ರಂಗದ ಅಪೂರ್ವ ಸೋದರಿಯರಿಗೆ ಜೋಡಿಯಾದ ಕೃಷ್ಣ

ಗುಬ್ಬಿ ಕಂಪೆನಿ ಆಡುತ್ತಿದ್ದ, ಪ್ರಸಿದ್ಧವಾದ ‘ಲವಕುಶ’ ನಾಟಕಕ್ಕೆ ಲವಕುಶ ಪಾತ್ರಗಳಿಗೆ ಬಣ್ಣ ಹಚ್ಚಲು ಆರಂಭಿಸಿದವರು ಈ ರಾಧಾ-ರುಕ್ಮಿಣಿ. ತಮ್ಮ 12ನೇ ವಯಸ್ಸಿನಿಂದ 62ನೇ ವಯಸ್ಸಿನವರೆಗೂ ಲವಕುಶ ಪಾತ್ರವನ್ನು ನಿರ್ವಹಿಸಿದ್ದು ದಾಖಲೆ. ಅವರು ರಂಗಭೂಮಿಯ ಅಪೂರ್ವ ಸೋದರಿಯರು. ಆ ಕಂಪೆನಿಯಲ್ಲಿದ್ದ ಗೌರಿಬಿದನೂರು ವೆಂಕಟರಮಣ ರೆಡ್ಡಿ ಅಂದರೆ ಜಿ.ವಿ. ಕೃಷ್ಣ ಅವರನ್ನು ಪ್ರೀತಿಸಿ ಮದುವೆಯಾದರು. ಚಲನಚಿತ್ರ ನಟರಾದ ಶ್ರುತಿ, ಶರಣ್ ಅವರ ಹೆತ್ತವರು. ರಾಧಾ-ರುಕ್ಮಿಣಿ ಅವರನ್ನು ಲವಕುಶ ಪಾತ್ರಗಳಿಂದಲೇ ಈಗಲೂ ಗುರುತಿಸುವವರಿದ್ದಾರೆ.

Update: 2024-10-11 06:55 GMT

‘‘ಮೈಸೂರು ಅರಮನೆಯ ಸಂಗೀತ ಶಾಲೆಯಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದವರು ನಮ್ಮ ತಂದೆ ಹನುಮಂತಾಚಾರ್. ಅವರ ತಮ್ಮ ವೀರಭದ್ರಾಚಾರ್ ಪಿಯಾನೊ ನುಡಿಸುತ್ತಿದ್ದರು. ನಮ್ಮ ತಂದೆ ತೀರಿಹೋಗಿದ್ದರು. ನಮಗವಾಗ 12 ವರ್ಷ ವಯಸ್ಸು. ಗುಬ್ಬಿ ಕಂಪೆನಿಯು ಆಗ ಹಾಸನದಲ್ಲಿತ್ತು. ನಮ್ಮ ಚಿಕ್ಕಪ್ಪ ವೀರಭದ್ರಾಚಾರ್, ‘ನಮ್ಮ ಹನುಮಂತಣ್ಣನ ಮಕ್ಕಳು. ಅವಳಿಜವಳಿ. ಬಡತನ’ ಎಂದು ಗುಬ್ಬಿ ವೀರಣ್ಣನವರಿಗೆ ಹೇಳಿ ಕಂಪೆನಿಗೆ ಸೇರಿಸಿದ್ರು. ನಮ್ಮ ಅಣ್ಣ ಗಣೇಶಾಚಾರ್, ತಮ್ಮ ಮುರಳೀಧರ ಆಚಾರ್, ತಾಯಿ ಗೌರಮ್ಮ ಎಲ್ರೂ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಗುಬ್ಬಿ ವೀರಣ್ಣನವರ ಕ್ಯಾಂಪಿತ್ತು. ಅಲ್ಲಿ ಸೇರಿದೆವು’’ ಎಂದು ಮಾತು ನಿಲ್ಲಿಸಿದರು ರಾಧಾ-ರುಕ್ಮಿಣಿ.

ಗುಬ್ಬಿ ಕಂಪೆನಿ ಆಡುತ್ತಿದ್ದ, ಪ್ರಸಿದ್ಧ ‘ಲವಕುಶ’ ನಾಟಕಕ್ಕೆ ಲವಕುಶ ಪಾತ್ರಗಳಿಗೆ ಬಣ್ಣ ಹಚ್ಚಿದವರು ಈ ರಾಧಾ-ರುಕ್ಮಿಣಿ. ತಮ್ಮ 12ನೇ ವಯಸ್ಸಿನಿಂದ 62ನೇ ವಯಸ್ಸಿನವರೆಗೂ ಲವಕುಶ ಪಾತ್ರವನ್ನು ನಿರ್ವಹಿಸಿದ್ದು ದಾಖಲೆ. ಅವರು ರಂಗಭೂಮಿಯ ಅಪೂರ್ವ ಸೋದರಿಯರು. ಅವರಿಗಿಂತ ಮೊದಲು ಗುಬ್ಬಿ ವೀರಣ್ಣ ಅವರ ಮೊಮ್ಮಕ್ಕಳಾದ ಬಿ.ಜಯಶ್ರೀ ಹಾಗೂ ಗಂಗಮ್ಮ ಅವರು ಲವಕುಶರ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು. ಆ ಸಂದರ್ಭದಲ್ಲಿ ಅವಳಿಜವಳಿ ಮಕ್ಕಳನ್ನು ಹುಡುಕುತ್ತಿದ್ದ ಗುಬ್ಬಿ ವೀರಣ್ಣ ಅವರಿಗೆ ಸಿಕ್ಕಿದ್ದು ಈ ರಾಧಾ-ರುಕ್ಮಿಣಿ. ಆ ಕಂಪೆನಿಯಲ್ಲಿದ್ದ ಗೌರಿಬಿದನೂರು ವೆಂಕಟರಮಣ ರೆಡ್ಡಿ ಅಂದರೆ ಜಿ.ವಿ. ಕೃಷ್ಣ ಅವರನ್ನು ಪ್ರೀತಿಸಿ ಮದುವೆಯಾದರು. ಇವರು ಚಲನಚಿತ್ರ ನಟರಾದ ಶ್ರುತಿ, ಶರಣ್ ಅವರ ಹೆತ್ತವರು. ಅವರ ಲವಕುಶ ಪಾತ್ರಗಳಿಂದಲೇ ಈಗಲೂ ಗುರುತಿಸುವವರಿದ್ದಾರೆ. ಅದಕ್ಕೆ ಕಾರಣ; ಅವರ ಮುದ್ದುಮುಖ, ನಗುಮೊಗ, ಲವಲವಿಕೆಯ ಅಭಿನಯ. ‘‘ಲವಕುಶರ ಪಾತ್ರಕ್ಕೆ ನಾವು ಸರಿಯಾಗಿ ಹೊಂದುತ್ತೇವೆ, ಜೋಡಿಯಾಗುತ್ತೇವೆ ಎಂದು ಗುರುತಿಸಿದವರು ಗುಬ್ಬಿ ವೀರಣ್ಣ ಅವರು. ಅವರು ಗುರುತಿಸಿ ಪಾತ್ರ ಕೊಡದಿದ್ದರೆ ರಂಗಭೂಮಿಯಲ್ಲಿ ಹೆಸರು ಗಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’’ ಎನ್ನುವ ಅವರ ಮಾತು ನಿಜ. ‘ಕೃಷ್ಣಲೀಲೆ’ ನಾಟಕದಲ್ಲಿ ಕೃಷ್ಣ-ಬಲರಾಮ, ‘ಕುರುಕ್ಷೇತ್ರ’ ನಾಟಕದಲ್ಲಿ ಉತ್ತರೆ-ರುಕ್ಮಿಣಿ. ಯಡಿಯೂರು ಸಿದ್ಧಲಿಂಗೇಶ್ವರ ನಾಟಕದಲ್ಲಿ ಬಾಲಸಿದ್ಧಲಿಂಗೇಶ್ವರ ಅಲ್ಲದೆ ಅಜ್ಜಿ ಪಾತ್ರಗಳನ್ನು ನಿರ್ವಹಿಸಿದರು.

ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ ನಾಟಕಗಳನ್ನು ಆಡುತ್ತಿದ್ದ ಗುಬ್ಬಿ ಕಂಪೆನಿಯು ಸಾಮಾಜಿಕ ನಾಟಕಗಳತ್ತಲೂ ವಾಲಿತು. ಟಿ.ಎನ್. ಬಾಲಕೃಷ್ಣ, ಜಿ.ವಿ.ಅಯ್ಯರ್, ಗುಂಡೂರಾವ್, ನರಸಿಂಹರಾಜು ಅವರು ಸೇರಿ ರಚಿಸಿದ ‘ಸಾಹುಕಾರ’ ನಾಟಕ ಜನಪ್ರಿಯವಾಯಿತು. ಅಲ್ಲದೆ ‘ಅಡ್ಡದಾರಿ’, ‘ಕಾಲಚಕ್ರ’ ನಾಟಕಗಳು ಜನಪ್ರಿಯಗೊಂಡವು. ಇಂಥ ನಾಟಕಗಳಲ್ಲೂ ಅಭಿನಯಿಸಿ ಸೈ ಅನ್ನಿಸಿಕೊಂಡವರು ಈ ದಂಪತಿಗಳು. ಮಹಾಂತೇಶ ಶಾಸ್ತ್ರಿಗಳು ಅವಳಿಜವಳಿ ಸೋದರಿಯರ ಸಲುವಾಗಿ ರಚಿಸಿದ ‘ಹಣೆಯಕ್ಕಿ ಕೂಡಿದರೆ ಹಡೆದವರೇ ಬೇಕಿಲ್ಲ’ ನಾಟಕವಲ್ಲದೆ ‘ಗಾಜಿನಮನೆ’ ಸಾಮಾಜಿಕ ನಾಟಕದಲ್ಲಿ ನಾಗೇಶ-ಸುರೇಶನ ಪಾತ್ರದಲ್ಲಿ ರಾಧಾ-ರುಕ್ಮಿಣಿ ಗಮನಸೆಳೆದರು.


12ನೇ ವಯಸ್ಸಿನಿಂದ 62ನೇ ವಯಸ್ಸಿನವರೆಗೂ ಲವಕುಶರಾಗಿ ರಾಧಾ-ರುಕ್ಮಿಣಿ


 ‘‘ಜನರಿಗೆ ಅವರ ತೊಂದರೆಗಳು ಇದ್ದೇ ಇರುತ್ತವೆ. ನಮ್ಮ ಮುಖ ನೋಡಿ ಇನ್ನಷ್ಟು ನರಳಬಾರದು. ಅವರನ್ನು ನಗುವಂತೆ ಮಾಡಬೇಕು, ನಗಬೇಕು. ನಮ್ಮ ತೊಂದರೆಗಳನ್ನು ನಗುತ್ತ ಎದುರಿಸುವ ಮನೋಭಾವನೆಯನ್ನು ಅವರು ನಿರ್ಮಿಸಿಕೊಳ್ಳಬೇಕು’’ ಎನ್ನುವ ಜಿ.ವಿ.ಕೃಷ್ಣ ಅವರು ಕೋಲಾರ ಜಿಲ್ಲೆಯ ಗೌರಿಬಿದನೂರಿನ ಅವರು ರಂಗಭೂಮಿ ಕಲಾವಿದರಾಗಿದ್ದ ವೆಂಕಟರಾಮರೆಡ್ಡಿ ಹಾಗೂ ಹರಿಕಥೆ ವೆಂಕಟೇಶಮ್ಮ ಅವರು ಗುಬ್ಬಿ ಕಂಪೆನಿಯಲ್ಲಿದ್ದಾಗ ಅವರ ಪುತ್ರನಾಗಿ ರಂಗಭೂಮಿಯಲ್ಲೇ ಜನಿಸಿದರು. ವರನಟ ಡಾ.ರಾಜಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ ಅವರು ‘ಕೃಷ್ಣಲೀಲೆ’ ನಾಟಕದಲ್ಲಿ ಕಂಸನಾಗಿ, ಈ ಕೃಷ್ಣ ಅವರು ತೊಟ್ಟಿಲಕೃಷ್ಣನಾಗಿದ್ದರು. ಪೂತಿನಿ ಪಾತ್ರವನ್ನು ಹರಿಕಥೆ ವೆಂಕಟೇಶಮ್ಮ ನಿರ್ವಹಿಸುತ್ತಿದ್ದರು.

ಅವರ ಓದು ಪ್ರಾಥಮಿಕ ಶಾಲೆಗೇ ನಿಂತಿತು. ಆದರೆ ರಂಗಭೂಮಿಯಲ್ಲಿ ಅಪಾರ ಅನುಭವ. ಅವರ ಕುಟುಂಬವೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿ ನಂಟು ಅಂಟಿತು. ಅವರ ಅಕ್ಕ ಜಿ.ವಿ.ಶಾರದಾ ಒಳ್ಳೆಯ ಕಲಾವಿದರು.

ಜಿ.ವಿ.ಕೃಷ್ಣ ಅವವರು ಗುಬ್ಬಿ ಕಂಪೆನಿಯಲ್ಲಿ ‘ಸಿದ್ಧಲಿಂಗೇಶ’ ನಾಟಕದಲ್ಲಿ ಸಿದ್ಧಲಿಂಗನಾಗಿ, ‘ಲವಕುಶ’ ನಾಟಕದಲ್ಲಿ ಶ್ರೀರಾಮನಾಗಿ ಅಭಿನಯಿಸಿದ ಅವರ ಪಾತ್ರಗಳು ಪ್ರಸಿದ್ಧಿ ತಂದವು. ನಂತರ ಗುಬ್ಬಿ ಕಂಪೆನಿಯ ‘ಕೃಷ್ಣಲೀಲೆ’ ನಾಟಕದಲ್ಲಿ ಕೃಷ್ಣ, ‘ಸದಾರಮೆ’ ನಾಟಕದಲ್ಲಿ ಜಯವೀರ, ‘ದಶಾವತಾರ’ ನಾಟಕದಲ್ಲಿ ಮುನಿ, ‘ಸಾಹುಕಾರ’ ನಾಟಕದಲ್ಲಿ ಕೃಷ್ಣರಾಯ ಮೊದಲಾದ ಪಾತ್ರಗಳಲ್ಲಿ ಮಿಂಚಿದರು.

ಹೀಗೆ ಗುಬ್ಬಿ ಕಂಪೆನಿಯಲ್ಲಿದ್ದ ಕೃಷ್ಣ ಅವರು 1974ರಲ್ಲಿ ಜಿ.ವಿ. ಕೃಷ್ಣ ಡ್ರಾಮಾ ಕಂಪೆನಿ, ಬೆಂಗಳೂರು ಎಂದು ಕಟ್ಟಿಕೊಂಡು ರಾಜ್ಯದಾದ್ಯಂತ ಸುತ್ತಿದರು. ಗುಬ್ಬಿ ಕಂಪೆನಿಯಲ್ಲಿದ್ದಾಗ ವಿವಿಧ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಅವರು, ತಮ್ಮ ಕಂಪೆನಿಯಲ್ಲಿ ಹಾಸ್ಯ ಪಾತ್ರಗಳಲ್ಲಿ ತೊಡಗಿಸಿಕೊಂಡರು. ‘‘ದೊಡ್ಡ ಯಜಮಾನ್ರು (ಗುಬ್ಬಿ ವೀರಣ್ಣ) ಹಾಸ್ಯ ಪಾತ್ರಗಳನ್ನೇ ಮಾಡುತ್ತಿದ್ದರು. ಸದಾರಮೆ ನಾಟಕದಲ್ಲಿ ಆದಿಮೂರ್ತಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದರು. ಅದು ಪ್ರಧಾನವಾದ ಹಾಸ್ಯಪಾತ್ರ. ಅವರ ಪ್ರಭಾವ ಅಲ್ಲದೆ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳನ್ನು ನೋಡಿ ಪ್ರಭಾವಿತನಾದೆ. ಹಿರಣ್ಣಯ್ಯ ಬೆಸ್ಟ್ ಕಾಮಿಡಿಯನ್ ಎಂಬ ಬಿರುದು ಸಿಕ್ಕಿದೆ ಎನ್ನುವ ಕೃಷ್ಣ ಅವರು, ‘ವರ ನೋಡಿ ಹೆಣ್ಣು ಕೊಡು’ ನಾಟಕದಲ್ಲಿ ಗಿರಿಯಾಗಿ, ‘ಚನ್ನಪ್ಪ ಚನ್ನೇಗೌಡ’ ನಾಟಕದಲ್ಲಿ ಚನ್ನಪ್ಪನಾಗಿ, ‘ಮದುಕನ ಮದುವೆ’ ನಾಟಕದಲ್ಲಿ ಸಾಹುಕಾರ ರಂಗಣ್ಣನಾಗಿ ಗಮನಸೆಳೆದರು. ಕೆಲವರ್ಷಗಳವರೆಗೆ ನಾಟಕ ಕಂಪೆನಿ ನಡೆಸಿ ಬೆಂಗಳೂರು ಬಳಿಯ ಹೊಸಕೋಟೆಯಲ್ಲಿ ತಮ್ಮ ಮಕ್ಕಳ ಶ್ರೇಯೋಭಿವೃದ್ಧಿ ಸಲುವಾಗಿ ನಿಲ್ಲಿಸಿದರು. ಆದರೂ ಆಗಾಗ ಕಂಪೆನಿ ನಡೆಸಿ, ಕಲೆಕ್ಷನ್ ಆಗದಿದ್ದಾಗ ನಿಲ್ಲಿಸುತ್ತಿದ್ದರು. ಆಮೇಲೆ ಅವರ ಮಕ್ಕಳಾದ ಶರಣ್ ಹಾಗೂ ಶ್ರುತಿ ಅವರು ಸಿನೆಮಾಗಳಲ್ಲಿ ಮಿಂಚತೊಡಗಿದ ಮೇಲೂ ಈ ಮೂವರೂ ಧಾರಾವಾಹಿ, ಸಿನೆಮಾಗಳಿಗೆ ಬಣ್ಣ ಹಚ್ಚಿದರು. ಅವರ ಇನ್ನೊಬ್ಬ ಮಗಳು ಉಷಾ. ಈ ಉಷಾ ಅವರ ಮಗಳು ಕೀರ್ತಿ ಈಗ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

ಕೃಷ್ಣ ಅವರಿಗೆ ಈಗ ಎಂಭತ್ತರ ಹರೆಯ. ಕೃಷ್ಣ-ರುಕ್ಮಿಣಿ ಅವರಿಗೆ ಎಪ್ಪತ್ತೇಳು ವರ್ಷ ವಯಸ್ಸು. ಈಗಲೂ ರಂಗಭೂಮಿಯಲ್ಲಿ ತಾವು ನಡೆದು ಬಂದ ಹಾದಿಯನ್ನು ನೆನೆಯುತ್ತಾರೆ, ರಂಗಗೀತೆಗಳನ್ನು ಹಾಡುತ್ತಾರೆ. ಈ ಮೂವರಿಗೆ ಮೂವರು ಮಕ್ಕಳು. ಯಾರು ತಾಯಿ ಎನ್ನುವುದು ಗೊತ್ತಿಲ್ಲ!

Tags:    

Writer - ವಾರ್ತಾಭಾರತಿ

contributor

Editor - Naufal

contributor

Contributor - ಗಣೇಶ ಅಮೀನಗಡ

contributor

Similar News