ಎಪ್ಪತ್ತೈದರ ಹರೆಯದಲ್ಲಿ ‘ನೀನಾಸಮ್’

‘‘ಸಮಾಜ ಬದಲಾವಣೆಯಾಗಿದೆ. ಪ್ರತೀ ವರ್ಷ ಸರಕಾರ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಇದಕ್ಕಾಗಿ ನೀನಾಸಮ್ ತನ್ನ ಕಾಲ ಮೇಲೆ ನಿಂತುಕೊಳ್ಳುವ ಹಾಗೆ ಮಾಡುವ ಜರೂರಿದೆ. ಸದ್ಯ ನೀನಾಸಮ್‌ಗೆ 75 ವರ್ಷ ಪ್ರಯುಕ್ತ ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇದು ಜನವರಿಯಿಂದ ಶುರುವಾಗಿದ್ದು, ಡಿಸೆಂಬರ್‌ವರೆಗೆ ಮುಂದುವರಿಯಲಿದೆ. ಅನುದಾನ ಸಿಕ್ಕರೆ ರಂಗಮಂದಿರವನ್ನು ನವೀಕರಿಸುತ್ತೇವೆ’’ ಎನ್ನುವ ಆಶಯ ಕೆ.ವಿ. ಅಕ್ಷರ ಅವರದು.

Update: 2024-05-10 09:17 GMT

ಹೆಗ್ಗೋಡನ್ನು ಸಾಂಸ್ಕೃತಿಕ ಕೇಂದ್ರವಾಗಿ ಹಾಗೂ ಸಾಹಿತ್ಯಿಕ ಕೇಂದ್ರವಾಗಿ ಒಟ್ಟಿಗೇ ರೂಪಿಸಿದ ಹೆಗ್ಗಳಿಕೆ ನೀನಾಸಮ್‌ಗೆ ಸಲ್ಲಬೇಕು. ಇದರ ಹಿಂದಿನ ಶಕ್ತಿ ಕೆ.ವಿ.ಸುಬ್ಬಣ್ಣ ಅವರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡನ್ನು ಹೆಮ್ಮೆಯ ತಾಣವಾಗಿ ಹಾಗೂ ನೀನಾಸಂ ಅನ್ನು ಅಗ್ಗಳಿಕೆಯ ರಂಗಸಂಸ್ಥೆಯಾಗಿ ರೂಪಿಸಿದವರು ಅವರು. ಅವರ ’ನೀನಾಸಮ್ ಹಿನ್ನೆಲೆಯ ಸೆಲೆ’ ಲೇಖನದ ಮಾತುಗಳನ್ನು ಇಲ್ಲಿ ಉಲ್ಲೇಖಿಸುವುದು ಮುಖ್ಯ ಎನ್ನಿಸುತ್ತದೆ.

‘ನೀನಾಸಮ್ ಪ್ರಾರಂಭವಾದದ್ದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಹೊಸದರಲ್ಲಿ, ಆ ಹುರುಪು ಹುಮ್ಮಸ್ಸುಗಳ ಮನ್ನೂಕಿನಲ್ಲಿ. ಆಗ ಇಡೀ ದೇಶವು ಗಾಂಧೀಜಿಯ ನಾಯಕತ್ವದಲ್ಲಿ ಆಧುನಿಕ ಭಾರತದ ಬಗ್ಗೆ ಅಪೂರ್ವವಾದ ಕನಸುಗಳನ್ನು ಕಟ್ಟಿಕೊಂಡಿತ್ತು. ಆ ಕನಸುಗಳು ಭಾರತಕ್ಕೆ ಮಾತ್ರವಲ್ಲ, ಸಮಗ್ರ ಮಾನವ ಕುಲದ ಭಾವೀ ಸಂಸ್ಕೃತಿಗೆ ಅನ್ವಯಿಸಿದ ಕನಸುಗಳೂ ಆಗಿದ್ದವು. ಸ್ವಾತಂತ್ರ್ಯ, ಅಹಿಂಸೆ, ಆ ಮೂಲಕವಾದ ವಿಕೇಂದ್ರೀಕೃತ ಪ್ರಜಾಪ್ರಭುತ್ವ ಇವು ಅದರ ಕೇಂದ್ರಬಿಂದುಗಳು. ಆಗಿನ ನಮ್ಮ ಕನಸಿನ ಆ ಭಾರತವೆಂದರೆ - ಸ್ವತಂತ್ರವಿದ್ದು ಸ್ವಯಂಮಾಡಳಿತವುಳ್ಳ ನೂರಾರು, ಸಾವಿರಾರು ಕಿರು ಗ್ರಾಮ ಸಮುದಾಯಗಳ ಸಹಕಾರದ ಒಕ್ಕೂಟ. ನಗರ-ಪಟ್ಟಣಗಳು ಕೂಡ, ಹಲವಾರು ಕಿರುಸಮುದಾಯಗಳ ಸಮುಚ್ಚಯವಾಗಬೇಕಿತ್ತು. ಅಂತಿಮವಾಗಿ ಹೊಸಮಾನವ ಸಂಸ್ಕೃತಿಯು ಈ ತಳಹದಿಯ ಮೇಲೆ ನಿರ್ಮಾಣಗೊಳ್ಳಬೇಕೆಂಬುದು ಆಗಿನ ಕನಸು.

ಕಳೆದ ಅರ್ಧಶತಮಾನದ ಸುಮಾರಿನಲ್ಲಿ ಈ ಕನಸು ಒಡೆದೊಡೆದು ಛಿದ್ರವಾಗುತ್ತ ಬಂದಿದೆಯೋ ಅಂತ ಈಗ ಅನುಮಾನವಾದರೆ ಆಶ್ಚರ್ಯವಿಲ್ಲ. ಈಚಿನ ವರ್ಷಗಳಲ್ಲಂತೂ ಆ ಕನಸಿಗೆ ವಿರುದ್ಧವಾದ ದಿಕ್ಕಿನಲ್ಲಿ ನಮ್ಮ ಪ್ರಯತ್ನಗಳು ಬಿಜಯಂಗೈಯತೊಡಗಿವೆ. ಇಷ್ಟಾದರೂ ಆ ಕಾಲದ ಕನಸು ಪ್ರಾಯಃ ಅನೇಕ ಗ್ರಾಮಸಮುದಾಯಗಳಿಗೆ ಹೇಗೋ ಹಾಗೆ ನೀನಾಸಮ್‌ಗೂ ಜೀವಸೆಲೆಯಾಗಿ ಉಳಿದುಕೊಂಡಿದೆ. ಅದರಿಂದಲೇ ಕಿರುಸಮುದಾಯಗಳ ವಿಶಿಷ್ಟ ಬದುಕು-ಸಂಸ್ಕೃತಿಗಳು, ಕಸುಬು-ಕಟ್ಟಳೆಗಳು, ಕಾವ್ಯ, ಕಲೆ, ರಂಗಭೂಮಿಗಳು ನಮ್ಮನ್ನು ಭವಿಷ್ಯದ ಭರವಸೆಯಾಗಿ ಆಕರ್ಷಿಸುತ್ತಿವೆ’

ಅವರದೇ ‘ನನ್ನ ಅನುಭವಕ್ಕೆ ದಕ್ಕಿದ ರಂಗಕಲ್ಪನೆ’ ಲೇಖನದಲ್ಲಿ ‘1947ರಲ್ಲಿ ಇಂಡಿಯಾ ಸ್ವತಂತ್ರವಾಯಿತಲ್ಲ ಆಗ, ನಾವು ಹದಿಹರೆಯವನ್ನು ದಾಟಿಕೊಳ್ಳುತ್ತಿದ್ದೆವು. ಆ ಸಮಯಕ್ಕೆ ಇಡೀ ಇಂಡಿಯಾವನ್ನು ಆವರಿಸಿದ್ದ ಹೊಸ ಉತ್ಸಾಹ ನಮ್ಮಲ್ಲೂ ಮೈದುಂಬಿಕೊಂಡಿತ್ತು. ಮುಂದೆ ಸ್ವತಂತ್ರವಾಗಿ ಸ್ವತಃ ನಾವೇ ನಮ್ಮ ಕನಸಿನ ಹೊಸ ಇಂಡಿಯಾವನ್ನು ಕಟ್ಟಿಕೊಳ್ಳಲಿದ್ದೇವೆ ಎನ್ನುವ ಹಾರೈಕೆ ಮತ್ತು ಭರವಸೆ ನಮ್ಮನ್ನು ಸ್ಫೂರ್ತಿಗೊಳಿಸಿತ್ತು. ಸುತ್ತಣ ಹಳ್ಳಿಗಳ ಹಲವು ಹೊಸ ತರುಣರು ಕೂಡಿಕೊಂಡೆವು, ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಸಂಘಟನೆಗಳನ್ನು ರೂಪಿಸಲು ತಡಕಾಡಿದೆವು. ದಿನವೂ ಸಂಜೆ ಕೂಡಿ, ಪತ್ರಿಕೆ ಪುಸ್ತಕಗಳನ್ನು ಓದುತ್ತ, ಹರಟುತ್ತ, ವಾದಿಸುತ್ತ, ಚರ್ಚಿಸುತ್ತ, ಜಗಳವಾಡುತ್ತ ಕಳೆಯುತ್ತಿದ್ದೆವು. ಆಗಿನ ನಮ್ಮ ಹಲವು ಹುಡುಕಾಟಗಳ ಮಧ್ಯೆ ರಂಗಭೂಮಿಯೆಂಬುದು ಆಕರ್ಷಕವಾಗಿ ಕಂಡಿತು. ನಮ್ಮ ಜನಕ್ಕೆ ಕೂಡ ಸಾಮಾನ್ಯವಾಗಿ ರಂಗಭೂಮಿಯ ಆಕರ್ಷಣೆ ಇತ್ತಾದ್ದರಿಂದ ಅದೇ ನಮ್ಮ ಚಟುವಟಿಕೆಯ ಕೇಂದ್ರವಾಗಬಹುದು ಎನ್ನಿಸಿತು. ಹೀಗೆ ಒಂದೆರಡು ವರ್ಷಗಳ ನಮ್ಮ ಉತ್ಸಾಹವು ಅಂತಿಮವಾಗಿ 1949ರಲ್ಲಿ ‘ಶ್ರೀ ನೀಲಕಂಠೇಶ್ವರ ನಾಟ್ಯಸೇವಾ ಸಂಘ’ ಸಂಸ್ಥೆಯಾಗಿ ಹರಳುಗಟ್ಟಿಕೊಂಡಿತು. ಅದೇ ಕ್ರಮೇಣ ‘ನೀನಾಸಮ್’ ಎಂಬ ಹೃಸ್ವನಾಮ ತಾಳಿಕೊಂಡದ್ದು.

1980ರಲ್ಲಿ ನಮ್ಮ ನೀನಾಸಮ್ ರಂಗಶಿಕ್ಷಣ ಕೇಂದ್ರ ಪ್ರಾರಂಭವಾಯಿತು. 1985ರಲ್ಲಿ ಅದರ ವಿಸ್ತರಣೆಯಾಗಿ ನಮ್ಮ ರೆಪರ್ಟರಿ ತಂಡ ‘ತಿರುಗಾಟ’ವೆಂಬುದು ಪ್ರಾರಂಭವಾಯಿತು. ಕರ್ನಾಟಕದ ಎಲ್ಲ ಜನಕ್ಕೆ ನಿಲುಕುವ ರೀತಿಯಲ್ಲಿ ನಾವು ಹತ್ತು ವರ್ಷ ಕಾಲ ನಡೆಸಿಕೊಂಡು ಬಂದ ಚಲನಚಿತ್ರ ಶಿಬಿರಗಳು ಮತ್ತು ಆನಂತರದ ಈಚಿನ ವಾರ್ಷಿಕ ಸಂಸ್ಕೃತಿ ಶಿಬಿರಗಳು ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ, ಗ್ರಾಮಾಂತರಗಳಲ್ಲಿ, ನಾವು ಹೋಗಿ ನಡೆಸಿಕೊಟ್ಟ ರಂಗಶಿಬಿರ, ಚಲನಚಿತ್ರ ಶಿಬಿರಗಳು ನೀನಾಸಮ್ ಸಂಸ್ಥೆಯನ್ನು ದೃಢಗೊಳಿಸಲು ನೆರವಾದವು’ ಎನ್ನುವ ಅವರ ಮಾತುಗಳು ಗಮನಾರ್ಹ.

ತಿರುಗಾಟ ಮಾಡಿದ ಪರಿಣಾಮ ಬಹಳ ಗಾಢವಾದುದು. ಉತ್ತರ ಕರ್ನಾಟಕ ಸೇರಿದಂತೆ ಅನೇಕ ಊರುಗಳಲ್ಲಿನ ಸಾಂಸ್ಕೃತಿಕ ಸಂಘಟನೆಗಳು, ರಂಗ ತಂಡಗಳು ಈಗಲೂ ವಾರ್ಷಿಕ ಚಟುವಟಿಕೆಗಳೆಂದು ನೀನಾಸಮ್ ನಾಟಕಗಳನ್ನು ಪ್ರದರ್ಶಿಸುತ್ತಿವೆ. ನೀನಾಸಮ್ ನಾಟಕಗಳೊಂದಿಗೆ ತಮ್ಮ ನಾಟಕಗಳನ್ನು ಹಾಗೂ ಇತರ ನಾಟಕಗಳನ್ನು ಪ್ರದರ್ಶಿಸುವ ಸಲುವಾಗಿ ಉತ್ಸವವನ್ನು ಹಮ್ಮಿಕೊಳ್ಳುವುದನ್ನು ಕಂಡಿದ್ದೇನೆ. ನೀನಾಸಮ್‌ನಲ್ಲಿ ಕಲಿತ ಅನೇಕರು ತಮ್ಮ ಊರುಗಳಲ್ಲಿ ರಂಗ ಚಟುವಟಿಕೆಗಳನ್ನು ಮುಂದುವರಿಸಿದ ಉದಾಹರಣೆಗಳು ಅನೇಕ.

ಏಣಗಿ ಬಾಳಪ್ಪ ಅವರು ನಾಟಕ ಕಂಪೆನಿಯ ಒಡಯರಾಗಿದ್ದರೂ ತಮ್ಮ ಮಗ ಏಣಗಿ ನಟರಾಜ ಅವರನ್ನು ತರಬೇತಿಗೆ ಕಳಿಸಿದರು. ಹೀಗೆಯೇ ಶಿಕಾರಿಪುರದ ಇಕ್ಬಾಲ್ ಅಹ್ಮದ್ ಅವರು ಸಾಗರದ ಎಲ್.ಬಿ. ಕಾಲೇಜಿನಲ್ಲಿ ಬಿ.ಎಸ್ಸಿ. ಓದಿ ಆಟೊ ಓಡಿಸುತ್ತಿದ್ದರು. ಜೊತೆಗೆ ಟೈರುಗಳಿಗೆ ಪಂಕ್ಚರ್ ಹಾಕುತ್ತಿದ್ದರು. ಸಾಗರದ ಎನ್.ಆರ್.ಮಾಸೂರ ಅವರು ನಿರ್ದೇಶಿಸಿದ ಶ್ರೀರಂಗ ಅವರ ‘ಭಾರತ ಭಾಗ್ಯವಿಘಾತ’ ನಾಟಕದಲ್ಲಿ ಪಾತ್ರ ಮಾಡಿದ್ದರು. ಇದನ್ನು ನೀನಾಸಮ್‌ನಲ್ಲಿ ಪ್ರದರ್ಶಿಸಿದಾಗ ಮಾಸೂರ ಅವರು ‘‘ಇಲ್ಲಿ ಇರ್ತೀಯಾ?’’ ಎಂದು ಇಕ್ಬಾಲ್ ಅವರನ್ನು ಕೇಳಿದಾಗ ‘‘ಇರ್ತೀನಿ’’ ಎಂದರು. ಹಾಗೆ ನೀನಾಸಮ್‌ನ ಎರಡನೇ ಬ್ಯಾಚಿನ ವಿದ್ಯಾರ್ಥಿಯಾದರು. ಬಳಿಕ ಅಲ್ಲಿ ಎಂಟು ವರ್ಷ ಶಿಕ್ಷಕರಾಗಿದ್ದರು. ಬಳಿಕ ಬಿ.ವಿ. ಕಾರಂತ ಅವರೊಂದಿಗೆ ಭೂಪಾಲ್‌ನಲ್ಲಿ ರಂಗವಿನ್ಯಾಸಕರಾದರು. ಅಲ್ಲಿಂದ ಬಂದ ಮೇಲೆ ‘ಚಿನ್ನಬಣ್ಣ’ ಎಂಬ ರೆಪರ್ಟರಿ ಕಟ್ಟಿಕೊಂಡರು. ಮಕ್ಕಳಿಗಾಗಿ ದೊಡ್ಡವರು ಅಭಿನಯಿಸುವ ತಂಡ. ಈಗಲೂ ಶಿಕಾರಿಪುರದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಕೇಂದ್ರ ಥಿಯೇಟರ್ ಕಟ್ಟಿಕೊಂಡಿದ್ದಾರೆ. ಅವರಿಗೆ ಜೊತೆಯಾದವರು ಸಕಲೇಶಪುರದ ತಾಜುಮಾ. ಅವರೂ ನೀನಾಸಮ್‌ನಲ್ಲಿ ಕಲಿತರು. ಅವರನ್ನೇ ಮದುವೆಯಾಗಿ ಜಂಟಿಯಾಗಿ ರಂಗಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ‘‘ಸಾಂಸ್ಕೃತಿಕವಾಗಿ ಹುಟ್ಟಿ, ಬೆಳೆದುದು ನೀನಾಸಮ್‌ನಲ್ಲಿ. ಸಾಂಸ್ಕೃತಿಕ ತಂದೆ ಕೆ.ವಿ.ಸುಬ್ಬಣ್ಣ. ಅವರು ನನ್ನನ್ನು ಗುರುತಿಸಿದರು. ಅಕ್ಷರ ಪ್ರಕಾಶನದ ಪುಸ್ತಕಗಳ ಮುಖಪುಟ ರಚಿಸಿದೆ’’ ಎಂದು ನೆನಪಿಗೆ ಜಾರುತ್ತಾರೆ ಇಕ್ಬಾಲ್ ಅಹ್ಮದ್.

ಸಾಗರ ತಾಲೂಕಿನ ತಲವಾಟದ ಕೆ.ಆರ್.ಸುಮತಿ ಅವರು ನೀನಾಸಮ್ ಸೇರಿದ ಕುರಿತು ಹೀಗೆ ವಿವರಿಸಿದ್ದಾರೆ- ‘‘ನನ್ನ ಬದುಕಿನ ದಿಕ್ಕು ಬದಲಾಯಿಸಿದ್ದು ನೀನಾಸಮ್. ಅಲ್ಲಿಗೆ ಸೇರದಿದ್ದರೆ ಸಾಮಾನ್ಯ ಮಹಿಳೆಯಾಗಿ ಬದುಕುತ್ತಿದ್ದೆ. ಆದರೆ ನನ್ನ ಅಣ್ಣ ಜಯರಾಂ, ಅತ್ತಿಗೆ ಸೀಮಾ ಪ್ರತೀ ವರ್ಷ ಹೆಗ್ಗೋಡಿಗೆ ಚಲನಚಿತ್ರ ಶಿಬಿರಗಳಿಗೆ ಹೋಗ್ತಿದ್ರು. ಅಲ್ಲಿ ಕೋರ್ಸ್ ಶುರುವಾದಾಗ ನಾನಾಗಷ್ಟೇ ಪದವಿ ಮುಗಿಸಿದ್ದೆ. ಆಸಕ್ತಿಯಿದೆ, ಪ್ರತಿಭೆಯಿದೆ. ನೀನಾಸಮ್‌ಗೆ ಸೇರು ಎಂದು ಅಣ್ಣ, ಅತ್ತಿಗೆ ಸಲಹೆ ನೀಡಿದರು. ಬಾಲ್ಯಗೆಳತಿ ವೀಣಾ ಕಲಗಾರು ಚೆಂದ ಹಾಡ್ತಾ ಇದ್ಲು. ಒಟ್ಟಿಗೇ ಪದವಿ ಮುಗಿಸಿದ್ವಿ. ಒಟ್ಟಿಗೇ ನೀನಾಸಮ್ ನೋಡಲು ಹೋದಾಗ ಚಿದಂಬರರಾವ್ ಜಂಬೆ ಅವರನ್ನು ಭೇಟಿಯಾದ್ವಿ. ಆಮೇಲೆ ಸೇರಿಕೊಂಡ್ವಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ತೆಗೆದುಕೊಂಡ ನಿರ್ಧಾರಗಳು ಬದುಕನ್ನು ಬದಲಾಯಿಸುತ್ತವೆ. ನೀನಾಸಮ್‌ನಲ್ಲಿ ಓದುವುದು ಹೆಚ್ಚಿತು. ಪ್ರಪಂಚ ನೋಡಲು ಸಿಕ್ಕಿತು. ಮೊದಲ ತರಗತಿಯು ಕೆ.ವಿ.ಸುಬ್ಬಣ್ಣ ಅವರದು. ಅವರು ಹೇಳಿದ ಮೊದಲ ವಾಕ್ಯ- ‘ರಂಗಭೂಮಿ ಒಂದು ಭಾಷೆ. ಮನುಷ್ಯ-ಮನುಷ್ಯರ ನಡುವೆ ಸಂವಹನ ಮಾಡುವುದಕ್ಕೆ ಇರುವ ಭಾಷೆ ಎಂದರೆ ರಂಗಭೂಮಿ’ ಎಂದಿದ್ದು ಮರೆತಿಲ್ಲ. ಅಲ್ಲಿಂದ ರಂಗಭೂಮಿ ಆಸಕ್ತಿ ಹೆಚ್ಚಿತು. ಅದುವರೆಗೆ ರಂಗ ತರಬೇತಿ ಪಡೆದಿದ್ದೆ, ನಾಟಕಗಳಲ್ಲಿ ಅಭಿನಯಿಸಿದ್ದೆ. ಆದರೆ ಶೈಕ್ಷಣಿಕ ಶಿಸ್ತು ಕಲಿಸಿದ್ದು, ನಾಟಕ ಕಟ್ಟುವುದು ಹೇಗೆಂದು ಕಲಿತದ್ದು ನೀನಾಸಮ್‌ನಲ್ಲಿ. ಕೆ.ವಿ.ಅಕ್ಷರ ಅವರು ಕ್ಲಾಸ್‌ರೂಂ ಪ್ರೊಡಕ್ಷನ್ ಎಂದು ಅಡಿಗರ ಕಾವ್ಯದ ಕುರಿತು ಪ್ರಹಸನ ನಿರ್ದೇಶಿಸಿದರು. ಆಮೇಲೆ ಜಂಬೆ ಅವರು ಮೋಹನ್ ರಾಕೇಶ್ ಅವರ ಸಿದ್ಧಲಿಂಗ ಪಟ್ಟಣಶೆಟ್ಟಿ ಕನ್ನಡಕ್ಕೆ ತಂದ ‘ಆಷಾಢದಲ್ಲಿ ಒಂದು ದಿನ’ ನಾಟಕ ನಿರ್ದೇಶಿಸಿದರು. ನಂತರ ಜಂಬೆ ಅವರು ಉತ್ತರ ಕನ್ನಡದ ಸಿದ್ದಿಗಳಿಗೆ ಕಾಡೊಳಗೆ ರಂಗ ತರಬೇತಿ ಶಿಬಿರ ನಡೆಸಿದರು. ಇದಕ್ಕೆ ತಾಂತ್ರಿಕ ಸಹಾಯಕಳಾದೆ. ಹೀಗೆ ಕೋರ್ಸ್ ಮುಗಿಸಿದ ಮೇಲೆ ಎಂ.ಎ. ಓದಿ ಕೆಲಸಕ್ಕೆ ಸೇರಿ, ದುಡಿಯಬೇಕು ಎನ್ನುವ ಆಸೆಯಿತ್ತು. ಆದರೆ ಸುಬ್ಬಣ್ಣ, ಜಂಬೆ ಸೇರಿದಂತೆ ನೀನಾಸಮ್ ಬಳಗವು ಎನ್‌ಎಸ್‌ಡಿಗೆ ಸೇರಲು ಒತ್ತಾಯಿಸಿದರು. ಹೀಗೆ ಒತ್ತಾಯಿಸಲು ಕಾರಣ; ನನ್ನ ತಂದೆ ಕೆ. ರಾಮಚಂದ್ರಯ್ಯ ಗಜಾನನ ನಾಟಕ ಮಂಡಳಿ ಕಂಪೆನಿ ಕಟ್ಟಿದ್ದರು. ನಾನು ಬಾಲ್ಯದಲ್ಲಿದ್ದಾಗಲೇ ಕಂಪೆನಿ ನಿಂತಿತ್ತು. ಹೀಗೆ ರಂಗಭೂಮಿಯ ಹಿನ್ನೆಲೆಯವಳು ಎಂದು ಪ್ರೋತ್ಸಾಹಿಸಿದರು. ಹೀಗಾಗಿ ನೀನಾಸಮ್ ಬ್ಯಾಚುಮೇಟುಗಳಾದ ನಾನು, ವೀಣಾ, ಸುಳ್ಯದ ಸರಸ್ವತಿ, ಬಸವರಾಜ ಕೂಡಗೆ, ಜಯರಾಂ ಅರ್ಜಿ ಹಾಕಿದೆವು. ಸಂದರ್ಶನಕ್ಕೆ ಆಗ ಮದ್ರಾಸಿಗೆ ಹೋಗಬೇಕಿತ್ತು. ಮತ್ತೆ ಅಣ್ಣ ಜಯರಾಂ ಒತ್ತಾಯಿಸಿದ ಪರಿಣಾಮ ಅಲ್ಲಿಗೆ ಹೋಗಿ ಲಿಖಿತ ಪರೀಕ್ಷೆ ಬರೆದು, ಸಂದರ್ಶನ ಮಗಿಸಿದೆ. ಅಂತಿಮವಾಗಿ ಐವರಲ್ಲಿ ಮೂವರು ಆಯ್ಕೆಯಾದೆವು. ಹಿಂದಿ, ಇಂಗ್ಲಿಷ್ ಬರಲ್ಲ. ದಿಲ್ಲಿಗೆ ಹೋಗಲ್ಲವೆಂದಿದ್ದೆ. ಅಣ್ಣನ ಒತ್ತಾಯಕ್ಕೆ ಮಣಿದೆ. ಕೊಡಗೆ, ಜಯರಾಂ ಜೊತೆ ದಿಲ್ಲಿಗೆ ಹೋದೆ. ಅಂತಿಮವಾಗಿ ಎನ್‌ಎಸ್‌ಡಿಗೆ ದಕ್ಷಿಣ ಭಾರತದಿಂದ ನಾನೊಬ್ಬಳೇ ಆಯ್ಕೆಯಾದೆ.

ಪ್ರತೀ ತಿಂಗಳು ಸುಬ್ಬಣ್ಣ ಅವರು ಯೋಗಕ್ಷೇಮ ವಿಚಾರಿಸಿ ಪತ್ರ ಬರೆಯುತ್ತಿದ್ದರು. ದಿಲ್ಲಿಗೆ ಬಂದಾಗ ಭೇಟಿಯಾಗುತ್ತಿದ್ದರು. ಅಲ್ಲಿ ಜನ್ನಿ ನಮ್ಮ ಹಿರಿಯ ಬ್ಯಾಚಿನವರು. ಕನ್ನಡದಲ್ಲಿ ಮಾತನಾಡಲು ಅವರು ಆಸರೆಯಾದರು. ಪ್ರೋತ್ಸಾಹ ನೀಡಿದರು. ಸ್ನೇಹವು ಪ್ರೇಮವಾಗಿ ಮದುವೆಯಾದೆವು. ಅಲ್ಲಿಂದ ಮೈಸೂರಿನಲ್ಲಿದ್ದು ರಂಗಭೂಮಿಯಲ್ಲಿ ತೊಡಗಿಕೊಂಡಿರುವೆ’’ ಎಂದು ಮಾತು ಮುಗಿಸಿದರು.

ಇನ್ನು ಕೆ.ವಿ. ಅಕ್ಷರ ಅವರು ನೀನಾಮ್ ಶುರುವಾದ ಹತ್ತು ವರ್ಷಗಳ ನಂತರ ಹುಟ್ಟಿದವರು. ಅವರು ಕೆ.ವಿ.ಸುಬ್ಬಣ್ಣ ಅವರ ಪುತ್ರರು ಜೊತೆಗೆ ನೀನಾಸಮ್ ಮುನ್ನಡೆಸುತ್ತಿರುವವರು. ನೀನಾಸಮ್‌ದೊಂದಿಗೇ ಬೆಳೆದ ಅವರು ‘‘ತಿರುಗಾಟದ ಆರಂಭದ ಸಂಘಟನೆ ನೆನಪಿದೆ. ಬೇರೆ ಬೇರೆ ಶಿಬಿರಗಳು ನಡೆದವು. ಅದರಲ್ಲೂ ಸಂಸ್ಕೃತಿ ಶಿಬಿರ ಮರೆಯಲಾಗದು. ನೀನಾಸಮ್‌ಗೆ ಅನುಕೂಲವಾಗಲೆಂದು ರಂಗಮಂದಿರ ಕಟ್ಟಿದೆವು. ಇದರ ಉಪಯೋಗವಾಗಲೆಂದು ರಂಗ ಶಿಕ್ಷಣ ಕೇಂದ್ರ ಶುರುವಾಯಿತು. ಆಮೇಲೆ ತಿರುಗಾಟ ಆರಂಭವಾಯಿತು. ತಿರುಗಾಟಕ್ಕೆ ಅನುಕೂಲವಾಗಲೆಂದು ಸಂಸ್ಕೃತಿ ಶಿಬಿರ ಶುರುವಾಯಿತು. ಆದರೆ ಲಾಜಿಕ್ ಆಗಿ ಬೆಳೆಸಲಿಲ್ಲ. ಹೇಗೋ ಬೆಳೆತು. ತನ್ನನ್ನು ತಾನು ಬೆಳೆಸಿಕೊಂಡಿದೆ’’ ಎನ್ನುತ್ತಾರೆ ಅವರು.

‘‘ರಂಗ ಶಿಕ್ಷಣ ಕೇಂದ್ರದಿಂದ ಇದುವರೆಗೆ 750 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಸಂಸ್ಕೃತಿ ಶಿಬಿರದಿಂದ 8-10 ಸಾವಿರ ಜನರಿಗೆ ಉಪಯೋಗವಾಗಿದೆ. ಟಿ.ಪಿ. ಅಶೋಕ ಅವರಿಂದ ಕಾಲೇಜುಗಳಲ್ಲಿ ಅನುಸಂಧಾನದ ಶಿಬಿರಗಳು ನಡೆದವು’’ ಎಂದು ಮೆಲುಕು ಹಾಕುತ್ತಾರೆ.

‘‘ಮುಂದಿನ 25 ವರ್ಷಗಳನ್ನು ನೀನಾಸಮ್ ಅನ್ನು ಹೇಗೆ ರೂಪಿಸುತ್ತೀರಿ?’’ ಎಂದು ಕೇಳಿದೆ.

‘‘ಸಮಾಜ ಬದಲಾವಣೆಯಾಗಿದೆ. ಪ್ರತೀ ವರ್ಷ ಸರಕಾರ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಇದಕ್ಕಾಗಿ ನೀನಾಸಮ್ ತನ್ನ ಕಾಲ ಮೇಲೆ ನಿಂತುಕೊಳ್ಳುವ ಹಾಗೆ ಮಾಡುವ ಜರೂರಿದೆ. ಸದ್ಯ ನೀನಾಸಮ್‌ಗೆ 75 ವರ್ಷ ಪ್ರಯುಕ್ತ ಪ್ರತೀ ತಿಂಗಳು ಒಂದೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇದು ಜನವರಿಯಿಂದ ಶುರುವಾಗಿದ್ದು, ಡಿಸೆಂಬರ್‌ವರೆಗೆ ಮುಂದುವರಿಯಲಿದೆ. ಅನುದಾನ ಸಿಕ್ಕರೆ ರಂಗಮಂದಿರವನ್ನು ನವೀಕರಿಸುತ್ತೇವೆ’’ ಎನ್ನುವ ಆಶಯ ಅವರದು.

‘‘ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಮಾತುಕತೆ ಪತ್ರಿಕೆಯನ್ನು 150ನೇ ಸಂಚಿಕೆಯಿಂದ ಮುದ್ರಿಸುವುದಿಲ್ಲ. ಸದ್ಯ 750 ಪ್ರತಿಗಳನ್ನು ಮಾತ್ರ ಪ್ರಕಟಿಸುತ್ತಿದ್ದೇವೆ. ಇಷ್ಟು ಜನರಿಗೆ ಮಾತ್ರ ತಲುಪುತ್ತಿತ್ತು. ಇನ್ನು ಮುಂದೆ ಯೂಟ್ಯೂಬ್ ಹಾಗೂ ವೆಬ್‌ಸೈಟ್‌ಗೆ ಹಾಕುತ್ತೇವೆ. ಈಗಾಗಲೇ 200-300 ಭಾಷಣಗಳನ್ನು ಯೂಟ್ಯೂಬ್‌ಗೆ ಹಾಕಿರುವುದರಿಂದ ಸಾವಿರಾರು ಜನರು ನೋಡುತ್ತಿದ್ದಾರೆ. ಹೀಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತೇವೆ’’ ಎನ್ನುವ ಮಾಹಿತಿ ಅವರದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News