ಶಿವಮೊಗ್ಗ | ಎರಡನೇ ದಿನಕ್ಕೆ ಕಾಲಿಟ್ಟ ಶರಾವತಿ ಮುಳುಗಡೆ ರೈತರ ಪ್ರತಿಭಟನೆ

Update: 2024-10-22 16:45 GMT

ಶಿವಮೊಗ್ಗ : ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರ ಪಕ್ಷಾತೀತ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಪರವಾಗಿ ಬಂದ ಜಿ.ಪಂ ಸಿಇಓ ಹಾಗೂ ಉಪವಿಭಾಗಾಧಿಕಾರಿಗಳಿಗೆ ಪ್ರತಿಭಟನಾ ನಿರತರು ಕಚೇರಿ ಒಳಗೆ ದಿಗ್ಬಂಧನ ಹಾಕಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಸೋಮವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಸಿಗಂದೂರು ಧರ್ಮದರ್ಶಿ ಡಾ.ಎಸ್.ರಾಮಪ್ಪ ಅವರಿಂದ ಉದ್ಘಾಟನೆಗೊಂಡ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಚಳವಳಿ ಮಂಗಳವಾರ ಮತ್ತಷ್ಟು ಬಿರುಸು ಪಡೆದುಕೊಂಡಿದೆ.

ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಪರವಾಗಿ ಭೇಟಿ ನೀಡಿದ್ದ ಜಿ.ಪಂ.ಸಿಇಒ ಹೇಮಂತ್ ಹಾಗೂ ಸಾಗರ ಉಪವಿಭಾಗಾಧಿಕಾರಿ ಯತೀಶ್ ಅವರು ಪ್ರತಿಭಟನಾ ನಿರತ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ಮುಗಿಸಿ ಅವರು ಹೊರಬರುವಾಗ ಧರಣಿ ನಿರತರು ಹೊರಗಡೆಯಿಂದ ಗೇಟ್ ಹಾಕಿ ದಿಗ್ಬಂಧನ ವಿಧಿಸಿದರು. ಈ ಸಂದರ್ಭ ಸ್ಥಳದಲ್ಲಿ ಗೊಂದಲ ನಿರ್ಮಾಣವಾಗಿ ಪ್ರತಿಭಟನಾ ಕಾರರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.

ಹಾಲಪ್ಪಗೆ ತರಾಟೆ:

ಮುಳುಗಡೆ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪನವರಿಗೆ ರೈತರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಸಚಿವರಾಗಿದ್ದಾಗ ಶರಾವತಿ ಮುಳುಗಡೆ ಸಂತ್ರಸ್ಥರ ಪರವಾಗಿ ವಿಧಾನ ಸಭೆಯಲ್ಲಿ ಚರ್ಚೆ ನಡೆಸದೆ, ಈಗ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೀರಿ. ಸದನದಲ್ಲಿ ಯಾಕೆ ಮುಳುಗಡೆ ರೈತರ ಪರವಾಗಿ ಧ್ವನಿ ಎತ್ತಿಲ್ಲ, ಡಂಬಲ್ ಇಂಜಿನ್ ಸರ್ಕಾರ ಇದ್ದಾಗಲೂ ಯಾಕೆ ನ್ಯಾಯ ಒದಗಿಸಲು ಶ್ರಮಿಸಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಪ್ರತಿಭಟನೆ ಸ್ಥಳಕ್ಕೆ ಬಂದಿದ್ದ ಸಂಸದರಾದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಮುಳುಗಡೆ ಸಂತ್ರಸ್ತರ ಸಮಸ್ಯೆ ಧೀರ್ಘಕಾಲದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಪಶ್ಚಿಮಘಟ್ಟ ವ್ಯಾಪ್ತಿಯ ಸಂಸದರೊಂದಿಗೆ ಸಮನ್ವಯ ಸಾಧಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಲಾಗುವುದು. ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಶರಾವತಿ, ವರಾಹಿ, ಚಕ್ರಾ ಹಾಗೂ ತುಂಗಭದ್ರಾ ಸಂತ್ರಸ್ತರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ದಿನೇಶ್ ಶಿರವಾಳ, ಮಲ್ಲಿಕಾರ್ಜುನ ಹಕ್ರೆ, ಟಿ.ಡಿ.ಮೇಘರಾಜ್, ಡಾ.ರಾಜನಂದಿನಿ ಕಾಗೊಡು, ಹುನಗೋಡು ರತ್ನಾಕರ್, ಬಿ.ಆರ್.ಜಯಂತ್, ಮಲ್ಲಿಕಾರ್ಜುನ್, ಸಿಗಂದೂರು ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್, ರವಿ ಹರತಾಳು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಮುಳುಗಡೆ ಸಂತ್ರಸ್ಥರ ಬದುಕು ನರಕಯಾತನೆಯಾಗಿದೆ. ಐವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಭೂಮಿ ಅವರದಲ್ಲ ಎಂಬುದೇ ಆಘಾತಕಾರಿಯಾಗಿದೆ. ಸರಕಾರವೇ ಕಾಡಿಗೆ ತಂದು ಬಿಟ್ಟು, ಈಗ ಜಾಗ ಖಾಲಿ ಮಾಡಿ ಎನ್ನುವುದು ಧರ್ಮವಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲೆ ಒತ್ತಡ ಹಾಕುವ ಕೆಲಸ ಆಗಬೇಕಿದೆ. ಮಠದ ಬೆಂಬಲ ಮುಳುಗಡೆ ಸಂತ್ರಸ್ತರ ಹೋರಾಟಕ್ಕಿದೆ.

-ಶ್ರೀ ರೇಣುಕಾನಂದ ಸ್ವಾಮೀಜಿ, ನಾರಾಯಣಗುರು ಮಹಾಸಂಸ್ಥಾನ

ಇದು ಎರಡನೇ ಕಾಗೋಡು ಚಳವಳಿಯಾಗಬೇಕು. ಪ್ರಜಾಪ್ರಭುತ್ವ ಇದೆ ಎಂಬ ಅನುಮಾನ ಬರುತ್ತಿದೆ. ಅರಣ್ಯ ಸಂಬಂಧಿ ಕಾಯಿದೆಗಳು ಕೇಂದ್ರ ಸರಕಾರದಲ್ಲಿರುವ ಕಾರಣ ನಮಗೆ ನ್ಯಾಯ ಸಿಗುತಿಲ್ಲ. ಕೇಂದ್ರದಲ್ಲಿ ರಾಜ್ಯ ಪ್ರತಿನಿಧಿಸುವವರು ಒತ್ತಡ ಹಾಕಬೇಕು. ಮುಳುಗಡೆ ಸಂತ್ರಸ್ತರು ಅರಣ್ಯ ಲೂಟಿಕೋರರಲ್ಲ. ಸರಕಾರವೇ ಅವರನ್ನು ಕಾಡಿಗೆ ಅಟ್ಟಿದೆ. ಈ ಅನ್ಯಾಯ ನಿಲ್ಲಬೇಕು.

-ಡಾ.ಎಸ್.ರಾಮಪ್ಪ, ಧರ್ಮದರ್ಶಿ, ಶ್ರೀ ಕ್ಷೇತ್ರ ಸಿಗಂದೂರು

ರಾಜಕಾರಣಿಗಳಿಗೆ ಸಮಸ್ಯೆಯ ಬಗ್ಗೆ ಮಾಹಿತಿಯೇ ಇಲ್ಲ. ಬುಡಮಟ್ಟದಲ್ಲಿ ಈ ಸಮಸ್ಯೆಯನ್ನು ಅಧ್ಯಯನ ಮಾಡಬೇಕು. ಮುಳುಗಡೆ ಸಂತ್ರಸ್ಥರ ಅಭದ್ರತೆ ಮತ್ತು ಆತಂಕ ದೂರು ಮಾಡಲು ಇಚ್ಚಾಶಕ್ತಿ ಬೇಕು. ಹಿಂದಿನ ಎಲ್ಲಾ ಸರಕಾರಗಳು ಸಮಸ್ಯೆ ಇತ್ಯರ್ಥಪಡಿಸುವಲ್ಲಿ ವಿಫಲವಾಗಿದೆ. ಕೇಂದ್ರ ಮಟ್ಟದಲ್ಲಿ ದೊಡ್ಡ ಪ್ರಮಾಣದ ಒತ್ತಡ ಹೇರುವ ಕೆಲಸ ಆಗಬೇಕಿದೆ.

-ತೀನಾ ಶ್ರೀನಿವಾಸ್, ಮಲೆನಾಡು ಪ್ರಾಂತ್ಯ ರೈತ ಹೋರಾಟ ಸಮಿತಿ

ಮುಳುಗಡೆ ಸಂತ್ರಸ್ತರಿಗೆ ಆಗಿರುವ ಅನ್ಯಾಯ ಯಾರಿಗೂ ಆಗಿಲ್ಲ. ಕಾನೂನುಕೊಂಡಿಯಲ್ಲಿ ಈ ಸಮಸ್ಯೆ ಇದೆ. ಕೇಂದ್ರ ಸರಕಾರ ಮತ್ತು ಸುಪ್ರೀಕೋರ್ಟ್ ಮಟ್ಟದಲ್ಲಿ ಸಮಸ್ಯೆಯನ್ನು ಪರಿಹರಿಸಬೇಕಿದೆ. ಪಕ್ಷಾತೀತವಾದ ಹೋರಾಟ ನಡೆಯಬೇಕಿದೆ. ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ.

-ಹರತಾಳು ಹಾಲಪ್ಪ, ಮಾಜಿ ಸಚಿವ

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ದಾಖಲೆ ಕೊಡುವ ಕಾಲಮಿತಿಯನ್ನು 25 ವರ್ಷಕ್ಕೆ ಇಳಿಸಬೇಕು. ಇದೇ ನಮಗಿರುವ ಪರಿಹಾರ. ಸಂಸದರು ಎರಡು ಬಾರಿ ಸಂಸತ್ತಿನಲ್ಲಿ ಮಾತನಾಡಿದ್ದು, ಅದಕ್ಕೆ ಕಿಮ್ಮತ್ತು ಬಂದಿಲ್ಲ. ಅವರು ರಾಜ್ಯ ಹಾಗೂ ಅನ್ಯರಾಜ್ಯಗಳ ಪಶ್ಚಿಮಘಟ್ಟಗಳ ವ್ಯಾಪ್ತಿಯ ಸಂಸದರನ್ನು ಒಂದುಗೂಡಿಸಿಕೊಂಡು ಸಂಸತ್ತಿನಲ್ಲಿ ಒಂದು ಆಂದೋಲನದ ರೀತಿ ಹೋರಾಟ ಮಾಡಬೇಕು. ಇಲ್ಲವಾದಲ್ಲಿ ಬರೀ ಭರವಸೆಯಿಂದ ಸಂತ್ರಸ್ತರ ಸಮಸ್ಯೆ ಇತ್ಯರ್ಥವಾಗದು.

-ಜಿ.ಟಿ.ಸತ್ಯನಾರಾಯಣ, ತುಮರಿ, ಕಾಂಗ್ರೆಸ್ ಮುಖಂಡರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News