ಸಂಸತ್ ಟಿವಿ ಅಸ್ತಂಗತವಾದ ಕಥನ
ಸಂಸತ್ ಕಲಾಪವನ್ನು ಜನರಿಗೆ ಮುಟ್ಟಿಸುವ ಮೂಲಕ ಪಾರದರ್ಶಕ ಗೊಳಿಸಬೇಕೆಂಬ ಮಹದಾಸೆಯಿಂದ ಆರಂಭಗೊಂಡ ಲೋಕಸಭೆ/ರಾಜ್ಯಸಭೆ ಟಿವಿಗಳು ಕಾಲಕ್ರಮೇಣ ಸರಕಾರದ ತುತ್ತೂರಿಯಾಗಿ ಬದಲಾಗಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಹೇಗೆ ಉಸಿರು ಕಳೆದುಕೊಳ್ಳುತ್ತಿವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದಕ್ಕೆ ಹಾಲಿ ಸರಕಾರ ಮಾತ್ರ ಜವಾಬ್ದಾರಿಯಲ್ಲ; ಲೋಕಸಭೆ/ರಾಜ್ಯಸಭೆ ಟಿವಿಗಳ ಬುನಾದಿಯೇ ಅಸ್ಥಿರವಾಗಿತ್ತು ಮತ್ತು ಸರಕಾರಗಳು ಅದನ್ನು ಇನ್ನಷ್ಟು ದುರ್ಬಲಗೊಳಿಸಿದವು. ಬಿಜೆಪಿ ಸರಕಾರ ಕೊನೆಯ ಮೊಳೆ ಹೊಡೆಯುತ್ತಿದೆ, ಅಷ್ಟೆ!
‘‘ಯುರೋಪಿನ ಜನರು ಅಂಡಲೆಯುತ್ತಿದ್ದಾಗ ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಇದ್ದವು’’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹಿಂದೊಮ್ಮೆ ಹೇಳಿದ್ದರು. ಇಂಥ ಸಂಸ್ಥೆಗಳಲ್ಲಿ ಒಂದಾದ ಸಂಸತ್ತಿಗೆ ಮೊದಲ ಬಾರಿ ಪ್ರವೇಶಿಸುವಾಗ ಪ್ರಧಾನಿ ನರೇಂದ್ರ ಮೋದಿ ತಲೆಬಾಗಿ ನಮಿಸಿದ್ದರು. ಆದರೆ, ಸಂಸತ್ತಿನಲ್ಲಿ ಕಲಾಪಗಳು ಎಷ್ಟು ಪಾರದರ್ಶಕವಾಗಿ ನಡೆಯುತ್ತಿವೆ? ಉತ್ತರ ನಿರಾಶಾದಾಯಕವಾಗಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅವಿಶ್ವಾಸ ಮಂಡನೆ ಪರ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಮಾತನಾಡುತ್ತಿದ್ದಾಗ, ಸಂಸತ್ ಟಿವಿಯಲ್ಲಿ ಅವರ ಮಾತಿನ ಬದಲು ಎನ್‌ಡಿಎ ಸರಕಾರದ ವಿವಿಧ ಇಲಾಖೆಗಳ ಸಾಧನೆ ಬಗ್ಗೆ ಸುದ್ದಿಪಟ್ಟೆ(ಟಿಕರ್)ಗಳು ಬರುತ್ತಿದ್ದವು. ಕಾಂಗ್ರೆಸ್ 15 ನಿಮಿಷ ಪ್ರತಿಭಟನೆ ಮಾಡಿದರೂ, ಪರದೆಯಲ್ಲಿ ಕಾಣಿಸುತ್ತಿದ್ದುದು ಸ್ಪೀಕರ್ ಓಂ ಬಿರ್ಲಾ ಅವರ ಮುಖ! ‘ಸಂಸತ್ ಟಿವಿ ಬಿಜೆಪಿ ಟಿವಿ’ ಎಂಬ ಘೋಷಣೆ ಹೆಚ್ಚಾದಾಗ, ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ಸಿಕ್ಕಿತು. ಸಭಾನಾಯಕ ಪ್ರಹ್ಲಾದ್ ಜೋಷಿ, ಪ್ರತಿಪಕ್ಷಗಳು ಅಸ್ಥಿರತೆಯ ಭಾವನೆಯಿಂದ ಬಳಲುತ್ತಿವೆ ಎಂದು ಹಂಗಿಸಿದರು.
ಸಂಸತ್ ಕಲಾಪವನ್ನು ಜನರಿಗೆ ಮುಟ್ಟಿಸುವ ಮೂಲಕ ಪಾರದರ್ಶಕ ಗೊಳಿಸಬೇಕೆಂಬ ಮಹದಾಸೆಯಿಂದ ಆರಂಭಗೊಂಡ ಲೋಕಸಭೆ/ರಾಜ್ಯಸಭೆ ಟಿವಿಗಳು ಕಾಲಕ್ರಮೇಣ ಸರಕಾರದ ತುತ್ತೂರಿಯಾಗಿ ಬದಲಾಗಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಹೇಗೆ ಉಸಿರು ಕಳೆದುಕೊಳ್ಳುತ್ತಿವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದಕ್ಕೆ ಹಾಲಿ ಸರಕಾರ ಮಾತ್ರ ಜವಾಬ್ದಾರಿಯಲ್ಲ; ಲೋಕಸಭೆ/ರಾಜ್ಯಸಭೆ ಟಿವಿಗಳ ಬುನಾದಿಯೇ ಅಸ್ಥಿರವಾಗಿತ್ತು ಮತ್ತು ಸರಕಾರಗಳು ಅದನ್ನು ಇನ್ನಷ್ಟು ದುರ್ಬಲಗೊಳಿಸಿದವು. ಬಿಜೆಪಿ ಸರಕಾರ ಕೊನೆಯ ಮೊಳೆ ಹೊಡೆಯುತ್ತಿದೆ, ಅಷ್ಟೆ!
ಪಾರದರ್ಶಕಗೊಳಿಸುವ ಪ್ರಯತ್ನ
9ನೇ ಲೋಕಸಭೆ ಚುನಾವಣೆ ಬಳಿಕ ಡಿಸೆಂಬರ್ 20, 1989ರಲ್ಲಿ ಸಂಸತ್ತಿನ ಎರಡೂ ಸದನವನ್ನು ಉದ್ದೇಶಿಸಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಮಾಡಿದ ಭಾಷಣವನ್ನು ದೂರದರ್ಶನ ಪ್ರಸಾರ ಮಾಡಿತು. ಪ್ರಧಾನಿಯಾಗಿ ವಿ.ಪಿ.ಸಿಂಗ್ ಆಯ್ಕೆಯಾದರು. ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಏನು ಮಾಡುತ್ತಾರೆ ಎನ್ನುವುದು ಜನರಿಗೆ ತಿಳಿಯಬೇಕೆಂಬ ನಿಲುವು ಇದ್ದ ಸ್ಪೀಕರ್ ರಬಿ ರೇ, ಕಲಾಪವನ್ನು ಪ್ರಸಾರ ಮಾಡಬಹುದೇ ಎಂಬುದನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದರು. ಡಿಸೆಂಬರ್1991ರಲ್ಲಿ ದೂರದರ್ಶನ ಪ್ರಶ್ನೋತ್ತರ ಅವಧಿಯನ್ನು ಮಾರನೇ ದಿನ ಪ್ರಸಾರ ಮಾಡಲಾರಂಭಿಸಿತು. 1994ರ ಹೊತ್ತಿಗೆ ಪ್ರಶ್ನೋತ್ತರ ಅವಧಿ ಮತ್ತು ಮುಖ್ಯ ವಿಷಯಗಳ ಚರ್ಚೆಗಳನ್ನು ಆಗಿಂದಾಗಲೇ ಪ್ರಸಾರ ಮಾಡುವಿಕೆ ಆರಂಭವಾಯಿತು. ವಿ.ಪಿ.ಸಿಂಗ್ ಸರಕಾರವು ಪ್ರಸಾರ ಭಾರತಿ (ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ) ಕಾಯ್ದೆ, 1990ನ್ನು ಅಂಗೀಕರಿಸಿತು. ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮಗಳ ಉಸಿರು ಕಟ್ಟಿಹೋಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಪ್ರಸಾರವನ್ನು ಸ್ವಾಯತ್ತಗೊಳಿಸುವ ಕುರಿತು ಪರಿಶೀಲಿಸಲು ಪತ್ರಕರ್ತ ಬಿ.ಜಿ.ವರ್ಗೀಸ್ ನೇತೃತ್ವದ ಕಾರ್ಯಕಾರಿ ಗುಂಪನ್ನು ರಚಿಸಲಾಯಿತು. ಪ್ರಸಾರ ಭಾರತಿ ಕಾಯ್ದೆಯಿಂದ ಪ್ರಸಾರ ನಿಗಮ ರಚನೆಯಾದರೂ, ವಿಷಯದ ಆಯ್ಕೆ, ಸಿಬ್ಬಂದಿ ನೇಮಕ ಮತ್ತು ಹಣಕಾಸು ನಿಯಂತ್ರಣ ಸರಕಾರದ ಬಳಿ ಉಳಿದುಕೊಂಡಿತು. ಕಾಯ್ದೆ ನಿಗಮಕ್ಕೆ ನಿಯಮಿತ ಸ್ವಾಯತ್ತೆಯನ್ನು ನೀಡಿತ್ತು. ಹೀಗಿದ್ದರೂ, ಕಾಯ್ದೆ 1997ರವರೆಗೆ ಅನುಷ್ಠಾನಗೊಳ್ಳಲಿಲ್ಲ. ಅಷ್ಟರಲ್ಲಿ ಹಲವು ಖಾಸಗಿ ಚಾನೆಲ್‌ಗಳು ಹುಟ್ಟಿಕೊಂಡು, ದೂರದರ್ಶನದ ಏಕಸ್ವಾಮ್ಯಕ್ಕೆ ಧಕ್ಕೆ ಉಂಟಾಗಿತ್ತು ಮತ್ತು ಜಾಹೀರಾತುಗಳಿಗೆ ಸ್ಪರ್ಧಿಸಬೇಕಾಗಿ ಬಂದಿತ್ತು. ಇದರಿಂದ ಸರಕಾರದ ಮೇಲೆ ಅವಲಂಬನೆ ಇನ್ನಷ್ಟು ಹೆಚ್ಚಿತು. ಪ್ರಸಾರ ಭಾರತಿಗೆ ಸಿಬ್ಬಂದಿ ನೇಮಕ ಇತ್ಯಾದಿಗೆ ಮಂಡಳಿಯೊಂದನ್ನು 2020ರವರೆಗೆ ರಚಿಸಿರಲಿಲ್ಲ; ದೂರದರ್ಶನ ಮತ್ತು ಆಕಾಶವಾಣಿಯ ಆಸ್ತಿಗಳನ್ನು ಪ್ರಸಾರ ಭಾರತಿಗೆ ವರ್ಗಾಯಿಸಿರಲಿಲ್ಲ.
ತಾರತಮ್ಯ ಧೋರಣೆ
ಮೊದಲಿನಿಂದಲೂ ಪ್ರಸಾರ ಭಾರತಿ/ಲೋಕಸಭೆ-ರಾಜ್ಯಸಭೆ ಟಿವಿ ದೊಡ್ಡಣ್ಣನ ಬಾಲ ಹಿಡಿದುಕೊಂಡಿದ್ದವು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ವಾಜಪೇಯಿ ಸರಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಖಂಡನಾ ನಿರ್ಣಯದ ಚರ್ಚೆಯನ್ನು ಪ್ರಸಾರ ಭಾರತಿ ತೋರಿಸಿರಲಿಲ್ಲ. ಪ್ರಶ್ನೋತ್ತರ ಅವಧಿಯ ಬದಲು ಕ್ರಿಕೆಟ್ ಪಂದ್ಯವನ್ನು ತೋರಿಸಿದ್ದರಿಂದ ಅಸಂತೋಷಗೊಂಡಿದ್ದ ಸಭಾಪತಿ ಸೋಮನಾಥ ಚಟರ್ಜಿ (ಡಿಸೆಂಬರ್ 2, 2004), ಶೂನ್ಯ ಅವಧಿಯನ್ನು ಅಂದಿನ ದಿನವೇ ಪ್ರಸಾರ ಮಾಡಬೇಕೆಂದು ಪ್ರಸಾರ ಭಾರತಿ ಸಿಇಒ ಹಾಗೂ ದೂರದರ್ಶನದ ಮಹಾ ನಿರ್ದೇಶಕರಿಗೆ ತಾಕೀತು ಮಾಡಿದರು. ಡಿಸೆಂಬರ್ 14ರಂದು ಡಿಡಿ ಲೋಕಸಭೆ ಮತ್ತು ಡಿಡಿ ರಾಜ್ಯಸಭೆ ಉಪಗ್ರಹ ಚಾನೆಲ್ ಆರಂಭವಾಯಿತು. ಈ ಚಾನೆಲ್‌ಗಳು ಸದನದ ಕಾರ್ಯಕ್ರಮಗಳನ್ನು ಆಗಿಂದಾಗಲೇ ಪ್ರಸಾರ ಮಾಡುತ್ತಿದ್ದವು. ಆದರೆ, ಲೋಕಸಭೆ ವರ್ಷಕ್ಕೆ ಹೆಚ್ಚೆಂದರೆ 70 ದಿನ ನಡೆಯುತ್ತಿತ್ತು. ಉಳಿದ ದಿನಗಳಲ್ಲಿ ಪ್ರಸಾರ ಮಾಡಲು ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಪ್ರಸಾರ ಭಾರತಿಗೆ ಚಟರ್ಜಿ ಸೂಚಿಸಿದರು. ಪ್ರಸಾರ ಭಾರತಿ ಅಧಿಕ ಮೊತ್ತ ಕೇಳಿತು. ಬದಲಾಗಿ, ಸಂಸತ್ ಟಿವಿ ಎಂಬ ಹೊಸ ಚಾನೆಲ್ ಆರಂಭಿಸಬೇಕೆಂದು ಪ್ರಸ್ತಾಪ ಸಲ್ಲಿಸಿತು. ಅದು ಸಾಧ್ಯವಾಗಲಿಲ್ಲ; ಹೀಗಾಗಿ, 2006ರಲ್ಲಿ ಲೋಕಸಭೆ ಟಿವಿ ಮತ್ತು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಅವರ ಅವಧಿಯಲ್ಲಿ ರಾಜ್ಯಸಭೆ ಟಿವಿ ಆರಂಭವಾಯಿತು.
ಈ ಚಾನೆಲ್‌ಗಳು ಪ್ರಚಲಿತ ವಿಷಯ ಕುರಿತ ಗುಣಮಟ್ಟದ ಕಾರ್ಯಕ್ರಮಗಳಿಂದ ತಮ್ಮದೇ ಆದ ವೀಕ್ಷಕರನ್ನು ಗಳಿಸಿಕೊಂಡವು. ಆದರೆ, ಶಾಸನಬದ್ಧವಾಗಿ ರಚನೆಯಾಗಿರಲಿಲ್ಲ. ಸದನಗಳ ಮುಖ್ಯಸ್ಥ (ಸಭಾಪತಿ ಮತ್ತು ಸಭಾಧ್ಯಕ್ಷ)ರ ಮರ್ಜಿಯಲ್ಲಿದ್ದವು; ದೇಖರೇಖಿಗೆ ಸ್ವತಂತ್ರ ಟ್ರಸ್ಟ್ ಅಥವಾ ಎಲ್ಲ ಪಕ್ಷಗಳ ಸಂಸದರು ಇದ್ದ ಉಸ್ತುವಾರಿ ಸಮಿತಿ ಇರಲಿಲ್ಲ. ಅಷ್ಟಲ್ಲದೆ, ಪೂರ್ಣಾವಧಿ ಸಂಪಾದಕೀಯ ಸಿಬ್ಬಂದಿ ಕೂಡ ಇರಲಿಲ್ಲ. ಸರಕಾರ ಕೊಡುತ್ತಿದ್ದ ಜಾಹೀರಾತಿನಿಂದ ಲೋಕಸಭೆ ಟಿವಿ ಸ್ವಲ್ಪ ಕಾಲ ಲಾಭದಲ್ಲಿತ್ತು. ಆದರೆ, ನಂಬಿಕಾರ್ಹ ಆದಾಯ ಮೂಲಗಳಿಲ್ಲದ್ದರಿಂದ ಸರಕಾರವನ್ನು ಅವಲಂಬಿಸಿದ್ದವು. ಸೋಮನಾಥ ಚಟರ್ಜಿ ಅವರ ಕಾಲದಲ್ಲಿ ಕೂಡ ಸ್ಪೀಕರ್ ಇಲ್ಲವೇ ಸರಕಾರ ಆಕ್ಷೇಪಿಸಿದ್ದ ಕಾರ್ಯಕ್ರಮಗಳು ಪ್ರಸಾರವಾಗಿರಲಿಲ್ಲ. ಸಭಾಪತಿ ಕಾಂಗ್ರೆಸ್‌ನ ಮೀರಾ ಕುಮಾರ್, ಆಂಧ್ರಪ್ರದೇಶವನ್ನು ಎರಡಾಗಿ ವಿಭಾಗಿಸುವ ಮಸೂದೆಯ ಮತದಾನದ ವೇಳೆ 90 ನಿಮಿಷ ಕಾಲ ಪ್ರಸಾರ ತಡೆದಿದ್ದರು. ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲ್ಪಟ್ಟಿತು. ಬಿಜೆಪಿಯ ಅರುಣ್ ಜೇಟ್ಲಿ, ‘ತುರ್ತು ಪರಿಸ್ಥಿತಿ ಜಾರಿಯಲ್ಲಿದೆ’ ಎಂದು ಟೀಕಿಸಿದ್ದರು. ಮೀರಾ ಕುಮಾರ್ ಅವರ ಅವಧಿ ಅಂತ್ಯಗೊಂಡ ಮೇ 30ರಂದು ಲೋಕಸಭೆ ಟಿವಿಯ ಸಿಇಒ ರಾಜೀವ್ ಶುಕ್ಲಾ ಅವರನ್ನು ವಜಾಗೊಳಿಸಲಾಯಿತು.
ಪರಿವಾರ ಟಿವಿ
ಆನಂತರ ಬಂದ ಬಿಜೆಪಿ ಸರಕಾರವು ಪ್ರಸಾರ ಭಾರತಿಗೆ ಝೀ ಟಿವಿ ಸುದ್ದಿ ಸಂಪಾದಕ ಮತ್ತು ಸಂಘ ಪರಿವಾರಕ್ಕೆ ಸೇರಿದ ವಿವೇಕಾನಂದ ಇಂಡಿಯಾ ಪ್ರತಿಷ್ಠಾನದ ಎ. ಸೂರ್ಯಪ್ರಕಾಶ್ ಅವರನ್ನು ನೇಮಿಸಿತು. ಸ್ಪೀಕರ್ ಸುಮಿತ್ರಾ ಮಹಾಜನ್, ಝೀ ಟಿವಿ ಉದ್ಯೋಗಿ ಸೀಮಾ ಗುಪ್ತಾ ಅವರನ್ನು ಲೋಕಸಭೆ ಟಿವಿಗೆ ಸಿಇಒ ಆಗಿ ನೇಮಿಸಿದರು. ಕೆಲವೇ ದಿನಗಳಲ್ಲಿ ಚಿತ್ರಣ ಸಂಪೂರ್ಣವಾಗಿ ಬದಲಾಯಿತು. ಹಲವರ ಗುತ್ತಿಗೆಯನ್ನು ವಿಸ್ತರಿಸಲಿಲ್ಲ; ಸಂವಾದಗಳಲ್ಲಿ ಆರೆಸ್ಸೆಸ್‌ಗೆ ಸಂಬಂಧಪಟ್ಟ ಭಾರತೀಯ ಯೋಗ ಸಂಸ್ಥಾನದಂಥ ಸಂಸ್ಥೆಗಳಿಗೆ ಆದ್ಯತೆ ಹೆಚ್ಚಿತು; ಎನ್‌ಜಿಒಗಳನ್ನು ನಿಷೇಧಿಸಲಾಯಿತು. ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಬಾರದು ಎಂಬ ನಿಷೇಧವಿದ್ದರೂ, ಜನಸಂಘದ ಮುಖಂಡ ದೀನದಯಾಳ್ ಉಪಾಧ್ಯಾಯ ಅವರ ಸಾಕ್ಷ್ಯಚಿತ್ರ ನಿರ್ಮಾಣವನ್ನು ಖಾಸಗಿ ಸಂಸ್ಥೆಗೆ ನೀಡಲಾಯಿತು. ಪ್ರಧಾನಿ, ರಾಷ್ಟ್ರಪತಿ ಮತ್ತು ಸಂಪುಟದ ಸದಸ್ಯರ ದೈನಂದಿನ ಚಟುವಟಿಕೆಗಳ ವರದಿಗಳು ಬಿತ್ತರವಾಗತೊಡಗಿದವು. ಲೋಕಸಭೆ ಸಚಿವಾಲಯ ಸಿದ್ಧಪಡಿಸಿದ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದ ಭೋಪಾಲ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಆಶಿಷ್ ಜೋಶಿ, 2017ರಲ್ಲಿ ನೇಮಕಗೊಂಡರು. ನೇಮಕವನ್ನು ಸಂಘ ಪರಿವಾರ ವಿರೋಧಿಸಿತು. ಜೋಷಿ ತಮ್ಮ ನಿಷ್ಠೆಯನ್ನು ತೋರಿಸಲು, ಕಾಶ್ಮೀರದಲ್ಲಿ ಜನಾಂಗ ಹತ್ಯೆಗೆ ಕರೆ ನೀಡಿದ್ದ, 1984ರಲ್ಲಿ ಸಿಖ್ಖರ ಹತ್ಯೆ ಅಗತ್ಯವಿತ್ತು ಎಂದೆಲ್ಲ ಹೇಳಿಕೆ ನೀಡಿದ್ದ ಜಾಗೃತಿ ಮಿಶ್ರಾ ಅವರನ್ನು ಆ್ಯಂಕರ್ ಆಗಿ ನೇಮಿಸಿದರು.
2017ರಲ್ಲಿ ಉಪರಾಷ್ಟ್ರಪತಿಯಾಗಿ ನೇಮಕಗೊಂಡ ವೆಂಕಯ್ಯ ನಾಯ್ಡು ಇನ್ನಷ್ಟು ಬದಲಾವಣೆ ತಂದರು. ಸಿಇಒ ಗುರುದೀಪ್ ಸಿಂಗ್ ಸಪ್ಪಲ್ ಜಾಗಕ್ಕೆ ಪ್ರಸಾರ ಭಾರತಿಯ ಸಿಇಒ ಶಶಿಶೇಖರ್ ವೆಂಪತಿ ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಯಿತು. ಶಾಶ್ವತ ನೇಮಕಕ್ಕೆ ರಚಿಸಿದ ಸಮಿತಿಯು ಸೂರ್ಯಪ್ರಕಾಶ್, ವೆಂಪತಿ ಮತ್ತು ಸಂಸದ ಸ್ವಪನ್‌ದಾಸ್ ಗುಪ್ತಾ ಅವರ ಹೆಸರನ್ನು ಸೂಚಿಸಿದರೂ, ನೇಮಕಗೊಂಡವರು ಮನೋಜ್ ಕುಮಾರ್ ಪಾಂಡೆ(2019). ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಟಿವಿಯ ವೆಚ್ಚ ಮತ್ತು ಸುದ್ದಿ ಎರಡಕ್ಕೂ ಕತ್ತರಿ ಹಾಕಿದರು. ಹಿಂದೆ ಮಾಡಿದ ವೆಚ್ಚದ ಬಗ್ಗೆ ತನಿಖೆಗೆ ಆದೇಶಿಸಿದರು. ಇದರಿಂದ 2020ರಲ್ಲಿ 37 ಮಂದಿ ಕೆಲಸ ಕಳೆದುಕೊಂಡರು. ಜತೆಗೆ, ಲೋಕಸಭೆ-ರಾಜ್ಯಸಭೆ ಟಿವಿಯನ್ನು ಒಟ್ಟುಗೂಡಿಸುವ ಕುರಿತು ಸ್ಪೀಕರ್ ಓಂ ಬಿರ್ಲಾ ಅವರೊಟ್ಟಿಗೆ ಮಾತುಕತೆ ಆರಂಭಿಸಿದರು.
ಸೆಪ್ಟಂಬರ್ 15, 2021ರಂದು ಸಂಸತ್ ಟಿವಿಗೆ ಚಾಲನೆ ನೀಡಲಾಯಿತು. ಪ್ರಧಾನಿ ‘ದೇಶದ ಪ್ರಜಾಪ್ರಭುತ್ವ ಮತ್ತು ಜನತೆಯ ನೂತನ ಧ್ವನಿ’ ಎಂದು ಶ್ಲಾಘಿಸಿದರು. ಮೊದಲ ಸಿಇಒ, ನಿವೃತ್ತ ಅಧಿಕಾರಿ ರವಿ ಕಪೂರ್ ಇದ್ದುದು ಒಂದು ವರ್ಷ ಮಾತ್ರ. ಆನಂತರ ಲೋಕಸಭೆ ಮಹಾ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರನ್ನು ತಾತ್ಕಾಲಿಕ ಸಿಇಒ ಆಗಿ ನೇಮಿಸಲಾಯಿತು. ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ ತಕ್ಷಣ ಅತಿ ಶೀಘ್ರವಾಗಿ ಅನರ್ಹಗೊಳಿಸಿದ ಖ್ಯಾತಿಯ ಇವರ ಅವಧಿಯಲ್ಲಿ ‘ಮ್ಯೂಟ್ ಬಟನ್’ ಅತಿ ಹೆಚ್ಚು ಬಳಕೆಯಾಯಿತು. ಎಪ್ರಿಲ್‌ನಲ್ಲಿ ಗೃಹ ಸಚಿವಾಲಯದ ಮಾಜಿ ಕಾರ್ಯದರ್ಶಿ ರಜಿತ್ ಪುನ್ಹಾನಿ ನೇಮಕಗೊಂಡರು. ಅರಣ್ಯ(ಸಂರಕ್ಷಣೆ) ತಿದ್ದುಪಡಿ ಕಾಯ್ದೆಯನ್ನು ಸಂಬಂಧಿಸಿದ ಸ್ಥಾಯಿ ಸಮಿತಿಗೆ ಕಳಿಸದೆ, ಪ್ರತಿಪಕ್ಷದ ಸದಸ್ಯರಿಲ್ಲದ ಜಂಟಿ ಸಮಿತಿಗೆ ಕಳಿಸಿದವರು ಇವರು. ಸಂಸತ್ ಟಿವಿ ಪುನಾರಚನೆಯಿಂದ 26 ಸಿಬ್ಬಂದಿ ಕೆಲಸ ಕಳೆದುಕೊಂಡರು. ಪುನ್ಹಾನಿ ಈಗ ಕಾರ್ಯದರ್ಶಿ ಮಾತ್ರ.
ಕಲಾಪ ಅವಧಿ ಕಡಿತ
ಪ್ರತಿಪಕ್ಷಗಳು ಸರಕಾರಕ್ಕೆ ಬಿಸಿ ಮುಟ್ಟಿಸಲು ಕಲಾಪ ತಡೆ, ಪ್ರತಿಭಟನೆ ನಡೆಸುವುದರಿಂದ ಕಾಲಹರಣ ಆಗುತ್ತಿದೆ. 13ನೇ ಲೋಕಸಭೆವರೆಗೆ ಕಲಾಪ ನಡೆದ ಒಟ್ಟು ಸಮಯದಲ್ಲಿ ಶೇ.9ಕ್ಕಿಂತ ಹೆಚ್ಚು ಸಮಯ ವ್ಯರ್ಥವಾಗಿರಲಿಲ್ಲ. 14ನೇ ಲೋಕಸಭೆಯಲ್ಲಿ ಇದು ಶೇ.13ಕ್ಕೆ ಹೆಚ್ಚಳಗೊಂಡಿತು. 2010ರ ಬಳಿಕ ಸಾಲುಸಾಲು ಭ್ರಷ್ಟಾಚಾರ ಪ್ರಕರಣಗಳ ಹಿನ್ನೆಲೆಯಲ್ಲಿ ಸದನದಲ್ಲಿ ಪ್ರತಿಭಟನೆ, ಕಲಾಪಕ್ಕೆ ತಡೆ ಕೂಡ ಹೆಚ್ಚಳಗೊಂಡು, 15ನೇ ಲೋಕಸಭೆಯಲ್ಲಿ ಶೇ.40ರಷ್ಟು ಸಮಯ ವ್ಯರ್ಥಗೊಂಡಿತು. ಬಿಜೆಪಿಯ ಸುಷ್ಮಾ ಸ್ವರಾಜ್ ‘ಕಲಾಪಕ್ಕೆ ತಡೆ ಕೂಡ ಒಂದು ಪ್ರಜಾಸತ್ತತ್ಮಕ ವಿಧಾನ’ ಎಂದು ಸಮರ್ಥಿಸಿಕೊಂಡಿದ್ದರು. ನಿಜ. ದಪ್ಪ ಚರ್ಮದ ಸರಕಾರವನ್ನು ಎಚ್ಚರಿಸಲು ಇಂಥ ಕ್ರಮಗಳ ಅಗತ್ಯವಿದೆ. ಆದರೆ, 2014ರ ಬಳಿಕ ಬಿಜೆಪಿ, ಚರ್ಚೆ-ಸಂವಾದಕ್ಕೆ ಅವಕಾಶವನ್ನೇ ನಿರಾಕರಿಸುತ್ತಿದೆ. ಸದನದಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದಾಗಲೆಲ್ಲ ಕ್ಯಾಮರಾ ಸ್ಪೀಕರ್ ಇಲ್ಲವೇ ಆಡಳಿತ ಪಕ್ಷದೆಡೆಗೆ ತಿರುಗುತ್ತದೆ. ಹೊಸ ಸಂಸತ್ ಭವನದಲ್ಲಿ ಸಭಾಪತಿ-ಸಭಾಧ್ಯಕ್ಷರ ಆಸನ ಹೆಚ್ಚು ಎತ್ತರದಲ್ಲಿರುವುದರಿಂದ, ಪ್ರತಿಭಟನಾಕಾರರು ಕಾಣುವುದೇ ಇಲ್ಲ!
ಡಿಸೆಂಬರ್ 2019ರಲ್ಲಿ ರಾಜ್ಯಸಭೆಯಲ್ಲಿ ಗೃಹ ಸಚಿವರು ನಾಗರಿಕತ್ವ(ತಿದ್ದುಪಡಿ) ಕಾಯ್ದೆ ಮಂಡಿಸುತ್ತಿದ್ದಾಗ, ಪ್ರತಿಪಕ್ಷದವರು ಘೋಷಣೆ ಕೂಗುತ್ತಿದ್ದರು: ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಪ್ರಸಾರ ಸ್ಥಗಿತಗೊಳಿಸಿದರು. ಪೆಗಾಸಸ್ ಸ್ಪೈವೇರ್ ಬಳಸಿ ಪ್ರತಿಪಕ್ಷದ ನಾಯಕರು, ಪತ್ರಕರ್ತರ ಮೊಬೈಲ್ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಆಗಸ್ಟ್ 6, 2021ರಂದು ಪ್ರತಿಪಕ್ಷಗಳು ಪ್ರತಿಭಟಿಸಿದಾಗ, 72 ಸೆಕೆಂಡ್ ಮಾತ್ರ ತೋರಿಸಲಾಯಿತು. ಮಾರ್ಚ್ 2023ರಲ್ಲಿ ಹಿಂಡನ್‌ಬರ್ಗ್ ರಿಸರ್ಚ್ ವರದಿ ಕುರಿತ ಚರ್ಚೆ ವೇಳೆ ಸಂಸತ್ ಟಿವಿ 15 ನಿಮಿಷ ಪ್ರಸಾರ ಸ್ಥಗಿತಗೊಳಿಸಿತ್ತು. ಲೋಕಸಭೆ ಟಿವಿಯ ಬಾಲಬಡುಕತನ ಎಷ್ಟಿದೆ ಎಂದರೆ, ರಾಹುಲ್ ಗಾಂಧಿ ತೂಕಡಿಸಿದ್ದನ್ನು ಮತ್ತು ಪ್ರಧಾನಿಯನ್ನು ಅಪ್ಪಿಕೊಳ್ಳುವ ಮುನ್ನ ಪಕ್ಷದ ಸಂಸದರೊಬ್ಬರಿಗೆ ಕಣ್ಣು ಮಿಟುಕಿಸಿದ್ದನ್ನು (2018ರಲ್ಲಿ) ಯಥಾಪ್ರಕಾರ ತೋರಿಸಲಾಯಿತು. ಆದರೆ, 2023ರಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ ಮತ್ತು ಮಣಿಪುರದ ಹಿಂಸಾಕಾಂಡದ ಬಗ್ಗೆ ಮಾತನಾಡಿದ 16 ನಿಮಿಷದಲ್ಲಿ 11 ನಿಮಿಷ ಕ್ಯಾಮರಾ ಸ್ಪೀಕರ್ ಅವರನ್ನು ತೋರಿಸುತ್ತಿತ್ತು.
ಸಂಸತ್ ಟಿವಿ ಸ್ವಾಯತ್ತೆ, ಉತ್ತರದಾಯಿತ್ವ ಬೆಳೆಸಿಕೊಳ್ಳುವುದೇ? ಇಲ್ಲ. ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್)ಯನ್ನು ಸ್ವತಂತ್ರ ಟ್ರಸ್ಟ್ ಒಂದು ನಿರ್ವಹಿಸುತ್ತದೆ ಮತ್ತು ಕಡ್ಡಾಯ ಪರವಾನಿಗೆ ಶುಲ್ಕದಿಂದ ಆದಾಯ ಬರುವುದರಿಂದ ಅದು ಸರಕಾರದ ಮರ್ಜಿಯಲ್ಲಿ ಇಲ್ಲ. ಅಮೆರಿಕ ಸರಕಾರ ಪಬ್ಲಿಕ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಹೆಸರಿನ ಲಾಭದ ಉದ್ದೇಶವಿಲ್ಲದ ಸಂಸ್ಥೆಯನ್ನು ರಚಿಸಿದ್ದು, ಅದಕ್ಕೆ ಖಾಸಗಿ ಟ್ರಸ್ಟ್ ಗಳು, ನಾಗರಿಕರು ಹಾಗೂ ಸದಸ್ಯ ಸಂಸ್ಥೆಗಳು ದೇಣಿಗೆ ನೀಡುತ್ತವೆ; ವಸ್ತುನಿಷ್ಠತೆ ಮತ್ತು ಸಮತೋಲ ಕಾಯ್ದುಕೊಳ್ಳಲು ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ವಿ.ಪಿ.ಸಿಂಗ್ ಮತ್ತು ರಬಿ ರೇ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕಾಗಿ ರಚಿಸಿದ ಸಂಸ್ಥೆ ಈಗ ಬಿ.ಜಿ. ವರ್ಗೀಸ್ ಅವರು ಹೇಳಿದಂತೆ, ‘ಅಧಿಕೃತ ತುತ್ತೂರಿ’ಯಾಗಿ ಬದಲಾಗಿದೆ. ಒಂದು ಕಾಲದಲ್ಲಿ ಅಂತರ್‌ರಾಷ್ಟ್ರೀಯ ಸುದ್ದಿಗಳಲ್ಲದೆ, ಭ್ರಷ್ಟಾಚಾರ ಹಗರಣಗಳು, ಕೋಮು ಹಿಂಸೆ, ರಾಜಕೀಯ ಅಲ್ಲೋಲಕಲ್ಲೋಲ ಹಾಗೂ ಆರ್ಥಿಕತೆ ಬಗ್ಗೆ ಸುದ್ದಿ ಮಾಡುತ್ತಿತ್ತು. ದೂರದರ್ಶನ ನಡೆಸಿಕೊಡುತ್ತಿದ್ದ ಚರ್ಚೆ-ಸಂವಾದಗಳಲ್ಲಿ ಖ್ಯಾತ ಲೇಖಕರು, ಚಿಂತಕರು, ವಿದ್ವಾಂಸರು ಪಾಲ್ಗೊಳ್ಳುತ್ತಿದ್ದರು. ಈಗ ಪ್ರಧಾನಿ, ಸಭಾಧ್ಯಕ್ಷ-ಸಭಾಪತಿ ಹಾಗೂ ರಾಷ್ಟ್ರಪತಿಯವರ ದೈನಂದಿನ ಚಟುವಟಿಕೆಗಳ ವರದಿಗೆ ಸೀಮಿತವಾಗಿದೆ.
ಇಲ್ಲಿಗೆ ಬಂತು ಸಂಗಯ್ಯ..ಸಂಸತ್ ಕಲಾಪವನ್ನು ಜನರಿಗೆ ಮುಟ್ಟಿಸುವ ಮೂಲಕ ಪಾರದರ್ಶಕ ಗೊಳಿಸಬೇಕೆಂಬ ಮಹದಾಸೆಯಿಂದ ಆರಂಭಗೊಂಡ ಲೋಕಸಭೆ/ರಾಜ್ಯಸಭೆ ಟಿವಿಗಳು ಕಾಲಕ್ರಮೇಣ ಸರಕಾರದ ತುತ್ತೂರಿಯಾಗಿ ಬದಲಾಗಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ಹೇಗೆ ಉಸಿರು ಕಳೆದುಕೊಳ್ಳುತ್ತಿವೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದಕ್ಕೆ ಹಾಲಿ ಸರಕಾರ ಮಾತ್ರ ಜವಾಬ್ದಾರಿಯಲ್ಲ; ಲೋಕಸಭೆ/ರಾಜ್ಯಸಭೆ ಟಿವಿಗಳ ಬುನಾದಿಯೇ ಅಸ್ಥಿರವಾಗಿತ್ತು ಮತ್ತು ಸರಕಾರಗಳು ಅದನ್ನು ಇನ್ನಷ್ಟು ದುರ್ಬಲಗೊಳಿಸಿದವು. ಬಿಜೆಪಿ ಸರಕಾರ ಕೊನೆಯ ಮೊಳೆ ಹೊಡೆಯುತ್ತಿದೆ, ಅಷ್ಟೆ!