ಚುನಾವಣಾ ಬಾಂಡ್ ಅಕ್ರಮ: ಕಪ್ಪು ಕುಳಗಳ ‘ಬಂಡವಾಳ’ ಬಯಲಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ನಗದೀಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾದ ಗಡುವನ್ನು ವಿಸ್ತರಿಸುವಂತೆ ಎಸ್‌ಬಿಐ ಮಾಡಿರುವ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಚುನಾವಣಾ ಬಾಂಡನ್ನು ಅಸಾಂವಿಧಾನಿಕ ಎಂದು ಕರೆದಾಗಲೇ ಕೇಂದ್ರ ಸರಕಾರದ ಮುಖವಾಡ ಕಳಚಿ ಬಿದ್ದಿತ್ತು. ಚುನಾವಣಾ ಬಾಂಡ್‌ನಲ್ಲಿ ಅಕ್ರಮ ನಡೆದಿಲ್ಲ ಎಂದಾಗಿದ್ದರೆ ಕೇಂದ್ರ ಸರಕಾರ ಈ ತೀರ್ಪಿಗೆ ತಲೆಬಾಗಿ ತಕ್ಷಣ ಮಾಹಿತಿ ಬಿಡುಗಡೆಗೆ ಸಹಕರಿಸಬೇಕಾಗಿತ್ತು. ಆದರೆ, ಕೇಂದ್ರ ಸರಕಾರ ಕುಂಬಳಕಾಯಿ ಕಳ್ಳನಂತೆ ಎಸ್‌ಬಿಐ ಮುಖಾಂತರ ಹೆಗಲು ಮುಟ್ಟಿ ನೋಡಿಕೊಂಡಿತು. ಬೀಸುವ ದೊಣ್ಣೆಯಿಂದ ಪಾರಾಗುವ ತಂತ್ರದ ಭಾಗವಾಗಿ, ಚುನಾವಣೆ ಮುಗಿಯುವವರೆಗೆ ಮಾಹಿತಿ ಬಹಿರಂಗಗೊಳಿಸದೇ ಇರುವುದಕ್ಕಾಗಿ ಎಸ್‌ಬಿಐಯನ್ನು ಬಳಸಿಕೊಂಡಿತು. ಗಡುವು ವಿಸ್ತರಣೆಗೆ ಮನವಿ ಮಾಡಿರುವುದು ಎಸ್‌ಬಿಐ ಆಗಿದ್ದರೂ, ಅದರ ಹಿಂದೆ ಇದ್ದದ್ದು ಕೇಂದ್ರ ಸರಕಾರ. ಚುನಾವಣೆಗೆ ಮುನ್ನ ಮಾಹಿತಿ ಬಹಿರಂಗವಾದರೆ ಚುನಾವಣಾ ಫಲಿತಾಂಶದ ಮೇಲೆ ಅದು ಪರಿಣಾಮ ಬೀರಬಹುದು ಎನ್ನುವ ಭಯ ಬಿಜೆಪಿಗಿದೆ. ಇದರ ಅರ್ಥ, ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ದೊಡ್ಡ ಮಟ್ಟದ ಅಕ್ರಮವನ್ನು ಎಸಗಿದೆ ಎಂದಾಗಿದೆ. ಆ ಕಾರಣಕ್ಕೆ ಮಾಹಿತಿ ಬಹಿರಂಗವನ್ನು ಮುಂದೆ ಹಾಕುವುದಕ್ಕೆ ಯತ್ನಿಸಿತು. ಇದೀಗ ಸುಪ್ರೀಂಕೋರ್ಟ್ ಎಸ್‌ಬಿಐಯ ಮನವಿಯನ್ನು ತಿರಸ್ಕರಿಸುವ ಮೂಲಕ, ಕೇಂದ್ರ ಸರಕಾರಕ್ಕೆ ಎರಡನೇ ಬಾರಿ ತಪರಾಕಿ ನೀಡಿದೆ. ಸುಪ್ರೀಂಕೋರ್ಟ್‌ನ ಆದೇಶ ಹಿನ್ನೆಲೆಯಲ್ಲಿ ಎಲ್ಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಎಸ್‌ಬಿಐ ರವಾನಿಸಿದೆ. ಮಾ. 15ರಂದು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ಬಹಿರಂಗವಾಗುವುದಕ್ಕಷ್ಟೇ ಬಾಕಿ ಉಳಿದಿದೆ.
ಸುಪ್ರೀಂಕೋರ್ಟ್ ಆದೇಶ ನೀಡಿದ ಮರುದಿನವೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲು ಎಸ್‌ಬಿಐಗೆ ಸಾಧ್ಯವಾಯಿತು ಎನ್ನುವುದರಲ್ಲೇ ಅದರ ಕಪಟತನವಿದೆ. ಮಾಹಿತಿ ಬಿಡುಗಡೆಗೆ ತಾಂತ್ರಿಕ ಸಮಸ್ಯೆ ಇದೆ, ಆದುದರಿಂದ ಗಡುವನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದ ಎಸ್‌ಬಿಐ, ಸುಪ್ರೀಂಕೋರ್ಟ್ ಕಿವಿ ಹಿಂಡಿದ ಬೆನ್ನಿಗೆ ಹೇಗೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿತು? ಹಾಗಾದರೆ ಗಡುವು ವಿಸ್ತರಿಸಲು ಸುಪ್ರೀಂಕೋರ್ಟ್‌ಗೆ ಒತ್ತಾಯಿಸಲು ಎಸ್‌ಬಿಐಗೆ ಒತ್ತಡ ಹಾಕಿದವರು ಯಾರು? ಜನರ ನಂಬಿಕೆಯ ತಳಹದಿಯಲ್ಲಿ ನಿಂತಿರುವ ಬ್ಯಾಂಕ್ ಭ್ರಷ್ಟ ರಾಜಕೀಯ ಪಕ್ಷಗಳ ಒತ್ತಡಕ್ಕೆ ಸಿಲುಕಿ ಜನರ ಬೆನ್ನಿಗೆ ಇರಿಯಲು ಯತ್ನಿಸಿತು ಎನ್ನುವುದು ಇದರಿಂದ ಬಹಿರಂಗವಾದಂತಾಯಿತು. ಚುನಾವಣಾ ಆಯೋಗದ ಸೂತ್ರವೂ ಕೇಂದ್ರ ಸರಕಾರದ ಕೈಯಲ್ಲೇ ಇರುವುದರಿಂದ, ಎಸ್‌ಬಿಐ ನೀಡಿರುವ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲುಪದಂತೆ ಮಾಡುವ ಪ್ರಯತ್ನ ಮುಂದುವರಿಯುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಚುನಾವಣಾ ಬಾಂಡ್ ‘ಬಂಡವಾಳ’ ಹೊರ ಬೀಳುತ್ತದೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆಯೇ ಸರಕಾರ ಸಿಎಎ ಜಾರಿಗೆ ಅಧಿಸೂಚನೆ ನೀಡಿದೆ. ಚುನಾವಣಾ ಬಾಂಡ್‌ನ ಚರ್ಚೆಯ ದಿಕ್ಕು ತಪ್ಪಿಸುವುದಕ್ಕಾಗಿಯೇ ಏಕಾಏಕಿ ಸಿಎಎ ಎನ್ನುವ ಗುಮ್ಮನನ್ನು ಗೂಡಿನಿಂದ ಹೊರ ಬಿಟ್ಟಿದೆ. ವಿರೋಧ ಪಕ್ಷ ಮತ್ತು ಜನ ಸಾಮಾನ್ಯರು ಚುನಾವಣಾ ಬಾಂಡ್‌ನ ಚರ್ಚೆಯನ್ನು ಬಿಟ್ಟು, ಸಿಎಎಯನ್ನು ಕೈಗೆತ್ತಿಕೊಳ್ಳಬೇಕು ಎನ್ನುವುದು ಸರಕಾರದ ಇಂಗಿತವಾಗಿದೆ.
ಸಿಎಎ ಜಾರಿಗೆ ಅಧಿಸೂಚನೆ ನೀಡಿದ ಬೆನ್ನಿಗೇ ಅಸ್ಸಾಮಿನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಶುರುವಾಗಿದೆ. ಸಿಎಎ ವಿರುದ್ಧ ಈ ಹಿಂದೆಯೂ ಮೊದಲು ಧ್ವನಿಯೆತ್ತಿದ್ದು ಅಸ್ಸಾಂ. ಸರಕಾರ ಸಿಎಎಯನ್ನು ಜಾರಿಗೊಳಿಸಿರುವುದೇ ದೇಶದ ಮುಸ್ಲಿಮರ ವಿರುದ್ಧ ಉಳಿದೆಲ್ಲ ಸಮುದಾಯವನ್ನು ಎತ್ತಿ ಕಟ್ಟುವುದಕ್ಕೆ . ದೇಶದ ಮುಸ್ಲಿಮರಲ್ಲಿ ಅಭದ್ರತೆಯನ್ನು ಬಿತ್ತಿ ಅವರನ್ನು ಬೀದಿಗಿಳಿಯುವಂತೆ ಮಾಡುವುದು ಸರಕಾರದ ಉದ್ದೇಶವಾಗಿತ್ತು. ಆದರೆ ಈ ಹುನ್ನಾರ ವಿಫಲವಾಯಿತು. ಅಸ್ಸಾಮಿನಲ್ಲಿ ಹಿಂದೂ ಮುಸ್ಲಿಮರೆನ್ನದೆ ಎಲ್ಲ ಸಮುದಾಯದ ಜನರು ಸಂಘಟಿತರಾಗಿ ಇದರ ವಿರುದ್ಧ ಪ್ರತಿಭಟನೆ ಈ ಹಿಂದೆ ನಡೆಸಿದ್ದರು. ಆದಿವಾಸಿಗಳು, ದಲಿತರು ಸಿಎಎ-ಎನ್‌ಆರ್‌ಸಿ ವಿರುದ್ಧ ದಂಗೆ ಎದ್ದರು. ಅಸ್ಸಾಮಿನ ಪ್ರತಿಭಟನೆ ಮುಂದೆ ದೇಶಾದ್ಯಂತ ವಿಸ್ತರಿಸಿತು. ದಿಲ್ಲಿ ರಣರಂಗವಾಯಿತು. ಪ್ರಧಾನಿ ಮೋದಿಯವರು ‘ಪ್ರತಿಭಟನೆ ನಡೆಸುತ್ತಿರುವವರನ್ನು ಅವರ ದಿರಿಸಿನಿಂದಲೇ ಯಾರೆನ್ನುವುದನ್ನು ಗುರುತಿಸಬಹುದು’ ಎಂಬಂತಹ ಮಾತುಗಳನ್ನು ಆಡಿದರು. ಆದರೆ ಪ್ರತಿಭಟಿಸುವವರನ್ನು ದಿರಿಸಿನ ಆಧಾರದಲ್ಲಿ ಗುರುತು ಹಿಡಿಯುವುದು ಪ್ರಧಾನಿಗೆ ಕಷ್ಟವಾಗತೊಡಗಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ‘ಸಿಎಎ-ಎನ್‌ಆರ್‌ಸಿ’ಗೂ ಸಂಬಂಧವೇ ಇಲ್ಲ ಎಂಬ ಹೇಳಿಕೆ ನೀಡಿದರು. ಇಷ್ಟಾದರೂ ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸ್ಲಿಮರನ್ನೇ ಗುರಿ ಮಾಡಿ ಪೊಲೀಸರು ದೌರ್ಜನ್ಯಗಳನ್ನು ಎಸಗಿದ್ದರು. ಜೆಎನ್‌ಯು, ಜಾಮಿಯಾ ಮಿಲ್ಲಿಯಾದಂತಹ ವಿಶ್ವವಿದ್ಯಾನಿಲಯಗಳಿಗೆ ಪೊಲೀಸರು ನುಗ್ಗಿದರು. ಹಲವೆಡೆ ಗೋಲಿಬಾರ್‌ಗಳು ನಡೆದವು. ವಿಪರ್ಯಾಸವೆಂದರೆ, ಜಾತಿ, ಧರ್ಮಗಳನ್ನು ಮೀರಿ ಪ್ರತಿಭಟನೆಗಳು ನಡೆದವಾದರೂ, ಈ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಯುವಕರೇ ಬಲಿಯಾಗಿದ್ದರು. ಹಾಗೆಯೇ ಸಿಎಎ ವಿರುದ್ಧದ ಪ್ರತಿಭಟನೆಯನ್ನು ಮುಂದಿಟ್ಟುಕೊಂಡು ಮುಸ್ಲಿಮ್ ಸಮುದಾಯದ ನೂರಾರು ಯುವಕರನ್ನು ಬಂಧಿಸಲಾಯಿತು. ಹಲವರು ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಇದೀಗ ಚುನಾವಣೆಯ ಸಂದರ್ಭದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಬೇಕು ಎನ್ನುವ ದುರುದ್ದೇಶದಿಂದಲೇ ಸರಕಾರ ಸಿಎಎ ಜಾರಿಗೆ ಮುಂದಾಗಿದೆ. ಸರಕಾರದ ಸಂಚನ್ನು ಅರ್ಥೈಸಿಕೊಂಡು ವಿರೋಧ ಪಕ್ಷಗಳು ಮತ್ತು ಜನಸಾಮಾನ್ಯರು ಹೆಜ್ಜೆ ಮುಂದಿಡಬೇಕಾಗಿದೆ. ಮುಖ್ಯವಾಗಿ, ಈ ದೇಶದ ಮುಸ್ಲಿಮರು ಯಾವ ಕಾರಣಕ್ಕೂ ಸಿಎಎ ವಿರುದ್ಧದ ಹೋರಾಟದ ನೇತೃತ್ವವನ್ನು ವಹಿಸಬಾರದು. ಇದು ಕೇವಲ ಮುಸ್ಲಿಮ್ ವಿರೋಧಿ ಕಾನೂನು ಮಾತ್ರವಲ್ಲ, ಈ ದೇಶದ ಎಲ್ಲ ಶೋಷಿತ ಸಮುದಾಯಗಳ ವಿರುದ್ಧ ಸರಕಾರ ಜಾರಿಗೆ ತರಲು ಹೊರಟ ಕಾನೂನಾಗಿದೆ. ಆದುದರಿಂದ, ಸಂವಿಧಾನಪರವಾಗಿರುವ ಎಲ್ಲ ಜನರು ಸಂಘಟಿತವಾಗಿ ನಡೆಸಬೇಕಾಗಿರುವ ಹೋರಾಟ ಇದು. ಸಿಎಎಯನ್ನು ಈಗಾಗಲೇ ಹಲವು ರಾಜ್ಯಗಳು ವಿರೋಧಿಸಿವೆ. ಕೇರಳ, ತಮಿಳುನಾಡು ಇದರ ವಿರುದ್ಧ ಸ್ಪಷ್ಟ ಹೇಳಿಕೆಗಳನ್ನು ನೀಡಿವೆ. ಅಸ್ಸಾಮಿನ ಆದಿವಾಸಿ, ಬುಡಕಟ್ಟು ಜನರು ಇದರ ವಿರುದ್ಧ ಧ್ವನಿಯೆತ್ತಿದ್ದಾರೆ. ಆದರೆ ಸಿಎಎ ಗದ್ದಲದಲ್ಲಿ ಚುನಾವಣಾ ಬಾಂಡ್ ಅಕ್ರಮ ಯಾವ ಕಾರಣಕ್ಕೂ ಬದಿಗೆ ಸರಿಯುವಂತೆ ಆಗಬಾರದು. ಸಿಎಎಗೆ ಹಿನ್ನಡೆಯಾಗಬೇಕಾದರೆ ಮೋದಿ ನೇತೃತ್ವದ ಸರಕಾರ ಹಿನ್ನಡೆಯನ್ನು ಅನುಭವಿಸಬೇಕು. ಚುನಾವಣೆಯಲ್ಲಿ ಸರಕಾರಕ್ಕೆ ಹಿನ್ನಡೆಯಾಗಬೇಕಾದರೆ, ಅದರ ಭ್ರಷ್ಟಾಚಾರ, ಅಕ್ರಮಗಳು ಜನಸಾಮಾನ್ಯರಿಗೆ ಹೆಚ್ಚು ಹೆಚ್ಚು ತಲುಪಬೇಕು. ಈ ನಿಟ್ಟಿನಲ್ಲಿ, ಚುನಾವಣಾ ಬಾಂಡ್‌ನಲ್ಲಿ ಬಿಜೆಪಿಯ ‘ಬಂಡವಾಳ’ ಕೇಂದ್ರ ಸರಕಾರದ ಮುಖವಾಡವನ್ನು ಕಳಚಿ ಹಾಕಲಿದೆ. ಸ್ವಿಸ್‌ಬ್ಯಾಂಕ್‌ನಿಂದ ಕಪ್ಪು ಹಣವನ್ನು ತರುತ್ತೇನೆ ಎಂದು ಭರವಸೆ ಕೊಟ್ಟವರು ಹೇಗೆ ಕಪ್ಪುಕುಳಗಳಿಂದ ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿಯ ತಿಜೋರಿಯನ್ನು ತುಂಬಿಸಿಕೊಂಡರು ಎನ್ನುವುದನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಸದ್ಯಕ್ಕೆ ಸಿಎಎ ಅಧಿಸೂಚನೆಯೆನ್ನುವುದು ಕೇಂದ್ರ ಸರಕಾರ ಚುನಾವಣೆಯ ಉದ್ದೇಶದಿಂದ ವಿರೋಧ ಪಕ್ಷಗಳಿಗೆ ತೋಡಿಟ್ಟ ಖೆಡ್ಡಾ ಆಗಿದೆ. ಅವುಗಳನ್ನು ಸಿಎಎ ಹೊಂಡದಲ್ಲಿ ಬೀಳಿಸಿ, ಚುನಾವಣಾ ಬಾಂಡ್ ಅಕ್ರಮದ ಹೊಂಡದಿಂದ ಪಾರಾಗಲು ಕೇಂದ್ರ ಸರಕಾರ ಹೊರಟಿದೆ. ಈ ತಂತ್ರವನ್ನು ಅರ್ಥ ಮಾಡಿಕೊಂಡು ಸಂವಿಧಾನ ಪರ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಜೋಪಾನವಾಗಿ ಹೆಜ್ಜೆಯಿಡಬೇಕು.