ಶಿವಮೊಗ್ಗ | ಬಿರುಸುಗೊಂಡ ಶರಾವತಿ ಮುಳಗಡೆ ಸಂತ್ರಸ್ಥರ ಹೋರಾಟ : ನಾಳೆಯಿಂದ ಲಿಂಗನಮಕ್ಕಿ ಚಲೋ

Update: 2024-10-23 14:17 GMT

ಶಿವಮೊಗ್ಗ(ಅ.23): ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿ ಹಂಚಿಕೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು, ಭೂಮಿ ಹಕ್ಕಿನಿಂದ ವಂಚಿತವಾಗಿರುವ ರೈತರಿಗೆ ನ್ಯಾಯ ಸಿಗಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರ ಪಕ್ಷಾತೀತ ಹೋರಾಟ ಬಿರುಸುಗೊಂಡಿದೆ.

ಆ.24ರಂದು ಬೆಳಿಗ್ಗೆ 11 ಗಂಟೆಯಿಂದ ಲಿಂಗನಮಕ್ಕಿ ಚಲೋ ಪಾದಯಾತ್ರೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ.

ಸಾಗರದ ಎಸಿ ಕಛೇರಿ ಎದುರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಲೆನಾಡಿನ ರೈತರ ಸಮಸ್ಯೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಅರಣ್ಯ ಇಲಾಖೆ ನೋಟೀಸ್ ನೀಡುತ್ತಿದೆ. 64 ವರ್ಷಗಳು ಕಳೆದರೂ ನ್ಯಾಯ ಒದಗಿಸದೇ ಸರಕಾರಗಳು ಕಾಲಹರಣ ನಡೆಸುತ್ತಿದೆ. ಹಾಗಾಗಿ ನಮ್ಮ ಜಾಗ ನಮಗೆ ಕೊಡಿ ಎಂದು ಆಗ್ರಹಿಸಿ ಲಿಂಗನಮಕ್ಕಿ ಚಲೋ ನಡೆಸಲಾಗುವುದು ಎಂದು ತಿಳಿಸಿದರು.

ಮಲೆನಾಡು ಜನಾಕ್ರೋಶ ಶೀರ್ಷಿಕೆಯಡಿ ಮಧುಬಂಗಾರಪ್ಪನವರು ಪಾದಯಾತ್ರೆ ನಡೆಸಿದ್ದಾಗ ಸಿಎಂ  ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಸರಕಾರ ಬಂದು ವರ್ಷ ಕಳೆದರೂ ಒಂದೇ ಒಂದು ಸಭೆ ಕರೆದಿಲ್ಲ, ಆದರೆ ಯಡಿಯೂರಪ್ಪನವರ ಕಾಲೇಜನ್ನು ವನ್ಯಜೀವಿ ವಿಭಾಗದಿಂದ ಕೈಬಿಡಲು ವನ್ಯಜೀವಿ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀರ್ಮಾನ ತೆಗೆದುಕೊಂಡಿದ್ದಾರೆ. ವನ್ಯಜೀವಿ ಮಂಡಳಿ ಸಭೆಯಲ್ಲಿ ಉರುಳುಗಲ್ಲು ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಸಂಬಂಧ ಚರ್ಚೆಗೆ ತೆಗೆದುಕೊಂಡಿಲ್ಲ. ರೈತರಿಗೆ ಕೊಟ್ಟ ಮಾತನ್ನು ಮರೆತಿದ್ದಾರೆ ಎಂದು ದೂರಿದರು.

ಯಡಿಯೂರಪ್ಪನವರು ಶಿವಮೊಗ್ಗದ ಈಡಿಗರ ಭವನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಸಭೆ ನಡೆಸಿ 15 ದಿನದಲ್ಲಿ ಕೇಂದ್ರ ಸರಕಾರದಿಂದ ಅನುಮತಿ ಪಡೆದು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಶಾಸಕರು-ಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟು ಜನರು ಸಕಾಗಿ ಹೋಗಿದ್ದಾರೆ. ಈಗ ಅನಿವಾರ್ಯವಾಗಿ ಬೇಡಿಕೆ ಈಡೇರುವ ತನಕ ಲಿಂಗನಮಕ್ಕಿ ಚಲೋ ನಡೆಸಲಾಗುವುದು ಎಂದರು.

ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ನಾಪತ್ತೆಯಾಗಿದ್ದಾರೆ. ಸರಕಾರದ ಪರವಾಗಿ ರೈತರ ಹೋರಾಟದ ಸ್ಥಳಕ್ಕೆ ಬಂದು ಮುಳುಗಡೆ ರೈತರ ಅಹವಾಲು ಆಲಿಸಿಲ್ಲ, ಜಿಲ್ಲಾ ಮಂತ್ರಿಯವರು ಸರಕಾರದ ಮಟ್ಟದಲ್ಲಿ ನಾನು ಏನೇನು ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಿಲ್ಲ. ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಲ್ಲ ಎಂದು ಪ್ರತಿಭಟನಾ ನಿರತ ರೈತರಿಗೆ ತಿಳಿಸಬಹುದಿತ್ತು. ಆದರೆ ಯಾರೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದಿಂದ ಸೂಕ್ತ ಉತ್ತರ ಬರದಿದ್ದರಿಂದ ಇಂದಿನಿಂದ ಲಿಂಗನಮಕ್ಕಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದಿನ ಲಿಂಗನಮಕ್ಕಿ ಚಲೋ ಕಾರ್ಯಕ್ರಮದಲ್ಲಿ ಸಾವಿರಾರು ರೈತರು ಭಾಗಿಯಾಗಲಿದ್ದಾರೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ದಿನೇಶ್ ಶಿರಿವಾಳ, ಶ್ರೀಕರ್, ಶಿವಾನಂದ ಕುಗ್ವೆ ಸೇರಿದಂತೆ ಹಲವರಿದ್ದರು.

ಮೂರನೇ ದಿನಕ್ಕೆ ಕಾಲಿಟ್ಟ ಆಹೋರಾತ್ರಿ ಧರಣಿ :

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾಗರ ಎಸಿ ಕಛೇರಿ ಆವರಣದಲ್ಲಿ ನಡೆಯತ್ತಿರುವ ಶರಾವತಿ ಮುಳುಗಡೆ ರೈತರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. 

ಎಸಿ ಕಛೇರಿ ತುಂಬಾ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

 

 Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News