ತುಂಡಾಗುವ ಹಂತದಲ್ಲಿದೆ ರಾಜ್ಯದ ಮತ್ತೊಂದು ಜಲಾಶಯದ ಗೇಟ್!‌

Update: 2024-08-13 05:17 GMT

ಶಿವಮೊಗ್ಗ: ತುಂಗಭದ್ರಾ ಜಲಾಶಯದ ಗೇಟ್‌ ಮುರಿದ ಘಟನೆಯ ಬೆನ್ನಲ್ಲೇ ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯದ 8ನೇ ಗೇಟ್ ನ ರೋಪ್ ತುಂಡಾಗುವ ಹಂತದಲ್ಲಿದೆ. ಇದರಿಂದ ಡ್ಯಾಮಿನ ಸುರಕ್ಷತೆ ಕುರಿತು ಪ್ರಶ್ನೆಗಳು ಮೂಡಿವೆ.

ಗಾಜನೂರಿನ ತುಂಗಾ ಜಲಾಶಯದ ಗೇಟ್‌ಗಳನ್ನು ಮೇಲೆತ್ತಲು ರೋಪ್‌ಗಳು ಬಳಸಲಾಗುತ್ತದೆ. ಗೇಟ್‌ಗಳಿಗೆ ಇವುಗಳನ್ನು ಫಿಕ್ಸ್‌ ಮಾಡಲಾಗಿರುತ್ತದೆ. ಈಗ 8ನೇ ಗೇಟ್‌ನ ರೋಪ್‌ ತುಂಡಾಗುವಂತಿದೆ. ಮಳೆಗಾಲಕ್ಕೂ ಮೊದಲು ಪರಿಶೀಲನೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಗೇಟ್‌ ಮೇಲೆತ್ತದಂತೆ ಅಧಿಕಾರಿಗಳು ನಿರ್ಧರಿಸಿದ್ದರು. ಮಳೆಗಾಲ ಮುಗಿದ ಬಳಿಕ ಇದರ ದುರಸ್ಥಿ ಕಾರ್ಯ ನಡೆಸಲು ಚಿಂತನೆ ನಡೆಸಲಾಗಿದೆ. ತುಂಗಭದ್ರಾ ಜಲಾಶಯದ ಗೇಟ್‌ ಮುರಿದು ಕೊಚ್ಚಿಕೊಂಡು ಹೋದ ಘಟನೆ ಬೆನ್ನಿಗೆ ಈ ವಿಚಾರ ಬಹಿರಂಗವಾಗಿದೆ.

8ನೇ ಗೇಟ್‌ನ ರೋಪ್‌ ತುಂಡಾಗುವ ಹಂತದಲ್ಲಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಿಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಡ್ಯಾಮ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲಾಶಯದ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದರು.

ಈ ಬಾರಿ ಜುಲೈ ತಿಂಗಳಲ್ಲಿ ತುಂಗಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಇದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿತ್ತು. ಒಂದೇ ದಿನ 85 ಸಾವಿರ ಕ್ಯೂಸೆಕ್‌ವರೆಗೆ ನೀರನ್ನು ಹೊರ ಬಿಡಲಾಗಿತ್ತು. ಮಳೆಗಾಲದಲ್ಲಿ 22 ಗೇಟುಗಳ ಪೈಕಿ 21 ಗೇಟುಗಳಿಂದ ಮಾತ್ರ ನೀರು ಮೇಲೆತ್ತಲಾಗಿತ್ತು. 8ನೇ ನಂಬರ್‌ ಗೇಟ್‌ ಓಪನ್‌ ಮಾಡದಂತೆ ಇಂಜಿನಿಯರ್‌ಗಳು ನಿರ್ಧರಿಸಿದ್ದರು.

ಗಾಜನೂರಿನ ತುಂಗಾ ಜಲಾಶಯ ಮೂರುವರೆ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಸರಿಯಾದ ಒಂದೆರಡು ಮಳೆಗೆ ಜಲಾಶಯ ಭರ್ತಿಯಾಗಲಿದೆ. ತುಂಗಾ ಜಲಾಶಯವು ಒಟ್ಟು 22 ಗೇಟುಗಳನ್ನು ಹೊಂದಿದೆ. ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಸಾವಿರಾರು ಹೆಕ್ಟೇರ್‌ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಏತ ನೀರಾವರಿ ಮೂಲಕ ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News