಲಾಖೆಯವರಿಗೆ ಹಾಗೆ ಕೊಡಲಾಗುತ್ತಾ? ಬಜೆಟ್ ಇದೆಯಾ... ಎಂದು ಕೇಳುತ್ತ ಅಡ್ಡಗಾಲು ಹಾಕುತ್ತಿದ್ದರು. ಇದನ್ನು ಕೇಳುತ್ತಿದ್ದ ರಂಗ ಸಮಾಜದ ಸದಸ್ಯರಾರೂ ತಕರಾರು ಎತ್ತಲಿಲ್ಲ. ಆಗ ನಾನು ಎದ್ದು ನಿಂತು ಎಂ.ಪಿ.ಪ್ರಕಾಶ್ ಅವರಿಗೆ ‘‘ಸರ್, ರಂಗಾಯಣದ ಕಲಾವಿದರ ಸಂಬಳ ಹೆಚ್ಚು ಮಾಡಲು ಮುಖ್ಯ ಕಾರ್ಯದರ್ಶಿಗಳಾದ ಮೇಡಂ ತಕರಾರು ಎತ್ತುತ್ತಿದ್ದಾರೆ. ರಂಗಾಯಣ ಮುಚ್ಚಿಬಿಡಿ ಸರ್. ಸಹಿ ಮಾಡಿ ಹೋಗಿಬಿಡ್ತೀವಿ’’ ಎಂದೆ. ಅದುವರೆಗೆ ಸುಮ್ಮನಿದ್ದ ಎಲ್ಲರೂ ದಂಗಾದರು. ‘‘ಹಾಗಲ್ರಿ’’ ಎಂದು ಪ್ರಕಾಶ್ ಅವರು ಹೇಳಹೊರಟಾಗ ‘‘ಏನ್ ಸಾರ್? ನಿಮ್ಮದೇ ಸರಕಾರ, ಸಂಸ್ಕೃತಿ ಕುರಿತು ಅಪಾರ ಕಾಳಜಿ ಉಳ್ಳವರು. ನೀವು ಸುಮ್ಮನಿದ್ದೀರಿ. ಮೇಡಂ ತಕರಾರು ತೆಗೆದಾಗಲೂ ತಾವು ಮಾತನಾಡಲಿಲ್ಲ. ಮಂಗಳೂರಿನಿಂದ ರಾತ್ರಿ ಪ್ರಯಾಣಿಸಿ ಬಂದೆ. ಸಭೆ ಫಲಪ್ರದವಾಗಬೇಕೆಂದು ಬಂದಿರ್ತೀವಿ. ಇಲ್ಲಿಗೆ ಬಂದು ಹಾಜರಾಗುವುದು ಟಿ.ಎ., ಡಿ.ಎ.ಗೆ ಅಲ್ಲ ಸರ್’’ ಎಂದೆ. ‘‘ಆಯಿತು. ಸಂಬಳ ಏರಿಸೋಣ’’ ಎಂದು ಭರವಸೆ ನೀಡಿದರು. ಆಮೇಲೆ ಮುಖ್ಯ ಕಾರ್ಯದರ್ಶಿಯಾಗಿದ್ದ ಮೇಡಂ ಸಭೆ ಮುಗಿಯುವವರೆಗೂ ಮತ್ತೆ ಮಾತನಾಡಲಿಲ್ಲ.

ಈಗ ಮೈಸೂರು ಅಲ್ಲದೆ ಶಿವಮೊಗ್ಗ, ದಾವಣಗೆರೆ, ಕಾರ್ಕಳ, ಧಾರವಾಡ, ಕಲಬುರ್ಗಿ ರಂಗಾಯಣಗಳಿವೆ. ಲೋಕಸಭಾ ಚುನಾವಣೆಗೆ ಮುನ್ನವೇ ರಂಗಸಮಾಜ ಸದಸ್ಯರ ನೇಮಕವೂ ಆಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಬಂದಾಯಿತು. ಇದುವರೆಗೆ ರಂಗಸಮಾಜದ ಸಭೆಯೇ ನಡೆದಿಲ್ಲ. ನಿಗದಿಯಾಗಿದ್ದ ಸಭೆಯೂ ಮುಂದೂಡಿದ್ದು, ಜುಲೈ 10ರಂದು ನಿಗದಿಯಾಗಿದೆ. ಸಭೆ ನಡೆದರೆ ರಂಗಾಯಣಗಳಿಗೆ ನಿರ್ದೇಶಕರ ಆಯ್ಕೆಯ ಕುರಿತೇ ಪ್ರಮುಖವಾಗಿ ಚರ್ಚೆಯಾಗುತ್ತದೆ ಜೊತೆಗೆ ಪ್ರತೀ ರಂಗಾಯಣಗಳಿಗೆ ಮೂವರ ಹೆಸರುಗಳನ್ನು ಶಿಫಾರಸು ಮಾಡಲಾಗುವುದು. ಇದರಾಚೆಗೂ ಪಟ್ಟಿಯಲ್ಲಿಲ್ಲದವರು ನಿರ್ದೇಶಕರಾಗಬಹುದು. ಇದು ಹಿಂದೆಯೂ ನಡೆದಿದೆ ಮುಂದೆಯೂ ನಡೆಯಬಹುದು.

ಹೀಗಿದ್ದಾಗ ‘‘ರಂಗಸಮಾಜದ ಜರೂರತ್ತೇ ಇಲ್ಲ’’ ಎನ್ನುತ್ತಾರೆ ಕಲಬುರ್ಗಿ ರಂಗಾಯಣದ ನಿರ್ದೇಶಕ ರಾಗಿದ್ದ ಪ್ರಭಾಕರ ಜೋಶಿ. ‘‘ಕಳೆದ ಬಾರಿ ಮೈಸೂರು ರಂಗಾಯಣಕ್ಕೆ ಶಿಫಾರಸು ಆದವರ ಹೆಸರುಗಳು ಬೇರೆ. ಕೊನೆಗೆ ರಾಜಕೀಯ ಪ್ರಭಾವದಿಂದ ಬೇರೆಯವರೇ ಆದರು. ಹೀಗೆ ಶಿಫಾರಸು ಮಾಡಿದ ಮೂವರ ಹೆಸರನ್ನು ಮೀರಿ ಇನ್ನೊಬ್ಬರು ನಿರ್ದೇಶಕರಾದಾಗ ರಂಗಸಮಾಜದ ಅಸ್ತಿತ್ವದ ಪ್ರಶ್ನೆ ಕಾಡುತ್ತದೆ. ರಂಗಸಮಾಜದ ಸದಸ್ಯರಿಗೆ ಮೂರು ತಿಂಗಳಿಗೊಮ್ಮೆ ಸಭೆ ಹೊರತುಪಡಿಸಿದರೆ ಬೇರೇನೂ ಕೆಲಸ ಇರುವುದಿಲ್ಲ. ವರ್ಷದಲ್ಲಿ 2-3 ಬಾರಿ ಸಭೆಗಳಾಗಬೇಕು. ಬೇರೆ ಬೇರೆ ರಂಗಾಯಣದಲ್ಲಿ ಸಭೆಗಳಾಗಬೇಕು. ಇದರಿಂದ ಅಲ್ಲಿನ ರಂಗಾಯಣದ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ’’ ಎನ್ನುವ ಸಲಹೆ ಅವರದು.

ಇನ್ನು ನಿರ್ದೇಶಕರಿಲ್ಲದೆ ರಂಗಾಯಣಗಳು ಚಟುವಟಿಕೆಗಳಿಲ್ಲದೆ ನಿಷ್ಕ್ರಿಯಗೊಂಡಿವೆ. ಬೇರೆ ಇಲಾಖೆ ರೀತಿ ಕಾರಕೂನಿಕೆಯಂತೆ ಕೆಲಸ ನಡೆಯುತ್ತಿದೆ. ರಂಗ ಚಟುವಟಿಕೆಗಳಿಲ್ಲ. ನಾಟಕಗಳಾಗುತ್ತಿಲ್ಲ. ಇದರಿಂದ ಪ್ರೇಕ್ಷಕರಿಲ್ಲ. ಮುಖ್ಯವಾಗಿ ಅನುದಾನ ಕೊಟ್ಟಿಲ್ಲ. ಸಹಜವಾಗಿ ರಂಗ ಚಟುವಟಿಕೆಗಳು ನಡೆಯುತ್ತಿಲ್ಲ. ರಂಗಾಯಣದ ಬ್ಯಾನರಿನಡಿ ಪ್ರಾಯೋಜಕ್ವತದ ಕಾರ್ಯಕ್ರಮಗಳನ್ನು ಮಾಡುವ ಹಾಗೂ ಇಲ್ಲ. ಹೀಗೆ ಚಟುವಟಿಕೆಗಳಿಲ್ಲದ ಕಾರಣ ಅನೇಕ ಕಲಾವಿದರಿಗೆ ಕೆಲಸವಿಲ್ಲ. ಒಂದು ನಾಟಕವಾದರೆ ಅನೇಕ ಕಲಾವಿದರಿಗೆ ಕೆಲಸಗಳು ಸಿಗುತ್ತವೆ. ಇದರೊಂದಿಗೆ ಹೊಸ ಕಲಾವಿದರ ಆಯ್ಕೆ ವಿಳಂಬವಾಗುತ್ತಿದೆ. ಪ್ರತೀ ರಂಗಾಯಣಗಳಿಗೆ 12 ಕಲಾವಿದರು, ಮೂವರು ತಂತ್ರಜ್ಞರ ಆಯ್ಕೆಯಾಗಬೇಕು. ಇದನ್ನು ಇಪ್ಪತ್ತಕ್ಕೆ ಏರಿಸಬೇಕು ಎನ್ನುವುದು ಈ ಹಿಂದೆ ಇದ್ದ ನಿರ್ದೆಶಕರ ಒತ್ತಾಯವಾಗಿತ್ತು.

ಮುಖ್ಯವಾಗಿ ರಂಗಸಮಾಜದ ಬೈಲಾ ತಿದ್ದುಪಡಿಯಾಗಬೇಕಿದೆ. ತಿದ್ದುಪಡಿಯೆಂದರೆ ರಂಗಸಮಾಜ ನವೀಕರಣವಾಗಿಲ್ಲ. ಸೊಸೈಟಿ ಕಾಯ್ದೆ ಅಂದರೆ ಸಂಘ-ಸಂಸ್ಥೆಗಳ ಕಾಯ್ದೆ ಯಡಿ ನೋಂದಣಿಯಾಗಿದೆ. ಆದರೆ ಪ್ರತೀ ಮೂರು ವರ್ಷಗಳಿಗೊಮ್ಮೆ ನವೀಕರಿಸಬೇಕಿದೆ. ರಂಗಸಮಾಜ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನವೀಕರಣಗೊಂಡಿಲ್ಲ. ಬೈಲಾ ತಿದ್ದುಪಡಿಯಿಂದ ನಾಟಕಕಾರರ, ಕಲಾವಿದರ ಸಂಭಾವನೆ ಹೆಚ್ಚಲಿದೆ. ಇದೊಂದೇ ಅಲ್ಲ, ಆಡಳಿತ ವ್ಯವಸ್ಥೆ, ನಿರ್ದೇಶಕರ ಜವಾಬ್ದಾರಿ ಹೆಚ್ಚಲಿದೆ. ಆಡಳಿತಾಧಿಕಾರಿಗಳು ಬೈಲಾ ಪ್ರಕಾರ ನಡೆಯುವೆ ಎಂದರೆ ಚಟುವಟಿಕೆಗಳೇ ನಡೆಯುವುದಿಲ್ಲ.

ಹೀಗೆಯೇ ‘‘ರಂಗಾಯಣ ಮಾಡುವ ಕೆಲಸಕ್ಕೂ ರೆಪರ್ಟರಿಗಳು ಮಾಡುವ ಕೆಲಸಕ್ಕೂ ವ್ಯತ್ಯಾಸ ಗೊತ್ತಾಗಬೇಕು’’ ಎಂದು ಕೇಳುತ್ತಾರೆ ರಂಗಸಮಾಜದ ಹಾಲಿ ಸದಸ್ಯ, ರಾಯಚೂರಿನ ಡಿಂಗ್ರಿ ನರೇಶ್. ‘ಕಲಬುರ್ಗಿಯಲ್ಲಿನ ರಂಗಾಯಣವು ಕಲ್ಯಾಣ ಕರ್ನಾಟಕದ ಮಣ್ಣಿನ ಸೊಗಡು, ಸಂಸ್ಕೃತಿ, ಭಾಷೆ ಪ್ರತಿನಿಧಿಸುವಂತಾಗಬೇಕು. ಕಡಕೋಳ ಮಡಿವಾಳಪ್ಪ, ಜಯದೇವಿತಾಯಿ ಲಿಗಾಡೆ, ಸಿದ್ಧರಾಮ ಜಂಬಲದಿನ್ನಿ ಮೊದಲಾದವರ ಕುರಿತು ಇದುವರೆಗೆ ಕಲಬುರ್ಗಿ ರಂಗಾಯಣದಲ್ಲಿ ನಾಟಕವಾಗಿಲ್ಲ. ಸ್ವಾತಂತ್ರ್ಯಾನಂತರದ ದಲಿತ ಸಂವೇದನೆಯ ನಾಟಕಗಳಾಗಬೇಕು. ಕಲಬುರ್ಗಿ ರಂಗಾಯಣಕ್ಕೆ ಸೇರುವ ಏಳೂ ಜಿಲ್ಲೆಗಳಲ್ಲಿ ರಂಗ ಚಟುವಟಿಕೆಗಳು ನಡೆಯಬೇಕು. ಎಲ್ಲ ರಂಗಾಯಣಗಳಿಗೂ ಸೇತುವೆಯಾಗಬೇಕು’’ ಎನ್ನುವುದು ಅವರ ಒತ್ತಾಯ.

‘‘ಶಿಕ್ಷಣದಲ್ಲಿ ರಂಗಭೂಮಿ ಕುರಿತು ಇರಬೇಕು. ಮುಂದಿನ 30 ವರ್ಷಗಳಲ್ಲಿ ಹೊಸ ತಲೆಮಾರಿನವರು ಬರುತ್ತಾರೆ. ಅವರನ್ನು ರಂಗಭೂಮಿಯಲ್ಲಿ ತೊಡಗಿಸಬೇಕು. ರಂಗಶಿಕ್ಷಣೋತ್ಸವ ಆಗಬೇಕಿದೆ. ಆಯ್ಕೆಯಾಗುವ ಕಲಾವಿದರು ಮೊದಲ ವರ್ಷ 12 ಸಾವಿರ ರೂಪಾಯಿ ಪಡೆದರೆ, ಮೂರನೆಯ ವರ್ಷಕ್ಕೆ 16 ಸಾವಿರ ರೂಪಾಯಿ ಪಡೆಯುತ್ತಾರಷ್ಟೇ. ಕಲಾವಿದರ ಕುರಿತು, ಅವರ ಕುಟುಂಬಗಳ ಕುರಿತು ಯೋಚಿಸಬೇಕಿದೆ. ಆದರೆ ಅನೇಕ ರಂಗಕರ್ಮಿಗಳು ರಂಗಾಯಣಗಳಿಗೆ ನಿರ್ದೇಶಕ ಯಾರಾಗಬೇಕೆಂಬ ಪಟ್ಟಿ ಕೊಡುತ್ತಾರೆ. ಹೀಗೆಂದಾಗ ನಿರ್ದೇಶಕರ ಆಯ್ಕೆಯಾಗಲಿ, ಮುಂದಿನದು ಯೋಚಿಸಬಹುದು ಎಂದು ಸುಲಭವಾಗಿ ಹೇಳಬಹುದು. ಆದರೆ ರಂಗಾಯಣಗಳ ಸ್ವರೂಪ ಬದಲಾಗುವ ಕುರಿತೂ ಚರ್ಚೆ ನಡೆಯಲಿ’’ ಎಂದು ಡಿಂಗ್ರಿ ಆಶಿಸಿದರು.

ಅವರಿಗೆ ಉತ್ತರವಾಗಿ ರಂಗಕರ್ಮಿ ಮಹಾದೇವ ಹಡಪದ ಅವರು ಪತ್ರವೊಂದನ್ನು ಬರೆದು, ಎಲ್ಲ ರಂಗಕರ್ಮಿಗಳಿಗೆ, ಎಲ್ಲ ಸಚಿವರಿಗೆ ತಲುಪಿಸಿದ್ದಾರೆ. ಅವರ ಕನಸಿನ ಧಾರವಾಡ ರಂಗಾಯಣ ಹೇಗಿರಬೇಕೆಂದು ಅವರು ಬರೆದಿರುವ ಪತ್ರದಲ್ಲಿ ಮುಖ್ಯವಾಗಿ ಹೀಗಿದೆ- ‘ಧಾರವಾಡ ಎಂದರೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ಐಕಾನ್ ಎಂದೇ ಗುರುತಿಸಲ್ಪಟ್ಟಿದೆ. ಸಂಗೀತ ಮತ್ತು ಸಾಹಿತ್ಯ ವಲಯದ ದಿಗ್ಗಜರನ್ನು ತನ್ನತ್ತ ಸೆಳೆದುಕೊಳ್ಳುವಷ್ಟು ಸಶಕ್ತವಾಗಿದ್ದ ಧಾರವಾಡ ಇಂದು ಕೋಚಿಂಗ್ ಸೆಂಟರ್ ಸಿಟಿಯಾಗಿದೆ. ಹಿಂದೊಮ್ಮೆ ಕಲ್ಲು ಬಿಸಾಡಿದರೆ ಆ ಕಲ್ಲು ಕವಿಗಳ ಮನೆ ಮೇಲೆ ಬೀಳುತ್ತದೆ ಎಂಬಂಥ ನಾಣ್ಣುಡಿಗಳು ಧಾರವಾಡದ ಬಗ್ಗೆ ಸೃಷ್ಟಿಯಾಗಿದ್ದವು. ಅದೇ ನಾಣ್ಣುಡಿಗಳನ್ನು ಇಂದು ಕೋಚಿಂಗ್ ಸೆಂಟರ್‌ಗಳಿಗೆ ಅನ್ವಯಿಸುವಷ್ಟು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೊಡುವ ಸಂಸ್ಥೆಗಳು ಧಾರವಾಡದಲ್ಲಿ ಹುಟ್ಟಿಕೊಂಡಿವೆ. ಕಾಲ ಬದಲಾದಂತೆ ಧಾರವಾಡದ ಸಾಂಸ್ಕೃತಿಕ ಅಸ್ಮಿತೆಯ ಬಗ್ಗೆಯೂ ಕೊಂಚ ಎಚ್ಚರವಹಿಸಬೇಕಾದ ಅಗತ್ಯ ಇಂದಿಗಿದೆ’

ಇದಕ್ಕಾಗಿ

* ಕರ್ನಾಟಕಕ್ಕೆ ಸಂಗೀತ ನಾಟಕ ಶಾಲೆ ಅಗತ್ಯ ಬೇಕಾಗಿದೆ. ಸ್ಥಳೀಯವಾದ ಸಂಗೀತ ಪರಂಪರೆಯ ಸಹಕಾರದೊಂದಿಗೆ ಸಂಗೀತ ನಾಟಕ ಶಾಲೆ ಆರಂಭವಾಗಬೇಕು.

* ಜ್ಯೋತಿಬಾ ಫುಲೆ ಅವರ ಹೆಸರಿನಲ್ಲಿ ಅಸಂಘಟಿತ ಕಾರ್ಮಿಕರಿಗೆ ನಾಟಕ ತರಬೇತಿ ಮತ್ತು ಪ್ರದರ್ಶನ ಏರ್ಪಾಡಾಗಬೇಕು.

* ಶಾಂತಕವಿಗಳ ಹೆಸರಿನಲ್ಲಿ ಬೆಳಗಾವಿ ವಿಭಾಗ ಮಟ್ಟದ ಹವ್ಯಾಸಿ ನಾಟಕೋತ್ಸವ.

* ಕಂಪೆನಿ ನಾಟಕ ಹಾಗೂ ಜಾನಪದ ಆಟಗಳ ನಾಟಕೋತ್ಸವ

* ಗಲ್ಲಿ/ಓಣಿಗಳಲ್ಲಿ ನಾಟಕ ಪ್ರದರ್ಶನ.

* ಸಣ್ಣ ಸಣ್ಣ ದೃಶ್ಯರೂಪಕಗಳ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ಪ್ರದರ್ಶನ.

* ಮಕ್ಕಳಿಗಾಗಿ ಶಾಲಾ ಅವಧಿಯಲ್ಲಿಯೇ ನಾಟಕ ಪ್ರದರ್ಶನ ಮತ್ತು ಶಿಕ್ಷಣದಲ್ಲಿ ರಂಗಭೂಮಿಯ ಅಭಿಯಾನ.

* ಬಸವಣ್ಣ ಸಾಂಸ್ಕೃತಿಕ ನಾಯಕ ಹೆಸರಿನ ನಾಟಕ ಅಭಿಯಾನ.

* ಕಾಲೇಜು ನಾಟಕೋತ್ಸವ.

* ಕಂಪೆನಿ ನಾಟಕದ ಅಭಿನಯ ಕೌಶಲಗಳ ಬಗ್ಗೆ ದಾಖಲೆಗಳ ಸಂಗ್ರಹ ಮತ್ತು ಕರ್ನಾಟಕದಲ್ಲಿ ಮಾದರಿ ನಟನೆ ತಯಾರಿ, ನಟಿಸುವ ಚತುರತೆ, ಮಾತುಗಾರಿಕೆ ಕುರಿತು ವಿಚಾರ ಸಂಕಿರಣ.

ಹೊಸತನದ ಯೋಚನೆ, ಯುವ ಮನಸ್ಸುಗಳನ್ನು ಕಟ್ಟುವ, ಜನರೆಡೆಗೆ ನಾಟಕ ಒಯ್ಯುವ ಕ್ರಿಯಾಶೀಲ ರಂಗಭೂಮಿಯ ಕೆಲಸಗಳಿಂದ ರಂಗಾಯಣಗಳನ್ನು ಮುನ್ನಡೆಸಬೇಕಿದೆ. ಮುಖ್ಯವಾಗಿ ರಾಜಕೀಯ ಹುದ್ದೆಯಂತೆ ಆಗಬಾರದು ಎನ್ನುವುದು ಅವರ ವಿನಂತಿ.

ಹೀಗೆ ರಂಗಾಯಣದ ಸ್ವರೂಪ ಬದಲಾಗಬೇಕಿದೆ. ಮುಖ್ಯವಾಗಿ ರಂಗಸಮಾಜದ ನೆಲೆಯೇನು? ಬೆಲೆಯೇನು ಎಂದರಿಯಬೇಕಿದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News