ವಾಜಪೇಯಿ ಬಡಾವಣೆ ನಿವೇಶನ ಅಕ್ರಮ ಹಂಚಿಕೆ ಪ್ರಕರಣ | ನಿವೇಶನ ರದ್ದುಗೊಳಿಸಿ 147 ಫಲಾನುಭವಿಗಳಿಗೆ ನೋಟೀಸ್
ಶಿವಮೊಗ್ಗ : ರಾಜ್ಯಾದ್ಯಂತ ಮುಡಾ ಹಗರಣ ಸದ್ದು ಮಾಡುತ್ತಿದ್ದರೆ, ಇತ್ತ ಶಿವಮೊಗ್ಗ ವಾಜಪೇಯಿ ಬಡಾವಣೆಯಲ್ಲಿ ಸೂಡಾ ವತಿಯಿಂದ ವಿವೇಚನಾ ಕೋಟಾದಡಿ ಹಂಚಿಕೆ ಮಾಡಲಾಗಿದ್ದ ನಿವೇಶನಗಳನ್ನು ರದ್ದುಗೊಳಿಸಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.
ಸೂಡಾ ವತಿಯಿಂದ 147 ನಿವೇಶನದಾರರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಇದರಿಂದ ನಿವೇಶನ ಪಡೆದವರು ವಿಚಲಿತರಾಗಿದ್ದಾರೆ.
ಏನಿದು ಅಕ್ರಮ:
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ವತಿಯಿಂದ 2009-10ರಲ್ಲಿ ಸಾಗರ ರಸ್ತೆಯ ಮಲ್ಲಿಗೇನಹಳ್ಳಿಯ 172 ಎಕರೆ ಪ್ರದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಈ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಬಡಾವಣೆ ನಿರ್ಮಾಣಕ್ಕೆ ರೈತರಿಂದ ಪಡೆದ ಭೂಮಿಯ ವಿಚಾರದಲ್ಲಿ, ಅವರಿಗೆ ಬದಲಾಗಿ ನೀಡಲಾದ ನಿವೇಶನಗಳ ವಿಚಾರದಲ್ಲಿ ಹಾಗೂ ವಿವೇಚನಾ ಕೋಟಾದಡಿ ನೀಡಿದ್ದ ನಿವೇಶನಗಳ ವಿಚಾರದಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಲೋಕಾಯುಕ್ತಕ್ಕೆ ದೂರು ದಾಖಲಾಗಿ ತನಿಖೆ ಆರಂಭಗೊಂಡಿತ್ತು.
ಗಂಡ-ಹೆಂಡತಿಗೆ ಏಕಕಾಲಕ್ಕೆ ಸೈಟ್: ಲೋಕಾಕ್ಕೆ ದೂರು
ಇನ್ನು ಈ ಬಡಾವಣೆಯಲ್ಲಿ 1,802 ನಿವೇಶನಗಳನ್ನು ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ 2012ರಲ್ಲಿ 1,500ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಆ ಪೈಕಿ ವಿವೇಚನಾ ಕೋಟಾದ 147ಕ್ಕೂ ಹೆಚ್ಚು ನಿವೇಶನ ಸೇರಿದಂತೆ 1,182 ಸೈಟ್‌ಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದರಲ್ಲಿ ಬಿಜೆಪಿ ಕಾರ್ಯಕರ್ತರಿಗೆ, ಶ್ರೀಮಂತರಿಗೆ,ನಿವೇಶನ ಹೊಂದಿದವರಿಗೆ, ಗಂಡ-ಹೆಂಡತಿಗೆ ಏಕ ಕಾಲಕ್ಕೆ ಸೈಟ್ ನೀಡಲಾಗಿದೆ. ಅರ್ಜಿ ಹಾಕಿದ್ದಕ್ಕಿಂತ ದೊಡ್ಡ ಅಳತೆಯ ನಿವೇಶನ ನೀಡಲಾಗಿದೆ, ಒಂದೇ ಸಲ ಅರ್ಜಿ ಹಾಕಿದವರಿಗೂ ಸೈಟ್ ನೀಡಲಾಗಿದೆ ಮತ್ತು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೂ ಸೈಟ್ ಕೊಡಲಾಗಿದೆ ಎಂಬುದೂ ಸೇರಿದಂತೆ ಹಲವು ರೀತಿಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು.
ಸೂಡಾಕ್ಕೆ ಸೂಚನೆ:
ಈ ಪ್ರಕರಣದ ಕುರಿತು ಕೂಲಂಕಷವಾಗಿ ತನಿಖೆ ನಡೆಸಿದ್ದ ಲೋಕಾಯುಕ್ತ ವಿವೇಚನಾ ಕೋಟಾ ಸೇರಿದಂತೆ 1,182 ಸೈಟ್‌ಗಳನ್ನು ರದ್ದು ಮಾಡುವ ಕುರಿತು ಸೂಡಾ ವತಿಯಿಂದಲೇ(ನಿಮ್ಮ ಹಂತದಲ್ಲೇ) ಕ್ರಮ ತೆಗೆದುಕೊಳ್ಳುವಂತೆ ಸೂಡಾಕ್ಕೆ ಖಡಕ್ ಸೂಚನೆ ನೀಡಿತ್ತು.
ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟಿನ ಮೆಟ್ಟಿಲು ಏರಿದ್ದರು. ಈ ಪ್ರಕರಣದಲ್ಲಿ ನಡೆದ ವಿಚಾರಣೆಯಲ್ಲಿ ಹೈಕೋರ್ಟ್, ಲೋಕಾಯುಕ್ತ ಮತ್ತು ಸರಕಾರದ ನಿರ್ಧಾರವನ್ನು ಬದಿಗಿಟ್ಟು ನಿಯಮದಂತೆ ಕ್ರಮ ಜರುಗಿಸುವಂತೆ ಸೂಡಾಕ್ಕೆ ಆದೇಶ ನೀಡಿತ್ತು. ಇದಕ್ಕೆ ಇನ್ನಷ್ಟು ಕಾಲವಕಾಶ ನೀಡಬೇಕೆಂಬ ಸೂಡಾ ಮನವಿಯನ್ನು ಕೂಡ ಕೋರ್ಟ್ ತಳ್ಳಿ ಹಾಕಿತ್ತು.
ಲೋಕಾಯುಕ್ತ ವರದಿಯನ್ನು ಮುಂದಿಟ್ಟುಕೊಂಡು ಇತ್ತೀಚೆಗೆ ನಡೆದ ಪ್ರಾಧಿಕಾರದ ಸಭೆಯಲ್ಲಿ ಸೈಟ್ ಹಂಚಿಕೆ ರದ್ದುಪಡಿಸುವ ತೀರ್ಮಾನ ಕೈಗೊಂಡಿದೆ. ಹಲವು ದಶಕಗಳ ಹಿಂದೆಯೇ ವಿವೇಚನಾ ಕೋಟಾ ಎಂಬುದನ್ನು ಸರಕಾರ ರದ್ದುಗೊಳಿಸಿದೆ. ಹೀಗಾಗಿ ವಿವೇಚನಾ ಕೋಟಾದಡಿ ನೀಡಲಾದ ನಿವೇಶನಗಳನ್ನು ರದ್ದುಗೊಳಿಸಿ ಸೂಡಾ ನಿರ್ಧಾರ ಕೈಗೊಂಡು, ಫಲಾನುಭವಿಗಳಿಗೆ ರದ್ದುಗೊಳಿಸುತ್ತಿರುವ ಆದೇಶ ಪತ್ರ ರವಾನಿಸುತ್ತಿದೆ. ಸೈಟ್ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ಫಲಾನುಭವಿಗಳಿಗೆ ಸೂಡಾ ನೋಟೀಸ್ ನೋಡಿ ಬರಸಿಡಿಲು ಬಡಿದಂತಾಗಿದೆ.
ನಗರದಲ್ಲಿ ಒಂದು ನಿವೇಶನ ಖರೀದಿಸಿ ಅದರಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂಬ ಕನಸಿನೊಂದಿಗೆ ಅರ್ಜಿ ಸಲ್ಲಿಸಿ ವಿವೇಚನಾ ಕೋಟಾದಡಿ ಸೈಟ್ ಪಡೆದ ಫಲಾನುಭವಿಗಳು ಇದೀಗ ಸೈಟ್ ಕಳೆದುಕೊಳ್ಳಬೇಕಾಗಿದೆ.
ಯಾರ್ಯಾರಿಗೆ ನೋಟೀಸ್:
ವಿವೇಚನಾ ಕೋಟಾದಡಿ ಹಂಚಿಕೆಯಾಗಿದ್ದ 147 ಫಲಾನುಭವಿಗಳ ಪಟ್ಟಿಯನ್ನು ಸೂಡಾ ಸಿದ್ಧಪಡಿಸಿ, ನಿವೇಶನ ರದ್ದು ಮಾಡುವ ಕುರಿತು ಈಗಾಗಲೇ ನೋಟಿಸ್ ನೀಡಲಾಗಿದೆ. ವಿವೇಚನಾ ಕೋಟಾದಡಿ ಪತಿ ಪತ್ನಿ ಪ್ರಕರಣ 6, ಒಂದೇ ಕುಟುಂಬದ ಹಲವು ಸದಸ್ಯರಿಗೆ ಹಂಚಿಕೆ ಪ್ರಕರಣ 3, ಕೇಂದ್ರ ಸರಕಾರಿ ನೌಕರರಾಗಿಲ್ಲದಿದ್ದರೂ ಕೇಂದ್ರ ಸರಕಾರಿ ನೌಕರರ ಪ್ರವರ್ಗದಲ್ಲಿ ನಿವೇಶನ ಹಂಚಿಕೆ ಪ್ರಕರಣ 2, ಪ್ರಾರಂಭಿಕ ಮುಂಗಡ ಠೇವಣಿಯನ್ನು ನಿವೇಶನದ ಮೌಲ್ಯ ಮಾಪನಕ್ಕನುಗುಣವಾಗಿ ಪಾವತಿಸದಿದ್ದರೂ ನಿವೇಶನ ಹಂಚಿಕೆ ಪ್ರಕರಣ 25 ಹಾಗೂ ಸೂಡಾ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ-ಮನೆ ಹೊಂದಿದ್ದರೂ ನಿವೇಶನ ಪಡೆದ ಪ್ರಕರಣ, ಪ್ರಾಧಿಕಾರದ ಈ ಹಿಂದಿನ ಬಡಾವಣೆಗಳಲ್ಲಿ ಈಗಾಗಲೇ ಅರ್ಜಿದಾರರಿಗೆ ಅಥವಾ ಅವರ ಪತ್ನಿ ಅಥವಾ ಅವರ ತಂದೆಗೆ ನಿವೇಶನ ಹಂಚಿಕೆಯಾಗಿದ್ದರೂ ನಿವೇಶನ ಪಡೆದಿರುವುದು, ವಾಸ ದೃಢೀಕರಣ ಹಾಗೂ ಆದಾಯ ದೃಢೀಕರಣ ಸಲ್ಲಿಸದಿದ್ದರೂ ನಿವೇಶನ ಮತ್ತು ವಾಸ ಸ್ಥಳದ ಮಾಹಿತಿ ನೀಡದೇ ಕೇರಾಫ್ ವಿಳಾಸ ನೀಡಿದವರಿಗೂ ನಿವೇಶನ ಹಂಚಿಕೆ, ನಿರ್ದಿಷ್ಟ ಪ್ರವರ್ಗದಡಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದರೂ ಬೇರೆ ಪ್ರವರ್ಗದಡಿ ನಿವೇಶನ ಹಂಚಿಕೆಯಾಗಿರುವುದು ಪತ್ತೆಯಾಗಿದೆ. ಅಲ್ಲದೇ ಈ ವಿವೇಚನಾ ಕೋಟಾದಡಿ ಬಿಜೆಪಿಯ ಮಾಜಿ ಮೇಯರ್ ಒಬ್ಬರೂ ನಿವೇಶನ ಪಡೆದುಕೊಂಡಿದ್ದರು. ಅವರಿಗೂ ನೋಟೀಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಆಗಿರಬಹುದಾದ ಲೋಪಗಳ ಪರಿಹಾರಕ್ಕಾಗಿ ನ್ಯಾಯಾಲಯ ನೀಡಿದ ಆದೇಶದಂತೆ ನಿವೇಶನಗಳ ರದ್ದು ಮಾಡಿ ನೋಟಿಸ್ ನೀಡಲಾಗಿದೆ.ನ್ಯಾಯಾಲಯವು ನೀಡಿದ ತೀರ್ಪಿನಂತೆ ಪ್ರಸಕ್ತ ಕ್ರಮ ವಹಿಸಲಾಗುತ್ತಿದೆ.
- ಎಚ್. ಎಸ್. ಸುಂದರೇಶ್,ಸೂಡಾ ಅಧ್ಯಕ್ಷ