ರಂಗಭೂಮಿಗೆ ವರವಾಗಿದ್ದ ಫಕೀರಪ್ಪ ವರವಿ

ಫಕೀರಪ್ಪ ಅವರು ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದರು. ನಟಿಸುತ್ತಿದ್ದರು ಎನ್ನುವುದಕ್ಕಿಂತ ಪರಕಾಯ ಪ್ರವೇಶಿಸಿ ಪಾತ್ರ ನಿರ್ವಹಿಸುತ್ತಿದ್ದರು. ಅವರು 2008ನೇ ಸಾಲಿನ ಕರ್ನಾಟಕ ನಾಟಕ ಅಕಾಡಮಿಯ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ದತ್ತಿ ರಂಗಪ್ರಶಸ್ತಿ, 2013ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದರು.

Update: 2024-08-02 11:16 GMT

ಮೊನ್ನೆ ಮಂಗಳವಾರ (ಜುಲೈ 30) ನಿಧನರಾದ ರಂಗಭೂಮಿಯ ಹಿರಿಯ ರಂಗಕರ್ಮಿ ಫಕೀರಪ್ಪ ವರವಿ ಅವರು ಹಾಸ್ಯ ಚಕ್ರವರ್ತಿ ಎಂದು ಬಿರುದು ಪಡೆದಿದ್ದವರು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ 83 ವರ್ಷ ವಯಸ್ಸಿನ ಅವರು ಒಳ್ಳೆಯ ಕಲಾವಿದರು, ಸಮರ್ಥ ನಾಟಕ ನಿರ್ದೇಶಕರೆಂದು ಹೆಸರಾಗಿದ್ದರು.

ಬಾಲ್ಯದಲ್ಲೇ ಅವರಿಗೆ ರಂಗಾಸಕ್ತಿ ಇತ್ತು. ಅವರ ಮೊದಲ ಗುರುಗಳು ಮೊಗಲಾಯ ಮಾಸ್ತರರು. 1952ರಲ್ಲಿ ಮೊಗಲಾಯ ಮಾಸ್ತರರು ನಿರ್ದೇಶಿಸಿದ ‘ಚಿತ್ರಾಂಗದ’ ನಾಟಕದ ತಾಲೀಮಿಗೆ ಫಕೀರಪ್ಪ ಅವರು ನಿತ್ಯ ಹೋಗುತ್ತಿದ್ದರು. ಆಗ ಅವರಿಗೆ ಹಾಡು ಮತ್ತು ಸಂಭಾಷಣೆ ಕಂಠಪಾಠವಾಗಿತ್ತು. ಫಕೀರಪ್ಪರ ರಂಗಾಸಕ್ತಿ ಕಂಡ ಮೊಗಲಾಯ ಮಾಸ್ತರರು ‘ಚಿತ್ರಾಂಗದ’ ನಾಟಕದ ಆರಂಭಕ್ಕೆ ಪೂಜಾನೃತ್ಯ ಮಾಡಲು ಅವಕಾಶ ನೀಡಿದರು. ಈ ನಾಟಕ ನೋಡಿದ ವೀರಭದ್ರಯ್ಯಸ್ವಾಮಿ ಹಿರೇಮಠ ಅವರು ಫಕೀರಪ್ಪ ಅವರನ್ನು ಶಿಷ್ಯನೆಂದು ಸ್ವೀಕರಿಸಿ ಸಂಗೀತ ಕಲಿಸಿದರು. ನಂತರ ಶಿರಹಟ್ಟಿ ಜಾತ್ರೆಯಲ್ಲಿ ಆಡಿದ ‘ಜಗಜ್ಯೋತಿ ಬಸವೇಶ್ವರ’ ನಾಟಕದಿಂದ ಪ್ರಭಾವಿತರಾದ ಫಕೀರಪ್ಪ ಅವರು ದೊಡ್ಡವಾಡಿ ಕಂಪೆನಿ ಸೇರಿದರು. ಬಳಿಕ ‘ಬಸವೇಶ್ವರ’, ‘ಚೆನ್ನಬಸವೇಶ್ವರ’, ‘ಸ್ತ್ರೀರತ್ನ’, ‘ವಧು-ವರ’ ನಾಟಕಗಳಲ್ಲಿ ಬಾಲಪಾತ್ರಗಳನ್ನು ನಿರ್ವಹಿಸಿ, ಕೆ.ಹಿರಣ್ಣಯ್ಯ ಮಿತ್ರಮಂಡಲಿ ಸೇರಿ ‘ಕೃಷ್ಣಲೀಲಾ’, ‘ರಾಮಾಯಣ’, ‘ದೇವದಾಸಿ’, ‘ಎಚ್ಚಮನಾಯಕ’, ‘ಲಂಚಾವತಾರ’ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದರು. ಅದೊಂದು ದಿನ ವಿಜಾಪುರದಲ್ಲಿದ್ದ ಶ್ರೀ ವೀರಭದ್ರೇಶ್ವರ ನಾಟ್ಯ ಸಂಘದ ನಾಟಕಕ್ಕೆ ಹಾಸ್ಯಪಾತ್ರಧಾರಿ ಕೈಕೊಟ್ಟಾಗ ಫಕೀರಪ್ಪ ಆ ಪಾತ್ರವನ್ನು ನಿರ್ವಹಿಸಿದರು. ಆಮೇಲೆ ಹಾಸ್ಯಪಾತ್ರಕ್ಕೆ ಖಾಯಂ ಆದರು. ಇಲ್ಲಿಂದ ರೆಹಮಾನವ್ವ ಕಂಪೆನಿ, ಮಹಾಂತೇಶ ಶಾಸ್ತ್ರಿಗಳ ಕಂಪೆನಿ, ಓಬಳೇಶ್ವರ ಕಂಪೆನಿ, ಸುಳ್ಳದ ದೇಸಾಯಿ ಹಾಗೂ ಗೋಕಾಕ ಕಂಪೆನಿಯಲ್ಲಿ ಕಲಾವಿದರಾಗಿ ಪಳಗಿದರು.

ಹೀಗಿದ್ದಾಗ ರಂಗಕರ್ಮಿ, ಸದ್ಯ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ ಕಂಪೆನಿಯ ಸಂಚಾಲಕರಾದ ಶ್ರೀಧರ ಹೆಗಡೆ ಅವರೊಂದಿಗೆ ರಾಘವೇಂದ್ರ ವಿಜಯ ನಾಟ್ಯ ಸಂಘ, ಜತ್ತ ಕಂಪೆನಿಯನ್ನು 1980ರಲ್ಲಿ ಪಾಲುದಾರಿಕೆಯಲ್ಲಿ ಆರಂಭಿಸಿದರು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತದಲ್ಲಿ ಕಂಪೆನಿಯನ್ನು ಆರಂಭಿಸಿದ್ದರಿಂದ ಜತ್ತ ಎಂದು ಹೆಸರಿಟ್ಟರು. ಜತ್ತದಲ್ಲಿಯೇ ಪ್ರಕಾಶ ಕಡಪಟ್ಟಿ ಅವರ ‘ಚಿನ್ನದ ಗೊಂಬೆ’ ನಾಟಕವನ್ನು ಆಡಿದರು. ಮುಂದೆ ಸೊಲ್ಲಾಪುರದ ಕ್ಯಾಂಪಲ್ಲಿ ‘ಚಿನ್ನದ ಗೊಂಬೆ’ 150 ಪ್ರಯೋಗಗಳನ್ನು ಕಂಡಿತು. ಸೊಲ್ಲಾಪುರದಲ್ಲಿ ಒಂದು ವರ್ಷ ಏಳು ತಿಂಗಳವರೆಗೆ ಮುಕ್ಕಾಮು ಮಾಡಿದರು. ಈ ನಾಟಕ ಯಶಸ್ವಿಯಾಗಿದ್ದು ಮುಂಬೈನ ವಿಧಾನಸಭೆಯಲ್ಲಿ ಆಗ ಚರ್ಚೆಯಾಗಿತ್ತು. ಆನಂತರ ಓಬಳೇಶ ಅವರ ‘ಖಾದಿ ಸೀರೆ’ ನಾಟಕವಾಡಿದರು. ರವಿವಾರ ಮಾತ್ರ ಎರಡು ಪ್ರದರ್ಶನಗಳಿರುತ್ತಿದ್ದವು. ಉಳಿದ ದಿನ ರಾತ್ರಿ ಹತ್ತೂವರೆಗೆ ಮಾತ್ರ ಒಂದೇ ಪ್ರಯೋಗ. ‘‘ಅದೊಂದು ರವಿವಾರ ಮಹಿಳೆಯರಿಗೆ ಮಾತ್ರ ಮೀಸಲಿಡಬೇಕಾದ ಅನಿವಾರ್ಯತೆ ಬಂತು. ಏಕೆಂದರೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಪರಿಣಾಮ ಅವರ ಸಲುವಾಗಿ ಪ್ರಯೋಗವೊಂದನ್ನೇ ಮೀಸಲಿಟ್ಟೆವು. ಸೊಲ್ಲಾಪುರದ ಕ್ಯಾಂಪಲ್ಲಿಯೇ ಕಂಪೆನಿಗೆ ಬೇಕಾದ ಎಲ್ಲ ಸಲಕರಣೆಗಳನ್ನು ಸ್ವಂತ ಖರೀದಿಸಿದೆವು ಅಂದರೆ ಅಷ್ಟೊಂದು ಲಾಭವಾಗಿತ್ತು. ಸೊಲ್ಲಾಪುರದಲ್ಲಿ ನಾಟಕ ಮುಂದುವರಿಯುತ್ತಿತ್ತು. ಆದರೆ ಅಲ್ಲಿ ಹಿಂದೂ-ಮುಸ್ಲಿಮ್ ಗಲಾಟೆ ಶುರುವಾದ ಕಾರಣ ಅನಿವಾರ್ಯವಾಗಿ ನಾಟಕ ನಿಲ್ಲಿಸಬೇಕಾಯಿತು’’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶ್ರೀಧರ ಹೆಗಡೆ.

‘‘ಸೊಲ್ಲಾಪುರದಿಂದ ಬೀದರ್‌ನಲ್ಲಿ ಕ್ಯಾಂಪು ಮಾಡಿ ಒಂದು ವರ್ಷದವರೆಗೆ ಇದ್ದೆವು. ಆಮೇಲೆ ಅಡಚಣೆಗಳಿಂದ 1986ರಲ್ಲಿ ಕಂಪೆನಿ ಬಂದ್ ಮಾಡಿದೆವು. ಫಕೀರಪ್ಪ ಅವರು ಬೆಂಗಳೂರು ವಾಸಿಯಾಗಿ ನಾಟಕ, ಧಾರಾವಾಹಿ, ಸಿನೆಮಾಗಳಲ್ಲಿ ಪಾತ್ರ ನಿರ್ವಹಿಸಿದರು. ಉದ್ಯಮಿ ಶ್ರೀಹರಿ ಖೋಡೆ ಅವರ ಸಾಂಸ್ಕೃತಿಕ ರಾಯಭಾರಿಯಾದರು. ಹರಿಖೋಡೆ ಅವರು ಫಕೀರಪ್ಪ ಅವರನ್ನು ಗುರುಗಳೇ ಎಂದೇ ಕರೆಯುತ್ತಿದ್ದರು. ಖೋಡೆ ಅವರಿಂದ ಪ್ರತೀ ತಿಂಗಳು 25 ಸಾವಿರ ರೂಪಾಯಿ ಫಕೀರಪ್ಪ ಅವರಿಗೆ ಸಂದಾಯವಾಗುತ್ತಿತ್ತು. ಉದ್ಯಮಿಯಾದ ಹರಿಖೋಡೆ ಅವರು ಫಕೀರಪ್ಪ ಅವರಿಗೆ ಕೊಡುವ ಗೌರವ ಅದಾಗಿತ್ತು. ನಾವಿಬ್ಬರೂ ಭೇಟಿಯಾದಾಗ ರಂಗಭೂಮಿ ಕುರಿತೇ ಚರ್ಚಿಸುತ್ತಿದ್ದೆವು. ಸದಾ ರಂಗಭೂಮಿ ಕುರಿತೇ ಅವರು ಚಿಂತನೆ ನಡೆಸುತ್ತಿದ್ದರು’’ ಎಂದು ಸ್ಮರಿಸುತ್ತಾರೆ ಶ್ರೀಧರ ಹೆಗಡೆ.

‘‘ಇಂದಿನ ದಿನಮಾನಗಳಲ್ಲಿ ರಂಗಭೂಮಿಯ ಹಿರಿಯ ಕೊಂಡಿಗಳಲ್ಲಿ ಸಮರ್ಥರಾಗಿದ್ದ ಫಕೀರಪ್ಪ ವರವಿ ನಿಧನದಿಂದ ರಂಗಭೂಮಿಯ ಕೊಂಡಿಯೊಂದು ಕಳಚಿದಂತಾಗಿದೆ. ಏಣಗಿ ಬಾಳಪ್ಪ ಅವರು ತಮ್ಮ ಹಾಡುಗಾರಿಕೆ, ಅಭಿನಯ ಮೂಲಕ ಛಾಪು ಮೂಡಿಸಿದ್ದರು. ಹೀಗೆ ಫಕೀರಪ್ಪ ಅವರು ಕೂಡಾ ತಮ್ಮ ಹಾಸ್ಯ ಅಭಿನಯದಿಂದ ಮನೆ ಮಾತಾಗಿದ್ದರು. ತಮ್ಮ ನಿರ್ದೇಶನದ ಮೂಲಕ ನೂರಾರು ಕಲಾವಿದರನ್ನು ತಯಾರು ಮಾಡಿದ್ದರು. ಹಾಸ್ಯಬ್ರಹ್ಮ ಎಂದೇ ಪ್ರಸಿದ್ಧರು. ನಿಮಿಷ ನಿಮಿಷಕ್ಕೂ ಹಾಸ್ಯ ಹೊಂದಿಸಿ ಮಾತನಾಡುತ್ತಿದ್ದರು. ಮುಖ್ಯವಾಗಿ ರಾಜಹಾಸ್ಯ. ಅಂದರೆ ಅಶ್ಲೀಲ ಇರುತ್ತಿರಲಿಲ್ಲ. ಅವರ ವಾಕ್‌ಚಾತುರ್ಯ ಅದ್ಭುತ. ಕಂಚಿನ ಕಂಠ ಅವರದು’’ ಎಂದು ಮೆಲುಕು ಹಾಕುತ್ತಾರೆ ಹಿರಿಯ ರಂಗಕರ್ಮಿ, ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ ಕಂಪೆನಿಯ ಮಾಲಕ ಶೇಕ್ ಮಾಸ್ತರ್.

‘‘ಮಹಾಂತೇಶ ಕಲಾ ಲೋಕ ತಂಡಕ್ಕೆ ‘ಮಯಾಮದ ಮರ್ದನ ಅಲ್ಲಮಪ್ರಭು’ ನಾಟಕವನ್ನು ರಚಿಸಿ, ನಿರ್ದೇಶಿಸಿದವರು ಫಕೀರಪ್ಪ. ಇಲಕಲ್ಲದ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಮತ್ತು ನಾನು ಪಾತ್ರ ನಿರ್ವಹಿಸಿದ್ದೆವು. ಆಮೇಲೆ ರೆಕಾರ್ಡಿಂಗ್ ಮಾಡಿ ನಾಟಕವಾಡಿದೆವು. ನಮ್ಮ ಅತ್ತೆ ಲಕ್ಷ್ಮೀಬಾಯಿ ಬಾರಿಗಿಡದ ಅವರು ಹಾಗೂ ಫಕೀರಪ್ಪ ಅವರು ಜೊತೆಗೆ ಪಾತ್ರ ನಿರ್ವಹಿಸಿದರು’’ ಎಂದು ನೆನಪಿಗೆ ಜಾರಿದರು ಇಲಕಲ್ಲದ ರಂಗ ಕಲಾವಿದೆ ಉಮಾ ಬಾರಿಗಿಡದ. ಸುಳ್ಳದ ದೇಸಾಯಿ ಅವರ ಕಂಪೆನಿಗೆ ‘ಕೊಪ್ಪಳದ ಗವಿಸಿದ್ಧೇಶ್ವರ ಮಹಾತ್ಮೆ’ ನಾಟಕ ರಚಿಸಿ, ನಿರ್ದೇಶಿಸಿದ ಅವರು ಸುಳ್ಳ ಸ್ವಾಮಿ ಪಾತ್ರ ಮಾಡುತ್ತಿದ್ದರು. ನಮ್ಮದೇ ನಾಟ್ಯರಾಣಿ ಕಲಾ ಸಂಘ ತಂಡಕ್ಕೆ ಪಿ.ಬಿ.ಧುತ್ತರಗಿ ಅವರ ‘ಸಂಪತ್ತಿಗೆ ಸವಾಲ್’ ನಾಟಕವನ್ನು ನಿರ್ದೇಶಿಸಿದ್ದರು. ನಾಲ್ಕೈದು ವರ್ಷಗಳ ಹಿಂದೆ ಇಲಕಲ್ಲದಲ್ಲಿ ಈ ನಾಟಕ ಆಡಿದಾಗ ಯಶಸ್ವಿಯಾಗಿತ್ತು. ಆಮೇಲೆ ಜಿ.ಜಿ. ಹೆಗಡೆ ಅವರ ‘ಸತ್ಯ ಹರಿಶ್ಚಂದ್ರ’ ನಾಟಕವನ್ನು ರಂಗ ಸೇವಾ ಕಲಾ ತಂಡಕ್ಕೆ ನಿರ್ದೇಶಿಸಿದ್ದರು. ಒಳ್ಳೆಯ ಸ್ವಭಾವ. ರಂಗಭೂಮಿಯ ಒಳ್ಳೊಳ್ಳೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಹಂಚಿಕೊಂಡರು ಉಮಾ ಬಾರಿಗಿಡದ.

ಶ್ರೀ ಸಂಗಮೇಶ್ವರ ನಾಟ್ಯ ಸಂಘ, ಆಶಾಪುರ ಕಂಪೆನಿಯ ಒಡತಿ ಪ್ರೇಮಾ ಗುಳೇದಗುಡ್ಡ ಅವರು ‘‘1997ರಲ್ಲಿ ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ ಮುಕ್ಕಾಂ ಮಾಡಿದಾಗ ‘ವೀರರಾಣಿ ಕಿತ್ತೂರು ಚನ್ನಮ್ಮ’ ನಾಟಕದಲ್ಲಿ ಮಲ್ಲಪ್ಪ ಶೆಟ್ಟಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು. ಜೊತೆಗೆ ನಿರ್ದೇಶಿಸಲು ಬಂದಿದ್ದ ಪಿ.ಬಿ.ಧುತ್ತರಗಿ ಅವರಿಗೆ ಸಹಾಯಕರಾಗಿದ್ದರು. ಚನ್ನಮ್ಮ ನಾಟಕವನ್ನು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಬಾವಿಕಟ್ಟಿ ಮ್ಯಾಳದವರಿಗೆ ನಿರ್ದೇಶಿಸಿದ್ದರು. ಒಡೆಯರ ಅವರ ಸೋಮಲಿಂಗೇಶ್ವರ ನಾಟ್ಯ ಸಂಘ, ಕಲಘಟಗಿ ಎಂಬ ಹವ್ಯಾಸಿ ತಂಡಕ್ಕೆ ಕಿತ್ತೂರು ಚನ್ನಮ್ಮ ನಾಟಕವನ್ನು ಫಕೀರಪ್ಪ ಅವರು ನಿರ್ದೇಶಿಸಿದ್ದರು. ಬಾಗಲಕೋಟೆ ಜಿಲ್ಲೆಯ ಸೂಳೆಭಾವಿಯಲ್ಲಿ (ನಾಟಕಕಾರ ಪಿ.ಬಿ.ಧುತ್ತರಗಿ ಅವರ ಊರು) ಸ್ಥಳೀಯ ತಂಡಕ್ಕೆ ಚನ್ನಮ್ಮ ನಾಟಕ ನಿರ್ದೇಶಿಸಿದ್ದರು. ಅವರು ದೊಡ್ಡ ಕಲಾವಿದ, ದೊಡ್ಡ ನಾಟಕಕಾರಾಗಿದ್ದರು. ಮಹಾಂತೇಶ ಶಾಸ್ತ್ರಿಗಳ ‘ಹಣೆಯಕ್ಕಿ ಕೂಡಿದರೆ ಹಡೆದವರು ಬೇಕಿಲ್ಲ’ ನಾಟಕವನ್ನು ನಮ್ಮ ಕಂಪೆನಿಗೆ ಬೆಂಗಳೂರಿನ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಆಡಿಸಿದರು. ಈ ನಾಟಕವನ್ನು ‘ಪ್ರಥಮರಾತ್ರಿ’ ಎಂದು ಹೆಸರು ಬದಲಾಯಿಸಿ ಆಡಿಸಿದರು. ಒಳ್ಳೆ ಕಲೆಕ್ಷನ್ ಆಗುತ್ತದೆನ್ನುವ ಕಾರಣಕ್ಕೆ ಹೆಸರು ಬದಲಾಯಿಸಿದರು’’ ಎನ್ನುವ ವಿವರ ನೀಡುತ್ತಾರೆ.

‘‘ಕೊಪ್ಪಳ ಗವಿಸಿದ್ಧೇಶ್ವರ ಮಹಾತ್ಮೆ ನಾಟಕದಲ್ಲಿ ಅವರ ಕಳ್ಳ ಸ್ವಾಮಿ ಪಾತ್ರ ಮರೆಯಲಾಗದು. ಯಾವುದೇ ನಾಟಕದ ಯಾವುದೇ ಪಾತ್ರವಾದರೂ ಫಕೀರಪ್ಪ ಬಣ್ಣ ಹಚ್ಚಿದರೆ ಯಶಸ್ವಿಯಾಗುತ್ತಿತ್ತು. ಅವರ ನೆನಪಿನ ಶಕ್ತಿ ಚೆನ್ನಾಗಿತ್ತು. ಅವರು ನಿರ್ದೇಶಿಸಿದ್ದ ನಾಟಕದ ಇಡೀ ಸಂಭಾಷಣೆ ಅವರಿಗೆ ಕಂಠಪಾಠವಾಗಿರುತ್ತಿತ್ತು’’ ಎಂದು ಮೆಚ್ಚುಗೆಯಾಡುತ್ತಾರೆ ಇಲಕಲ್ಲದ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ.

ಫಕೀರಪ್ಪ ಅವರು ಪಾತ್ರಗಳಿಗೆ ಜೀವ ತುಂಬಿ ನಟಿಸುತ್ತಿದ್ದರು. ನಟಿಸುತ್ತಿದ್ದರು ಎನ್ನುವುದಕ್ಕಿಂತ ಪರಕಾಯ ಪ್ರವೇಶಿಸಿ ಪಾತ್ರ ನಿರ್ವಹಿಸುತ್ತಿದ್ದರು. ಅವರು 2008ನೇ ಸಾಲಿನ ಕರ್ನಾಟಕ ನಾಟಕ ಅಕಾಡಮಿಯ ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯನವರ ದತ್ತಿ ರಂಗಪ್ರಶಸ್ತಿ, 2013ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News