ಸಂಘ ಪರಿವಾರದ ಮನವೊಲಿಕೆಗೂ ಬಗ್ಗದ ಈಶ್ವರಪ್ಪ: ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಪುನರುಚ್ಚಾರ

Update: 2024-03-18 07:18 GMT

ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ, ಮಾ.18: ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರ ಮನವೊಲಿಸುವ ಸಂಘ ಪರಿವಾರದ ಪ್ರಯತ್ನವೂ ವಿಫಲವಾಗಿದೆ ಎನ್ನಲಾಗಿದೆ.

ಈಶ್ವರಪ್ಪರಿಗೆ ಸಂಘ ಪರಿವಾರದ ಪ್ರಮುಖ ಗೋಪಾಲ್ ಅಯೋಧ್ಯೆಯಿಂದ ಕರೆ ಮಾಡಿ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಈಶ್ವರಪ್ಪ ಮಾತ್ರ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ನಾನು ಹಿಂದೆ ಸರಿಯಲ್ಲ ಎಂದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.

ಶಿವಮೊಗ್ಗದ ಬೀಳಗಿಯ ರಾಚಟೇಶ್ವರ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೋರಾಟ ಕುಟುಂಬ ರಾಜಕಾರಣ ವಿರುದ್ಧ. ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ, ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ನೀಡಿಲ್ಲ. ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣ ವಿರೋಧ ಮಾಡಿದರು. ಆದರೆ ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪರ ಪುತ್ರನಿಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ, ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದು ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇನೆ. ಕೇಂದ್ರದ ನಾಯಕರು ದೂರವಾಣಿ ಸಂಪರ್ಕ ಮಾಡಿದರೂ, ಸ್ಪಷ್ಟ ನಿರ್ಧಾರ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ತಿಳಿಸಿದರು.

ಕೈಬಿಟ್ಟ ಬಿಜೆಪಿ: ಮನವೊಲಿಸಲು ಈಶ್ವರಪ್ಪರ ಮನೆಗೆ ರವಿವಾರ ಹೋಗಿದ್ದ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಒಂದು ಗಂಟೆಗಳ ಕಾಲ ಕುಳಿತು ವಾಪಸ್ ಬಂದಿದ್ದಾರೆ. ದಿಲ್ಲಿಯಿಂದ ಮನವೊಲಿಸುವುದಾದರೆ ಒಲಿಸಲಿ, ನಾನು ಮಾತನಾಡುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಈಗಾಗಲೆ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಜನರೇ ತೀರ್ಮಾನ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪುನರುಚ್ಚರಿಸಿದ್ದಾರೆ.

ಹೀಗಾಗಿ ರಾಜ್ಯ ಬಿಜೆಪಿ ಮತ್ತು ಹೈಕಮಾಂಡ್ ಈಶ್ವರಪ್ಪ ಮನವೊಲಿಕೆ ಪ್ರಯತ್ನವನ್ನು ಕೈ ಬಿಟ್ಟಿದೆ ಎಂದು ಹೇಳಲಾಗುತ್ತಿದೆ.


ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News