ರಂಗಸಂಸ್ಕಾರಕ್ಕೆ ಸಾಣೆ ಹಿಡಿವ ಸಾಣೇಹಳ್ಳಿ

Update: 2024-11-08 11:01 GMT

ತಳಿರು ತೋರಣಗಳಿಂದ ಸಿಂಗಾರ, ಬಂಗಾರ ಬಣ್ಣದ ಸ್ವಾಗತ ಕಮಾನುಗಳಿಂದ ಸಜ್ಜಾದ ಸಾಣೇಹಳ್ಳಿಯು ರಾಷ್ಟ್ರೀಯ ನಾಟಕೋತ್ಸವವು ನಾಳೆ ಅಂದರೆ ನವೆಂಬರ್ 9ರಂದು ಕೊನೆಗೊಳ್ಳಲಿದೆ. ಅಲ್ಲಿಗೆ 27ನೇ ರಾಷ್ಟ್ರೀಯ ನಾಟಕೋತ್ಸವ ಮುಕ್ತಾಯಗೊಳ್ಳಲಿದೆ.

ಕರ್ನಾಟಕ ರಾಜ್ಯೋತ್ಸವದ ಜೊತೆಗೇ ಬಂದ ದೀಪಾವಳಿಯನ್ನು ಆಚರಿಸಿದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯು ನಾಟಕೋತ್ಸವಕ್ಕೆ ಅಲಂಕಾರಗೊಂಡು ಗಣ್ಯರು, ರಂಗಕರ್ಮಿಗಳು, ಪ್ರೇಕ್ಷಕರನ್ನು ಬರಮಾಡಿಕೊಂಡು ಸಂಭ್ರಮಿಸಿದೆ.

ಕೇವಲ 1,500 ಜನಸಂಖ್ಯೆಯುಳ್ಳ ಪುಟ್ಟ ಗ್ರಾಮ ಸಾಣೇಹಳ್ಳಿಯು ಕಳೆದ 37 ವರ್ಷಗಳಿಂದ ರಂಗ ಚಟುವಟಿಕೆಗಳಿಂದ ಗಮನ ಸೆಳೆಯುತ್ತಿದೆ. ತಮ್ಮ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘ, ಶಿವಸಂಚಾರ ನೋಡುವುದರ ಜೊತೆಗೆ ಇತರ ತಂಡಗಳ ನಾಟಕಗಳನ್ನು ನೋಡುತ್ತ ತಮ್ಮ ರಂಗಸಂಸ್ಕಾರಕ್ಕೆ ಸಾಣೆ ಹಿಡಿಯುತ್ತಾರೆ ಇಲ್ಲಿನ ಗ್ರಾಮಸ್ಥರು ಜೊತೆಗೆ ಜಿಲ್ಲೆಯ ಸಹೃದಯರು.

ರಾಜ್ಯದ ವಿವಿಧೆಡೆಯಿಂದ 150 ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಬಂದವರು ನಾಟಕೋತ್ಸವದಲ್ಲೂ ಪಾಲ್ಗೊಂಡರು. ಮಠದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 800 ವಿದ್ಯಾರ್ಥಿಗಳು ಒಂದು ವಾರದವರೆಗೆ ಕಸಗುಡಿಸುವುದರಿಂದ ಹಿಡಿದು ಅತಿಥಿಗಳಿಗೆ ಊಟ ಬಡಿಸುತ್ತ, ನಾಟಕಗಳನ್ನು ನೋಡುತ್ತ, ನಾಟಕವಾಡುತ್ತ ತಮ್ಮ ವ್ಯಕ್ತಿತ್ವವನ್ನು ಅರಳಿಸಿಕೊಳ್ಳುತ್ತಾರೆ. ಇನ್ನು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ನಾಟಕಗಳನ್ನು ಕಲಿಯುತ್ತಾರೆ. ಶಿವಸಂಚಾರದ ಕಲಾವಿದರು ತಮ್ಮ ನಾಟಕಗಳನ್ನು ಅಭಿನಯಿಸುವುದರ ಜೊತೆಗೆ ಇತರ ತಂಡದ ನಾಟಕಗಳನ್ನು ನೋಡುತ್ತ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾರೆ.

ಗುರುವಾರ ಮಧ್ಯಾಹ್ನ ಪ್ರದರ್ಶನಗೊಂಡ ನಾಟಕ ‘ಅಕ್ಕ ನಾಗಲಾಂಬಿಕೆ’ ಇದನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ್ದು, ಆರ್.ಚಂದ್ರಮ್ಮ ನಿರ್ದೇಶಿಸಿದ್ದಾರೆ. ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಈ ನಾಟಕ ಗಮನ ಸೆಳೆಯಿತು. ರಾಜ್ಯದ ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬಂದವರು ಒಂದಾಗಿ ನಾಟಕವಾಡುವಾಗ ಕೂಡಿ ಬಾಳುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾರೆ. ಅವರು ನಾಟಕವಾಡುವಾಗ ಸ್ಪಷ್ಟವಾದ, ಸ್ವಚ್ಛವಾದ ಕನ್ನಡ ಮಾತನಾಡಿದರು. ಗಟ್ಟಿಯಾಗಿ ಸಂಭಾಷಣೆ ಹೇಳುವ ಪರಿ ಗಮನಾರ್ಹ. ಅವರು ಶಿಕ್ಷಣದ ಜೊತೆಗೆ ರಂಗಶಿಕ್ಷಣವನ್ನು ಪಡೆಯುತ್ತ ರಂಗಸಂಸ್ಕಾರ ಹೊಂದುತ್ತಾರೆ. ಹೀಗೆ ಶಾಲೆಯ ಕಲಿಕೆಯ ಹಂತದಲ್ಲೇ ಅವರು ಪಡೆದ ರಂಗಶಿಕ್ಷಣದಿಂದ ಬದುಕುವ ಬಗೆಯನ್ನು ಅರಿಯುತ್ತಾರೆ ಜೊತೆಗೆ ಎಲ್ಲಿಯೇ ಹೋದರೂ ಬದುಕುತ್ತಾರೆ ಮತ್ತು ಬದುಕುವ ಭರವಸೆಯನ್ನು ಹೊಂದುತ್ತಾರೆ. ಕಲಿಕೆಯ ಸಲುವಾಗಿ ತಮ್ಮ ಹೆತ್ತವರಿಂದ ದೂರವಿರುವ ಅವರು, ಪಂಡಿತಾರಾಧ್ಯ ಶ್ರೀಗಳು ನೀಡುವ ಶಿಕ್ಷಣದ ಜೊತೆಗೆ ರಂಗಶಿಕ್ಷಣ ಪಡೆದು ಪಳಗುತ್ತಾರೆ. ನಗರದಲ್ಲಿರುವ ಒಬ್ಬೊಬ್ಬ ಮಕ್ಕಳನ್ನು ಹೆತ್ತವರು ಮುದ್ದಾಗಿ ಬೆಳೆಸುವುದರಿಂದ ರಂಗಶಿಕ್ಷಣದಿಂದ ವಂಚಿತರಾಗುತ್ತಾರೆ. ಹಾಗೆ ಪಡೆಯಬೇಕೆಂದರೂ ದುಡ್ಡು ಕೊಟ್ಟು ಬೇಸಿಗೆ ಶಿಬಿರಗಳಿಗೆ ಸೇರಬೇಕು ಇಲ್ಲವೇ ನಾಟಕ ತಂಡಗಳಿಗೆ ಸೇರಬೇಕು. ಆದರೆ ಸಾಣೇಹಳ್ಳಿಯಲ್ಲಿ ಕಲಿಯುವ ಪ್ರತೀ ವಿದ್ಯಾರ್ಥಿಯೂ ಉಚಿತವಾಗಿ ರಂಗ ಶಿಕ್ಷಣ ಪಡೆಯುತ್ತಾರೆನ್ನುವುದು ಖುಷಿಯ ಸಂಗತಿ. ಕೇವಲ ಕನ್ನಡ ನಾಟಕಗಳಲ್ಲದೆ ವಿವಿಧ ಭಾಷೆಯ ನಾಟಕಗಳನ್ನೂ ನೋಡುತ್ತಾರೆ. ನವೆಂಬರ್ 6ರಂದು ಪ್ರದರ್ಶನಗೊಂಡ ಪಾಂಡಿಚೇರಿಯ ವೆಲ್ಲಿಪ್ಪಡೈ ಥಿಯೇಟರ್ ಮೂವ್‌ಮೆಂಟ್ ತಂಡವು ಎಸ್.ರಾಮಸ್ವಾಮಿ ನಿರ್ದೇಶನದಲ್ಲಿ ‘ನಡಪಾವಡೈ’ ತಮಿಳು ನಾಟಕವನ್ನು ಸಾಣೇಹಳ್ಳಿಯ ವಿದ್ಯಾರ್ಥಿಗಳು ನೋಡಿದರು. ಈ ನಾಟಕದ ಮೊದಲ 15 ನಿಮಿಷಗಳವರೆಗೆ ಮಾತಿಲ್ಲ. ಮೂವರು ಯುವತಿಯರು ಬಟ್ಟೆ ಒಗೆಯುವುದನ್ನು ಅರ್ಥೈಸಿಕೊಂಡ ವಿದ್ಯಾರ್ಥಿಗಳು ಪ್ರತೀ ದೃಶ್ಯದ ನಂತರ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು. ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ತೂಲಹಳ್ಳಿ ಗ್ರಾಮದ ಧನಂಜಯ ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಮೂರು ವರ್ಷದಿಂದ ಇಲ್ಲಿ ಕಲಿಯುತ್ತಿದ್ದಾನೆ. ‘ಅಕ್ಕ ನಾಗಲಾಂಬಿಕೆ’ ನಾಟಕದಲ್ಲಿ ಕನ್ನದ ಮಾರಯ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದ. ನಾಗಲಾಂಬಿಕೆ ಪಾತ್ರದ ಕರಿಬಸಮ್ಮ ಕೂಡಾ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕನ್ನನಾಯಕನಕಟ್ಟೆಯವರು. ಒಂಭತ್ತನೆಯ ತರಗತಿಯ ಕವನಾ ತನ್ನ ಅಭಿನಯದಿಂದ ಗಮನ ಸೆಳೆದಳು. ಇವರ ಹಾಗೆ ಎಲ್ಲ ವಿದ್ಯಾರ್ಥಿಗಳು ಚುರುಕಾಗಿದ್ದಾರೆ.

ಈಗಾಗಲೇ ಶಿವಸಂಚಾರದ ಕಲಾವಿದರು ‘ತುಲಾಭಾರ’ ನಾಟಕವಾಡಿದ್ದಾರೆ. ಬಿ.ಆರ್.ಪೊಲೀಸ್ ಪಾಟೀಲ ರಚನೆಯ ಈ ನಾಟಕವನ್ನು ವಿಶ್ವೇಶ್ವರಿ ಹಿರೇಮಠ ನಿರ್ದೇಶಿಸಿದ್ದಾರೆ. ಶಿಕ್ಷಕ ವೃತ್ತಿ ಕೇವಲ ನೌಕರಿಯಲ್ಲ. ಶಿಕ್ಷಕ ಕೇವಲ ನೌಕರನಲ್ಲ. ಕ್ರಿಯಾಶೀಲ, ಅಧ್ಯಯನಶೀಲ, ಶಿಷ್ಯವತ್ಸಲ, ಕವಿ, ವಿಮರ್ಶಕ, ಸಾಧಕ ಇಂಥ ಸಾವಿರ ಮೌಲ್ಯಗಳ ಒಟ್ಟು ಮೊತ್ತವೇ ಶಿಕ್ಷಕ. ಹಾಳು ಹರಟೆಯಲ್ಲ ಗುರುವಾಣಿ. ಅದು ನುಡಿ ನೈವೇದ್ಯ. ಇಂಥ ಶಿಕ್ಷಕರು ಅದೆಲ್ಲಿ ಸಿಗುತ್ತಾರೆ ಈಗ? ಅಂಥ ಅಪರೂಪದ ಶಿಕ್ಷಕರ ತುಲಾಭಾರವನ್ನು ಮಾಡಿ ಸಂಭ್ರಮಿಸುವ ಗ್ರಾಮಸ್ಥರ ಕುರಿತ ನಾಟಕವಿದು.

‘‘ತುಲಾಭಾರ ಅಂದರೆ ತೂಗೋದು, ಯಾರಿಗೂ ಭಾರ ಆಗದಂಗ ತೂಗೋದು, ಎರಡೂ ಪರಡಿ ಸಮ ಆಗೂಮಟಾ ತೂಗೋದು. ಇದನ್ನು ನೋಡಿ ಕೇಳಿದವರು ತೂಗಿದವರ ಪ್ರೀತಿಗೆ, ತೂಗಿಸಿಕೊಂಡವರ ನೀತಿಗೆ ತಲೆ ಬಾಗೋದು, ನೀಗಿಸಿಕೊಂಡು ನೀಗೋ ಜೀವಿಗಳ ಜೀವನಪ್ರೀತಿಗೆ ಮತ್ತ ಮತ್ತ ಮನಿಯೋದು’’ ಇದು ತುಲಾಭಾರದ ವ್ಯಾಖ್ಯಾನ.

ಇದು ಒಬ್ಬ ಮಾಸ್ತರನ ಕಥೆಯಲ್ಲ; ಇಡೀ ಶಿಕ್ಷಕ ಸಮೂಹದ ಕಥೆ. ಭಾರತೀಯ ಗುರುಪರಂಪರೆಯ ಹೇಗಿತ್ತು? ಈಗ ಹೇಗಿದೆ ಎಂಬ ಕಥಾಹಂದರವುಳ್ಳ, 2005ರಲ್ಲಿ ಧಾರವಾಡ ಆಕಾಶವಾಣಿ ಏರ್ಪಡಿಸಿದ್ದ ರಾಜ್ಯಮಟ್ಟದ ಬಾನುಲಿ ನಾಟಕ ರಚನಾ ಸ್ಪರ್ಧೆಗೆ ಪ್ರವೇಶ ಪಡೆದ 817 ನಾಟಕಗಳಲ್ಲಿ ಪ್ರಥಮ ಬಹುಮಾನ ಪಡೆದ ನಾಟಕ ಈ ‘ತುಲಾಭಾರ’. ಎರಡನೆಯ ನಾಟಕ ’ಬಂಗಾರದ ಮನುಷ್ಯ’ ಇದು ಟಿ.ಕೆ.ರಾಮರಾವ್ ಕಾದಂಬರಿ ಆಧಾರಿತ. ಇದನ್ನು ನಾನು ರಂಗರೂಪಕ್ಕಿಳಿಸಿದ್ದು, ವೈ.ಡಿ.ಬಾದಾಮಿ ನಿರ್ದೇಶಿಸಿದ್ದಾರೆ. ನಾಳೆ ಅಂದರೆ ನವೆಂಬರ್ 9ರಂದು ಪಂಡಿತಾರಾಧ್ಯ ಶ್ರೀಗಳು ರಚಿಸಿದ ’ಕೋಳೂರು ಕೊಡಗೂಸು’ ನಾಟಕ ಪ್ರದರ್ಶನಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News