ಶಿವಮೊಗ್ಗ | ಗೂಗಲ್‌ನಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಫೋನ್ ನಂಬರ್ ಹುಡುಕಿದ್ದಕ್ಕೆ 9 ಲಕ್ಷ ರೂ. ಕಳೆದುಕೊಂಡ ಮಹಿಳೆ!

Update: 2024-10-23 12:12 GMT

ಸಾಂದರ್ಭಿಕ ಚಿತ್ರ(PTI)

ಶಿವಮೊಗ್ಗ : ಬ್ಯಾಂಕಿಂಗ್ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಗೂಗಲ್‌ನಲ್ಲಿ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರ ಫೋನ್ ನಂಬರ್ ಹುಡುಕಿದ್ದಕ್ಕೆ, ಮಹಿಳೆಯರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದ ಪ್ರಕರಣ ನಡೆದಿದೆ. ಮಹಿಳೆಯ ಬ್ಯಾಂಕ್ ಖಾತೆಯಿಂದ 9.19 ಲಕ್ಷ ರೂ. ಕಡಿತಗೊಂಡಿದೆ.

ಬ್ಯಾಂಕಿಂಗ್ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು (ಹೆಸರು ಗೌಪ್ಯವಾಗಿಡಲಾಗಿದೆ) ಗೂಗಲ್‌ನಲ್ಲಿ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರ ಮೊಬೈಲ್ ನಂಬರ್ ಹುಡುಕಿದ್ದರು. ಅಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ವ್ಯವಸ್ಥಾಪಕರ ಸೋಗಿನಲ್ಲಿ ಮಾತನಾಡಿದ್ದ. ಬಳಿಕ ಆತ ಸೂಚಿಸಿದ ಮೊಬೈಲ್ ಆಪ್ ಅನ್ನು ಶಿಕ್ಷಕಿ ಇನ್‌ಸ್ಟಾಲ್ ಮಾಡಿಕೊಂಡಿದ್ದರು. ಚೆಕ್ ಕ್ಲಿಯರೆನ್ಸ್ ಆಗಲು 24 ಗಂಟೆ ಸಮಯ ಬೇಕು ಎಂದು ಆತ ತಿಳಿಸಿದ್ದ ಎನ್ನಲಾಗಿದೆ.

ಮರು ದಿನ ಅದೇ ನಂಬರ್‌ಗೆ ಶಿಕ್ಷಕಿ ಕರೆ ಮಾಡಿದಾಗ ಇವತ್ತು ನಿಮ್ಮ ಚೆಕ್ ಕ್ಲಿಯರೆನ್ಸ್ ಆಗಲಿದೆ ಎಂದು ವ್ಯವಸ್ಥಾಪಕರ ಸೋಗಿನಲ್ಲಿದ್ದಾತ ತಿಳಿಸಿದ್ದ. ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಬ್ಯಾಂಕ್ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿತ್ತು. ಒಟ್ಟು 9.19 ಲಕ್ಷ ರೂ. ಹಣ ಬೇರೆ ಖಾತೆಗಳಿಗೆ ವರ್ಗವಣೆಯಾಗಿತ್ತು. ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ, ಶಿಕ್ಷಕಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News